ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು

ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು
ಆರತೀ ವಿ.ಬಿ.
‘ಕೀಳರಿಮೆ ಇಟ್ಟುಕೊಳ್ಳದೆ, ಕುಂದದ ಉತ್ಸಾಹದೊಂದಿಗೆ ಸತತವೂ ಪ್ರಯತ್ನಶೀಲನಾಗಿರುತ್ತ, ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು’ (‘ಉದ್ಧರೇದಾತ್ಮನಾತ್ಮಾನಂ…’) ಎನ್ನುವ ಕೃಷ್ಣನ ಮಾತನ್ನು ಪರಾಂಬರಿಸುತ್ತಿದ್ದೆವು.
‘ಹಾಗಾದರೆ ದೇವರು ನಮಗಾಗಿ ಏನನ್ನೂ ಮಾಡುವುದಿಲ್ಲವೇ?’ ಎಂಬ ಗೊಂದಲ ಬೇಡ. ಪ್ರಾಮಾಣಿಕ ಪ್ರಯತ್ನವನ್ನೇ ಮಾಡದೇ ಇರುವ ಡೋಂಗಿ ಮನುಷ್ಯನಿಗೆ ದೈವಕೃಪೆ ಒಲಿಯುವುದಿಲ್ಲ ಎನ್ನುವುದು ಇಂಗಿತ. ದೇವರ ಬಳಿ ಒಬ್ಬ ಪ್ರಾರ್ಥಿಸಿದನಂತೆ ‘ನನಗೆ ಆರೋಗ್ಯ-ಸುಖ-ಸಂಪದಗಳನ್ನು ಕರುಣಿಸಪ್ಪ’ ಎಂದು. ದೇವರು ಒಂದಷ್ಟು ಬೀಜಗಳನ್ನು ಕೊಟ್ಟು ‘ಇವು ಆರೋಗ್ಯ-ಸುಖ-ಸಂಪದಗಳ ಬೀಜಗಳು. ಬಿತ್ತಿ ಬೆಳೆಸು. ಫಲಗಳು ಸಿಗುತ್ತವೆ’. ಭಕ್ತನು ನಿರಾಶೆಯಿಂದ ಕೇಳಿದನಂತೆ, ‘ಬೀಜಗಳೇಕೆ? ಫಲಗಳನ್ನೇ ಕೊಡಬಹುದಲ್ಲ?’ ಎಂದು. ದೇವರು ಉತ್ತರಿಸಿದನಂತೆ, ‘ನಾನು ಬೀಜಗಳನ್ನು ಮಾತ್ರವೇ ಕೊಡುವುದು. ಬಿತ್ತಿ ಬೆಳೆದು ಫಲಗಳನ್ನು ನೀವೇ ಪಡೆಯಬೇಕಾಗುತ್ತದೆ!’
ರಾಮಕೃಷ್ಣರು ಉಪಮಿಸುತ್ತಾರೆ, ‘ದೈವಕೃಪೆಯು ಮಳೆಯಂತೆ ಎಲ್ಲೆಡೆ ಬಿದ್ದರೂ, ಅದು ಸಂಗ್ರಹವಾಗುವುದು ಹಳ್ಳದಲ್ಲೇ ಹೊರತು ದಿಣ್ಣೆಯ ಮೇಲಲ್ಲ!’ ದೇವರ ಕೃಪೆಯು ಸರ್ವರ ಮೇಲು ಸಮವಾಗಿದ್ದರೂ ದಕ್ಕುವುದು ಮಾತ್ರ ‘ಯೋಗ್ಯ’ತೆ ಇದ್ದವರಿಗೇ. ಸಿಕ್ಕ ದೈವಕೃಪೆಯು ‘ದಕ್ಕ’ಬೇಕಾದರೆ, ಯೋಗ್ಯತೆಯನ್ನು ಅರಳಿಸುವಂತಹ ತಪಸ್ಸುಬೇಕು’ ಎಂದು ತಾತ್ಪರ್ಯ. ಹಸುಳೆಯೂ ಅತ್ತು ಕರೆದಾಗಲೇ ತಾಯಿ ಓಡಿಬಂದು ಹಾಲುಣಿಸುವುದು ತಾನೇ?! ಪ್ರಯತ್ನಶೀಲರಿಗೆ ಹೆಜ್ಜೆಹೆಜ್ಜೆಯಲ್ಲೂ ದೈವಕೃಪೆ ಅನುಭವಕ್ಕೆ ಬರುತ್ತದೆ. ಪ್ರಯತ್ನಹೀನರಿಗೆ ದೈವಕೃಪೆಯು ಅರ್ಥವೂ ಆಗದು ಅನುಭವಕ್ಕೂ ಬರದು. ನಮ್ಮಲ್ಲಿ ಸಿಂಹಪರಾಕ್ರಮವೇ ಇದ್ದರೂ, ನಾವು ನಿದ್ರಿಸುತ್ತಿದ್ದರೆ ಅದು ಪ್ರಯೋಜನಕ್ಕೆ ಬರದು. ಪ್ರಾಚೀನ ಸುಭಾಷಿತ ಹೇಳುತ್ತದೆ:
ಉದ್ಯಮೇನೈವ ಸಿದ್ಧ್ಯತಿ ಕಾರ್ಯಾಣಿ ನ ಮನೋರಥೈಃ |
ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಷಂತಿ ಮುಖೇ ಮೃಗಾಃ ||
(ಉದ್ಯಮಶೀಲತೆಯಿಂದ ಮಾತ್ರವೇ ಕಾರ್ಯಸಿದ್ಧಿ, ಕೇವಲ ಮನೋರಥದಿಂದಲ್ಲ. ಮಲಗಿರುವ ಸಿಂಹದ ಬಾಯಿಗೆ ಜಿಂಕೆಯು ತಾನಾಗಿಯೇ ಬಂದು ಬೀಳುವುದಿಲ್ಲ.)
ಕೃಷ್ಣನು ಮುಂದುವರಿಸುತ್ತಾನೆ, ‘ನಮಗೆ ಬಂಧುವೂ ನಾವೇ ಶತ್ರುವೂ ನಾವೇ’ ಎಂದು. ಮಾರ್ವಿುಕವಾದ ಮಾತು! ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ || (ಆಚಾರ್ಯ ಆದಿಶಂಕರರು) ನಮ್ಮ ಸಂಕಷ್ಟಗಳಿಗೆಲ್ಲ ಯಾರೊಬ್ಬರ ಮೇಲೋ, ಗ್ರಹಗತಿಯ ಮೇಲೋ ಗೂಬೆ ಕೂರಿಸುತ್ತೇವೆ. ಆದರೆ, ನಿಜಕ್ಕೂ ನಮ್ಮ ಮನಸ್ಸೇ ನಮಗೆ ಹಿತವನ್ನೋ ಅಹಿತವನ್ನೋ ತಂದೊದಗಿಸುತ್ತದೆ. ಮನಸ್ಸು ಶುದ್ಧವೂ ಸಶಕ್ತವೂ ಆಗಿದ್ದರೆ ಉತ್ಸಾಹದುಂಬುತ್ತದೆ, ನಿರ್ಲಿಪ್ತಿಯನ್ನು ಬೆಳೆಸಿ ಕಾಪಾಡುತ್ತದೆ. ಮನಸ್ಸು ಕೊಳಕೂ ದುರ್ಬಲವೂ ಆಗಿದ್ದರೆ ಮೋಹ-ಮಮಕಾರಗಳಲ್ಲಿ ಕಟ್ಟಿಹಾಕಿ ಬಳಲಿಸುತ್ತದೆ.
ಕರ್ತವ್ಯವು ನಮ್ಮನ್ನೆಂದೂ ಬಂಧಿಸುವುದಿಲ್ಲ. ನಮ್ಮನ್ನು ಬಂಧಿಸುವುದು ಮೋಹ. ಕರ್ತವ್ಯವನ್ನ ಮುಗಿಸಿದರೆ ತೃಪ್ತಿ ಬರುತ್ತದೆ. ಆದರೆ ಮೋಹ-ಮಮಕಾರಗಳನ್ನು ಬೆಳೆಸಿಕೊಂಡರೆ ಕರ್ಮ ಮುಗಿದ ಮೇಲೂ, ಅದರ ಚಪಲ ತೀರುವುದಿಲ್ಲ. ಲಾಭ-ನಷ್ಟಗಳ ಲೆಕ್ಕಾಚಾರ ಅಳಿಯುವುದಿಲ್ಲ.
ನಮ್ಮನ್ನು ‘ಹಿಡಿ’ ಎಂದೋ, ‘ಬಿಡು’ ಎಂದೋ ನಿರ್ದೇಶಿಸುವುದು ನಮ್ಮ ಮನಸ್ಸೇ! ಜಗತ್ತಿನ ನಮ್ಮ ಪಾತ್ರವನ್ನು ನಾವು ‘ಹಿಡಿಯುವುದನ್ನು’ ಕಲಿಯುವಾಗಲೇ ‘ಬಿಡುವುದನ್ನೂ’ ಕಲಿತಿದ್ದರೆ ನಮ್ಮನ್ನು ಯಾರೂ ಯಾವುದೂ ಬಂಧಿಸಲಾಗದು. ಈ ತಥ್ಯವನ್ನರಿತರೆ ಯೋಗಜೀವನವಷ್ಟೇ ಅಲ್ಲ, ವ್ಯಾವಹಾರಿಕ ಜೀವನವೂ ಸುಷ್ಟುವಾಗಿ ನಡೆಯುತ್ತದೆ.
ನಿಜಗುಣಶಿವಯೋಗಿಗಳು ಪೂರ್ವಾಶ್ರಮದಲ್ಲಿ ಅರಸನಾಗಿ ರಾಜ್ಯಭಾರವನ್ನು ನಿರ್ವಹಿಸುತ್ತದ್ದರಂತೆ. ‘ರಾಜ್ಯಭಾರವನ್ನು ಯೋಗ್ಯರಿಗೆ ರವಾನಿಸಿ ಸಂನ್ಯಾಸಿಯಾಗಿ ಹೊರಡಲು ನನಗೆ ಹಂಬಲ. ಆದರೆ ಈ ರಾಜ್ಯವು ನನ್ನನ್ನು ಬಿಡಗೊಡುತ್ತಿಲ್ಲ’ ಎಂದು ಗುರುಗಳಲ್ಲಿ ಹೇಳಿಕೊಳ್ಳುತ್ತಲೇ ಇದ್ದರಂತೆ. ಗುರುಗಳು ಒಂದು ದಿನ ಮರವೊಂದನ್ನು ಅಪ್ಪಿಕೊಂಡು ಕೂಗಿದರಂತೆ, ‘ಅಯ್ಯೋ! ಈ ಮರವು ನನ್ನನ್ನು ಬಿಡುತ್ತಿಲ್ಲ!’ ಎಂದು. ನಿಜಗುಣರು ‘ಗುರುಗಳೇ! ಮರವು ನಿಮ್ಮನ್ನು ಹಿಡಿದಿಲ್ಲ. ನೀವೇ ಮರವನ್ನು ಹಿಡಿದಿರುವುದು!’ ಎಂದಾಗ, ಗುರುಗಳು ‘ಅರಸ! ರಾಜ್ಯವು ನಿನ್ನನ್ನು ಹಿಡಿದಿಲ್ಲ, ನೀನೇ ರಾಜ್ಯವನ್ನು ಹಿಡಿದಿರುವುದು!’ ಎಂದು ಅರ್ಥಪಡಿಸಿದರಂತೆ! ಅಜ್ಞಾನದಾವರಣವು ಕಳಚಿಬಿದ್ದಿತಂತೆ! ಅರಸನು ಬಂಧ-ಮೋಕ್ಷಗಳ ‘ನಿಜಗುಣ’ವನ್ನರಿತು ಶಿವಯೋಗಿಯಾಗಿ ಹೊರಟೇಬಿಟ್ಟನಂತೆ!
ಎರಡು ಸಣ್ಣ ತೂತುಗಳ ಡಬ್ಬಿ. ಅದರೊಳಗೆ ಬಾಳೆಹಣ್ಣು. ಎರಡು ಕೋತಿಗಳು ಆ ತೂತುಗಳಲ್ಲಿ ಕೈಹಾಕಿ ಬಾಳೆಹಣ್ಣನ್ನು ಹಿಡಿದವು. ಆದರೆ ಮುಷ್ಟಿ ಬಿಗಿದರೆ, ತೂತಿನಿಂದ ಕೈ ಹೊರಬರುತ್ತಿಲ್ಲ. ಒಂದು ಕಪಿ ಹತ್ತುಹಲವು ಬಾರಿ ಯತ್ನಿಸಿ, ಕೊನೆಗೆ ಬಾಳೆಹಣ್ಣನ್ನು ಬಿಟ್ಟು ಕೈಬಿಡಿಸಿಕೊಂಡು ಹೊರಟುಹೋಯಿತು. ಆದರೆ ಇನ್ನೊಂದು ಕಪಿ ಬಾಳೆಹಣ್ಣಿನ ಲೋಭದಲ್ಲಿ ಮುಷ್ಟಿಯನ್ನು ಸಡಿಲಿಸಲೇ ಇಲ್ಲ! ಡಬ್ಬಿಯಿಂದ ಅದರ ಕೈ ಹೊರಬರಲೇ ಇಲ್ಲ! ಅಷ್ಟರಲ್ಲಿ ಬೇಟೆಗಾರ ಬಂದು ಅದನ್ನು ಹಿಡಿದೊಯ್ದ. ನಾವೂ ಅಷ್ಟೆ! ಹಿಡಿದದ್ದನ್ನು ಬಿಡಲಾಗದೆ, ‘ಬಂಧನ’ ಎಂದು ಕೊರಗುತ್ತೇವೆ! ನಮ್ಮ ಬಂಧನಕ್ಕೂ ಮುಕ್ತಿಗೂ ‘ನಾವೇ’ ಕಾರಣ. ಹೊರಗಡೆಯ ವ್ಯಕ್ತಿಗಳೂ ಸನ್ನಿವೇಶಗಳೂ ನಿಮಿತ್ತಗಳಷ್ಟೆ. ‘ನಮಗೆ ನಾವೇ ಬಂಧು, ನಮಗೆ ನಾವೇ ಶತ್ರುಗಳು’ ಎನ್ನುವ ಮಾತು ತುಂಬ ಸತ್ಯ.

Leave a Reply