ತತ್ವದ ನೆಲೆಗೆ ಏರು, ಅಮರನಾಗು

ತತ್ವದ ನೆಲೆಗೆ ಏರು, ಅಮರನಾಗು
ಡಾ. ಆರತೀ ವಿ. ಬಿ.
‘ವಿಭುವು (ಪರಮೇಶ್ವರನು) ಯಾರ ಪಾಪವನ್ನೂ ಪುಣ್ಯವನ್ನೂ ಉಂಬುವುದಿಲ್ಲ. ತಮ್ಮತಮ್ಮ ಅಜ್ಞಾನದ ಆವರಣದಿಂದಾಗಿ ಜೀವಿಗಳು ಮೋಹವಶರಾಗುತ್ತಾರೆ. ಸೂರ್ಯೋದಯವಾಗುತ್ತಲೇ ಕತ್ತಲೆಯು ತೊಲಗಿ ಬೆಳಕು ಚಿಮ್ಮುವಂತೆ, ಜ್ಞಾನವು ಹುಟ್ಟಿದಾಗ ಜೀವಿಗಳ ಮೋಹವು ಅಳಿದು, ಪರಮಾರ್ಥದ ಅರಿವು ಮೂಡುತ್ತದೆ. ಇಂಥ ಜ್ಞಾನವನ್ನು ಪಡೆದಿದ್ದು, ಮೋಹದ ಕಲ್ಮಶವನ್ನೆಲ್ಲ ಹೋಗಲಾಡಿಸಿಕೊಂಡ ಮಹಾತ್ಮರು, ಪರಮಾರ್ಥದಲ್ಲೇ ತಮ್ಮ ಬುದ್ಧಿಯನ್ನೂ, ಆತ್ಮವನ್ನೂ, ನಿಷ್ಠೆಯನ್ನೂ ಅನುಸಂಧಾನವನ್ನೂ ತೊಡಗಿಸಿ ತನ್ಮಯವಾಗಿರುತ್ತಾರೆ. ಹಾಗಾಗಿ ಅವರು ಮತ್ತೆ (ಜನ್ಮಮರಣಗಳ ಆವೃತ್ತಿಗೆ) ಮರಳದ ನೆಲೆಗೇರುತ್ತಾರೆ’ (ಭ.ಗೀ.: 5-15, 16, 17) ಎನ್ನುತ್ತಾನೆ ಕೃಷ್ಣ.
ಮನೋ-ಬುದ್ಧಿ-ಚಿತ್ತ-ಅಹಂಕಾರಗಳೆಂಬ ದೈವದತ್ತ ಅಂತಃಕರಣಗಳು ಲೌಕಿಕಜೀವನದಲ್ಲಿ ಹೇಗೆ ಉಪಕರಣಗಳೋ ಪರಮಾರ್ಥದ ಅನುಸಂಧಾನಕ್ಕೂ ಉಪಕರಣಗಳೇ. ಮನೋಬುದ್ಧಿಗಳನ್ನು ಲೌಕಿಕದಲ್ಲಿ ತೊಡಗಿಸುವುದು ತಪ್ಪಲ್ಲ. ಆದರೆ ಮೋಹ ಬೆಳೆಸಿಕೊಳ್ಳುವುದು ಅಪಾಯಕಾರಿ. ಆದರೆ, ಈಗಾಗಲೇ ನಮ್ಮನ್ನು ಆವರಿಸಿರುವ ಮೋಹವನ್ನು ಅಳಿಸುವುದೆಂತು?
‘ಪೂಜೆ, ಜಪ, ತಪ, ದಾನ, ಧ್ಯಾನ, ಸೇವಾದಿ ಪುಣ್ಯಕರ್ಮಗಳ ಮೂಲಕ ಅಂತಃಕರಣ ಶುದ್ಧಿಯಾಗುತ್ತದೆ’ ಎನ್ನುತ್ತವೆ ಶಾಸ್ತ್ರಗಳು. ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ…’ ಎಂದು ದಾಸರು ಹಾಡುವಂತೆ, ಜಗತ್ತಿನಿಂದ ಪಡೆದದ್ದನ್ನು ಜಗತ್ತಿಗೇ ಪ್ರರ್ತಸಬೇಕು. ಸಾಗುತ್ತಿರುವ ದೋಣಿಯಲ್ಲಿ ನೀರು ತುಂಬತೊಡಗಿದರೆ ಏನು ಮಾಡಬೇಕು? ನೀರನ್ನು ಕೈಗಳಿಂದೆತ್ತೆತ್ತಿ ಮರಳಿ ಕೆರೆಗೆ ಹಾಕಬೇಕು!! ಅಂತೆಯೇ ತನು-ಮನ-ಧನಗಳಿಂದ ಜಗತ್ತಿಗೆ ನಿಃಸ್ವಾರ್ಥಸೇವೆ ಮಾಡುತ್ತ ಅಂತರಂಗವನ್ನು ಶುದ್ಧವೂ ಸ್ಥಿರವೂ ಆಗಿಸಿಕೊಳ್ಳುವುದೊಂದೇ ದಾರಿ.
‘ದಾನ, ಧರ್ಮ, ಪೂಜೆಗಳಲ್ಲಿ ತೊಡಗಿದವರೂ ದುಃಖ-ಮೋಹಗಳಲ್ಲಿರುವುದು ಕಾಣುತ್ತದಲ್ಲ!’ ಎನಿಸಬಹುದು. ಇಲ್ಲೇ ಸ್ವಾರಸ್ಯ! ಮಾಡುವ ಕರ್ಮಗಳನ್ನು ‘ಯಾವ ಉದ್ದೇಶದಿಂದ’ ಮಾಡುತ್ತಿದ್ದಾರೆನ್ನುವುದು ಇಲ್ಲಿ ಗಮನಿಸಬೇಕಾದದ್ದು. ಧಾರ್ವಿುಕಕರ್ಮಗಳಲ್ಲಿ ವಿಹಿತಕರ್ಮಗಳೂ, ಕಾಮ್ಯಕರ್ಮಗಳೂ ನಿಷ್ಕಾಮಕರ್ಮಗಳೂ ಇವೆ. ಕರ್ತವ್ಯರೂಪದ ಧಾರ್ವಿುಕಕರ್ಮಗಳನ್ನು ಬಿಡದೆ ಮಾಡಬೇಕು. ಇನ್ನು ಆಯುರಾರೋಗ್ಯ ಐಶ್ವರ್ಯಾಭಿವೃದ್ಧಿ, ಕಾರ್ಯಸಾಫಲ್ಯ, ಪುತ್ರಪ್ರಾಪ್ತಿ, ಧನಪ್ರಾಪ್ತಿ, ಸ್ವರ್ಗಪ್ರಾಪ್ತಿ, ಅಧಿಕಾರಪ್ರಾಪ್ತಿ¬¬ ಮುಂತಾದವುಗಳ ಆಕಾಂಕ್ಷೆಯಿಂದಲೋ, ಪಾಪ, ರೋಗ, ಆಪತ್ತು, ವಿಘ್ನ, ಶತ್ರುಕಾಟ ಮುಂತಾದವುಗಳಿಂದ ಮುಕ್ತವಾಗುವ ಹಂಬಲದಿಂದಲೋ; ಸತ್ಕೀರ್ತಿ-ತೃಪ್ತಿ-ಶಾಂತಿ ಬೇಕೆಂಬ ಬಯಕೆಯಿಂದಲೋ; ಜನಬಲ, ಧನಬಲ, ಅಧಿಕಾರಬಲ, ಖ್ಯಾತಿ ಮುಂತಾದುವನ್ನು ಪ್ರದರ್ಶಿಸಲೋ ಮಾಡುವ ಧಾರ್ವಿುಕ ಕರ್ಮಗಳು ‘ಕಾಮ್ಯಕರ್ಮಗಳು’.
ಈ ಕರ್ಮಗಳಿಂದ ಅವರಿಗೆ ಆಯಾ ಫಲಗಳು ಲಭಿಸುವುದುಂಟು, ಆದರೆ ಮೋಹ ಅಳಿಯದು, ಜ್ಞಾನ ಸಿಗದು. ಏಕೆಂದರೆ, ಅವರಲ್ಲಿ ಕರ್ಮಫಲಾಸಕ್ತಿ ಇದೆ! ‘ನಾನು ಮಾಡಿದೆ’ ಎಂಬ ಕರ್ತೃತ್ವಭಾವವೂ ಇದೆ! ಹಾಗಾಗಿ ಫಲಾಸಕ್ತಿಯಿಂದ ಧಾರ್ವಿುಕಕರ್ಮಗಳನ್ನು ಮಾಡುವವರನ್ನೆಲ್ಲ ‘ಜ್ಞಾನಿಗಳು’ ಎಂದು ಭ್ರಮಿಸಬಾರದು. ಅವರಲ್ಲಿ ಆಸ್ತಿಕತೆ ಇರಬಹುದು, ಮೋಹ, ಆಸೆಗಳೂ ಇರುತ್ತವೆ. ಹಾಗಾಗಿ ಅವರು ಜ್ಞಾನಿಗಳಲ್ಲ.
ಹಾಗಾದರೆ ಧರ್ಮಕರ್ಮಗಳಿಂದ ಯಾರಿಗೆ ಜ್ಞಾನ ಲಭಿಸುತ್ತದೆ? ಯಾವುದೇ ಲೌಕಿಕಫಲಾಪೇಕ್ಷೆಯಿಲ್ಲದೆ ಲೋಕಕಲ್ಯಾಣಕ್ಕಾಗಿ ಅಥವಾ ಕೇವಲ ಜ್ಞಾನಪ್ರಾಪ್ತಿಗಾಗಿ ಧಾರ್ವಿುಕಕರ್ಮಗಳನ್ನು ಮಾಡುವವರಿಗೆ ಮಾತ್ರ! ಇದನ್ನೇ ಕೃಷ್ಣನು ಹೇಳುತ್ತಿರುವುದು! ಒಟ್ಟಿನಲ್ಲಿ ಜ್ಞಾನವು ಬೇಕಿದ್ದರೆ, ಕರ್ಮಫಲಾಸಕ್ತಿಯನ್ನೂ ಮೋಹವನ್ನೂ ಕೊಡವಿಕೊಂಡು ನಿರ್ಲಿಪ್ತರಾಗಬೇಕೆನ್ನುವುದು ತಾತ್ಪರ್ಯ. ಹೀಗೆ ಮೋಹದ ಕೊಳೆ ಕಳೆದುಕೊಂಡ ಶುದ್ಧಾತ್ಮರು ‘ನಾನು ದೇಹ’, ‘ನಾನು ಮಾಡುವವನು’, ‘ನನಗೆ ಅದು ಬೇಕು’ ಎನ್ನುವ ಮೋಹಪಾಶಗಳನ್ನು ಕೊಡವಿಕೊಂಡು ತತ್ವದ ನೆಲೆಗೇರುತ್ತಾರೆ. ಅವರ ಮನೋಬುದ್ಧಿಗಳು ಪರಮಾರ್ಥದಲ್ಲೇ ನಿಷ್ಠವಾಗುತ್ತವೆ. ಅವರು ಎಲ್ಲೇ ಇದ್ದರೂ ಏನೇ ಮಾಡಿದರೂ ಅದೆಲ್ಲವೂ ಈಶ್ವರಾರ್ಪಣಭಾವದಿಂದಲೇ! ಓಡಾಡುವ ಮಲಗುವ ಸಾಮಾನ್ಯ ಪ್ರಕ್ರಿಯೆಗಳಲ್ಲೂ ಆತ ‘ನಾನು’, ‘ನನ್ನದು’ ಎಂಬ ಭಾವವನ್ನು ತಾಳಲಾರ! ಉಸಿರುಸಿರೂ ಅವನ ಪಾಲಿಗೆ ಈಶ್ವರಾರಾಧನೆಯೇ ಸರಿ! ಅಂತಹವನ ಸ್ಥಿತಿಯ ಬಗ್ಗೆ ಲಲಿತೋಪಾಖ್ಯಾನವು ಹೀಗೆ ಹೇಳುತ್ತದೆ;
ದೇಹಾಭಿಮಾನೇ ಗಲಿತೇ ವಿಜ್ಞಾತೇ ಪರಮಾತ್ಮನಿ |
ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಸಮಾಹಿತಃ ||
ಈ ಸ್ಥಿತಿಗೇರಿದ ಮೇಲೆ ಜೀವಿಯು ಮತ್ತೆ ಜನ್ಮಮರಣಚಕ್ರಕ್ಕೆ ಸಿಲುಕುವುದಿಲ್ಲ. ಇಹದಲ್ಲಿನ ಆಸೆಗಳು ಉಳಿದಿದ್ದರೆ ತಾನೆ ಮರುಜನ್ಮ! ನಮ್ಮ ಭೋಗಸಂಕಲ್ಪಗಳೇ ಕರ್ಮಗಳಿಗೆ ಬೀಜ. ಅವುಗಳನ್ನು ಮಾಡುವಾಗ ಮತ್ತೆ ಒಂದಷ್ಟು ಭೋಗಪ್ರಾಪ್ತಿಯ ಸಂಕಲ್ಪ ಮಾಡುತ್ತೇವೆ! ಹೀಗೆ ಸಂಕಲ್ಪಗಳೂ ಕರ್ಮಗಳು ಚಕ್ರವತ್ ನಡೆಯುತ್ತವೆ. ಕರ್ಮವೆಸಗಲು ಫಲಗಳನ್ನನುಭವಿಸಲು ದೇಹ ಬೇಕು. ಅದಕ್ಕಾಗಿ ಜನ್ಮ! ಜನಿಸಿದ ಮೇಲೆ ಮರಣ! ಅತೃಪ್ತಕಾಮರಾಗಿ ಸತ್ತಾಗ ಮತ್ತೆ ಹುಟ್ಟು! ಹೀಗೆ ಭೋಗನಿಮಿತ್ತ ಕರ್ಮಗಳೂ ತತ್ಸಂಬಂಧಿತ ಜನ್ಮಗಳೂ ನಮ್ಮನ್ನು ನಿರಂತರ ಜನ್ಮಮರಣಚಕ್ರದಲ್ಲಿ ತೊಡಗಿಸುತ್ತವೆ. ಆದರೆ ಕರ್ಮಯೋಗಿಗಳು ನಿಷ್ಕಾಮರಾಗಿ ಕರ್ಮವೆಸಗುವುದರಿಂದ ಅವರಿಗೆ ಹುಟ್ಟುಸಾವುಗಳಿಲ್ಲದ ನೆಲೆ ದಕ್ಕುತ್ತದೆ. ಹುಟ್ಟಿದರೂ ಅವರು ಈಶ್ವರೇಚ್ಛೆಗೆ ಬಾಗಿ ಲೋಕಕಲ್ಯಾಣಾರ್ಥಕ್ಕಷ್ಟೇ ಕರ್ಮ ಮಾಡುತ್ತಾರೆ. ‘ನೀನು ಅಂತಹ ಕರ್ಮಯೋಗಿಯಾಗು, ಬಂಧಗಳಿಂದ ಕಳಚಿಕೋ!’ ಎನ್ನುತ್ತ ಗೀತಾಚಾರ್ಯ ಅರ್ಜುನನಿಗೆ ದಾರಿ ತೋರುತ್ತಿದ್ದಾನೆ.
ಕೃಪೆ: ವಿಜಯವಾಣಿ

Leave a Reply