ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ

ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ

ಎಲ್ಲ ಕಾಲದಲ್ಲೂ ಎಲ್ಲ ಕುಲದ ಸ್ತ್ರೀಪುರುಷರು ಲೌಕಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೇರಿದ ಉದಾಹರಣೆಗಳನ್ನು ನೋಡುತ್ತ ಬಂದಿದ್ದೇವೆ. ಸ್ಥಳದ ಮಿತಿಯಿಂದಾಗಿ ಎಲ್ಲರ ಜೀವನ-ಸಾಧನೆಗಳ- ದೇಶ-ಕಾಲಾದಿಗಳ ವಿವರಗಳನ್ನು ನೀಡಲಾಗಿಲ್ಲ.

ಹೀಗೆ, ಸಾಮಾಜಿಕ ಸಾಮರಸ್ಯ ಹಾಗೂ ಹಲವು ಸಾಧನೆ ಸಿದ್ಧಿಗಳ ಹಲವು ಉದಾಹರಣೆಗಳು ಲಭ್ಯ. ಆದರೆ ನಾವದನ್ನು ಗಮನಿಸಬೇಕು, ಪ್ರಮಾಣಿಸಬೇಕು, ಗುರುತಿಸಬೇಕು, ಮುಕ್ತವಾಗಿ ಪ್ರಕಟಿಸಬೇಕು, ರ್ಚಚಿಸಬೇಕು, ಸುಳ್ಳು ಕಥೆಗಳನ್ನು ಕಟ್ಟಿ ಹರಡುವ ಡೋಂಗಿ ವಿಚಾರವಾದಿಗಳನ್ನು ನಿಗ್ರಹಿಸಬೇಕು. ಇದಾವುದನ್ನೂ ಮಾಡದೆ ಇದ್ದ ನಾವು, ತಾಯಿ ಸದೃಶವಾದ ದೇಶಧರ್ಮಗಳ ರಕ್ಷಣೆಗೆ ನಿಲ್ಲದೇ ಉಳಿದ ‘ಕರ್ತವ್ಯಭ್ರಷ್ಟ ಸಂತಾನ’ವೇ ಸರಿ. ಇನ್ನು, ಬೇಕೆಂದೇ ಇಂತಹ ಉತ್ತಮ ಸಾಧಕರ ಮಾಹಿತಿಯನ್ನೂ, ಸಾಮಾಜಿಕ ಭಾವೈಕ್ಯದ ಪ್ರಸಂಗಗಳನ್ನೂ ನಮ್ಮ ಗಮನದಿಂದ ದೂರವಿರಿಸುವ ‘ಶಿಕ್ಷಣತಜ್ಞ’ರನ್ನೂ ನಾವೆಂದೂ ಪ್ರಶ್ನಿಸಿಲ್ಲ! ಶಿಕ್ಷಣ-ಮಾಧ್ಯಮ- ‘ವಿಚಾರ’ವಲಯಗಳಲ್ಲಿ ದೇಶಧರ್ಮಗಳ ಬಗ್ಗೆ ಕೇವಲ ಕಲಹ-ಭೇದಗಳ ವೈಭವೀಕೃತ ಮಾಹಿತಿಯನ್ನೇ ‘ಸಾರ್ವತ್ರಿಕ ಪರಿಸ್ಥಿತಿ’ ಎಂಬಂತೆ ಬಿಂಬಿಸಲಾಗುತ್ತಿರುವುದನ್ನೂ ನಾವು ನೋಡಿಯೂ ನೋಡದಂತೆ ಇದ್ದುಬಿಟ್ಟಿದ್ದೇವೆ. ದೇಶದ ಹೆಸರನ್ನೇ ಬದಲಾಯಿಸಿದಾಗಲೂ ಮಾತನಾಡಲಿಲ್ಲ. ದೇಶ ಇಕ್ಕೆಲಗಳ ಭೂಭಾಗವನ್ನು ಕತ್ತರಿಸಿ ಶತ್ರುಗಳಿಗೆ ಔತಣವಿತ್ತಾಗಲೂ ಸಹಿಸಿ ಸುಮ್ಮನಾದೆವು. ಕೊಂದು-ಕೊಚ್ಚಿ, ಲೂಟಿ-ಮತಾಂತರಗಳನ್ನು ಗೈದ ಆಕ್ರಮಣಕಾರರನ್ನೇ ‘ಮಹಾತ್ಮ’ರೆಂದು ಹೊಗಳಿದವರಿಗೂ ಮತವಿತ್ತು ಗೆಲ್ಲಿಸುವ ನಾವು, ಧರ್ಮ-ಸಂಸ್ಕ ೃಗಳೊಳಗಿನ ಹಸ್ತಕ್ಷೇಪವನ್ನು ‘ಅಭಿವ್ಯಕ್ತಿ-ಸ್ವಾತಂತ್ರ್ಯದ ಹೆಸರಲ್ಲಿ ನಿರ್ಲಕ್ಷಿಸುವ ನಾವುಗಳು, ಧರ್ಮವನ್ನೂ, ವೃತ್ಯಾಧಾರಿತ ವರ್ಣವ್ಯವಸ್ಥೆಯನ್ನೂ ‘ಜಾತಿಭೇದ’ ಎಂದು ಕರೆದು ಭಯಂಕರ ಅಪಾರ್ಥಗಳನ್ನು ಮೂಡಿಸಿದಾಗಲೂ ಸುಮ್ಮನಿದ್ದದ್ದರಲ್ಲಿ ಆಶ್ಚರ್ಯವಿಲ್ಲ! ನಮ್ಮನ್ನು ನಾಲ್ಕು ಮಾತು ಅಂದವರನ್ನು ವರ್ಷಗಳೇ ಕಳೆದರೂ ಕ್ಷಮಿಸಲಾರದ ನಾವು, ನಮ್ಮ ನಾಡು-ನುಡಿಗಳನ್ನೂ ಧರ್ಮ-ಸಂಸ್ಕೃಗಳನ್ನೂ ಸಿದ್ಧಾಂತ-ಶಿಷ್ಟಾಚಾರಗಳನ್ನೂ ದೇವತೆಗಳನ್ನೂ ಸಂತರನ್ನೂ ಹಗಲಿರುಳೂ ದೂಷಿಸುತ್ತಲೇ ಇರುವವರನ್ನು ಮಾತ್ರ ಸಹಿಸುತ್ತೇವೆ! ಆಂಗ್ಲಶಾಲೆಗಳಿಗೆ ಸೇರಿ ಎಲ್​ಕೆಜಿಯಿಂದಲೇ Finger on the lips ತರಬೇತಿಯನ್ನು ಪಡೆದದ್ದು ಸಾರ್ಥಕವಾಯಿತು ಬಿಡಿ!

ಹೀಗೆ ನಿರಭಿಮಾನಿಗಳ ನಿರ್ಲಕ್ಷ್ಯದಿಂದಲೂ, ದುರಭಿಮಾನಿಗಳ ದುರ್ವರ್ತನೆಯಿಂದಲೂ ವರ್ಣವ್ಯವಸ್ಥೆಯನ್ನು ‘ಜಾತಿ’ ಎಂದೇ ಚಿತ್ರಿಸುವುದು ಅಂದು ಆಕ್ರಮಣಕಾರರಿಗೂ ಇಂದು ದೇಶವನ್ನು ಒಡೆಯುವವರಿಗೂ ಅನುಕೂಲವಾಗಿದೆ. ನಿರಂತರ ‘ಜಾತಿವಾದ’ದ ಶ್ರವಣ ಹಾಗೂ ವೈಭವೀಕೃತ ಚಿತ್ರೀಕರಣಗಳನ್ನೇ ಕೇಳಿ-ಓದಿ ನಮ್ಮ ಮನದಲ್ಲಿ ವರ್ಣವ್ಯವಸ್ಥೆಯ ವಾಸ್ತವಿಕ ಸ್ವರೂಪ ಹಾಗೂ ಅನ್ವಯಗಳ ಪರಿಕಲ್ಪನೆಯೇ ಮಾಯವಾಗಿದೆ. ಹೀಗಾಗಿ ‘ಚಾತುರ್ವರ್ಣ್ಯ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ’ ಎನ್ನುವ ಗೀತೆಯ ನೇರ ಸರಳ ವಾಕ್ಯವನ್ನು ಅರ್ಥಮಾಡಿಕೊಳ್ಳುವಲ್ಲಿಯೂ ನಮಗೆಲ್ಲ ಇಷ್ಟು ಕ್ಲೇಶ ಒದಗಿದೆ! ಹಾಗಾಗಿ ಈ ವಿಷಯದ ಬಗ್ಗೆ ವಿಸ್ತಾರದ ಚರ್ಚೆ ಇಲ್ಲಿ ನಡೆದಿದೆ.

ಇಷ್ಟೆಲ್ಲ ಗೋಜು-ಗೊಂದಲಗಳ ಮಧ್ಯೆಯೂ, ತನ್ನದೇ ಸತ್ವ-ಸಾಮರ್ಥ್ಯಗಳಿಂದಲೂ ಹಾಗೂ ಲಾಭ ಹಾಗೂ ಅಪ್ಯಾಯತೆಗಳಿಂದಾಗಿಯೂ ಹಲವು ಕುಲಾಚಾರಗಳೂ, ಕುಲವೃತ್ತಿಗಳೂ ಉಳಿದುಬಂದಿರುವುದು ಒಂದು ಭರವಸೆಯ ವಿಷಯವೇ ಸರಿ! ಕೆಲವು ಹವ್ಯಾಸಗಳಾಗಿಯೋ ಧಾರ್ವಿುಕ-ಸಾಮಾಜಿಕ-ಶಿಷ್ಟಾಚಾರಗಳಾಗಿಯೋ ಕೂಡ ಉಳಿದಿವೆ. ವ್ಯಾಪಾರ-ವಾಣಿಜ್ಯಗಳು, ದೇವಾಲಯ-ವಾಸ್ತುಶಿಲ್ಪ, ಬಡಗಿ, ಅಕ್ಕಸಾಲಿಗ, ಅಗಸ, ಕ್ಷೌರ, ಕೃಷಿ, ನೇಯ್ಗೆ, ಮರಗೆಲಸ, ಗಾಣಿಗ, ಹೈನುಗಾರಿಕೆ, ಲೋಹಗಾರಿಕೆ, ಮೀನುಗಾರಿಕೆಗಳಂತಹ ವೃತ್ತಿಗಳಲ್ಲದೆ, ಬುಟ್ಟಿ ನೇಯುವುದು, ಕಸೂತಿ, ಅಡುಗೆ, ಹೂಕಟ್ಟುವುದು, ಬೊಂಬೆ ತಯಾರಿಕೆ, ಕೆತ್ತನೆ ಮುಂತಾದ ಕುಶಲಕಲೆಗಳೂ, ಗೀತ-ನೃತ್ಯ- ರಂಗಭೂಮಿ-ಚಿತ್ರಕಲೆ-ಶಿಲ್ಪಕಲೆಗಳ ಅಸಂಖ್ಯ ಪ್ರಕಾರದ ಲಲಿತಕಲೆಗಳೂ ಯೋಗ-ಆಯುರ್ವೆದಗಳೂ ಇಂದಿಗೂ ಜೀವಂತವಾಗಿ ಉಳಿದಿದ್ದು ವಿಶ್ವಾದ್ಯಂತ ಭಾರತೀಯತೆಯ ವೈಭವದ ಕೀರ್ತಿಪತಾಕೆಯನ್ನು ಹಾರಿಸುತ್ತಲೇ ಇವೆ! ಇನ್ನೊಂದು ಸತ್ಯವನ್ನು ಗಮನಿಸಿದ್ದೀರೇನು? ಭಾರತವು ತನ್ನತನವನ್ನು ಬೆಳೆಸಿಕೊಂಡ ಕ್ಷೇತ್ರಗಳಲ್ಲಿ ದಾಪುಗಾಲಲ್ಲಿ ಮುನ್ನಡೆದಿದೆ, ವಿಶ್ವಮಾನ್ಯತೆ ಪಡೆದಿದೆ.

ಕುಲವೃತ್ತಿಗಳನ್ನು ಅಥವಾ ಐಚ್ಛಿಕವೃತ್ತಿಗಳನ್ನು ಮಾಡುವ ಉತ್ಸಾಹವನ್ನು ಎಲ್ಲೆಡೆ ಪ್ರೋತ್ಸಾಹಿಸಬೇಕು. ‘ಇತರರು ನೀಡುವ ಉದ್ಯೋಗಕ್ಕಾಗಿ ಕೈಚಾಚುವುದೊಂದೇ ದಾರಿ’, ‘ದೇಶಾಂತರ ಹೋದರೆ ಮಾತ್ರವೇ ಸಂಪತ್ತು-ಸಾಫಲ್ಯ-ಪ್ರಗತಿ ಸಾಧ್ಯ’, ‘ನನ್ನ ವೃತ್ತಿ ಕೀಳು, ಅವರ ವೃತ್ತಿ ಮೇಲು’ ಎಂಬಂತಹ ಮೂಢನಂಬಿಕೆಗಳು ನಾಶವಾಗಬೇಕು. ಆಗ ದೇಶೀಯ ಮೇಧಾಶಕ್ತಿಯ ಪಲಾಯನವೂ ಕುಗ್ಗುತ್ತದೆ, ಸ್ವಾಭಿಮಾನವೂ ಸ್ವಾವಲಂಬನೆಗಳೂ ಹೆಚ್ಚುತ್ತವೆ. ತನ್ನ ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃಕ ವೈಶಿಷ್ಟ್ಯಗಳನ್ನು ಗುರುತಿಸಿಕೊಂಡು, ತದನುಸಾರವಾಗಿ ತನ್ನ ಜೀವನದ ಗುರಿಯನ್ನು ರೂಪಿಸಿಕೊಂಡು, ಎತ್ತರೆತ್ತರಕ್ಕೆ ಏರುತ್ತ ಹೋಗುವುದು ಜಾಣತನ. ಅಂಧವಾದ ಪರಾನುಕರಣೆ, ಅದರಲ್ಲೂ ನಮ್ಮನ್ನು ತುಳಿಯಲೆಂದೇ ವಿಭಜಿಸಲೆಂದೇ ಹರಡಲಾದ ಬಾಹ್ಯಾಂತರಿಕ ಶತ್ರುಗಳ ಮಾತಿಗೆ ಮಾರುಹೋಗುವುದು ‘ಆತ್ಮಹತ್ಯಾಸಮಾನ’! ಶತ್ರುಗಳ ಮಾತಿಗೆ ಒಳಿದು ರೋಷ-ದ್ವೇಷ-ಕಲಹಗಳಲ್ಲಿ ತೊಡಗುವುದರಿಂದ ಭೇದವು ನಾಶವಾಗುವ ಬದಲು, ಜಾತಿಯ ಮಮಕಾರ ಹಾಗೂ ಹಗೆಗಳು ಇಮ್ಮಡಿಸುತ್ತವೆ. ‘ಗುಣ-ಕರ್ಮ-ವಿಭಾಗಶಃ ನಿರ್ವಣವಾಗಿರುವ ವರ್ಣವ್ಯವಸ್ಥೆಯನ್ನು ಅರಿತು ಆಚರಿಸಿ’ ಎನ್ನುವುದು ಶ್ರೀಕೃಷ್ಣನ ದಿಗ್ದರ್ಶನ ಸಾರ್ವಕಾಲಿಕ ಸಂದೇಶವಾಗಿದೆ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply