ಅನನಾಸು

ಸುರೇಖಾ ಭೀಮಗುಳಿ
3 ನವೆಂಬರ್ 2015
” ಅನಾನಾಸು ಸಂಭ್ರಮ !”
***********************
ಪೆರಿಯ ಶಾಂತಿಯ ಅನಾನಾಸದು
ನಮ್ಮ ಬಿಡದೇ ಸೆಳೆವುದು ||
ಎಷ್ಟು ತಿಂದರು ತೃಪ್ತಿಯಾಗದು
’ಹೀಗೆ ಯಾತಕೆ ?’ ತಿಳಿಯದು || ೧ ||
ಮಂಗಳೂರಿನ ಮುಖ್ಯ ರಸ್ತೆಯ
ಬಲಕೆ ತಿರುಗಿದ ಮಾರ್ಗವು ||
ಹಸಿರು ಕಾನನ ನೆರಳ ಪರಿಸರ
ಸುತ್ತ ಮಂಗನ ಆಟವು ! || ೨ ||
ಹಣ್ಣ ಸಿಪ್ಪೆಗೆ – ಕೊಳೆತ ಹಣ್ಣಿಗೆ
ಕಾದು ಕುಳಿತಿವೆ ಮರ್ಕಟ ||
ಮರದ ಮೇಲಿನ ಮಂಗನಾಟಕೆ
ಮರೆವ ಗ್ರಾಹಕ ಸಂಕಟ || ೩ ||
ಹಳದಿ ಹಣ್ಣಿಗೆ ಉಪ್ಪು ಖಾರಾ
ಹಣ್ಣ ತಟ್ಟೆಯು ಮೆರೆವುದು ||
ಬಾಯಿಗಿಟ್ಟರೆ ’ಇನ್ನು ಬೇಕೂ’
ಎಂದು ಮನವೂ ಬೇಡ್ವುದು || ೪ ||
ನಮಗು ಗೊತ್ತಿದೆ ಬಹಳ ತಿಂದರೆ
ದೇಹ ಉಷ್ಣವ ತಡೆಯದು ||
ಬಿಟ್ಟರುಂಟೇ ಇಂಥ ಸಂಭ್ರಮ ?
ಬೇಕು ಎಂದರು ಸಿಕ್ಕದು || ೫ ||
ನಾಲ್ಕೆ ಜನರೇ ಹತ್ತು ತಟ್ಟೆಯ
ತಿಂದು ತೇಗುತ ಬಂದೆವು ||
ಇಂದು ಮನೆಯಲಿ ಹಾಲು- ಮೆಂತ್ಯದ
ಬೊಂಡ ನೀರಿನ ಪಥ್ಯವು ! || ೬ ||
– ಸುರೇಖಾ ಭೀಮಗುಳಿ
03/11/2015.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ಶ್ಯಾಮ್ ಭೀಮಗುಳಿ ಮತ್ತು ಅನಾನಾಸು ಗಾಡಿ !

Gurumurthy  Mehendale
ಹೊರಗಿನಿಂ ಹೇಳಿಹೆವು
ಮುಳ್ಳು ನಾವು
ಹೇಳಿದರು ತಿಳಿಯದಾ
ಮಳ್ಳು ನೀವು
ಹುಳಿಸಿಹಿಯ ಸಂಕರದ
ಹಣ್ಣು ನಾವು
ರುಚಿಯನಾರಾಧಿಸುವ
ಮಳ್ಳು ನೀವು
ಒಳಗಿನಾಸೆಯ ಬಳಸಿ
ಸೆಳೆವೆಯುವೆವು ನಾವು
ತೀರದಾಸೆಗೆ ತೊಳಲಿ
ಬಳಲುವಿರಿ ನೀವು

ಸುರೇಖಾ ಭೀಮಗುಳಿ
ಮುಳ್ಳುಗಳ ಪೊದೆಯೊಳಗೆ ಮುಳ್ಳು ಕಿರೀಟ ಹೊತ್ತೆ
ಸಹಜ ಸುಂದರಿ ನಾನು ಬಲ್ಲೆಯೇನು ? ||
ಮೇಲಿಹವು ಹುರುಪೆಗಳು ಒಳಗಿಹುದು ಮಧುರರಸ
ತಿಂದವನೆ ಅರಿಯುವನು ಆ ಖುಷಿಯನು |
ಸುರೇಖಾ ಭೀಮಗುಳಿ
ಅನಾನಾಸನು ತಿಂದ ದಿನವೇ
ಬೊಂಡ ನೀರನು ಕುಡಿದೆನು ||
ಮನೆಗೆ ತಲುಪಿದ ಅರ್ಧ ತಾಸಲಿ
ಮೆಂತ್ಯ ತಿಂದು ತಣಿದೆನು ||

ನಿನ್ನೆ ನೆನೆಸಿದ ಮೆಂತ್ಯ ನೀರನು
ಈಗ ಕುಡಿಯುತಲಿರುವೆನು ||
ಉಷ್ಣವಾಗುವ ಮೊದಲೆ ನಾನೂ
ಅದನು ಓಡಿಸಿ ಬಿಟ್ಟೆನು ! ||

Nandini Dinesh
ಹಸಿರೆಲೆಯ ಮುಳ್ಳಿನ ಗುಚ್ಛದಲಿ
ಹಳದಿ ಚಿಪ್ಪಿನ ಹೂದಾನಿಯೊಳು
ತುಂಬಿದೆ ರಸಪಾಕದ ಸವಿ
ಹಣ್ಣಿನ ಸವಿಯೊಂದು
ಅಪರೂಪದ ಅನ್ನಾಂಗಗಳ
ಪಡೆದವರು ಭಾಗ್ಯಶಾಲಿಗಳು

 

Mohini Damle
ಅನನಾಸ್ ಹಣ್ಣೆ ಗಮ್ಮತ್ತು
ಅಳತೆ ಮೀರಿದರೆ ಆಪತ್ತು…

Leave a Reply