ನನಸಲ್ಲ ಇದು ಕನಸು

ನನಸಲ್ಲ ಇದು ಕನಸು

ನಿನ್ನೆ ಮನೆಯಂಗಳದಲಿ
ತೇನ್ ಸಿಂಗ್ ಕರೆದಂತಾಯ್ತು
ಬಾಗಿಲು ತೆರೆಯಲು ಹಿಮಾಲಯವೇ
ಮುಂದೆ ನಿಂತತಾಯ್ತು
ಸರಸರ ಏರಿದೆ ಹಿಮಾಲಯವ
ಮುಷ್ಠಿಲಿ ಹಿಡಿದೆ ಹಿಮವನು
ಮೈಮೇಲೆಲ್ಲಾ ಸುರಿವಿಕೊಂಡು
ಹಿಮಸ್ನಾನವ ಮಾಡಿದೆ ನಾನು
ನೋಡು ನೋಡುತಿರೆ ಶಿಖರದ
ತುದಿಯನ್ನೇ ಕಂಡಿದ್ದೆ
ಕೈಯಲಿ ಭಾರತ ಧ್ವಜವನು ಹಿಡಿದಿದ್ದೆ
ಮರುಕ್ಷಣದಲೆ
ಗಂಗೆ, ತುಂಗೆ, ಯಮುನೆಯರೆಲ್ಲ
ನೀರಿಗೆ ಬಾರೆ ಎಂದಂತಾಯ್ತು
ಕೊಡವನು ಹಿಡಿದು ಹೊರಹೋಗುವುದಲಿ
ಗಂಗಾ ನದಿಯೇ ಭೋರ್ಗರೆಯುತ್ತಿತ್ತು
ಆದಿಯಿಂದ ಅಂತ್ಯದವರೆಗೂ
ಈಜಿ ಈಜಿ ದಡವನು ಸೇರಿದೆ ನಾನು
ಹಿತ ಅನುಭವದಲಿ ಒಳ ಬರುತಿರಲು
ಕಲ್ಪನಾ ಚಾವ್ಲಾ ಎನ್ನಯ ಹೆಸರೇ
ಕರೆದಂತಾಯ್ತು
ಹೊರ ಅಂಗಳಕೆ ನಯನವು ಇಣುಕಲು
ಅಂತರಿಕ್ಷವೇ ನನ್ನೆದುರಿತ್ತು
ತಡ ಮಾಡದೆ ಭರಭರ ಏರಿಯೇಬಿಟ್ಟೆ
ರೊಯ್ಯನೆ ಗಗನಕೆ ಹಾರಿಯು ಬಿಟ್ಟೆ
ಚಂದ್ರ ತಾರೆಯರ ಕೈಕುಲುಕಿದ್ದೆ
ಪೃಥ್ವಿಯ ಚಲನೆಯ ಸೊಗಸನು ಕಂಡೆ
ಸುಖ ಅನುಭಾವದಿ ಸಾಗರ
ಹಿಮಾಲಯ ಗಗನದಲಿ ಹಾರುತ್ತಿರಲು
ನೇಸರನ ಕೂಗು ಕೇಳಿದೆ
ಕಂಡ ಕನಸಿಂದ ಥಟ್ಟನೆ ಎದ್ದು
ಅನುಭವಗಳ ಸ್ಮರಿಸುತ ನಿಂತೆ
ಒಳಗೊಳಗೆ ಆನಂದಿಸಲಾಗಿ
ನವ ಚೇತನ ಶಕ್ತಿ ದೇಹದಿ
ಹರಿಯಲು ನಿತ್ಯ ಕಾಯಕವನು
ಉತ್ಸಾಹದಿ ಮುಗಿಸಿಯೂ ಬಿಟ್ಟೆ.

Leave a Reply