ನಾಕಂಡಂತೆ

ನೋಡಬಂದೆ ಕೂಟವನ್ನು
ಹುಟ್ಟುಸಾವಿನಾಟವನ್ನು
ಆಟಗಾರ ಜಾಣನೀನು
ತಿಳಿಯೆ ನಿನ್ನ ನಡೆಯನು

ನಿನ್ನಾಟದ ಕಾಯಿನಾನು
ನಡೆವೆ ನಿನ್ನ ಇಚ್ಛೆಯಂತೆ
ಪ್ರಶ್ನಿಸೆನು ಯಾವುದನೂ
ದಾಳ ನಿನ್ನ ಮಾಯೆಯಂತೆ

ನಿನ್ನಿಚ್ಛೆಯ ಆಟವೇನು
ಎಲ್ಲ ಒಂದೇ ಹೂಟವೇನು
ಎಲ್ಲರಲ್ಲು ವಾಸಮಾಡಿ
ಗೆಲುವೆ ಎಲ್ಲ ಹೇಗೆ ನೀನು

ಎಲ್ಲ ನೀನೆ ಎಂದಮೇಲೆ
ನಾನೇ ಇಲ್ಲಿ ಇಲ್ಲವೇನೊ
ನಾನೇ ಇಲ್ಲವೆಂದಮೇಲೆ
ಉಳಿಯಿತೇನು ಅಳಿಯಿತೇನು

Leave a Reply