ಪಕಳೆ – ಸಿಡಿಯುವದು – ಮೊಗ – ಕಲ್ಲಂಗಡಿ

ಪಕಳೆ – ಸಿಡಿಯುವದು – ಮೊಗ – ಕಲ್ಲಂಗಡಿ

ನಡು ಮಧ್ಯಾಹ್ನ..
ನೆತ್ತಿ ಒಡೆಯುವ ಬಿಸಿಲು..
ತಲೆ ಸಿಡಿಯುತ್ತಿದೆ ಒಂದೇ ಸವನೆ…
ಮೊಗ ಹೆಚ್ಚಿಟ್ಟ ಕಲ್ಲಂಗಡಿಯಂತೆ ಕೆಂಪು ಕೆಂಪು..
ಆದರೆ ಯಾರಿಗೆ ಹೇಳುವದು??

ಬಿತ್ತಿದ ಬೆಳೆಗೆ ಮಳೆಯಿಲ್ಲ…
ಮಾಡುವೆನೆಂದರೂ
ಕೆಲಸ ಕೊಡುವವರಿಲ್ಲ..
ಮನೆಯಲ್ಲಿ ಹೂಪಕಳೆಯಂಥ
ಎಳೆ ಕಂದಮ್ಮಗಳನ್ನು ನೆನೆದರೆ
ಉಸಿರು ನಿಲ್ಲುತ್ತದೆ…

ಏನೋ ಈ ರಾಜಕಾರಣಿಗಳ
ದಯದಿಂದ ಅಷ್ಟಿಷ್ಟು ಹಣ…
ಕೆಲಸವೂ ಕಠಿಣವಲ್ಲ…
ಕರೆದಾಗ ಬಂದ್ ನಲ್ಲಿ ಭಾಗವಹಿಸುವದು
ಕಲ್ಲು ತೂರುವದು, ಧಿಕ್ಕಾರ ಕೂಗುವದು,
ಆಗಾಗ ಅಲ್ಲಲ್ಲಿ ಬೆಂಕಿ ಹಚ್ಚುವದು…
ಈಗ ಹೊರಟಂತೆ ಮೆರವಣಿಗೆ ತೆಗೆಯುವದು..

ಇದು ಮನಕ್ಕೊಪ್ಪದ
ಅಪಾಯದ ಕೆಲಸ… ಗೊತ್ತು.
ಆದರೆ ಹೊಟ್ಟೆ ಕೇಳಬೇಕಲ್ಲ…
ಬದುಕಿ ಮನೆ ಸೇರಿದರೆ
ಮಕ್ಕಳಿಗೆ ಅಷ್ಟಿಷ್ಟು ಆಹಾರ…
ಸತ್ತರೆ…ಕುಟುಂಬಕ್ಕೆ
ಒಂದಿಷ್ಟು ಪರಿಹಾರ….

Leave a Reply