ಪಾತರಗಿತ್ತಿ

ಪಾತರಗಿತ್ತಿ

ಬಂತು ಪಾತರಗಿತ್ತಿ ಹೂಬನವ ಸುತ್ತಿ
ಗಿರಿ ಶಿಖರಗಳ ನೆತ್ತಿ ಹತ್ತಿ
ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ
ಬಂದೈತಿ ಇತ್ತ ಮುಂದಿನ ಪಯಣವೆತ್ತ ?

ರೇಶಿಮೆಯ ನುಣುಪಿನ ನವಿರಾದ ರೆಕ್ಕಿ
ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ
ವಿವಿಧ ವರ್ಣ ಸಂಯೋಜನಗೆಳ ಭಿತ್ತಿ
ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ

ಹೂವಿಂದ ಹೂವಿಗೆ ಹಾರುವ ಗಟ್ಟಿಗಿತ್ತಿ
ಚಂದುಳ್ಳಿ ಮನದ ಪಾತರಗಿತ್ತಿ
ಇಷ್ಟು ದಿನ ನೀನು ಎಲ್ಲಿದ್ದಿ ಸುಂದರಿ ?
ಇದ್ದಕಿದ್ದಂತೆ ಧರೆಯಲುದಿಸಿದ ಪರಿ !

ಹಾರುವೆಡೆಯಲ್ಲೆಲ್ಲ ಜಗದ ತುಂಬೆಲ್ಲ
ಚಿಲುಮೆಯುಕ್ಕಿಸುವ ಚೈತನ್ಯ ಜೀವಿ
ನೀನು ಸುತ್ತುವ ದಶ ದಿಕ್ಕುಗಳಲೆಲ್ಲ
ಜೀವನ ಸಂಕೇತವನೊಯ್ವ ಸಾಂಕೇತ ಜೀವಿ

ಚಣದ ನಶ್ವರ ಬದುಕು ನಿನ್ನದಾದರೂ
ಯುಗದ ಬಾಳೆಂಬಂತೆ ಬದುಕಿ
ಕಾಲನ ಕರೆಗೆ ಓಗೊಟ್ಟು ಕಾಣೆಯಾಗುವಾಕಿ
ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ

– ಹನುಮಂತರಾವ್ ಪಾಟೀಲ

Leave a Reply