ಪ್ರಾರ್ಥನೆ.

ಪ್ರಾರ್ಥನೆ.

ಅನ್ಯರ ಮನ ನೋಯಿಸದಂತೆ ನುಡಿವುದನು ಕರುಣಿಸು
ಎನ್ನ ಮನ ನೋಯಿಸಿದವರ ಕೂಡಲೆ ಕ್ಷಮಿಸುವುವಂತೆ ಮಾಡುವುದ ಮರೆಯದಿರು

ಪ್ರೀತಿ ಬಯಸಿ ಬಂದವರ ದ್ವೇಷಿಸದಂತೆ ಮತಿ ನೀಡು
ಅರಿಯದೆ ಎನ್ನ ದ್ವೇಷಿಸುವವರ ಸದಾ ಪ್ರೇಮಿಸುವಂತೆ ನೀ ಮಾಡು

ಹಸಿದು ಬಂದ ಬಂಧುಗಳ ಹಸಿವನೀಗಿಸುವ ಶಕ್ತಿ ದಯಮಾಡು
ಉಣ್ಣಕಿಕ್ಕಲಿಲ್ಲವೆಂಬ ಕಾರಣಕೆ ಪರರ ಹಳಿಯದಂತೆ ನನ್ನ ಕೃಪೆಮಾಡು

ಸಿರಿತನವು ದೇವರ ಕೃಪೆಯು ಕಂಡು ಹೊಟ್ಟೆಕಿಚ್ಚು ಪಡದಂತೆ ಚಿತ್ತ ಶಾಂತವಾಗಿರಿಸು
ಸಿರಿತನವು ಬಂದಾಗ ಹಂಚಿತಿನ್ನುವುದಕೆ ನನ್ನ ಮರೆಯದೇ ದಾನಿಯಾಗಿಸು

ದುಷ್ಟರೆಂದು ಪರರ ಬಗೆವ ಮೊದಲು ಬಾಯಿಯನು ಮುಚ್ಚಿ ಬಿಡು
ದುಷ್ಟೆಯೆಂದು ದೂರು ಕೇಳುವ ಮೊದಲು ಸತ್ಯವಂತೆ ಮಾಡಿಬಿಡು

ಕೆಟ್ಟತನದ ಚಾಡಿ ಮಾತು ಕೇಳುವಾಗ ಕ್ಷಣಕೆ ಕೇಳದಂತೆ ಕಿವುಡಿ ಮಾಡಿಬಿಡು
ಪರರ ನಿಂದೆ ಮಾತುಗಳಾಡದಂತೆ ಮರುಘಳಿಗೆಯೇ ಮೂಕಿ ಮಾಡಿಬಿಡು

ದೇವ ನಿತ್ಯ ನಿನ್ನ ಧ್ಯಾನದೊಳಿರುವಂತೆ ಮೈ ಮನಸ್ಸನ್ನು ಮಣ್ಣಿನಂತೆ ಮೃದು ಮಾಡು
ಬೇಕಾದ ಆಕಾರಕೆ ಹದಗೊಳಿಸಿ ದೈವವೆಂಬ ಸಸಿಯ ನೀ ಹೃದಯದೊಳು ನೆಟ್ಟು ಬಿಡು.

1 Comment

  1. Nijavada prarthane ide agirbeku nice very nice

Leave a Reply