ಹೆಣ್ಣು

ಎನಿತೆನಿತು ಯತ್ನಿಸಿದೆ
ನಿನ್ನ ವಿವರಿಸಲು
ಪದಗಳೇ ಸಿಗಲಿಲ್ಲ
ಯಾವ ಭಾಷೆಯಲೂ

ದೇವನವ ಸಿಗುವ
ಪ್ರತಿ ಪದದ ಜೋಡಣೆಗು
ಎಟುಕಲಾರದು ನಿನ್ನ
ಅಮಿತ ಗುಣ ಬೆಡಗು

ಒಲುಮೆಯಮೃತ ನಿನ್ನ
ಒಡಲಿನಲಿ ಜನಿಸಿದರೆ
ಮಾತೃತ್ವವನೆ ಹರಿಸಿ
ಜನ್ಮ ಪಾವನ ಗೊಳಿಪೆ

ಇನಿಯನಾದೊಡೆ ನಿನ್ನ
ಪ್ರೇಮ ಸುಧೆಯನು ಹರಿಸಿ
ಜೀವನದ ಪಯಣದಲಿ
ಸಹಗಾಮಿಯಾಹಿರುವೆ

ಭಗಿನಿಯಾಗಲು ನೀನು
ಭಗ್ನ ಹೃದಯವಬೆಸೆವೆ
ಗೆಳತಿಯಾದರೆ ನಿನ್ನ
ಜೀವವನೆ ಕೊಡುವೆ.

ನಿನ್ನ ಸೈರಣೆ ಸ್ಮೃತಿಯು
ನನ್ನಲಿನಿತೂ ಇಲ್ಲ
ನಾನೊಂದು ಜಡಕೊರಡು
ಚಿಗುರು ಲತೆ ನೀನೆ
ಓ ಹೆಣ್ಣೆ ಜೀವಜಗ ನೀನೆ.

Leave a Reply