ಹೊಸ ವರುಷ

ಹೊಸ ವರುಷ

ಕಳೆದುದೆಲ್ಲ ‘ಕಾಲನಡಿಗೆ’
ವರುಷಕೊಮ್ಮೆ ಹೊಸದೇ ತೊಡುಗೆ
ಎಂಬ ತತ್ವ ಜಗಕೆ ಸಾರಿ
ಮರುಳುಗೊಳಿಪ ನಗೆಯ ಬೀರಿ
ಹೊಸತು ಹರುಷ ತರುತಿದೆ
ಹೊಸತು ವರುಷ ಬರುತಿದೆ

ಹಳೆಯ ನೋವು-ನಲಿವ ಮರೆಸಿ
ಹೊಸತು ರೂಪು-ರಂಗು ಬೆರೆಸಿ
ಕೈಯ ಮೇಲೆ ಕನಸ ಮಾಲೆ
‘ಕೊಳ್ಳಿರೆಂದು’ ಕೂಗು ಮೇಲೆ
ಹೊಸತೇ ಲೋಕ ತೆರೆದಿದೆ
ಹೊಸತು ವರುಷ ಬರುತಿದೆ

ಚಿತ್ತ ಪಟಲ ಚಿತ್ರವಳಿಸಿ
ಮತ್ತೆ ಬರೆವ ಭಾವ ಬೆಳಸಿ
ಕೂಡಿ- ಕಳೆದು ಗುಣಿಸಬಲ್ಲ
ಲೆಕ್ಕ ಬರೆವ ಒಲವನೆಲ್ಲ
ಮನದಿ ಬಿತ್ತಿ ಬೆಳೆಸಿದೆ
ಹೊಸತು ವರುಷ ಬರುತಿದೆ…
ಮೇಲು-ಕೀಳು ಭೇದವಿಲ್ಲ
‘ಕಾಲನೆದುರು ಸಮರೆ ಎಲ್ಲ’
ಒಂದೇ ನೀತಿ, ಒಂದೇ ಪ್ರೀತಿ
ಸಕಲ ಜನಕೂ ಒಂದೇ ರೀತಿ
ಸಂದೇಶ ಸಾರಿ ತರುತಿದೆ
ಹೊಸತು ವರುಷ ಬರುತಿದೆ…

Leave a Reply