* ದೀಪಜ್ಯೋತಿ ನಮೋಸ್ತುತೇ..*

* ದೀಪಜ್ಯೋತಿ ನಮೋಸ್ತುತೇ..*

ಪಡುವಣದಿ ಮುಳುಗೆದ್ದು
ಮೂಡಣದಿ ಮೂಡುತ್ತ
ಜಡತೆಯನು ಕಿತ್ತೊಗೆವ
‘ಸೂರ್ಯತೇಜ’
ನಿನಗೊಂದು ದೀಪ..

ಇಬ್ಬನಿಯ ಮಂಜಿನಲಿ
ಹಬ್ಬಿರುವ ಭಾವವನು
ತಬ್ಬಿ ಸುಖಿಸುವ ‘ಬಿಂದು’-
ನಿನಗೊಂದು ದೀಪ…

ಅರೆಬಿರಿದು ನಸುನಗುತ
ತೆರೆದ ಹೃದಯದಿ ಬಳುಕಿ
ಮರೆಸಿ ಇಹವನೇ ನಲಿವ ‘ಹೂವಿ’ಗೊಂದು ದೀಪ..

ಗಿರಿ- ಬೆಟ್ಟ ಸುತ್ತಿಳಿದು
ಸಿರಿ-ವನವ ಹತ್ತಿಳಿದು
ಮಿರಿ ಮಿರಿ ಮಿಂಚುತಿಹ
‘ನದಿ’ಮೂಲಕೊಂದು ದೀಪ…

ಮೇರೆಯೇ ಇಲ್ಲದಿಹ
ಸೀರೆ ಹರವಿಟ್ಟಂತೆ
ತೋರುತಿಹ ಆಗಸವೇ
ನಿನಗೊಂದು ದೀಪ..

ಅಖಿಲ ಬ್ರಹ್ಮಾಂಡದಲಿ
ಸಕಲ ಜೀವಗಣಮೂಲ
ಸುಖದಲಿರಿಸುವ ‘ಶಕ್ತಿ’
ನಿನಗೊಂದು ದೀಪ…

ಕತ್ತಲಿನ ಬದುಕಿನಲಿ
ಸುತ್ತ ಬೆಳಕನು ಚಲ್ಲಿ
ಮತ್ತೆ ತಿಮಿರವ ತೊಳೆವ
‘ಅರಿವು’-
ನಿನಗೊಂದು ದೀಪ…

ಸಾಲು ದೀಪಗಳ್ಹಚ್ಚಿ
‘ಮೇಲುಕೀಳನು ಕೊಚ್ಚಿ
ಸೋಲು ‘ಗೆಲುವಾಗಿ’ಸಲು
ಬೆಳಗಲೊಂದು ದೀಪ…

ದೀಪ _ದೀಪವ ಹಚ್ಚಿ
‘ಪಾಪ ಕೊಳೆ’ಯನೆ ಕೊಚ್ಚಿ,
ಶಾಪಮುಕ್ತರ ಬದುಕಿಗೂ
ಒಂದು ದೀಪ…

ಸಾಲು ಸಾಲುಗಳಾಗಿ
ಬೆಳಗುತಿಹ ದೀಪಗಳೇ
ಇಳೆಗಿಳಿದು ಬಂದಿರುವ
ನಕ್ಷತ್ರ ದೀಪ…

Leave a Reply