ಮೇರು ಸಾಧನೆ (ಡಾ. ಅಬ್ದುಲ್ ಕಲಾಂ ಕನಸಿನ ಭಾರತ)

ಮೇರು ಸಾಧನೆ
(ಡಾ. ಅಬ್ದುಲ್ ಕಲಾಂ ಕನಸಿನ ಭಾರತ)

ಕಂಡೆ ನೀ ಬಲಿಷ್ಠ ಭಾರತದ ಕನಸೊಂದ
ಬಗೆದೆ ಅದರ ಅಂತರಾಳದ ಸಾರ ಸತ್ವವ
ಮಸಗಿ ಜ್ವಾಲೆಯಾಗಿಸಿದೆ ಮುಸುಕಿದ್ದ ಅಗ್ನಿಯ
ಹಾರಿಸಿದೆ ದಿಗಂತದಲಿ ಅದಕೆರಡು ರೆಕ್ಕೆ ಕಟ್ಟಿ

                        ನೆಚ್ಚಿದೆ ನೀ ನಿನ್ನನೆ, ಕೋರಿದೆ ಹಿರಿಯರೆಲ್ಲರ ಕಟಾಕ್ಷ
                        ಕಿತ್ತೆಸೆದೆ ಕಲಿತನದಲಿ ಅನಾಮಧೇಯತೆಯ ಮಬ್ಬನು
                        ಸಿದ್ದಿಸಿದೆ ರಾಷ್ಟ್ರ ರಕ್ಷಣೆಗೆ ಪಾಶುಪತಾಸ್ತ್ರಗಳನೆ
                        ಚಕಿತಗೊಳಿಸಿದೆ ಜಗವ, ತೋರುತ ನಮ್ತನದ ವಿರಾಟ ರೂಪ

ಅಗ್ನಿ, ಪೃಥ್ವಿ, ಆಕಾಶ, ತ್ರಿಶೂಲ, ನಾಗ
ನಿಲ್ಲಿಸಿದೆ ಸಮಬಲದಲಿ ಭಾರತವನು ರಾಷ್ಟ್ರಗಳ ಸಾಲಲಿ
ಸಾರಿದೆ ತಾಂತ್ರಿಕತೆಯಲಿ ಭಾರತ ಮಿಗಿಲೆಂದು
ತೋರಿದೆ ಪುರಾವೆಗಳ ನಿನ್ನ ಸಾಧನೆಗಳ ಸರಣಿಯಲಿ

                      ಕನಸು ನನಸಾಗಿಸುವ ನಿನ್ನ ಯತ್ನ – ಹೋರಾಟ
                      ಬಂದ ಕೀರ್ತಿ ಬಂದುದಲ್ಲ ಸುಮ್ಮನೆ
                      ನಿತ್ಯ ಜೋರಿನ ಪರಿಶ್ರಮ, ಶೃದ್ಧೆ–ವಿಶ್ವಾಸ
                      ಯೋಗಿಯಂತೆ ಬದುಕಿದ ಆ ನಿನ್ನ ತ್ರಾಣ

ದೈವಿಕತೆಯನೆ ಉಸಿರಾಗಿಸಿ ನಿನ್ನ ಶ್ವಾಸದಲಿ ಪೂಸಿ
ಪ್ರಖರ ದಾವಾಗ್ನಿಯನು ನಿನ್ನ ಮಡಿಲಲಿ ಭರಿಸಿ
ತಮ್ಮ ನೆರಳಲೆ ಬೆಳೆಸಿದರು ನಿನ್ನ ಮಾತಾಪಿತರು
ಅದನೇ ನೀನೂದಿ ಜ್ವಲಿಸಿದೆ ಅಗ್ನಿಯನು

                    ಆತ್ಮದಲೆ ಹುದುಗಿದೆ ದೈವಿಕ ಅಗ್ನಿ
                    ತಗಲಿಸಬೇಕದಕೆ ರೆಕ್ಕೆಗಳನು ಶ್ರಮದಲಿ
                    ಅಂದಂತೆ ಮಾಡಿ ತೋರಿದೆ ಸಾಧಕ ನೀನಾಗಿ
                    ನಿಬ್ಬೆರಗಾಗಿಸಿದೆ ಜಗವನೆ ರಾಷ್ಟ್ರಪತಾಕೆ ಹಾರಿಸಿ

ಕಂಡೆ ನೀ ಸಬಲ ಭಾರತದ ಸುಂದರ ಕನಸು
ನನಸಾಗಿಸಿದೆ ಅದನೆ ನಿನ್ನ ಔದಾತ್ಯದ ಕಂಪಿನಲಿ
ಸಂಯೋಜಿಸಿದೆ ಪರಿಶೋಧನೆಯ ಬಲೆಯನು
ದಾರ್ಶನಿಕ ನೀನಾದೆ ಆರೋಗ್ಯ–ರಕ್ಷಣೆ ತಂತ್ರಗಳ ಮೆರೆದು

                   ರೋಚಕ, ಕೌತುಕ ನಿನ್ನ ಸಾಹಸಗಾಥೆ
                   ಬುಗ್ಗೆಯದು ಸನಾತನ ಆಶೋತ್ತರಗಳ
                   ಜನ-ಸಂಸ್ಥೆಗಳೆಲ್ಲವನು ಏಕತ್ರಗೊಳಿಸಿ
                  ಪ್ರೇರಿಸಿದೆ ನೀ ಒಂದಾಗಿ ಕಲೆತು ಸಾಧಿಸುವುದ

ರಾಷ್ಟ್ರಪತಿಯಾಗಿ ತೋರಿದೆ ನೀ ನೈಜ ಬದುಕಿನ ಕಲೆಯ
ಮಾದರಿಯಾದೆ ಮಮಕಾರದ ಆತಿಥ್ಯ ತೋರಿ
ಸಹಜ ಬದುಕಲೆ ಧೀಮಂತಿಕೆ ನೀ ಮೆರೆದೆ
ಕವಿ-ವಿಜ್ಞಾನಿ ಎರಡೂ ನೀನಾಗಿ ಜಗಮೆಚ್ಚಿದ ಮಾನವನಾದೆ

                                      – ರವೀಂದ್ರ ರಾಮಾಚಾರ್ಯ ಕೊಪ್ಪರ್

Leave a Reply