ನಿನ್ನೊಲುಮೆಯ ಪ್ರೇಮದ ರಥದಲ್ಲಿ
ಮಹಾರಾಣಿ ನಾನು.. ಸಾರೋಟ ನೀನು
ನಿನ್ನ ವಿಶಾಲ ಹೃದಯದ ನೀಲ ಅಂಬರದಲ್ಲಿ
ಮಲ್ಲಿಗೆಯಂತೆ ಚೆಲ್ಲಿಹ ಮಿನುಗು ತಾರೆ ನಾನು
ನೀ ಶ್ವೇತ ಕುದುರೆಯಂತೆ ಓಡುವ ಮೋಡವಾಗಿರಲು
ನಾಚಿ ನೀರಾಗಿ ಮರೆಯಾಗುವ ಹುಣ್ಣಿಮೆ ಚಂದಿರ ನಾನು
ನಿನ್ನ ಸರಸವೆಲ್ಲ ರವಿಯ ಎಳೆಯ ಕಿರಣಗಳಲ್ಲಿ ನನ್ನ ಸಮ್ಮತಿಯೆಲ್ಲ ನೀ ಚೆಲ್ಲಿದ ಸ್ವರ್ಣ ರಂಗಿನಲ್ಲಿ
ಅಜಾನು ಬಾಹುವಂತೆ ಪಸರಿಸಿದ ವೃಕ್ಷ ನೀನಾದಲ್ಲಿ
ಸುಗಂಧ ಪುಷ್ಪದಿಂದ ಬಳಸಿನಿಂತ ಲತೆಯು ನಾನಿಲ್ಲಿ
ಕೈಬೀಸಿ ಕರೆಯುವ ಕಡಲ ತೆರೆಯು ನೀನಾದಲ್ಲಿ
ತವಕದಿ ನಿನ್ನ ಬಂದು ಸೇರುವ ನದಿಯು ನಾನಿಲ್ಲಿ
ಮಕರಂದವರಸಿ ಬರುವ ಭ್ರಮರ ನೀನು
ಸಿಹಿ ತುಂಬಿ ಕಾದಿರುವ ಪುಷ್ಪವು ನಾನು
ಅಮರ ಪ್ರೇಮದ ಸಂದೇಶ ಸಾರುವ ಝರಿಯು ನೀನು
ಪ್ರೇಮದ ಝರಿಯಲ್ಲಿ ಹೊಮ್ಮುವ ನಿನಾದ ನಾನು
ಉಮಾ ಭಾತಖಂಡೆ
You must log in to post a comment.