ಸಂಗಾತಿಯ ಕಾಣಿಕೆ

 

ಓ ಜೀವನ ಸಂಗತಿಯೆ ಕೇಳು
ಶುಭ್ರ ಬಿಳಿ ಹಾಳೆಯಲಿ ನಾ-
ಕುಂಚವ ಹಿಡಿದು ನೂರು ಬಣ್ಣಗಳ
ಚಿತ್ತಾಕರ್ಷಕ ಚಿತ್ರವ
ನಾ ನಿನಗಾಗಿ ತಂದಿದ್ದೆ
ಹಚ್ಚ ಹಸುರಿನ ಹೂ – ತೋಟವ ಬರೆದು
ಮೊಗ್ಗುಗಳಲ್ಲಿ ನೂರು


ಕನಸುಗಳಾ ಹೊತ್ತು ತಂದಿದ್ದೆ
ಹೂವರಳಿಸಲು ಇನಿಯ
ನಿನ್ನಯ ಸಹಕಾರವ ಬಯಸಿದ್ದೆ
ಹೂವರಳುವ ಸಮಯದಿ
ನೀ ಚೆಂದದ ಸವಿಯನು
ಸವಿಯದ ತಿರಸ್ಕಾರವ ನಾ ಕಂಡೆ
ಅರಿತೋ ಅರಿಯದೆಯೋ ನೀ
ಚಿತ್ರವ ಅಳಿಸಲು ಮುಂದಾದೆ
ಅಳಿಸಿದ ಹೂಗಳ ಬರೆದು ಬರೆದು ಸೋತೆ
ಒಂದೊಂದು ಗಿಡ, ಮೊಗ್ಗು ಮಾಯವಾಗುತ್ತಿರೆ
ಹಾಳೆಯು ಬಿಳಿಯಾದದ್ದು ನಾ ಅರಿತೆ
ದುಃಖದ ಮೂಲವ ನಾ ತಿಳಿದೆ
ಬರಿದಾದ ಬಿಳಿಹಾಳೆಯಲಿ ನಾ
ಬುದ್ದನ ಚಿತ್ರವ ನಯನದಿ ಬರೆದೆ
ಬುದ್ದನ ನನ್ನಲಿ ನೆಲಸಿದ ಚಿತ್ರಕೆ
ಕಾರಣ ಕರ್ತನು ನೀನೇ ಎಂದು ಬಗೆದೆ
ನೀ ಕೊಟ್ಟ ಜ್ಞಾನದ ಕಾಣಿಕೆಗೆ
ಚಿರಋಣಿ ನಾನೆಂದು ಅರಿತೆ.

           – ಉಮಾ ಭಾತಖಂಡೆ

 

1 Comment

  1. ಉಮಾ ಭಾತಖಂಡೆ ಅವರೆ ಚೆನ್ನಾಗಿದೆ ಈ ಕವಿತೆ
    ಇದನ್ನು ಓದಿ ಚಿರಋಣಿ ನಾನೆಂದು ಅರಿತೆ

Leave a Reply