ರಾಮಾಯಣವೆಂಬ ಮಹಾಕಾವ್ಯ

ರಾಮಾಯಣವೆಂಬ ಮಹಾಕಾವ್ಯ
ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದು ರಾಮಾಯಣ. ‘ರಾಮಾಯಣ’ ವು ರಾಮನ ಚರಿತ್ರೆ. ಅಂತೆಯೇ ಈ ‘ರಾಮಾಯಣ’ವು ‘ಸೀತೆಯ ಚರಿತ್ರೆ’ಯೂ ಕೂಡ.
ರಾಮಾಯಣವಾಗಲೀ ಅದರ ನಾಯಕನಾದ ರಾಮನಾಗಲೀ ಇಂದು ಲೋಕಪ್ರಸಿದ್ಧಿಯನ್ನು ಪಡೆದಿರುವುದರಲ್ಲಿ ಸೀತೆಯ ಪಾತ್ರವೂ ಕೂಡ ಅಷ್ಟೇ ದೊಡ್ಡದು. ಅಷ್ಟೇ ಅಲ್ಲ, ಭಾರತದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಎಲ್ಲ ಸ್ತ್ರೀಪಾತ್ರಗಳ ಪ್ರಭಾವ ದೊಡ್ಡದು; ಕಥೆಯ ಸೌಂದರ್ಯಕ್ಕಾಗಿ ಮಾತ್ರವೇ ಅಲ್ಲ, ಆ ಮಹಾಕಾವ್ಯಗಳು ಪ್ರತಿನಿಧಿಸುವ ಮೌಲ್ಯಗಳ ಸಾಕಾರರೂಪವಾಗಿ ಕೂಡ ಸ್ತ್ರೀಪಾತ್ರಗಳ ಮೆರವಣಿಗೆಯನ್ನೇ ನಾವಿಲ್ಲಿ ನೋಡಬಹುದಾಗಿದೆ. ಈ ಎರಡು ಮಹಾಕಾವ್ಯಗಳುದ್ದಕ್ಕೂ ಸ್ತ್ರೀಧ್ವನಿಯನ್ನು ಕೇಳುತ್ತಲೇ ಇರುತ್ತೇವೆ.
ರಾಮಾಯಣದ ಹುಟ್ಟಿಗೂ ಹೆಣ್ಣಿನ ದನಿಗೂ ನೇರ ನಂಟಿದೆ. ಗಂಡು–ಹೆಣ್ಣು ಜೋಡಿ ಹಕ್ಕಿಗಳು ಮಿಲನದ ಸಂತಸದಲ್ಲಿರುವಾಗ ಬೇಡನೊಬ್ಬ ಗಂಡುಹಕ್ಕಿಯನ್ನು ಕೊಂದ. ಆ ಜೋಡಿಯನ್ನು ಅಗಲಿಸಿದ. ಜೊತೆಗಾರನನ್ನು ಕಳೆದುಕೊಂಡ ಹಕ್ಕಿ ಗೋಳಿಟ್ಟು ಕೂಗಲಾರಂಭಿಸಿತು. ಈ ದೃಶ್ಯವನ್ನು ನೋಡಿದ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣವನ್ನು ಬರೆಯಲು ಬೇಕಾದ ಸ್ಫೂರ್ತಿ ಒದಗಿತು. ಶೋಕವೇ ಶ್ಲೋಕವಾಗಿ ಪ್ರಕಟವಾಯಿತು. ರಾಮಾಯಣದ ಹುಟ್ಟಿಗೆ ಭಿತ್ತಿಯನ್ನು ಒದಗಿಸಿದ್ದು ಆ ಹೆಣ್ಣುಹಕ್ಕಿಯ ಆರ್ತನಾದ. ಆದ್ದರಿಂದಲೇ ಈ ಕಾವ್ಯದ ಉದ್ದಕ್ಕೂ ಹೆಣ್ಣಿನ ಶೋಕವು ಆಧಾರಶ್ರುತಿಯಾಗಿರುವುದು ಸಹಜವೇ.
ಹೆಣ್ಣಿನ ಆ ಸಂಕಟದ ದನಿ ಕಾವ್ಯದ ಮುಕ್ತಾಯದೊಂದಿಗೆ ಮುಗಿಯದೇ ಸಾವಿರಾರು ವರ್ಷಗಳಿಂದಲೂ ಹಲವು ಪ್ರಭೇದಗಳಲ್ಲಿ ಕೇಳುತ್ತಲೇ ಇದೆ. ಹೀಗೆ ರಾಮಾಯಣದ ಹಿರಿಮೆ ಇರುವುದೇ ಈ ಜೀವಂತಿಕೆಯಲ್ಲಿ. ಹೆಣ್ಣುಹಕ್ಕಿಯ ಗೋಳಾಟ ಆದಿಕಾವ್ಯದಲ್ಲಿ ಸೀತೆಯ ಗೋಳಾಟವಷ್ಟೆ ಆಗಿ ಉಳಿಯದೆ ನಮ್ಮೆಲ್ಲರ ಜೀವನದಲ್ಲಿ ಎದುರಾಗುವ ಎಲ್ಲ ಸಂಕಟಗಳಿಗೂ ಮೂಲವಾಗಿದೆ.
‘ರಾಮ ಸಂಸಾರಸ್ಥ; ಅವಿಭಾಜ್ಯ ಕುಟುಂಬವೊಂದರ ಸದಸ್ಯ. ಬುದ್ಧನಂತೆ ಅವನು ಸಂಸಾರತ್ಯಾಗ ಮಾಡಲಿಲ್ಲ, ಮಹಾವೀರನಂತೆ ಸನ್ಯಾಸ ಸ್ವೀಕರಿಸಲಿಲ್ಲ… ಸಂಸಾರದಲ್ಲಿದ್ದುಕೊಂಡೇ ಒಬ್ಬ ಸಾಮಾನ್ಯ ವ್ಯಕ್ತಿ ಅನುಭವಿಸಬಹುದಾದ ಕಷ್ಟ ಕೋಟಲೆಗಳೆಲ್ಲವನ್ನೂ ಅವನು ಅನುಭವಿಸಿದ; ಕೌಟುಂಬಿಕ ಕಲಹ, ಆಸ್ತಿಯ ಕಿತ್ತಾಟ, ದುರ್ಬಲ ತಂದೆ, ಸಣ್ಣ ವಯಸ್ಸಿನ ಮಲತಾಯಿ, ಚಾಡಿಮಾತು, ಕುಹಕ, ಕುಚೋದ್ಯ – ಎಲ್ಲ ಅನುಭವಿಸುತ್ತಲೇ ಎಲ್ಲವನ್ನೂ ಮೀರುತ್ತ ನಡೆದ.
ರಾಮನಿಗೆ ‘ಆದರ್ಶಪುರುಷೋತ್ತಮ’ ಎಂಬ ಪದವಿ ದಕ್ಕುವುದರಲ್ಲಿ ಸೀತಾತ್ಯಾಗವೂ ಒಂದು ಎಂದು ತೀಕ್ಷ್ಣವಾಗಿ ಕೇಳಿಸಿದರೂ ಅದು ಸುಳ್ಳಲ್ಲ. ಆದರೆ ಬಾಹ್ಯವಾಗಿ ಅಗಲಿದ್ದರೂ ಈ ಜೋಡಿಯು ಅಂತರಂಗದಲ್ಲಿ ಸದಾ ಒಂದಾಗಿದ್ದುದರಿಂದಲೇ ಸೀತಾರಾಮರದ್ದು ಆದರ್ಶ ದಾಂಪತ್ಯ, ಆದರ್ಶ ಕುಟುಂಬ ಎನಿಸಿರುವುದು. ಎಷ್ಟೇ ಕಷ್ಟಗಳು ಎದುರಾದರೂ ಕುಟುಂಬ ಸಾಮರಸ್ಯವನ್ನು ಉಳಿಸಿಕೊಳ್ಳಬೇಕೆಂಬ ಸೀತಾರಾಮರ ದೃಢತೆ ಅಪೂರ್ವ. ಕುಟುಂಬ ಎನ್ನುವುದು ಕೇವಲ ಅವರಿಬ್ಬರ ವೈಯಕ್ತಿಕ ಸಂಸಾರವಷ್ಟೆ ಆಗದೆ, ಅದು ವಿಸ್ತಾರವಾಗಿ ಇಡಿಯ ರಾಜ್ಯಕ್ಕೆ ವಿಸ್ತಾರವನ್ನಾಗಿಸಿಕೊಂಡದ್ದೇ ಈ ದಾಂಪತ್ಯದ ವಿಶೇಷತೆ.
‘ರಾಮಸೀತೆಯರು ಎದುರಿಸಿದ ವೈವಾಹಿಕ ಸಂಬಂಧದ ಜಟಿಲತೆಯು ಇವತ್ತಿಗೂ ಜಟಿಲವಾಗಿಯೇ ಉಳಿದಿದೆ. ಒಂದೇ ಹೆಣ್ಣಿನ ಸಂಗದ ವ್ರತವನ್ನು ಕೈಗೊಂಡ ಮೊದಲ ಪುರುಷ ಶ್ರೀ ರಾಮ. ಆದಿಪುರುಷನಾಗಿ ಅನುಭವಿಸಬಹುದಾದ ಎಲ್ಲ ಅವಾಂತರಗಳನ್ನೂ ಅವನು ಎದುರಿಸುತ್ತಾನೆ. ಮತ್ತೆ ಮತ್ತೆ ಎಡುವುತ್ತಾನೆ. ರಾಮ ಎಡವಿದಾಗಲೂ ಏಟು ತಿನ್ನುವವಳು ಸೀತೆ. ಸೀತೆಯು ಅದೆಷ್ಟೇ ಏಟು ತಿಂದರೂ, ರಾಮನಿಂದ ಅದೆಷ್ಟೇ ನೋವುಂಡರೂ, ರಾಮನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗುವುದಿಲ್ಲ. ಮಾನವಚರಿತ್ರೆಯಲ್ಲೇ ಏಕಪತ್ನಿತ್ವದ ಹಿರಿಮೆಯನ್ನು ಕಂಡ ಮೊದಲ ಹೆಣ್ಣು ತಾನೆಂಬ ಅರಿವಿರಬೇಕು, ಪ್ರಾಯಶಃ ಸೀತೆಗೆ. ರಾಮ ನೀಡುವ ಈ ಹಿರಿಮೆ ಸಣ್ಣ ಹಿರಿಮೆಯಲ್ಲ.
ರಾಮಾಯಣ ಇಂದಿಗೂ ಹಲವು ಸ್ತರಗಳ ಅರ್ಥಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಲೇ ಇದೆ. ರಾಮ ಹಾಗೆ ಮಾಡಿದ್ದು ಸರಿಯೇ, ಹೀಗೆ ಮಾಡಿದ್ದು ಸರಿಯೇ – ಎಂಬ ಪ್ರಶ್ನೆಗಳಾಗಲೀ, ಸೀತೆ ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು – ಎಂಬ ಉದ್ವೇಗಗಳಾಗಲೀ ನಮ್ಮಲ್ಲಿ ಉಂಟಾಗುತ್ತಿದೆ ಎಂದಾದರೆ ಅದು ರಾಮಾಯಣ ಎಂಬ ಮಹಾಕಾವ್ಯದ ಶಕ್ತಿಯೇ ಹೊರತು ಎಂದೋ ಆಗಿಹೋದ ಆ ಕಾಲದ ಇತಿಹಾಸ ಎಂದಲ್ಲ! ಇದರಲ್ಲಿ ರಾಮನ ಪಾತ್ರದ ಶಕ್ತಿ ಎಷ್ಟಿದೆಯೋ , ಅಷ್ಟೇ ಶಕ್ತಿ ಸೀತೆಯ ಪಾತ್ರದಲ್ಲೂ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬ ಎಂಬ ವ್ಯವಸ್ಥೆಯ ಬಗ್ಗೆ ಇಂದು ಭಿನ್ನ ರೀತಿಯ ವ್ಯಾಖ್ಯಾನಗಳು ಸಮಾಜದಲ್ಲಿ ಮೂಡತೊಡಗಿವೆ.
ಬದುಕಿನ ಸಾರ್ಥಕತೆ ಎಲ್ಲಿದೆ? ವ್ಯಕ್ತಿಜೀವನಕ್ಕೂ ಸಮಾಜಜೀವನಕ್ಕೂ ಸಂಬಂಧವೇನು? ಸುಖ ಎಂದರೆ ಏನು? ಹೆಣ್ಣು ಮತ್ತು ಗಂಡು – ಇವರಿಬ್ಬರ ಸಂಬಂಧಗಳ ನೆಲೆ–ಬೆಲೆಗಳು ಏನು? – ಇಂಥ ಜಿಜ್ಞಾಸೆಗಳಿಗೆ ಆ ಪಾತ್ರಗಳು ನಮ್ಮ ಭಾವವನ್ನೂ ಬುದ್ಧಿಯನ್ನೂ ಹರಿತಗೊಳಿಸಿ ದಾರಿಯನ್ನೂ ಗುರಿಯನ್ನೂ ಸೂಚಿಸಿ, ಬದುಕಿಗೆ ಬೇಕಾದ ವಿವೇಕದ ಬೆಳಕನ್ನು ಒದಗಿಸಬಹುದೆನಿಸುತ್ತದೆ.
ರಾಮಾಯಣ ಇಂದಿಗೂ ಹಲವು ನೆಲೆಗಳಲ್ಲಿ ಚರ್ಚೆಗೆ ವಸ್ತುವಾಗಿದೆ. ರಾಮ, ಸೀತೆ, ಭರತ, ಲಕ್ಷ್ಮಣ, ಹನುಮಂತ, ವಿಭೀಷಣ – ಹೀಗೆ ರಾಮಾಯಣ ಪ್ರತಿ ಪಾತ್ರವೂ ನಮ್ಮ ಜೀವನದುದ್ದಕ್ಕೂ ಹಲವು ಸಂದರ್ಭಗಳಲ್ಲಿ ಎದುರಾಗುತ್ತಲೇ ಇರುತ್ತದೆ.
ರಾಮನು ಸಾಮಾನ್ಯ(ರಾಜಕುವರನಾಗಿಯೂ ಸಾಮಾನ್ಯ ಜೀವನವನ್ನು ಸಾಗಿಸಿದ ಮಹನೀಯ) ಮನುಷ್ಯನಾಗಿ ಜನಿಸಿ ಜಗತ್ತಿನ ಸಂಕಷ್ಟಗಳನ್ನು ಎದುರಿಸಿಯೂ ಆತ್ಮಸಮ್ಮಾನ, ಸ್ಥೈರ್ಯ, ಧೈರ್ಯ, ಸತ್ಯವಂತಿಕೆಗಳಿಂದ ಬದುಕಬಲ್ಲ ಆತ್ಮವಿಶ್ವಾಸವನ್ನು ಎಲ್ಲರಲ್ಲೂ ತುಂಬುವ ಆಶಯವನ್ನು ಹೊತ್ತವ. ತಂದೆ ತಾಯಿಯರಿಗಾಗಿ ಮಾಡಿದ ತ್ಯಾಗ, ರಾಜನಾಗಿ ಪ್ರಜೆಗಳ ಕಷ್ಟ ಸುಖಗಳ ಕಾಳಜಿ ಇವೆಲ್ಲ ಅವನನ್ನು ಒಬ್ಬ ಉತ್ತಮ ಆದರ್ಶ ಪುರುಷನ್ನಾಗಿಸಿವೆ.
ಎಲ್ಲರ ಕಷ್ಟಗಳಿಗೂ ಸ್ಪಂದಿಸಿದ ಶ್ರೀ ರಾಮ ಸೀತೆಯ ವಿಷಯದಲ್ಲಿ ಯಾಕೆ ನಿರ್ದಯಿಯಾದ ಎಂಬ ಸಂಶಯವೂ ಹುಟ್ಟುವುದು ಸಹಜ. ಆದರೆ ಪತಿ ಪತ್ನಿಯರು ದೇಹ ಎರಡು ಆತ್ಮ ಒಂದು. ಇಲ್ಲಿ ಸೀತೆ ಅನುಭವಿಸಿದ ಎಲ್ಲ ಕಷ್ಟಗಳನ್ನೂ ಶ್ರೀ ರಾಮನೂ ಅನುಭವಿಸಿದ್ದಾನೆ. ಅವರಿಬ್ಬರಲ್ಲಿಯ ಅವಿನಾಭಾವವೂ ಕೂಡ ಇಂದಿಗೂ ಪತಿ ಪತ್ನಿ ಯರಲ್ಲಿರಬೇಕಾದ ಆದರ್ಶವೇ.
ಇದೊಂದೇ ಪ್ರಸಂಗವು ಸಾಕು, ಸೀತೆಯ ಮೇರು ವ್ಯಕ್ತಿತ್ವವನ್ನು ಜಧರಿಗೆ ಮನವರಿಕೆ ಮಾಡಿಕೊಡಲು. ಜನಾಪವಾದದಿಂದ ರಾಮ ಮಾನಸಿಕ ತುಮುಲದಲ್ಲಿದ್ದ. ಇದನ್ನು ಅರಿತ ಸೀತೆ ಪತಿಗೆ “ನಿಮ್ಮ ಮಾನಸಿಕ ತುಮುಲ ನನಗೆ ಅರ್ಥವಾಗಿದೆ. ನಾನು ವನಕ್ಕೆ ನನ್ನ ಸ್ವ ಇಚ್ಛೆ ಯಿಂದಲೆ ಹೋಗುತ್ತೇನೆ” ಎಂದು ಹೇಳುತ್ತಾಳೆ.
ರಾಮನು “ಸೀತಾ, ನನ್ನನ್ನು ವಿವಶನನ್ನಾಗಿಸಬೇಡ. ನಾನು ನಿನಗೆ ವನಕ್ಕೆ ಹೋಗಲು ಅನುಮತಿ ಕೊಟ್ಟು ಅನ್ಯಾಯವನ್ನು ಬೆಂಬಲಿಸಲಾರೆ. ನಾನೇನಾದರೂ ನಿನ್ನನ್ನು ಶಂಕಿಸಿರುವೆನೇ?” ಎಂದು ಕೇಳುತ್ತಾನೆ. ಆಗ
ಸೀತೆಯು, “ನಿಜ, ಆದರೆ ನೀನು ಪ್ರಜೆಗಳ ರಾಜ. ಅಪವಾದ ರಹಿತನಾಗಿರಬೇಕು. ಮನುಕುಲದ ಕಲ್ಯಾಣಕ್ಕಾಗಿ ಈ ಬಲಿದಾನವು ಉಚಿತವಾಗಿದೆ. ಇಲ್ಲವಾದಲ್ಲಿ ಈ ಹೇಡಿಗಳು ರಾಜಮಹಲಿನ ಸುಖಭೋಗದ ಸಲುವಾಗಿ ತಮ್ಮ ಕರ್ತವ್ಯ ಲೋಪ ಮಾಡಿ, ನ್ಯಾಯವನ್ನು ತಿರುಚುತ್ತಿದ್ದಾರೆ ಎಂಬ ಮಾತು ಕೊನೆಯ ವರೆಗೂ ಉಳಿಯುತ್ತದೆ. ಅಷ್ಟೇ ಅಲ್ಲ.. ಸ್ವಾಮಿ, ನಾವಿಬ್ಬರೂ ಹೇಗೇ ಅಗಲಲಿಕ್ಕೆ ಸಾಧ್ಯ? ನಾವು ಅಗಲಿಯೂ ಅಗಲಿರಲಾರೆವು. ಒಬ್ಬರಿನ್ನೊಬ್ಬರನ್ನು ಏಕಾಂತದಲ್ಲಿ ಮನಸ್ಸಿನ ಕರೆಯನ್ನು ಸ್ವೀಕರಿಸೋಣ.” ಎಂದಾಗ ರಾಮನು ನೊಂದು, “ಸೀತೆ, ಇಷ್ಟು ದೊಡ್ಡ ಬಲಿದಾನದ ಮಾತನ್ನು ಎಷ್ಟು ಸರಳವಾಗಿ ಹೇಳಿಬಿಟ್ಟೆ” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಆಗ ಸೀತೆ ಹೇಳಿದ ಮಾತು ಅವಳು ಒಬ್ಬ ಅಬಲೆಯಲ್ಲ, ಅವಳು ಅನ್ಯಾಯವನ್ನು ಸಹಿಸಿಕೊಳ್ಳುವ ಪ್ರವೃತ್ತಿಯವಳಲ್ಲ, ಎನ್ನುವುದನ್ನು ಈ ಮಾತುಗಳಿಂದ ಪುಷ್ಟೀಕರಿಸುತ್ತಾಳೆ. “ಸ್ತ್ರೀ ಅಬಲೆಯಲ್ಲ. ಅವಳ ಶಕ್ತಿಯು ಅಸ್ತ್ರ ಶಸ್ತ್ರಗಳಲ್ಲಿಲ್ಲ. ಅವಳ ನೈತಿಕತೆ, ಅವಳ ಧರ್ಮದಲ್ಲಿದೆ” ಎಂದು ಹೇಳಿ ಸೀತೆ ಅಡವಿಗೆ ಸ್ವಯಂಪ್ರೇರಿತವಾಗಿಯೇ ಹೋಗುತ್ತಾಳೆ.
ಹೀಗೆ ಸೀತೆ ಎಂಬ ಶಕ್ತಿ ಇಂದಿಗೂ ಜನಮನದಲ್ಲಿ ಉಳಿಯಲು ಆಕೆಯ ತ್ರುಟಿಯಿಲ್ಲದ ವ್ಯಕ್ತಿತ್ವವೇ ಕಾರಣವೇ ಹೊರತು ಆಕೆ ಶ್ರೀ ರಾಮನ ಹೆಂಡತಿಯಾಗಿ ಅವನ ಆಜ್ಞೆಯನ್ನು ಪರಿಪಾಲಿಸಿ ಜೀವನದಲ್ಲಿ ಕಷ್ಟಗಳನ್ನು ಮೌನವಾಗಿ ಅನುಭವಿಸಿದಳು ಎಂದಲ್ಲ. ಕೊನೆಗೆ ಅವಳು ರವಿಕುಲತೇಜನ ವಂಶದ ಕುಡಿಗಳನ್ನು ಮನೆತನಕ್ಕೆ ಒಪ್ಪಿಸಿ ತನ್ನ ಕರ್ತವ್ಯವನ್ನು ಮುಗಿಸುತ್ತಾಳೆ. ಇಂಥ ಸೀತೆ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ!

ಮಾಲತಿ ಮುದಕವಿ

Leave a Reply