ರೋಗವಲ್ಲದ ರೋಗ

ರೋಗವಲ್ಲದ ರೋಗ !
ನಮ್ಮ ಪಕ್ಕದ್ಮನೆ ಶಾರದಾಳಿಗೆ ಯಾವಾಗಲೂ ಎಂಥದೋ ಕೊರಗು. ತನಗೇನೋ ಆಗಿದೆ, ಆರೋಗ್ಯ ಸರಿ ಇಲ್ಲ ಎಂದು ಯಾವಾಗ್ಲೂ ನರಳುವುದೇ ಆಯಿತು. ಹೊಟ್ಟೆ ನೋವಾದರೆ ಹೊಟ್ಟೆಯಲ್ಲಿ ಗಂಟಾಗಿರಬಹುದೆಂದೂ, ತಲೆ ನೋವಾದರೆ ಬ್ರೇನ್ ಟ್ಯುಮರ್ ಆಗಿರಬಹುದೆಂದೂ ಕೆಮ್ಮು ಬಂದರೆ ಕ್ಷಯವೆಂದೂ ಅನುಮಾನ. ಯಾವಾಗಲೂ ದೊಡ್ಡ ದೊಡ್ಡ ರೋಗಗಳದೇ ಪೈಪೋಟಿ. ಹೀಗಾಗಿ ಮನೆಯಲ್ಲಿ ಎಲ್ಲರಿಗೂ ಯಾವಾಗಲೂ ಕಾಯ್ದು ಆರಿದ ನೀರು, ಔಷಧಿ ಬಾಟಲಿಗಳೂ, ಗುಳಿಗೆಗಳ ರ್ಯಾಪರ್ ಗಳದೇ ರಾಜ್ಯ, ಮುಂಜಾನೆ ಒಮ್ಮೆ ಸಂಜೆಗೆ ಒಮ್ಮೆ ಎಲ್ಲರೂ ಥರ್ಮಾಮೀಟರ್ ದಿಂದ ಮೈಯ ಟೆಂಪರೇಚರನ್ನು ನೋಡಿಕೊಳ್ಳಲೇಬೇಕು. ಅದು ಮನೆಯ ಕಾನೂನೇ ಎಂಬಂತಾಗಿತ್ತು. ಚುಟುಕ್ ಎಂದು ನೋವಾದರೂ ಪೇನ್ ಕಿಲ್ಲರ್ ಗಳ ಸರಬರಾಜು. ಶಾರದಾಳಿಂದಾಗಿಯೇ ಬಿಕೋ ಎನ್ನುತ್ತಿದ್ದ ‘ನಾರಾಯಣ ಮೆಡಿಕಲ್ ಸ್ಟೋರ್ಸ್’ನಲ್ಲಿ ಲಕ್ಷ್ಮಿ ನಲಿದಾಡುತ್ತಿದ್ದಾಳೆ! ಎಂದು ಎಲ್ಲರೂ ಹೇಳುವುದುಂಟು.
ಅಂಥವಳಿಗೆ ಒಂದಿನ ಮೈಯ್ಯಲ್ಲಿ ಜ್ವರ, ಉಲ್ಟಿ, ಹೊಟ್ಟೆ ನೋವು, ಕಣ್ಣು ಕತ್ತಲಾಗುವುದು ಇತ್ಯಾದಿಗಳ ಸಂಗಮವಾಯಿತು ಮೊದಲೇ ಅನುಮಾನಿಯಾದ ಶಾರದಾ ಗಾಬರಿಯಿಂದ ಗಂಡನ ಜೊತೆಗೂಡಿ ಹಾಸ್ಪಿಟಲ್ ಹೊಕ್ಕಳು. ಆ ಡಾಕ್ಟರ್ ರಾದರೂ ಎಂಥವರು? ಕಡ್ಡಿ ಇದ್ದದ್ದನ್ನು ಗುಡ್ಡ ಮಾಡಿ ದುಡ್ಡನ್ನು ಹೆಕ್ಕುವವರು. ಎಲ್ಲ ಪರೀಕ್ಷಿಸಿದ ವೈದ್ಯರು ಒಂದು ದೊಡ್ಡ ಲಿಸ್ಟನ್ನೇ ಕೊಟ್ಟರು. ಪರೀಕ್ಷಿಸಿಕೊಳ್ಳಲು ಹಾಗೂ ಪರೀಕ್ಷೆ ಆದ ಮೇಲೆ ರಿಪೋರ್ಟನ್ನು ತಂದು ತೋರಿಸಲು ಹೇಳಿದರು.
ರಕ್ತಪರೀಕ್ಷೆ, ಮೂತ್ರಪರೀಕ್ಷೆ, ಹೊಟ್ಟೆಯ ಸ್ಕ್ಯಾನಿಂಗ್ , ಇತ್ಯಾದಿಗಳ ರಿಜಲ್ಟ್ ಬಂದಾಗ, ‘ವೈರಲ್ ಫಿವರ್’ ಇದ್ದು, ‘ಬಾರ್ಡರ್ ಲೈನ್ ಶುಗರ್’ ಇದೆ ಎನ್ನುವುದು ತಿಳಿದು ಬಂತು. ಅದರಿಂದ ಶಾರದಾಳ ದಿನಚರಿ ಅಷ್ಟೇ ಅಲ್ಲ ಮನೆಮಂದಿಯ ದಿನಚರಿಯೇ ಬದಲಾಯಿತು ಎಂದು ಹೇಳಬಹುದು. ಏನೂ ಇಲ್ಲದೇ ಇದ್ದಾಗಲೇ ಹಾರಾಡುವವಳು, ಏನೋ ಆದರೆ….
ಬಡಪಾಯಿ ಗಂಡನನ್ನು ಐದಕ್ಕೇ ಎಬ್ಬಿಸಿ ವಾಕಿಂಗ್ ಶುರು ಹಚ್ಚಿದಳು. ಬಂದ ಮೇಲೆ ಹಾಗಲಕಾಯಿಯ ರಸವನ್ನು ಕಣ್ಣು ಮುಚ್ಚಿ ಕುಡಿಯುವಳು. ನಂತರ ಸಕ್ಕರೆ ಇಲ್ಲದ ಕಾಫಿ ತನ್ನ ಜೊತೆಗೆ ಗಂಡನಿಗೂ ಶುಗರಲೆಸ್ ಕಾಫಿ ಕೊಡುವಳು. ಆತನಾದರೋ ‘ಮಾರಾಯ್ತಿ, ನನಗೇನ ಇನ್ನೂ ಡಯಾಬಿಟೀಸ್ ಬಂದಿಲ್ಲ’ ಎಂದು ಗೋಗರೆದರೆ, ‘ಸುಮ್ಮನ ಕುಡೀರಿ, ನನಗೆ ಬಂದದ ಅಂದ ಮ್ಯಾಲ ನಿಮಗೂ ಬರೋದಿಲ್ಲ ಅನ್ನೂದಕ್ಕ ಏನ ಗ್ಯಾರಂಟಿ ‘Preation is better than cure’ ಅಂತ ಕೇಳಿಲ್ಲೇನು’ ಎಂದು ಜೋರು ಮಾಡುವಳು.
ಆತನು ನಿರ್ವಾಹವಿಲ್ಲದೇ ಗಂಟಲಲ್ಲಿ ಸುರುವಿಕೊಳ್ಳುವವ, ಏನಾದರೂ ಅಂದರೆ ಅವಳಿಂದ ಜಗಳ ಬೇಡ, ಮತ್ತೆ ಟೆನ್ಶನ್ ನಲ್ಲಿ ಶುಗರ್ ಇನ್ನೂ ಹೆಚ್ಚಾದರೆ ಗತಿ ಏನು ಅಂದುಕೊಳ್ಳುವವ. ಆಫೀಸಿಗೆಂದು ಹತ್ತು ಮಿನಿಟು ಬೇಗನೆ ಮನೆಬಿಟ್ಟು ‘ಕಲ್ಪವೃಕ್ಷ’ ಹೋಟೇಲಿನಲ್ಲಿ ಮನಸೋಕ್ತ ಎರಡು ಕಪ್ ಕಾಫಿ ಕುಡಿದು ಹೋಗತೊಡಗಿದ. ಕಿಸೆಗೆ ಕತ್ತರಿ ಆದರೂ ಮನಸಿಗೆ ತೃಪ್ತಿಯಾಗುತ್ತಿತ್ತಲ್ಲ! ಮನೆ ಮಂದಿ ಎಲ್ಲ ಕಂಪಲ್ಸರಿ ಹಾಗಲಕಾಯಿ ಪಲ್ಯವನ್ನೇ ತಿನ್ನುವಂತಾಯಿತು. ಮಕ್ಕಳಾದರೂ ಮುಖ ಕಿವುಚುತ್ತಾ ಮೆಲ್ಲಗೆ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾ, ‘ಶುಗರ್ ನಮಗೆಲ್ಲಾ ಆಗೇದೋ ಏನು ಅಮ್ಮಗಷ್ಟನೋ’ ಎಂದು ಗೊಣಗಾಡತೊಡಗಿದವು. ಸಾಯಂಕಾಲ ಯೋಗಾಕ್ಲಾಸಿಗೆ ಹಚ್ಚಿದಳು. ದಣಿದು ಸುಸ್ತಾಗಿದೆ ಎಂದು ರಾತ್ರಿ ಅಡುಗೆ ಮನೆಗೆ ರಜೆ, ಬ್ರೆಡ್ಡೋ ಮತ್ತೇನೋ ಹೊರಗಿನಿಂದ ತರುವುದು ಚಾಲ್ತಿಗೆ ಬಂತು. ಬೆಳಿಗ್ಗೆ ಬೇಗನೇ ಏಳುವುದೆಂದು ರಾತ್ರಿ ನ್ಯೂಜ ಕೂಡ ನೋಡದೇ ನೋಡಿಸದೇ ಬೇಗನೆ ಮಲಗುವಳು. ಸೀರಿಯಲ್ ಗಳಿಗಂತೂ ಸೂಟಿಯೇ ಆಗಿ ಹೋಯಿತು. ಮಕ್ಕಳನ್ನೂ ಜಬರದಸ್ತಿನಿಂದಲೇ ಮಲಗಿಸುವಂತಾಯಿತು. ಮನೆ ಮಂದಿಯ ಗೊಣಗಾಟಕ್ಕೆ ಬಾರ್ಡರ್ ಲೈನಿನ ಡಯಾಬಿಡಿಸೇ ಉತ್ತರವಾಯಿತು.
ಎರಡು ಮೂರು ದಿನ ಇದೇ ದಿನಚರಿಯೇ ಪುನರಾವರ್ತಿತವಾಯಿತು. ಒಂದಿನ ಮಧ್ಯಾಹ್ನ ಅಡುಗೆ ಮಾಡುತ್ತಿದ್ದ ಶಾರದಾಳಿಗೆ ಬೆವರಿನಿಂದ ತೊಯ್ದು ತೊಪ್ಪಡಿಯಾಗಿ ಕಣ್ಣಿಗೆ ಕತ್ತಲಿಟ್ಟಂತಾಯಿತು. ತಲೆ ಗಿರಗಿರನೆ ಸುತ್ತಲಾರಂಭಿಸಿತು. ಕೆಲಸವನ್ನು ಎಲ್ಲೆಂದರಲ್ಲೆ ಬಿಟ್ಟು ಹೋಗಿ ಮಲಗಿದಳು. ಅವಳಿಗೆ ತನಗೆ ಬ್ರೇನ್ ಟ್ಯುಮರ್ ಆಗಿರಬಹುದೇ ಎಂಬ ಅನುಮಾನ, ಸಾಯಂಕಾಲದವರೆಗೂ ಹಾಗೇ ಮಲಗಿದ್ದು ಆಫೀಸಿನಿಂದ ಬಂದ ಪತಿರಾಯರಿಗೆ ವಿಷಯ ಅರುಹಿದಳು. ತಕ್ಷಣವೇ ಹಾಸ್ಪಿಟಲ್ ಗೆ ಹೊರಟು ನಿಂತಳು. ಮಕ್ಕಳೂ ಗಾಬರಿಯಾಗಿ ಅಮ್ಮನಿಗೆ ಏನು ಆಯಿತೋ ಎನ್ನುತ್ತಾ ಕುಳಿತಿದ್ದವು. ಅವರನ್ನು ಸಮಾಧಾನಿಸಿ ಪತಿ ಅವಳನ್ನು ಕರೆದುಕೊಂಡು ನಡೆದ.
‘ಮಾರಾಳ, ಅಷ್ಟೇನೂ ಗಾಬರಿಯಾಗಬ್ಯಾಡ, ಜಗತ್ತಿನ್ಯಾಗ ಬೇಕಾದಷ್ಟು ಮಂದಿಗೆ ಡಯಾಬೀಟೀಸ್ ಆಗೇದ. ಆದರೆ ಯಾರೂ, ಅಷ್ಟು ಲಗೂನ ಸಾಯೂದಿಲ್ಲಾ, ನೀಯಾಕ ಇಷ್ಟ ಗಾಬರಿ ಆಗ್ತೀ’ ಎನ್ನುತ್ತಿದ್ದಂತೆ ಅವಳ ಕಣ್ಣಿನಲ್ಲಿ ಗಂಗಾ ಭಾಗೀರಥೀ, ‘ಇನ್ನೂ ಹುಡುಗ್ರ ಸಣ್ಣಾವ್ರಿದ್ಹಾರ, ನನಗೇನರೇ ಆದರ ಅವ್ರನ್ನ ಯಾರ ನೋಡ್ಕೊಳ್ಳಾವರೂ’ ಮುಸಿ ಮುಸಿ ಎನ್ನುತ್ತಾ ಸೆರಗಿನಿಂದ ಕಣ್ಣೊರೆಸಿಕೊಂಡಳು. ‘ಈಗ ಬ್ಯಾರೇ ಡಾಕ್ಟರ್ ಕಡೆ ತೋರಸೋಣ್ರಿ’ ಎಂದಳು. ‘ಯಾಕ? ಮ್ಯಾಲ ಮ್ಯಾಲ ಡಾಕ್ಟರ್ ನ ಹಂಗ ಬದಲೀ ಮಾಡಬಾರದು, ಒಬ್ರ ಹಂತೇಕನ ತೋರಿಸ್ಬೇಕು.’
‘ಬ್ಯಾಡ್ರೀ, ಅವ್ರು ಬರೇ ರೊಕ್ಕಾ ಜಗ್ಗೂ ಡಾಕ್ಟರ್ ಇದ್ದಾರ, ಇನ್ನೊಬ್ಬರ ಕಡೆ ಹೋಗೋಣ’ ಒತ್ತಾಯಿಸಿ ಗಂಡನನ್ನು ಒಪ್ಪಿಸಿ ತಾನೇ ಬೇರೆ ಡಾಕ್ಟರರನ್ನೂ ಆಯ್ಕೆ ಮಾಡಿ ಅವರ ಹತ್ತಿರ ನಡೆದಳು.
ಸಂಭವಿಸಿದ ವಿಚಾರವನ್ನೆಲ್ಲಾ ಶಾಂತಚಿತ್ತದಿಂದ ಆಲಿಸಿದ ಡಾಕ್ಟರು ಎಲ್ಲ ರಿಪೋರ್ಟಗಳನ್ನು ತೋರಿಸಲ ಹೇಳಿದರು. ರಿಪೋರ್ಟಗಳನ್ನೆಲ್ಲ ಪರಿಶೀಲಿಸಿದ ಡಾಕ್ಟರು ಒಂದು ನಿರ್ಧಾರಕ್ಕೆ ಬಂದರು.
‘ನಿಮಗೆ ಡಯಾಬಿಟೀಸ್ ಬಾರ್ಡರ್ ಲೈನಿಗಿದೆ ಎಂದು ಎಷ್ಟು ದಿನದಿಂದ ತಿಳಿಯಿತು?”
‘ಈಗಲೇ ನಾಲ್ಕು ದಿನದಿಂದ’
‘ಉಲ್ಟಿ ತಲೆಸುತ್ತುವುದು ಯಾವಾಗಿನಿಂದ?’
‘ಅದು ಆರೇಳು ದಿನದಿಂದ’
‘ಈಗೇನಾದರೂ ಉಲ್ಟಿ ಆಗಿದೆಯಾ?’
‘ಅದಕ್ಕಾಗಿ ಔಷಧಿ ಕೊಟ್ಟಿದ್ದರಿಂದ ಈಗೇನೂ ಆಗಿಲ್ಲ’
‘ಹಾಗಾದರೆ ನಿಮಗೆ ಎದೆಬಡಿತ ಜೋರಾಗಿ ಬಡಿದುಕೊಳ್ಳುತ್ತಿದೆಯೋ ಶ್ವಾಸ ತೆಗೆದುಕೊಳ್ಳಲು ತೊಂದರೆ ಏನಾದರೂ?’
‘ಹೌದು ಡಾಕ್ಟರೇ, ಇದು ಈಗ ಆಗುತ್ತಿದೆ, ಜೋರಾಗಿ ಎದೆ ಬಡಿದುಕೊಳ್ತದ, ಹಾರ್ಟ್ ಪ್ರಾಬ್ಲೆಮ್ ಏನಾದ್ರೂ ಅದ ಏನು ನೋಡ್ರಿ, ಇ.ಸಿ.ಜಿ. ಮಾಡಿ ನೋಡಿ ಬಿಡ್ರಿ’ ಅಲವತ್ತುಕೊಂಡಳು ಶಾರದಾ. ಕಣ್ಣಂಚಿನಲ್ಲಿ ನೀರು!
“ನೋಡಿ, ನಿಮ್ಮ ಈ ರೀತಿಯ ದಿನಚರಿ ಹಾಗಲಕಾಯಿಯ ಹೆಚ್ಚಿನ ಪ್ರಮಾಣದ ಸೇವನೆ, ನಿಮ್ಮಲ್ಲಿಯ ಶುಗರ್ ಕಂಟೆಂಟ್ ನ್ನು ಅತ್ಯಂತ ಕಡಿಮೆಯಾಗಿಸಿದೆ. ಅದರಿಂದ ತಲೆಸುತ್ತು ಬಂದು ಬಿದ್ದಿದ್ದೀರಿ. ಮತ್ತೆ ನಿಮ್ಮ ಹೀಮೋಗ್ಲೋಬಿನ್ ಅಂಶ ಕೂಡ ಕಡಿಮೆಯಾಗಿದೆ. ಅದಕ್ಕಾಗಿ ನಿಮ್ಮ ಎದೆಬಡಿತ ಜೋರಾಗಿ ಶ್ವಾಸೋಚ್ಛಾಸಕ್ಕೆ ತೊಂದರೆಯಾಗುತ್ತಿರುವುದು ಅಲ್ಲದೇ ನಿಮ್ಮ ಈ ಎಲ್ಲ ರಿಪೋರ್ಟ್ ನೋಡಿದಾಗ ನಿಮ್ಮ ಹೊಟ್ಟೆಯಲ್ಲಿ ಜಂತುಹುಳದ ಪ್ರಾಬ್ಲೆಮ್ ಇದೆ. ಅದಕ್ಕಾಗಿ ಇವತ್ತು ರಾತ್ರಿ ಗುಳಿಗೆ ತೆಗೆದುಕೊಳ್ಳಿ. ಮೂರುದಿನ ರಾತ್ರಿ ಊಟವಾದ ನಂತರ, ಜಂತು ಹುಳದ ಸಮಸ್ಯೆ ಇಲ್ಲವಾಗುತ್ತದೆ. ಹೀಮೋಗ್ಲೋಬಿನ್ ಹೆಚ್ಚಳಕ್ಕಾಗಿ ತೊಪ್ಪಲು ಪಲ್ಯ ಜಾಸ್ತಿ ತಿನ್ನಿರಿ. ಹಣ್ಣು ಹಾಲು, ಮೂರು ತಿಂಗಳವರೆಗೆ ಐರನ್ ಗುಳಿಗೆ ಕೊಡುತ್ತೇನೆ. ದಿನಾ ಒಂದರಂತೆ ತೆಗೆದುಕೊಳ್ಳಿ ಆರಾಮವಾಗುತ್ತದೆ. ಡಯಾಬಿಟಿಸ್ ಗೆ ತಲೆಕೆಡಿಸಿಕೊಳ್ಳಬೇಡಿರಿ. ಅದೇನು ಅಂಥಾ ದೊಡ್ಡ ರೋಗವೇನಲ್ಲ. ಗುಳಿಗೆಗಳಿಂದ ಆಹಾರ ವಿಹಾರದಿಂದ ಕಂಟ್ರೋಲ್ ನಲ್ಲಿ ಇಡಬಹುದು. ದಿನಾಲೂ ಸಾಯಂಕಾಲ ಅಥವಾ ಬೆಳಿಗ್ಗೆ ಸ್ವಲ್ಪ ವಾಕಿಂಗ್ ಮಾಡಿದರೆ ಸಾಕು, ಅದಕ್ಕೇ ಹತ್ತಿಕೊಂಡು ಬೆನ್ನು ಹತ್ತಬೇಡಿರಿ ಎಂದು ನಗುತ್ತಾ ಚೀಟಿ ಬರೆದುಕೊಟ್ಟರು ಡಾಕ್ಟರು.
ಗುಡ್ಡ ಹತ್ತಿ ಹುಡುಕಿದಂತಾಯಿತು ಶಾರದಾಳಿಗೆ, ಬಲವಂತದ ಮಾಘ ಸ್ನಾನದಿಂದ ತಪ್ಪಿಸಿಕೊಂಡು ನಿರಾಳತೆಯ ಉಸಿರುಬಿಟ್ಟರು ಪತಿ ಹಾಗೂ ಆಕೆಯ ಮಕ್ಕಳು.

 

Leave a Reply