ಸಂ- ಸ್ಕಾರ…

ಸಂ- ಸ್ಕಾರ…
ಈಗೊಂದು ವಾರದ ಹಿಂದೆ ಒಂದು ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ಎದುರುಗಡೆ ಸಾಲಿನಲ್ಲಿ ಒಂದು ಗುಂಪು ಕುಳಿತಿತ್ತು. ಬಹುಶಃ ಅತಿಥೇಯರ ಕಡೆಯವರಿರಬೇಕು ಅವರೆಲ್ಲರ ವಿಶೇಷ ಕಾಳಜಿಗಾಗಿ ಒಬ್ಬ ಮಹಾಶಯ ಅತ್ತಿಂದಿತ್ತ ಓಡಾಡಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ… ಅತಿಥೇಯನೊಬ್ಬನ ಆದರ್ಶಮಾದರಿಯಾಗಿ ಕಂಡು ನನಗೆ ತುಂಬಾನೇ ಖುಷಿಯಾಗಿಹೋಯಿತು.
ಸ್ವಲ್ಪ ಹೊತ್ತಿನಲ್ಲಿಯೇ ಪದಾರ್ಥಗಳನ್ನು ಬಡಿಸತೊಡಗಿದರು… ಕುಳಿತವರು ಹಸಿವೆಗೋ, ಸುಮ್ಮನೇ ಕೂಡಲಾರದ್ದಕ್ಕೋ, ಅಥವಾ ಅವರವರ ಅಭ್ಯಾಸವೋ ಬಡಿಸಿದಂತೆ ತಮಗೆ ಬೇಕಾದುದನ್ನು ತಿನ್ನಲಾರಂಭಿಸಿದರು… ಅತಿಥೇಯ ಮಹಾಶಯನೂ ತನ್ನ ಆಪ್ತ (?) ಸ್ನೇಹಿತರ ಎಲೆಗಳಿಂದ ಅದು ಇದನ್ನು ಅಷ್ಟಿಷ್ಟು ಬಾಯಿಗೆಸೆದುಕೊಳ್ಳಲು ಪ್ರಾರಂಭಿಸಿದ.. ಅದೂ ಅಷ್ಟೇನೂ ಆಕ್ಷೇಪಣೀಯವೆನಿಸದೇ ನೋಡುತ್ತಲೇ ಇದ್ದೆ. ಅಥವಾ ನನಗೆ ನೇರವಾಗಿ ಆ ಸಾಲು ಇದ್ದು ತಾನಾಗೋ ಕಾಣಿಸುತ್ತಲೇ ಇತ್ತು.
ಮುಂದಿನದು ಮಾತ್ರ ನಾನೆಂದೂ ಕಂಡು, ನೋಡಿ ಕೇಳದೆ ಮಾತು.. ಆ ಮಹಾಶಯ ಎಲ್ಲರ ಎಲೆಯಲ್ಲಿ ಬೇಕಾದ್ದನ್ನು ಹಾಕಿಸಿಕೊಂಡು ತಾನೇ ಕಲಿಸಿ ಎಲೆಯ ಮುಂದುಗಡೆಯಿಂದ ಆ ಎಲೆಯ ಒಡೆಯನೊಡನೆ ಸಹ ಭೋಜನ ಶುರು ಮಾಡಿದ.. ಒಬ್ಬನೊಡನಾದರೆ ಓ.ಕೆ…. ಪ್ರಾಣಸ್ನೇಹಿತರಿರಬಹುದು. ಅಂಥವರಿಗೆ ಎಂಜಲು ಏನು ಲೆಕ್ಕ ಅನಬಹುದು…
ಆದರೆ ಅವನು ಮಾಡುತ್ತಿದ್ದುದೇ ಬೇರೆ.. ಒಂದು ಎಲೆಯಿಂದ ಅನ್ನ, ಇನ್ನೊಬ್ಬನೆಲೆಯಿಂದ ಪಲ್ಯ, ಮತ್ತೊಬ್ಬ ನಿಂದ ಮತ್ತೇನೋ ತೆಗೆದುಕೊಂಡು ಎಲ್ಲರ ಎಲೆಹಳನ್ನೂ ಕಲಸು ಮೇಲೋಗರ ಮಾಡಿ ಅವರೇನಂದುಕೊಂಡಾರು ಎಂಬುದನ್ನು ಲೆಕ್ಕಿಸದೇ ಇಡೀ ಸಾಲನ್ನೇ ಆವರಿಸಿಕೊಂಡಾಗ ಮಾತ್ರ ನನ್ನ ಊಟ ನನಗೇ ಜಿಗುಪ್ಸೆ ಅನಿಸಲು ಸುರುವಿಟ್ಟುಕೊಂಡಿತು.
ವೈಯಕ್ತಿಕ ಸ್ವಾತಂತ್ರ್ಯ ಗಮನದಲ್ಲಿಟ್ಟು ನೋಡಿದರೆ ಇದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ… ಆಕ್ಷೇಪಿಸ ಬೇಕಾದವಳೂ ನಾನಲ್ಲ. ಹಾಗೆ ಮಾಡಿದರೆ ನನ್ನದೇ ತಪ್ಪು ಆದರೆ ಸಾಮೂಹಿಕವಾಗಿ ಒಬ್ಬ ವ್ಯಕ್ತಿಯ ನಡುವಳಿಕೆಯ ಪ್ರಶ್ನೇ ಬಂದಾಗ ಇದು ಸರಿ ಅಲ್ಲ… ನಾನು ಅವನ ಸ್ನೇಹಿತರನ್ನು ಗಮನಿಸುತ್ತಿದ್ದೆ. ಮೊದಲ ಸಲ ತೆಗೆದುಕೊಂಡಾಗ ಖುಷಿಯಿಂದ ಇದ್ದ ಅವರು ನಂತರ ಕಿರಿಕಿರಿ ಅನುಭವಿಸುವರಂತೆ ಕಾಣತೊಡಗಿದರು. ಕೆಲವೊಬ್ಬರು ಅವನು ಕೈ ಹಾಕಿದ ಪದಾರ್ಥ ಬಿಟ್ಟು ಉಳಿದುದು ತಿಂದರೆ ಒಬ್ಬಿಬ್ಬರು ಏನೂ ಮಾಡಲು ತಿಳಿಯದೇ ಅತ್ತಿತ್ತ ನೋಡತೊಡಗಿದರು. ಒಬ್ಬರಂತೂ ಹಿಂದೆ ಆತು ಕುಳಿತು ಎಲೆಯೇ ತನ್ನದಲ್ಲ ಎಂಬಂತೆ ನೋಡುತ್ತಿದ್ದರು.
ನನಗಿನ್ನೂ ಗೊಂದಲ ಈ ರೂಢಿ ಈಗೀಗ fashion ಏನಾದರೂ ಆಗಿದೆಯಾ? ಎಂಜ¯ದ ಮಾತು ಬಿಟ್ಟು ಬಿಡೋಣ. ಆರೋಗ್ಯದ ದೃಷ್ಟಿಯಿಂದಾಲಾದರೂ ಅದು ಓಕೆನಾ? ಒಬ್ಬರ ಎಲೆಯಿಂದ ತಿಂದು ಬೆರಳುಗಳನ್ನು ಚನ್ನಾಗಿ ಚೀಪಿ ಇನ್ನೊಬ್ಬರ ಎಲೆಯ ಪದಾರ್ಥ ಮುಟ್ಟುವದು ಅಸಹ್ಯವಲ್ವಾ? ಇಷ್ಟು ‘mean and cheap’ ಆಗಿ ವಿಚಾರ ಮಾಡುವ ನಾನು old model ಆಗಿ expiry date ಗೆ ಹತ್ತಿರದವಳಾ? ತಮ್ಮ ಜೋತೆ ತಾವು ಗೆಳೆಯರಷ್ಟೇ ಅಲ್ಲದೇ ಇತರ ಹಿರಿ ಕಿರಿಯರೂ ಕುಳಿತಿರುವಾಗ ಸಾಮೂಹಿಕ ನಡವಳಿಕೆ ಅಪೇಕ್ಷಿಸಲಾರದ ಹಂತಕ್ಕೆ ನಾವು ಹೋಗುತ್ತಿದ್ದೇವಾ? ಸರಿ, ತಪ್ಪು ತಿಳಿಸಬೇಕೆಂದರೆ ಹೇಗೆ? ಅಥವಾ ಏನಾದರೂ ಹೇಳಲೆಣಿಸುವುದು ವೈಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸಿದಂತಾಗುತ್ತದಾ? ಹತ್ತಾರು ಪ್ರಶ್ನೇಗಳು.. ಉತ್ತರದ ಹಾದಿ ಬಹು ದೂರದಲ್ಲೂ ಕಾಣಿಸುತ್ತಿಲ್ಲ.

Leave a Reply