ಸೀತೆಯ ಸ್ವಗತ

ಸೀತೆಯ ಸ್ವಗತ
ಅದು ವಾಲ್ಮೀಕಿ ಋಷಿಗಳ ಆಶ್ರಮ. ಎಕರೆಗಟ್ಟಲೆ ವಿಸ್ತೀರ್ಣದಲ್ಲಿ ಹರಡಿದ್ದ ಆ ಹಸಿರು ಹೊದ್ದು ಮಲಗಿದ್ದ ಶಾಂತ ಪರಿಸರದಲ್ಲಿ ಒಬ್ಬ ಮೂವತ್ತರ ಆಸುಪಾಸಿನ ಸರಳ ಸುಂದರಿಯಾದ ಮಹಿಳೆಯೊಬ್ಬಳು ಎತ್ತಲೋ ದೃಷ್ಟಿಯಾನಿಸಿ ನೋಡುತ್ತಲಿದ್ದಾಳೆ. ಹಾಗೂ ಆ ಕಡು ಬೇಸಿಗೆಯ ದಿನಗಳಲ್ಲಿ ಅಡವಿಯ ಮಧ್ಯದ ಆಶ್ರಮದಲ್ಲಿ ಋಷಿಸದೃಶ ಜೀವನವನ್ನು ಸಾಗಿಸುತ್ತಲಿದ್ದರೂ ಆ ಗಂಭೀರ ಮುಖದ ಮೇಲಿನ ರಾಜಕಳೆಯಿಂದಾಗಿ ಹಾಗೂ ಅಚ್ಚಳಿಯದಂಥ ದಂತದ ಬಣ್ಣದಿಂದಾಗಿ ಅವಳು ಒಬ್ಬ ರಾಜಮನೆತನದವಳಂತೆ ತೋರುತ್ತಿದ್ದಾಳೆ. ಆಗಲೇ ಅಲ್ಲಿಗೆ ಬಂದ ಋಷಿಕನ್ಯೆಯರಂಥ ಒರಟಾದ ಶ್ಯಾಮಲ ವರ್ಣದ ಚರ್ಮವೂ, ಸುಂದರವಾದ ಚಹರೆಯನ್ನು ಹೊಂದಿದಂಥ ಅದೇ ಆಶ್ರಮದ ಯುವಕನ್ನಿಕೆಯೊಬ್ಬಳು, “ಅಕ್ಕಾ, ಅಕ್ಕಾ… ” ಎಂದು ಕೂಗಿಯೇ ಕೂಗುತ್ತಿದ್ದಾಳೆ. ಆದರೆ ಆ ಮಹಿಳೆಗೆ ಅದಾವುದರತ್ತವೂ ಗಮನವೇ ಇಲ್ಲ. ಆ ಯುವತಿ ಆ ಮಹಿಳೆಯನ್ನು ಅಲುಗಾಡಿಸಿದಾಗಲೇ ಆಕೆಗೆ ಎಚ್ಚರವಾಗಿ ಈ ಲೋಕಕ್ಕೆ ಬಂದದ್ದು!
“ಯಾಕೆ ಅನುಪಮೆ? ಅಷ್ಟೇಕೆ ಕೂಗುತ್ತಿರುವಿ? ಲವನು ನಿನಗೆ ಏನಾದರೂ ತೊಂದರೆ ಕೊಟ್ಟನೇ? ಅವನು ಸ್ವಭಾವತಃ ತುಂಟ… ಆದರೂ ಅವನನ್ನು ಸಂಭಾಳಿಸಲು ಕುಶನಿರುವನಲ್ಲ… ಅನುಪಮೇ, ನನ್ನ ಕಂದನಿಗೆ ಸರಿ ತಪ್ಪುಗಳ ಬಗ್ಗೆ ತಿಳಿವಳಿಕೆಯಿಲ್ಲ. ನೀನು ಅಕ್ಕನಂತೆ ಅವನಿಗೆ ಬೈದು ಬುದ್ಧಿ ಹೇಳಬಾರದೇ?”
ಅನುಪಮೆ “ಅಕ್ಕ, ನಿನ್ನ ಮಕ್ಕಳು ಯಾರಿಗೂ ತೊಂದರೆ ಕೊಡುವವರೇ ಅಲ್ಲ… ಅಷ್ಟೇ ಏಕೆ? ನೋಡಲ್ಲಿ, ನಿನ್ನ ಮಗ ಲವನು ಆ ಜಿಂಕೆಯ ಮರಿಯನ್ನು ಮುದ್ದು ಮಾಡುತ್ತಿರುವ ಪರಿಯನ್ನು.. ಅದನ್ನೇ ತೋರಿಸಲೆಂದು ನಿನ್ನನ್ನು ಕೂಗಿದ್ದರೆ ನೀನೋ ಎಂದಿನಂತೆ ಕಣ್ಣು ತೆರೆದೇ ನಿದ್ರೆ ಮಾಡುತ್ತಿರುವಿ! ಕನಸು ಕಾಣುತ್ತಿರುವಿ! ಯಾರ ಕನಸು ಅಕ್ಕಾ?” ಎಂದಿದ್ದಳು.
ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದಿದ್ದ ಇನ್ನೊಬ್ಬ ಋಷಿಕನ್ಯೆ, “ಇನ್ನಾರದು ಆ ಶ್ರೀರಾಮನದು! ಅಕ್ಕಾ, ನಿನ್ನಂಥ ಪತಿವೃತೆಯನ್ನೇ ನಾನು ನೋಡಲಿಲ್ಲ… ಆ ರಾಜಾರಾಮನೋ ದಿನತುಂಬಿದ ಬಸಿರಿಯಾದ ನಿನ್ನನ್ನು ಅರಮನೆಯಿಂದ ಹೊರದೂಡಿ ಅಡವಿಪಾಲು ಮಾಡಿದವ.. ಈಗ ಅರಮನೆಯಲ್ಲಿ ಸಕಲ ಸಂಭ್ರಮದಲ್ಲಿ ಸುಪ್ಪತ್ತಿಗೆಯ ಮೇಲೆ ಓಲಾಡುತ್ತಿದ್ದಾನೆ.. ಅವನಿಗೆ ನಿನ್ನ ನೆನಪಾದರೂ ಇದೆಯೋ ಇಲ್ಲವೋ ಬಲ್ಲವರಾರು? ಅಷ್ಟೇ ಏಕೆ> ಈ ಸುಂದರ ಕುವರರನ್ನೂ ನೋಡಲು ಅವನ ಮನವು ಪರಿತಪಿಸಲಾರದೇ? ಅಕ್ಕಾ, ಇಂಥ ನಿಷ್ಕರುಣಿ ರಾಜನನ್ನು ನಾನಂತೂ ಮದುವೆಯಾಗಲಾರೆ… ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವವನನ್ನು, ಅವನು ಒಬ್ಬ ಬಡವನೇ ಆಗಿರಲಿ… ಅವನನ್ನು ಮದುವೆಯಾಗುವೆ..” ಎಂದಿದ್ದಳು..
“ಸುಮತೀ! ನನ್ನ ನಾಥನನ್ನು ಹೀಗೆ ಅವಮಾನಿಸಬೇಡ… ಅವನು ನನ್ನನ್ನು ಅಗಲಿ ಕನಸಿನಲ್ಲಿಯೂ ಕೂಡ ಸುಖವಾಗಿರಲಾರ.. ಅವನಿಗೆ ಆ ಸುಪ್ಪತ್ತಿಗೆಯೂ ಒರಟು ಹಾಸಿಗೆಯಂತೆ ನೋವು ನೀಡುತ್ತಿದೆ..”
“ಅಕ್ಕಾ, ಅದು ಹೇಗೆ ಅರಿತೆ ನೀನು?”
“ಅವನು ಏಕಪತ್ನಿವೃತಸ್ಥ.. ಮನಸಿನಲ್ಲಿಯೂ ಕೂಡ ಇತರ ಹೆಣ್ಣಿನೊಂದಿಗೆ ವ್ಯಭಿಚಾರವನ್ನು ಮಾಡಲಾರ.. ಗೊತ್ತಿದೆಯಾ ನಿಮಗೆ, ಅಂದು ಅವನು ಆ ಶೂರ್ಪನಖಿಯ ಆಹ್ವಾನವನ್ನು ಮನ್ನಿಸಿ ಅವಳನ್ನು ಮದುವೆಯಾಗಿದ್ದರೆ ನನ್ನ ಅಪಹರಣವೇ ಆಗುತ್ತಿರಲಿಲ್ಲ… ಈ ರೀತಿ ನಾನು ಇಂದು ವಿರಹದಲ್ಲಿ ಬೇಯುವುದೂ ಕೂಡ…”
ಆ ಮಹಿಳೆ ಬೇರಾರೂ ಅಲ್ಲ, ಸೀತೆ. ಅವಳು ಶ್ರೀರಾಮಚಂದ್ರ ವಲ್ಲಭೆ ಸೀತಾಮಾತೆಯೇ.
“ಮಗಳೇ, ಇವರಿಗೆ ಇಂದು ನೀನು ನಿನ್ನ ಈ ಪರಿತ್ಯಾಗಕ್ಕೆ ಕಾರಣವನ್ನು ಹೇಳಲೇಬೇಕು.. ಇಲ್ಲವಾದರೆ ಆ ಸೀಮಾಪುರುಷೋತ್ತಮನ ಬಗ್ಗೆ ಹೀಗೆಯೇ ಅಲ್ಲಸಲ್ಲದ ಮಾತುಗಳನ್ನಾಡುತ್ತ ಅಪಪ್ರಚಾರವನ್ನು ಮಾಡುತ್ತಾರೆ ಈ ಗಟವಾಣಿಯರು!”
ಅಲ್ಲಿಗೆ ಯಾವುದೋ ಕಾರಣಕ್ಕಾಗಿ ಬಂದಿದ್ದ ಸುನೀತೆಯು ಹೇಳಿದ್ದಳು… ತಾನೂ ಮತ್ತೊಮ್ಮೆ ಆ ಪಾವನಚರಿತೆಯನ್ನು ಕೇಳಲೋ ಎಂಬಂತೆ ಅಲ್ಲಿಯೇ ನಿಂತು ಹುಲ್ಲು ಮೇಯುತ್ತಿದ್ದ ಎಳೆಯ ಜಿಂಕೆಯ ಮರಿಯ ಬೆನ್ನು ನೇವರಿಸುತ್ತ ಸೀತೆಯ ಪಕ್ಕದಲ್ಲಿ ಕುಳಿತಿದ್ದಳು.
“ನಾನು ಮಿಥಿಲೆಯ ಋಷಿಸದೃಶ ರಾಜನಾದ ಜನಕ ಮಹರಾಜನಿಗೆ ನೇಗಿಲು ಹೊಡೆಯುವ ಪ್ರಾರಂಭಿಕ ಸಮಾರಂಭದಲ್ಲಿ ಭೂಮಿಯಲ್ಲಿ ಸಿಕ್ಕ ಮಗು. ನನ್ನನ್ನು ಅಂದಿನಿಂದ ಮಗಳಂತೆ ಸಲುಹಿದ ಆ ತಂದೆ. ನಾನು ಬೆಳೆಯುತ್ತಿದ್ದಂತೆ ನನ್ನ ಸೌಂದರ್ಯ ಹಾಗೂ ಸುಗುಣಗಳಿಗೆ ತಕ್ಕಂಥ ವರನ ಆನ್ವೇಷಣೆಯಲ್ಲಿ ತಂದೆಯು ಒಂದು ಸ್ವಯಂವರವನ್ನು ಏರ್ಪಡಿಸಿದ್ದನು. ಅಂದು ಆ ಸ್ವಯಂವರಕ್ಕೆ ಅನೇಕ ಶೂರರೂ ಬಂದಿರುವುದನ್ನು ನನ್ನ ಗೆಳತಿಯರು ಹೇಳಿದ್ದರು. ಆದರೆ ಅಂದು ತೋಟದಲ್ಲಿ ತಂಗಿದ್ದ ಆ ಸುಂದರ ಸುಕುಮಾರ ರಾಮಚಂದ್ರನನ್ನು ನನ್ನ ಮನವು ಮೋಹಿಸಿತು. ಅವನೇ ನನ್ನ ಗಂಡನಾಗಲೆಂದು ಸಿರಿಗೌರಿಯನ್ನು ಬೇಡಿಕೊಂಡೆ. ಅದರಂತೆಯೇ ನನ್ನ ಎದೆಯಾಣ್ಮ ಶ್ರೀರಾಮಚಂದ್ರನು ಸ್ವಯಂವರದಲ್ಲಿ ಯಾರಿಗೂ ಎತ್ತಲೇ ಸಾಧ್ಯವಾಗದ ಆ ಮಹತ್ತಿನ ಶಿವಧನುಸ್ಸನ್ನು ಲೀಲಾಜಾಲವಾಗಿ ಎತ್ತಿದ್ದ. ಮುರಿದೂ ಹಾಕಿದ್ದ! ನಾನು ಸಂತಸದಿಂದ ಅವನ ಕೊರಳಿಗೆ ಮಾಲೆಯನ್ನು ಹಾಕಿದ್ದೆ. ನಂತರ ನನ್ನ ಸೋದರಿಯರೂ ಕೂಡ ಲಕ್ಷ್ಮಣ, ಭರತ, ಶತೃಘ್ನರಿಗೆ ವರಮಾಲೆಯನ್ನು ಹಾಕಿದ್ದರು. ನಾವೆಲ್ಲರೂ ಅಯೋಧ್ಯೆಯ ಕುಲವಧುಗಳಾಗಿ ಹೊರಟಿದ್ದೆವು. ಅಲ್ಲಿಯೂ ನಮ್ಮ ಸ್ವಾಗತವು ಅತ್ಯಂತ ವೈಭವೋಪೇತವಾಗಿತ್ತು.
ನನಗೆ ತಾಯಿಯಂತೆಯೇ ಸಲಹುವ ಮಅಪ್ರತಿಮ ಸುಂದರಿಯಾದ ಅವಳು ಮಾವನವರ ಒಲವಿನ ಮಡದಿ. ಮೂವರು ಅತ್ತೆಯರು… ಅದರಲ್ಲೂ ಕೊನೆಯ ಅತ್ತೆ ಕೈಕೆಯೋ ನನ್ನನ್ನು ಅತ್ಯಂತ ಪ್ರೀತಿಸುತ್ತಿದ್ದಳು. ಪ್ರೀತಿಯಿಂದ ಕಾಣುವ ಮೂವರು ಮೈದುನರು. ತಂದೆಯನ್ನೇ ಮರೆಸುವಂಥ ಮಾವನವರು! ನನ್ನ ದೈವಕ್ಕೆ ಎಣೆಯುಂಟೇ? ಕೆಲವೇ ದಿನಗಳಲ್ಲಿ ನನ್ನ ಪತಿಯಾದಂಥ ಶ್ರೀರಾಮನ ಪಟ್ಟಾಭಿಷೇಕದ ನಿರ್ಣಯವನ್ನೂ ಮಾವನವರು ಕೈಗೊಂಡಿದ್ದರು. ಇದರಿಂದಾಗಿ ಸಾಮ್ರಾಜ್ಯದಲ್ಲಿ ಅತ್ಯಂತ ಸಂತೋಷದ ವಾತಾವರಣವು ಸೃಷ್ಟಿಯಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ನನ್ನ ಶ್ರೀರಾಮನು ಸೀಮಾ ಪುರುಷೋತ್ತಮ. ಅವನು ಇಲ್ಲಿ ಜನ್ಮವೆತ್ತಿದುದು ಈ ಜಗತ್ತಿನ ಕಲ್ಯಾಣಕ್ಕಾಗಿ. ಜಗತ್ತಿನ ಜನರಿಗೆ ಅನೇಕ ರೀತಿಯಲ್ಲಿ ಮಾದರಿಯಾಗಲೆಂದು! ಅವನು ಪಿತೃವಾಕ್ಯ ಪರಿಪಾಲಕ ರಾಮ, ಪ್ರಜಾವತ್ಸಲ, ದುಷ್ಟ ಸಂಹಾರಕ ಎಂದೆಲ್ಲ ಕರ್ತವ್ಯಗಳನ್ನು ಹೊತ್ತು ಭೂಮಿಗೆ ದೇಹವನ್ನು ಧರಿಸಿ ಬಂದವ. ಅವನಿಗೆ ಆದರ್ಶ ಸತಿ ನಾನು. ಅವನು ಶ್ರೀಮನ್ನಾರಾಯಣನಾದರೆ ನಾನು ಮಹಾಲಕ್ಷ್ಮಿ. ಅವನ ಕರ್ತವ್ಯಗಳಲ್ಲಿ ಅವನಿಗೆ ಅನುರೂಪಳಾಗುವ ಹೊಣೆ ಹೊತ್ತು ಬಂದವಳು ನಾನು. ಇಲ್ಲಿ ನಡೆಯಬೇಕಾದುದೆಲ್ಲದರ ಅರಿವೂ ನಮಗೆ ಮೊದಲೇ ಇತ್ತು.
ನಾವಿಬ್ಬರೂ ಮತಾಪಿತೃಗಳ ಆಣತಿಯ ಮೇರೆಗೆ ವನವಾಸಕ್ಕೆ ಹೊರಟಿದ್ದೆವು. ನಮ್ಮೊಡನೆ ಭ್ರಾತೃವತ್ಸಲ ಲಕ್ಷ್ಮಣ. ವನದಲ್ಲಿ ಪಂಚವಟಿಯಲ್ಲಿ ನಾವು ಸಂತೋಷದಿಂದಿರುವಾಗಲೇ ಆ ಕಾಂಚನಮೃಗದ ಆಗಮನವಾಗಿತ್ತು. ನಾನು ಆ ಮೃಗಕ್ಕಾಗಿ ಆಶೆಪಟ್ಟೆ! ರಾಮನು ಎಷ್ಟು ಬುದ್ಧಿ ಹೇಳಿದರೂ ಕೇಳಲಿಲ್ಲ.. ನನ್ನ ಆಶೆಯನ್ನು ಪೂರೈಸಲೆಂದೇ ಆ ಮೃಗದ ಬೆನ್ನಟ್ಟಿದ್ದ ನನ್ನ ಇನಿಯ! ಆದರೆ ವಿಧಿಯ ಕ್ರೂರ ಆಟವಿದು! ಮುಂದಿನ ಕಥೆಗೆ ನಾಂದಿಯಾಗಿತ್ತು. ರಾವಣ ನನ್ನನ್ನು ಎತ್ತಿಕೊಂಡೊಯ್ದ. ಅವನ ವಧೆಯೂ ನನ್ನ ಶ್ರೀರಾಮನಿಂದಲೇ ಎಂದು ನಿಯಮಿಸಲ್ಪಟ್ಟಿತ್ತಲ್ಲ! ಜಯವಿಜಯರು ವಿಪ್ರರ ಶಾಪದಿಂದಾಗಿ ಮೂರು ಜನ್ಮವೆತ್ತಿ ಶ್ರೀ ವಿಷ್ಣುವಿನಿಂದಲೇ ಹತರಾಗಿ ಮತ್ತೆ ವಿಷ್ಣಲೋಕದ ತಮ್ಮ ದ್ವಾರಪಾಲಕ ಕಾರ್ಯವನ್ನು ವಹಿಸಿಕೊಳ್ಳಬೇಕಾಗಿತ್ತಲ್ಲ!
ಶೂರ್ಪನಖಿಯ ಪ್ರೇಮಭಿಕ್ಷೆಯನ್ನು ನಿರಾಕರಿಸಿ, ಅವಳ ಕಿವಿ, ಮೂಗುಗಳನ್ನು ಕತ್ತರಿಸಿದುದಕ್ಕಾಗಿ ನನಗೇ ಈ ಶಿಕ್ಷೆಯಾಗಿತ್ತು! ಏಳು ಸಾಗರಗಳನ್ನು ದಾಟಿ ಅವನು ನನ್ನನ್ನು ಶ್ರೀಲಂಕೆಗೆ ಎತ್ತಿಕೊಂಡೊಯ್ದಿದ್ದ. ಅಲ್ಲಿ ತನ್ನ ಸುಂದರವಾದಂಥ ಅಶೋಕವನದಲ್ಲಿರಿಸಿದ್ದ. ನನ್ನ ಎಲ್ಲ ಆಭರಣಗಳನ್ನೂ ನಾನು ದಾರಿಗುಂಠ ಎಸೆಯುತ್ತ ಹೋಗಿದ್ದೆ. ಆದರೆ ಚೂಡಾಮಣಿಯನ್ನು ಮಾತ್ರ ನನ್ನ ಕೂದಲಿನಲ್ಲಿ ಹಾಗೆಯೇ ಇರಿಸಿಕೊಂಡಿದ್ದೆ. ಶ್ರೀರಾಮ ಭಕ್ತನಾದ ಹನುಮಂತನು ಸಮುದ್ರವನ್ನು ಲಂಘಿಸಿ ನನ್ನೆಡೆಗೆ ಬಂದು ಶ್ರೀರಾಮನು ನನ್ನನ್ನು ಬಿಡಿಸಿಕೊಂಡೊಯ್ಯುವುದಾಗಿ ಆಶ್ವಾಸನೆಯನ್ನು ಇತ್ತಿದ್ದಾನೆ ಎಂದು ಹೇಳಿ ನನ್ನ ಚೂಡಾಮಣಿಯನ್ನು ನನ್ನನ್ನು ಭೆಟ್ಟಿಯಾದ ಗುರುತಿಗೆ ತೆಗೆದುಕೊಂಡೊಯ್ದಿದ್ದ. ನನ್ನ ವಿರಹಿ ರಾಮನ ಹೃದಯಕ್ಕೆ ಆಗ ಸಮಾಧಾನವಾಗಿತ್ತು! ನಂತರ ರಾವಣವಧೆ, ನನ್ನ ಅಗ್ನಿಪ್ರವೇಶ.. ನನ್ನ ಪಾತಿವೃತ್ಯದ ನಿರೂಪಣೆ… ನನ್ನ ಇನಿಯನ ಪಟ್ಡಾಭಿಷೇಕ.. ನಂತರದ ಈ ನನ್ನ ಪರಿತ್ಯಾಗ… ಇವುಗಳೆಲ್ಲವೂ ಲೋಕದ ಕಣ್ಣಿಗೆ ನನ್ನ ಸಹನೆಯ ಪರೀಕ್ಷೆ… ನನ್ನ ಮೇಲೆ ಶ್ರೀರಾಮನ ದೌರ್ಜನ್ಯವೆಂದೆನ್ನಿಸಿದರೂ ಇದೆಲ್ಲವೂ ದೈವನಿಯಾಮಕವೇ… ನಮ್ಮಿಬ್ಬರ ಪರೀಕ್ಷೆಯ ಗಳಿಗೆಯೇ ಎಂದು ಹೇಳಬೇಕು!
ನನ್ನ ರಾಮ, ನನ್ನ ಹೃದಯ ಸಾಮ್ರಾಜ್ಯದ ಒಡೆಯ ಶ್ರೀರಾಮ ಹಾಗೂ ನನ್ನ ವೈವಾಹಿಕ ಸಂಬಂಧದ ಜಟಿಲತೆಯು ಇವತ್ತಿಗೂ ಎಲ್ಲರಿಗೂ ಜಟಿಲವಾಗಿಯೇ ಉಳಿದಿದೆ. ನನ್ನ ರಾಮ ಏಕಪತ್ನೀವೃತಸ್ಥನಾಗಿ ಉಳಿದ ಮೊದಲ ಪುರುಷ. ಆದಿಪುರುಷನಾಗಿ ಅನುಭವಿಸಬಹುದಾದ ಎಲ್ಲ ಅವಾಂತರಗಳನ್ನೂ ಅವನು ಅನುಭವಿಸಿದ್ದಾನೆ. ಅವನು ಹಾಗೆ ಎಡವುವಾಗಲೊಮ್ಮೆ ಪೆಟ್ಟ ತಿನ್ನುವವಳು ನಾನೇ. ಆದರೂ ನನಗೆ ಅವನ ಮೇಲಿನ ಅಖಂಡ ಪ್ರೀತಿ ಎಂದೂ ಕಡಿಮೆಯಾಗಲಾರದು.
ನನ್ನ ರಾಮನು ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆ ನಿಮ್ಮಂತೆಯೇ ಮುಂದೆಯೂ ಎಲ್ಲರನ್ನೂ ಕಾಡೀತು! ಸೀತೆಯನ್ನು ಅವನು ಹೀಗೆ ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದುದು ಸರಿಯೇ? ಅವನಿಗೆ ಹೆಂಡತಿಯ ಮೇಲೆ ವಿಶ್ವಾಸವಿರಲಿಲ್ಲವೇ? ಎಂಬ ಪ್ರಶ್ನೆಗಳೂ ಕೂಡ ಜನರನ್ನು ಕಾಡುತ್ತವೆ. ಇದರ ಅರ್ಥ ರಾಮನಂತೆಯೇ ಸೀತೆಯ ಪಾತ್ರವೂ ರಾಮಚರಿತದಲ್ಲಿ ಎಷ್ಟು ಮಹತ್ವದ್ದು ಎಂಬುದನ್ನು ತಿಳಿಯಪಡಿಸೀತು! ಇಲ್ಲಿ ನಾವಿಬ್ಬರೂ ಒಂದು ಆದರ್ಶದ ನೆಲೆಗಟ್ಟಿನಲ್ಲಿ ಜನರಿಗೆ ಕಾಣಬೇಕಾಗಿದೆ. ಬದುಕಿನ ಸಾರ್ಥಕತೆಯು ಕೇವಲ ಸುಖದಲ್ಲಿಯೇ ಇಲ್ಲ. ಸಮಾಜಕ್ಕಾಗಿಯೂ ಬದುಕಬೇಕಾಗುತ್ತದೆ. ಗಂಡು ಹೆಣ್ಣು ಇವರಿಬ್ಬರ ಸಂಬಂಧದ ನೆಲೆ.. ಇವುಗಳ ಬಗ್ಗೆ ಒಂದು ವಿವೇಕದ ಬೆಳಕನ್ನು ಚೆಲ್ಲಲೆಂದೇ ನಾವು ಬದುಕಬೇಕಾಗುತ್ತದೆ.
ನನ್ನ ನಲ್ಲನು ರಾಜಕುವರನಾದರೂ ಸಾಮಾನ್ಯನ ಬದುಕನ್ನೇ ಅಪ್ಪಿಕೊಂಡಾತ. ಮನುಷ್ಯನಾಗಿ ಜನಿಸಿದಮೇಲೆ, ಜಗತ್ತಿನ ಸಂಕಷ್ಟಗಳನ್ನು ಎದುರಿಸಿಯೂ ಬದುಕನ್ನು ಕಟ್ಟಿಕೊಳ್ಳುವ ಆತ್ಮವಿಶ್ವಾಸವನ್ನು ಜನರಲ್ಲಿ ತುಂಬಲೆಂದೇ ಅವನು ತಂದೆ ತಾಯಿಯರಿಗಾಗಿ, ರಾಜನಾಗಿ ಪ್ರಜೆಗಳ ಸುಖಕ್ಕಾಗಿ ತ್ಯಾಗವನ್ನು ಮಾಡಿದವ.
ಇನ್ನು ನಮ್ಮ ಈ ಪ್ರೀತಿಯ ನೆಲೆಗಟ್ಟಿನ ಬಗ್ಗೆ ಹೇಳುವುದಾದರೆ.. ನೀವೆಲ್ಲ ವ್ಯಕ್ತ ಪಡಿಸಿದ ಸಂಶಯ.. ಎಲ್ಲರ ಕಷ್ಟಗಳಿಗೂ ಸ್ಪಂದಿಸಿದ ಶ್ರೀರಾಮ ತನ್ನ ಸಹಧರ್ಮಿಣಿಯ ವಿಷಯದಲ್ಲಿ ಏಕೆ ನಿರ್ದಯನಾದ? ಎಂಬುದು. ಪತಿ ಪತ್ನಿಯರು ದೇಹ ಎರಡು ಆತ್ಮ ಒಂದು. ನಾನು ಅನುಭವಿಸಿದ ಎಲ್ಲ ಕಷ್ಟಗಳನ್ನೂ ನನ್ನ ರಾಮನೂ ಅನುಭವಿಸಿದ್ದಾನೆ. ನಮ್ಮಿಬ್ಬರಲ್ಲಿಯ ಅವಿನಾಭಾವವೂ ಕೂಡ ಎಂದೆಂದಿಗೂ ಪತಿ ಪತ್ನಿಯರಲ್ಲಿರಬೇಕಾದ ಆದರ್ಶವೇ!
ಒಂದು ಪ್ರಸಂಗವನ್ನು ಇದಕ್ಕೆ ನಿದರ್ಶನವಾಗಿ ನಿಮಗೆ ಹೇಳುತ್ತೇನೆ.. ಅಂದು ಜನಾಪವಾದದಿಂದಾಗಿ ನನ್ನ ರಾಮನು ಮಾನಸಿಕ ತುಮುಲದಲ್ಲಿದ್ದ. ಅವನ ಮನದ ದುಗುಡವನ್ನು ಅರಿತ ನಾನು ಅವನಿಗೆ ನಾನು ಸ್ವಇಚ್ಛೆಯಿಂದಲೇ ವನಕ್ಕೆ ಹೋಗುತ್ತೇನೆ ಎಂದು ಹೇಳಿದ್ದೆ. ಅವನು “ಸೀತೇ, ನನ್ನನ್ನು ವಿವಶನನ್ನಾಗಿಸಬೇಡ. ನಾನು ನಿನಗೆ ವನಕ್ಕೆ ಹೋಗಲು ಅನುಮತಿಯನ್ನು ಕೊಟ್ಟು ಅನ್ಯಾಯವನ್ನು ಬೆಂಬಲಿಸಲಾರೆ. ನಾನು ಎಂದಾದರೂ ನಿನ್ನ ಮೇಲೆ ಸಂಶಯವನ್ನು ವ್ಯಕ್ತಪಡಿಸಿದೆನೇ?” ಎಂದು ಕೇಳಿದ್ದ. ಆದರೆ ನಾನೇ, “ನಿಜ. ನೀನು ಎಂದೂ ಹಾಗೆ ಬಯಸಿಲ್ಲ. ಆದರೆ ನೀನು ಪ್ರಜೆಗಳ ರಾಜ. ನೀನು ಅಪವಾದರಹಿತನಾಗಿರಬೇಕು. ಮನುಕುಲದ ಕಲ್ಯಾಣಕ್ಕಾಗಿ ಈ ಬಲಿದಾನವು ಆಗಲೇಬೇಕಾಗಿದೆ. ನನ್ನ ಪಾತಿವೃತ್ಯವನ್ನು ಪ್ರತಿಪಾದಿಸುವ ಈ ಒಂದು ಅವಕಾಶವನ್ನು ನನಗೆ ಇಂದು ನೀನು ದಯಪಾಲಿಸು. ಇಲ್ಲವಾದರೆ ನಾವು ಜನರೆದುರು ಹೇಡಿಗಳಾಗುತ್ತೇವೆ. ರಾಜಮಹಲಿನ ಸುಖಭೋಗಕ್ಕಾಗಿ ನಮ್ಮ ಕರ್ತವ್ಯವನ್ನು ಲೋಪಗೊಳಿಸಿದೆವೆಂಬ, ನ್ಯಾಯವನ್ನು ತಿರುಚಿದೆವೆಂಬ ಮಾತು ಕೊನೆಯ ವರೆಗೂ ಉಳಿದೀತು! ಅಷ್ಟೇ ಅಲ್ಲ, ಸ್ವಾಮೀ, ನಾವು ಎಂದಾದರೂ ಒಬ್ಬರಿನ್ನೊಬ್ಬರನ್ನು ಅಗಲಿರಲು ಸಾಧ್ಯವೇ? ನಾವು ಒಬ್ಬರಿನ್ನೊಬ್ಬರ ಮನದಲ್ಲಿ ಮನೆ ಮಾಡಿಕೊಂಡಿದ್ದೇವೆಯಲ್ಲವೇ?” ಎಂದು ಕೇಳಿದ್ದೆ. ಆಗ ಶ್ರೀರಾಮನು ಮನನೊಂದು “ಸೀತೇ, ಇಷ್ಟು ದೊಡ್ಡ ಬಲಿದಾನದ, ತ್ಯಾಗದ ಮಾತನ್ನು ನೀನು ಎಷ್ಟು ಸರಳವಾಗಿ ಹೇಳಿಬಿಟ್ಟೆ!” ಎಂದು ಚಕಿತನಾಗಿ ಕೇಳಿದ್ದ. ಆಗ ನಾನು “ಸ್ತ್ರೀ ಯಾವಾಗಲೂ ಅಬಲೆಯಲ್ಲ. ಅವಳ ಶಕ್ತಿಯು ಅಸ್ತ್ರ ಶಸ್ತ್ರಗಳಲ್ಲಿಲ್ಲ. ಅವಳ ನೈತಿಕತೆಯಲ್ಲಿ, ಅವಳ ಧರ್ಮದಲ್ಲಿ ಇದೆ” ಎಂದು ಹೇಳಿ ಅವನನ್ನು, ನನ್ನ ಸ್ವಾಮಿಯನ್ನು ಸಮಾಧಾನಗೊಳಿಸಿದೆ. ನಾನು ನನ್ನ ಇನ್ನೊಂದು ಕೊನೆಯ ಕರ್ತವ್ಯಕ್ಕಾಗಿ ಇಲ್ಲಿರುವೆ. ನಂತರ ನನ್ನ ಕೆಲಸ ಮುಗಿಯಿತು. ನನ್ನ ಅವತಾರವೂ ಕೊನೆಗೊಳ್ಳುತ್ತದೆ… ನಾನು ನನ್ನ ಇನಿಯನ ಅನ್ಯಾಯಗಳನ್ನು ಮೌನವಾಗಿ ಅನುಭವಿಸಿಲ್ಲ. ಆದರೆ ಎಲ್ಲಕ್ಕೂ ಜೊತೆಗೂಡಿದ್ದೇನೆ.. ತಿಳಿಯಿತೇ?”
ಸೀತೆಯ ಕಣ್ಣುಗಳಲ್ಲಿ ಅಪರಿಮಿತ ತೇಜಸ್ಸಿನ ಜ್ಯೋತಿಯೊಂದು ಬೆಳಗುತ್ತಲಿತ್ತು!

Leave a Reply