ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು

ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು

ನಮ್ಮ ಕರ್ನಾಟಕವು ಸುಂದರ ಗುಡಿಗೋಪುರಗಳ ನಾಡು. ಪ್ರಾಚೀನ ಐತಿಹಾಸಿಕ ಗುಡಿಗೋಪುರಗಳಿಗಂತೂ ಲೆಕ್ಕವೇ ಇಲ್ಲ. ಆಯಾ ಕಾಲದ ರಾಜರುಗಳ ಕುಲದೇವರುಗಳ ಮೇಲಿನ ಭಕ್ತಿಯಿಂದಲೇ ದೇವಸ್ಥಾನಗಳನ್ನು ಕಟ್ಟಿಸಿರಬಹುದು. ಆದರೆ ಇಂದು ಅವು ಪ್ರಸಿದ್ಧಿ ಹೊಂದಿರುವುದು ಕೇವಲ ಭಕ್ತಿಗಾಗಿಯೊಂದೇ ಅಲ್ಲ, ಅಲ್ಲಿನ ಪ್ರತಿಯೊಂದು ಕಲ್ಲೂ ಕಥೆ ಹೇಳುತ್ತವೆ… ಆಯಾ ಕಾಲದ ವಾಸ್ತು ಶಿಲ್ಪ, ಜನಜೀವನ, ಸಾಮಾಜಿಕ ಪದ್ಧತಿಗಳು ಈ ಕಲೆಯಿಂದಲೇ ಅರಿವಾಗುತ್ತವೆ. ಪ್ರತಿಯೊಂದು ದೇವಸ್ಥಾನಕ್ಕೂ ಒಂದೊಂದು ಕಥೆಯಿದೆ.
ನಾನು ಈಗ ಹೇಳುತ್ತಿರುವುದು ಗದಗ್‌ನಿಂದ ಆಗ್ನೇಯಕ್ಕೆ 12 ಕಿಲೋ ಮೀಟರ್‌ ಸಾಗಿ ಸ್ವಲ್ಪ ಎಡಕ್ಕೆ ತಿರುಗಿದರೆ ತೆಂಗು ಬಾಳೆ ತಲೆದೂಗುವ ಲಕ್ಕುಂಡಿ ಎಂಬ ಪುಟ್ಟ ಗ್ರಾಮವಿದೆ. ಇದು ಪ್ರಾಚೀನಕಾಲದಲ್ಲಿ ಲೊಕ್ಕಿಯ ಗುಂಡಿ ಎಂದು ಪ್ರಸಿದ್ದವಾದ ಊರು. ಕಲ್ಯಾಣದ ಚಾಲುಕ್ಯರ, ಸೇವುಣರು, ದೇವಗಿರಿ ಯಾದವರ ಕಾಲದಿಂದಲೂ ಇದು ನಗರವಾಗಿ ಮೆರೆದಂಥ ಊರು. ಇದು ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಉಪರಾಜಧಾನಿ ಕೂಡ ಆಗಿತ್ತು ಎಂದು ತಿಳಿದು ಬರುತ್ತದೆ. ಲೊಕ್ಕಿ ಎಂದರೆ ಒಂದು ಬಗೆಯ ಸಸ್ಯ. ಗುಂಡಿ ಎಂದರೆ ತಗ್ಗಾದ ಪ್ರದೇಶ.
ಲಕ್ಕುಂಡಿಯನ್ನು ಶಾಸನಗಳ ಊರು ಎಂದರೆ ಕೂಡ ತಪ್ಪಾಗಲಾರದು. ಇಲ್ಲಿ 11-12ನೇ ಶತಮಾನಕ್ಕೆ ಸೇರಿದ ದೇಗುಲಗಳು ಹಾಗೂ ಶಾಸನಗಳು ನಾಡಿನ ಗತ ವೈಭವದ ಮೇಲೆ ಬೆಳಕು ಚೆಲ್ಲುತ್ತವೆ. ಶಾಸನಗಳಲ್ಲಿ ಬ್ರಹ್ಮನು ಅಮರಾವತಿ ಮತ್ತು ಲಕ್ಕುಂಡಿಯಲ್ಲಿ ಯಾವುದು ಶ್ರೇಷ್ಠ ಎಂದು ಪರೀಕ್ಷಿಸಿದಾಗ ಅಮರಾವತಿ ಹಗುರವಾಗಿದ್ದು, ಮೇಲೆ ಹೋಯಿತಂತೆ. ಭಾರವಾಗಿದ್ದ ಲಕ್ಕುಂಡಿಯು ಭೂಮಿಯ ಮೇಲೆ ಉಳಿಯಿತಂತೆ! ಅಮರಾವತಿಗಿಂತ ಲಕ್ಕುಂಡಿ ಹೆಚ್ಚು ತೂಕವುಳ್ಳದ್ದು ಹಾಗೂ ಶ್ರೇಷ್ಠವಾದದ್ದು ಎಂಬುದು ಈ ಶಾಸನದ ಸಾರ! ಇದು ಒಂದು ದಂತಕಥೆಯಾಗಿದ್ದರೂ ಇಂದ್ರನ ಅಮರಾವತಿಗಿಂತಲೂ ಲಕ್ಕುಂಡಿಯೇ ಶ್ರೇಷ್ಠ ಎಂಬ ನುಡಿಯಲ್ಲಿ ಹುದುಗಿರುವ ಅಭಿಮಾನ ಮೆಚ್ಚುವಂಥದು.
ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಟಂಕಸಾಲೆಯೂ ಆಗಿತ್ತಂತೆ. ಇಲ್ಲಿಯ ಟಂಕಸಾಲೆಯಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸುತ್ತಿದ್ದರು. ಆದ್ದರಿಂದಲೇ ಬಹುಶಃ ಇಲ್ಲಿಯ ಅನೇಕ ಶಾಸನಗಳಲ್ಲಿ ಲೊಕ್ಕಿಯಂಪೊಗಂದ್ಯಾಣ (ಲಕ್ಕುಂಡಿಯ ಬಂಗಾರದ ನಾಣ್ಯ) ಬಗ್ಗೆ ಪ್ರಸ್ತಾಪವಿದೆ. ಮುಂದೆ ಲಕ್ಕುಂಡಿಯು ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಉಪರಾಜಧಾನಿಯೂ ಆಗಿತ್ತು.
ಆದರೆ ನಾನು ಈಗ ಲಕ್ಕುಂಡಿಯ ಬಗ್ಗೆ ಹೇಳುತ್ತಿರುವುದು ಇದು ಪ್ರಾಚೀನ ದೇವಸ್ಥಾನಗಳ ನಾಡು ಎಂಬ ಹೆಗ್ಗಳಿಕೆವೆತ್ತ ಕಾರಣದಿಂದ. ಇಲ್ಲಿ 101 ಗುಡಿಗಳು ಇದ್ದವು ಎಂದು ಪ್ರಾಚೀನ ಶಾಸನಗಳಿಂದ ತಿಳಿದುಬರುತ್ತದೆ. ಈಗಲೂ ಇಲ್ಲಿ 50ಕ್ಕೂ ಹೆಚ್ಚು ದೇಗುಲಗಳಿವೆ. ಆದರೂ ಅವುಗಳಲ್ಲಿ ಸುಸ್ಥಿತಿಯಲ್ಲಿರುವುದು ಕೆಲವು ಮಾತ್ರ.
ಅಂದು ಕರ್ನಾಟಕದಲ್ಲಿ ಯಾವುದೋ ಬಂದ್ ಇದ್ದುದರಿಂದ ನಮ್ಮ ಯೋಜನೆಯ ಪ್ರಕಾರ ಲಕ್ಕುಂಡಿಯನ್ನು ನೋಡುವುದಾಗುವುದೋ ಇಲ್ಲವೋ ಎಂಬ ಹೆದರಿಕೆ ಇತ್ತು. ನಮ್ಮ ವಾಹನ ಬನದವ್ವನ ದರ್ಶನ ತೆಗೆದುಕೊಂಡು ಗದಗಿಗೆ ಬಂದಾಗ ಮೆರವಣಿಗೆ ನಡೆದಿತ್ತು. ನಾವು ನೇರವಾಗಿ ಲಕ್ಕುಂಡಿಗೇ ಹೊರಟೆವು. ನಮಗೆ ಎಲ್ಲಾ ದೇವಾಲಯಗಳನ್ನು ತೋರಿಸುವ ಒಬ್ಬ ಗೈಡ್ ಕೂಡ ದೊರೆತರು. ಅವರನ್ನು ನಾವು ಗದಗಿಗೆ ಬಿಡುವುದಾಗಿ ಹೇಳಿದಾಗ ಅವರು ಫಕ್ಕನೆ ಒಪ್ಪಿದ್ದರು.
ಅಲ್ಲಿ ಮೊದಲು ನಮಗೆ ಎದುರಾಗುವುದು ಬ್ರಹ್ಮಜಿನಾಲಯ. ಇದು ಇಲ್ಲಿಯ ಎಲ್ಲಾ ದೇವಾಲಯಗಳಲ್ಲೇ ಅತಿ ಪ್ರಾಚೀನವಾದಂಥದು. ಗದಾಯುದ್ಧದ ಖ್ಯಾತಿಯ ಕವಿ ರನ್ನನಿಗೆ ಆಶ್ರಯ ನೀಡಿದ್ದ ದಾನ ಚಿಂತಾಮಣಿ ಅತ್ತಿಮಬ್ಬೆ, 11ನೇ ಶತಮಾನದಲ್ಲಿ ಈ ಬಸದಿಯನ್ನು ಕಟ್ಟಿಸಿ ಸಾವಿರದ ಐನೂರು ಮುತ್ತುರತ್ನಖಚಿತ ಜಿನಬಿಂಬಗಳನ್ನು ದಾನ ಮಾಡಿದ್ದಳು. ಜೊತೆಗೆ ಈ ಜಿನಾಲಯಕ್ಕೆ ದತ್ತಿ ಬಿಡುವಂತೆ ಕಲ್ಯಾಣ ಚಾಲುಕ್ಯ ದೊರೆ ಇರಿವಬೆಡಂಗ ಸತ್ಯಾಶ್ರಯನಲ್ಲಿ ವಿನಂತಿಸಿಕೊಂಡಿದ್ದರು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಅತ್ತಿಮಬ್ಬೆಯ ಲಕ್ಕುಂಡಿ ಶಾಸನವು ಗ್ರಾಮದ ಜೈನಬಸದಿಯ ಹತ್ತಿರ ನೆಟ್ಟಿರುವ ಕಲ್ಲಿನಲ್ಲಿ ಬರೆಯಲ್ಪಟ್ಟಿದೆ. ಅತ್ತಿಮಬ್ಬೆಯ ಆಧ್ಯಾತ್ಮಿಕ ಬದುಕಿನ ಇಡೀ ಚಿತ್ರಣವು ಈ ಶಾಸನದಲ್ಲಿ ದೊರೆಯುತ್ತದೆ. ತನ್ನ ಗಂಡ ಮೃತ್ಯುವಶನಾದಾಗ ತನ್ನ ತಂಗಿಯೂ, ಸವತಿಯೂ ಆಗಿದ್ದ ಗುಂಡಬ್ಬೆ ಸತಿಯಾದಾಗ, ಪುತ್ರ ಅಣ್ಣಿಗದೇವನಿಗಾಗಿ ಸಾಯದೆ ಉಳಿದ ಅತ್ತಿಮಬ್ಬೆ, ಜೈನ ಧರ್ಮಾವಲಂಬಿಯಾಗಿ ಉಗ್ರ ದೀಕ್ಷೆ ವಹಿಸಿದ ತಪಸ್ವಿನಿ. ಅವಳು ಜೈನ ಧರ್ಮಕ್ಕೆ ಮಾಡಿದ ಸೇವೆ ಸ್ತುತ್ಯರ್ಹವಾದುದು. ಇದು ಸುಮಾರು ಕ್ರಿ.ಶ.1184-1175ರ ಕಾಲದ್ದು ಎಂದು ಗುರುತಿಸಲಾಗಿದೆ. ಈ ಶಾಸನವನ್ನು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಅಹವಮಲ್ಲ ಇಮ್ಮಡಿ ತೈಲಪ ಹಾಗೂ ಆತನ ಪುತ್ರ ಸತ್ಯಾಶ್ರಯ ಇರಿವಬೆಡಂಗರ ಕಾಲದಲ್ಲಿ ಬರೆಯಲಾಗಿದೆ. ಇದು ಮುಖ್ಯವಾಗಿ ಚಾಲುಕ್ಯ ಚಕ್ರವರ್ತಿಯ ದಂಡನಾಯಕನಾದ ‘ಪಡೆವಳ ತೈಲಪ’ನ ತಾಯಿ ದಾನಚಿಂತಾಮಣಿ ಅತ್ತಿಮಬ್ಬೆಯನ್ನು ಕುರಿತದ್ದು.
ಜೈನ ಬಸದಿಯಿಂದ ಸ್ವಲ್ಪ ದೂರ ಇರುವ ಕಾಶಿ ವಿಶ್ವನಾಥ ದೇವಾಲಯವು ಶಿಲ್ಪ ಕಲೆಯ ದೃಷ್ಟಿಯಿಂದ ಅತಿ ಉತ್ಕೃಷ್ಟವಾದಂಥದು. ಗರ್ಭಗುಡಿಯ ಮುಂದಿನ ಪಡಶಾಲೆಯ ತೊಲೆಯ ಕಂಬದಲ್ಲಿ ಇಮ್ಮಡಿ ತೈಲಪನ ಎರಡು ಶಾಸನಗಳಿವೆ. ಕಲ್ಯಾಣ ಚಾಲುಕ್ಯರ ವಾಸ್ತು ವೈಭವವನ್ನು ಈ ದೇಗುಲದಲ್ಲಿ ಕಾಣಬಹುದು. ಕಾಶಿ ವಿಶ್ವೇಶ್ವರ ದೇವಾಲಯವು ದ್ವಿಕೂಟವಾಗಿದ್ದು ಎರಡು ಗರ್ಭಗೃಹ, ಅರ್ಧಮಂಟಪ ಹಾಗೂ ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗೃಹದ ದ್ವಾರ ಬಂಧವು ಅನೇಕ ಕೆತ್ತನೆಗಳಿಂದ ಕೂಡಿದ್ದು ದ್ವಾರದ ಎರಡೂ ಕಡೆಗಳಲ್ಲಿ ವಾದ್ಯ ವಾದಕರ, ನರ್ತಕಿಯರ ಹಾಗೂ ಶಿಲಾಬಾಲಿಕೆಯರ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಅರ್ಧಮಂಟಪ ದ್ವಾರದ ಎರಡೂ ಕಡೆಗಳಲ್ಲಿ ಅಲಂಕೃತ ಕಂಬಗಳಿವೆ. ನವರಂಗದ ಮಧ್ಯ ಭಾಗದಲ್ಲಿರುವ ನಾಲ್ಕು ಕಂಬಗಳಲ್ಲಿ ಶಿವಪುರಾಣದ ಕಥೆಗಳನ್ನು ಅಭಿವ್ಯಕ್ತಗೊಳಿಸುವ ಅನೇಕ ಉಬ್ಬು ಶಿಲ್ಪಗಳಿವೆ. ಹೊರಭಾಗದ ಗೋಡೆಯಲ್ಲಿ ಶಿವಪುರಾಣದ ಅನೇಕ ದೃಶ್ಯಗಳನ್ನು ಕೆತ್ತಲಾಗಿದ್ದು, ಆಕರ್ಷಕವಾದ ನಟರಾಜ, ನರ್ತನ ಭಾವಗಳನ್ನು ವ್ಯಕ್ತಪಡಿಸುವ ಮದನಿಕೆಯರ ಹಲವಾರು ಶಿಲ್ಪಗಳಿವೆ. ಅಮೋಘ ಚಿತ್ರಪಟ್ಟಿಕೆ ಹಾಗೂ ಬಳ್ಳಿಗಳನ್ನು ವಿವರವಾಗಿ ಬಿಡಿಸಿದ ಉನ್ನತ ಶಿಲ್ಪ ಕಲೆಯಿಂದ ದೇವಾಲಯದ ಪ್ರವೇಶ ದ್ವಾರ ನೋಡುಗರನ್ನು ಬೆರಗುಗೊಳಿಸುತ್ತದೆ.
ಕಾಶಿ ವಿಶ್ವನಾಥನ ದೇಗುಲದ ಹಿಂಭಾಗದಲ್ಲಿ ಎತ್ತರವಾದ ಜಗತಿಯ ಮೇಲೆ ನನ್ನೇಶ್ವರ ದೇವಾಲಯವಿದೆ. ಇಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಮುಂಭಾಗದಲ್ಲಿ ತೆರೆದ ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ನವರಂಗಕ್ಕೆ ಪೂರ್ವ ಹಾಗೂ ದಕ್ಷಿಣದಿಂದ ಎರಡು ಪ್ರವೇಶದ್ವಾರಗಳಿವೆ. ನವರಂಗದ ಕಂಬಗಳ ತುಂಬ ನುಣುಪಾಗಿದ್ದು ನೋಡುವವರ ಮುಖ ಪ್ರತಿಫಲಿಸಿವಂತಿವೆ. ಹೊರಗೋಡೆಯಲ್ಲಿ ಕೋಷ್ಠ ಪಂಜರಗಳಿವೆ. ನವರಂಗಕ್ಕಿರುವ ಮಹಾದ್ವಾರಬಂಧವು ಅಲಂಕಾರಿಕ ವಿಪುಲ ಕೆತ್ತನೆಗಳನ್ನು ಹೊಂದಿದೆ. ಈ ದೇವಾಲಯದ ಮುಖ ಮಂಟಪದ ಕಂಬಗಳು ಬಹಳ ಆಕರ್ಷಕವಾಗಿವೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಅಲ್ಲದೆ ಇಲ್ಲಿ ಮಲ್ಲಿಕಾರ್ಜುನ, ವಿರೂಪಾಕ್ಷ, ಲಕ್ಷ್ಮೀ ನಾರಾಯಣ, ಸೋಮೇಶ್ವರ, ವೀರಭದ್ರ, ಚಂದ್ರಮೌಳೀಶ್ವರ, ನೀಲಕಂಠೇಶ್ವರ ಮೊದಲಾದ ದೇವಾಲಯಗಳಿವೆ.
800 ವರ್ಷಗಳ ಹಿಂದಿನ ಸೋಪಾನ ಅಥವಾ ಮೆಟ್ಟಿಲು ಬಾವಿಗಳು ಈ ಊರಿನ ಇನ್ನೊಂದು ಮುಖ್ಯ ಆಕರ್ಷಣೆ. ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಈ ಬಾವಿಗಳು ಪ್ರಸಿದ್ದವಾಗಿವೆ. ಛಟೀರ ಬಾವಿ, ಮುಸುಕಿನ ಬಾವಿ ಮೊದಲಾದವು ಅತ್ಯಾಕರ್ಷಕವಾಗಿವೆ. ಚೌಕಾಕಾರ, ಆಯತಾಕಾರವಾಗಿರುವ ಈ ಬಾವಿಗಳ ತಳಭಾಗದಿಂದ ಮೇಲ್ಭಾಗದ ವರೆಗೆ ಬಂದಂತೆಲ್ಲಾ ವಿನ್ಯಾಸ ಬದಲಾಗುತ್ತಾ ಹೋಗುತ್ತದೆ. ಬಾವಿಯ ಗೋಡೆಗಳಲ್ಲಿ ಪುಟ್ಟ ಗೋಡೆಗಳನ್ನು ಹೊಂದಿರುವ ದೇವ ಕೋಷ್ಠಕಗಳಿದ್ದು, ಬಹುಶಃ ಮೊದಲು ಅಲ್ಲಿ ಮೂರ್ತಿಗಳಿದ್ದುವೇನೋ. ಆದರೆ ಈಗ ಅಲ್ಲಿ ಯಾವುದೇ ಮೂರ್ತಿಗಳೂ ಕಂಡು ಬರುವುದಿಲ್ಲ. ಬಾವಿಗೆ ಸುಂದರವಾದ ಮೆಟ್ಟಿಲುಗಳಿವೆ. ಒಳಗೆ ಇಳಿದು ಆ ಬಾವಿಯ ಸೌಂದರ್ಯವನ್ನು ಸನಿಹದಿಂದ ಆಸ್ವಾದಿಸಬಹುದಾಗಿದೆ.
ನೂರೊಂದು ಗುಡಿಗಳ ನಗರ ಲಕ್ಕುಂಡಿಯ
ಬ್ರಹ್ಮ ಜಿನಾಲಯದ ಎದುರಿಗೆ ಪ್ರಾಚ್ಯ ವಸ್ತು ಇಲಾಖೆಯ ವಸ್ತು ಸಂಗ್ರಹಾಲಯವಿದೆ. ಇದರಲ್ಲಿ ತೀರ್ಥಂಕರ, ಸೂರ್ಯದೇವ, ಯಕ್ಷ, ಕಾರ್ತಿಕೇಯ, ವಿಷ್ಣು, ಲಜ್ಜಾಗೌರಿ ಮೊದಲಾದ ವಿಗ್ರಹಗಳನ್ನು ಸಂಗ್ರಹಿಸಿಡಲಾಗಿದೆ. ಅಪರೂಪದ ಶಾಸನಗಳನ್ನೂ ಸಂಗ್ರಹಿಸಿಡಲಾಗಿದೆ. ಅಲ್ಲದೆ ಎಲ್ಲಾ ದೇವಸ್ಥಾನಗಳ ಬಗ್ಗೆ ಕೂಡ ಮಾಹಿತಿ ದೊರೆಯುತ್ತದೆ. ನಾನು ಅವರ ಅನುಮತಿ ಪಡೆದು ಎಲ್ಲಾ ಮೂರ್ತಿಗಳ, ಕೆಲವು ಫಲಕಗಳ ಫೋಟೊ ಕ್ಲಿಕ್ಕಿಸಿಕೊಂಡಿದ್ದೆ.
ಗದಗ್‌ ಜಿಲ್ಲೆಯಲ್ಲಿ ಇನ್ನೂ ಇತರ ಪ್ರವಾಸಿ ತಾಣಗಳು ಕೂಡ ಇವೆ.
ಗದಗಿನಿಂದ ಈಶಾನ್ಯಕ್ಕೆ 27 ಕಿಲೋ ಮೀಟರು ದೂರದಲ್ಲಿರುವ ನರೇಗಲ್ಲ ಗ್ರಾಮವು ಕಲ್ಯಾಣ ಚಾಲುಕ್ಯರ ಶೈಲಿಯನ್ನು ಪ್ರತಿನಿಧಿಸುವ ಸೋಮೇಶ್ವರ, ತ್ರಿಪುರಾಂತಕೇಶ್ವರ, ಕಲ್ಲೇಶ್ವರ, ಚಂದ್ರಮೌಳೀಶ್ವರ, ಮೊದಲಾದ ಸುಂದರ ದೇವಾಲಯಗಳನ್ನು ಹೊಂದಿದೆ. ಈ ಪೈಕಿ ಸೋಮೇಶ್ವರ ದೇವಾಲಯದ ಗಾತ್ರದಲ್ಲೂ, ಸೌಂದರ್ಯದಲ್ಲೂ ಮಹತ್ವದ್ದಾಗಿದೆ. ಕ್ರಿ.ಪೂ. 950 ರಲ್ಲಿ ನಿರ್ಮಾಣವಾದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯಗಳಲ್ಲಿಯೇ ಅತಿ ದೊಡ್ಡದಾಗಿದೆ. ಶ್ರೀ ಅನ್ನದಾನೇಶ್ವರ ಮಠವು ಕೂಡ ಅತ್ಯಂತ ಪ್ರಸಿದ್ಢವಾಗಿರುವಂಥದು. ವಿಜಯಪುರದ ಗೋಲಗುಮ್ಮಟದಂಥದೇ ಶೈಲಿಯ ಒಂದು ದರ್ಗಾ ಕೂಡ ಇಲ್ಲಿದೆ.
ಗದಗಿನಿಂದ ಆಗ್ನೇಯಕ್ಕೆ 20 ಕಿಲೋ ಮೀಟರ್‌ ದೂರದಲ್ಲಿ ಮುಂಡರಗಿ ತಾಲೂಕಿನ ಡಂಬಳ. ಇಲ್ಲಿಯೂ ಕೆಲವು ಪ್ರಾಚೀನ ದೇವಾಲಯಗಳಿವೆ. 11-12ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ಒಂದು ದೇವಾಲಯವು ಇಲ್ಲಿಯ ಒಂದು ವಿಶೇಷವಾದ ರಚನೆಯಾಗಿದೆ. ತಳವಿನ್ಯಾಸ ಮತ್ತು ಗೋಪುರದ ಭಾಗಗಳನ್ನು ಹಂತ ಹಂತವಾಗಿ ನಿರ್ಮಿಸಲಾಗಿದ್ದು, ಈ ದೇವಾಲಯದ ಗರ್ಭಗೃಹ ಅರ್ಧ ಮಂಟಪ ಹಾಗೂ ಎರಡು ಮುಖ ಮಂಟಪಗಳನ್ನು ಹೊಂದಿದೆ.
ಗಜೇಂದ್ರಗಡವು ಕೂಡ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ರೋಣ ತಾಲೂಕಿನಲ್ಲಿ ರೋಣ- ಕುಷ್ಟಗಿ ಹೆದ್ದಾರಿಯಲ್ಲಿ ಇವೆರಡಕ್ಕೂ ಸಮಾನ ಅಂತರದಲ್ಲಿದೆ. ಇಲ್ಲಿ ಬೆಟ್ಟದ ಮೇಲೆ ಛತ್ರಪತಿ ಶಿವಾಜಿ ಕಟ್ಟಿಸಿದ ಗಜೇಂದ್ರಗಡದ ಕೋಟೆ ಇದೆ. ಕೋಟೆಯ ಒಳ ಭಾಗದಲ್ಲಿ ಮದ್ದಿನ ಮನೆ ಹಾಗೂ ಕೊಳಗಳಿವೆ. ಇಲ್ಲಿ ಕೆಲವು ತೀರ್ಥಗಳು ಹಾಗೂ ಗವಿಗಳಿವೆ.
ಗದಗೂ ಕೂಡ ಶಿಲ್ಪಕಲೆಯ ಬೀಡೇ ಆಗಿದೆ‌. ಗದುಗಿನ ವೀರನಾರಾಯಣನ ದೇವಸ್ಥಾನದ ಬಗ್ಗೆ ಯಂತೂ ಕೇಳದ ಕನ್ನಡಿಗನೇ ಇಲ್ಲವೆಂದು ಹೇಳಬಹುದು. ನಮ್ಮ ಕುಮಾರವ್ಯಾಸನೆಂದು ಹೆಸರಾದ ನಾರಣಪ್ಪನು ಇದೇ ದೇವಾಲಯದ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಒದ್ದೆಯಲ್ಲಿ ಬಂದು ದೇವಾಲಯದ ಒಂದು ಕಂಬಕ್ಕೊರಗಿ ಕುಳಿತು ತನ್ನ ಪ್ರಸಿದ್ಧ ಗ್ರಂಥವಾದ ಕರ್ಣಾಟ ಭಾರತ ಕಥಾಮಂಜರಿಯನ್ನು ಬರೆದ! ತ್ರಿಕೂಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಸರಸ್ವತಿ ದೇವಾಲಯ ಮತ್ತೆ ಬೇರೆಲ್ಲೂ ಕಾಣಸಿಗದು. ಆದರೆ ಹಳೆಯ ಸರಸ್ವತಿ ಮೂರ್ತಿಯನ್ನು ಕೇಡಿಗರು ಭಂಗಿಸಿದ್ದರಿಂದ ಇನ್ನೊಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಇದೇ ಜಿಲ್ಲೆಯ ಪುಲಿಗೆರೆ ಅಂದರೆ ಈಗಿನ ಲಕ್ಷ್ಮೇಶ್ವರದ ಪ್ರಾಚೀನ ಪ್ರಸಿದ್ಧ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಇದರ ಜೀರ್ಣೋದ್ಧಾರವನ್ನು ಶ್ರೀಮತಿ ಸುಧಾ ಮೂರ್ತಿಯವರು ಸ್ವತಃ ಕೈಗೊಂಡಿದ್ದಾರೆ. ಸಮಯವಾದಾಗ ಗದಗ ಜಿಲ್ಲೆಯ ಈ ಎಲ್ಲಾ ಐತಿಹಾಸಿಕ ತಾಣಗಳಿಗೂ ಪ್ರತಿಯೊಬ್ಬ ಕನ್ನಡಿಗನೂ ಭೆಟ್ಟಿ ಕೊಡಲೇಬೇಕು. ಅಂದರೇ ಜನ್ಮ ಸಾರ್ಥಕವಾದೀತು. . ಇಲ್ಲಿ ಇತಿಹಾಸವೂ ಇದೆ, ದೈವಭಕ್ತಿಯ ಸಾಕಾರವೂ ಇದೆ!

Leave a Reply