ಶಿಥಿಲಗೊಳ್ಳುತ್ತಿರುವ ತಾಯಿ-ಮಕ್ಕಳ ಸಂಬಂಧ

ಶಿಥಿಲಗೊಳ್ಳುತ್ತಿರುವ ತಾಯಿ-ಮಕ್ಕಳ ಸಂಬಂಧ

ರೊಟ್ಟಿ ಮಾಡಬೇಕೇ? ರೋಟಿ ಮೇಕರ್ ಇದೆ. ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ, ಪ್ರತಿ ದಿನವೂ ಒಮ್ಮೆ ಬಿಸಿ ಅಡುಗೆ ಮಾಡಬೇಕೆ? ವಾರದಶಲ್ಲಿ ಒಂದೆರಡು ಬಾರಿ ಮಾಡಿದರೆ ಸಾಕು, ಮೈಕ್ರೋ ವೇವ್ ಇದೆಯಲ್ಲಾ? ಊಟಕ್ಕೆ ಕೂಡ್ರುವಾಗ ಬಿಸಿ ಮಾಡಿದರಾಯಿತು! ಹಬೆಯಾಡುವ ಬಿಸಿ ಅಡುಗೆ ರೆಡೀ! ಬಟ್ಟೆ ಒಗೆಯುವುದು, ಕಸ ತೆಗೆಯುವುದು, ಧೂಳು ಜಾಡಿಸುವುದು, ನೆಲ ಒರೆಸುವುದು… ಎಲ್ಲದಕ್ಕೂ ಮಶಿನ್ ಗಳು. ಅಷ್ಟೇ ಏಕೆ, ಈಗಿನ ರೋಬೋಟ್ ಗಳು ವಾತ್ಸಲ್ಯ ತೋರುವುದನ್ನು ಒಂದನ್ನು ಬಿಟ್ಟು ಬೇರೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತವೆ. ಕುಳಿತಲ್ಲೇ ಎಲ್ಲವನ್ನೂ ಆರ್ಡರ್ ಮಾಡಬಹುದು. ಅಡುಗೆಯಾದರೂ ಮಾಡುವುದೇಕೆ? ಸ್ವಿಗ್ಗಿ, ಮೆಕ್ಡೊನಾಲ್ಡ್ ಇಲ್ಲವೆ? ಹೀಗೆ ಎಲ್ಲವೂ ಯಾಂತ್ರೀಕೃತ.
ಇದು ಹಿರಿಯರದಾದರೆ, ಮಕ್ಕಳು ಕೂಡ ಹಿಂದೆ ಬಿದ್ದಿಲ್ಲ. ಮಕ್ಕಳು ಆಟವಾಡುವುದು ವೀಡಿಯೊ ಗೇಮ್. ಇಂಟರ್ನೆಟ್ ಮೇಲೆ ಅವರಿಗಾಗಿಯೆ ಆಟದ ಚ್ಯಾನೆಲ್ ಗಳಿವೆ. ಅವರಿಗೆ ಆಡಲು ಮೈದಾನಗಳೂ ಬೇಕಿಲ್ಲ, ಗೆಳೆಯರೂ ಬೇಕಾಗಿಲ್ಲ. ಇದರಿಂದಾಗಿ ಮಕ್ಕಳು ಒಂಟಿತನದ ಒತ್ತಡದಿಂದಲೂ ಬಳಲುವುದುಂಟು. ಅದಕ್ಕೆ ಎಂದೆ ಡಾಕ್ಟರ್ ಇದ್ದಾರಲ್ಲ? ಅವರು ಕೌನ್ಸೆಲಿಂಗ್ ಮಾಡುತ್ತಾರೆ. ಬಹಳಷ್ಟು ಹಣ ಖರ್ಚು ಮಾಡಿ ವೈದ್ಯಕೀಯ ವಿದ್ಯೆಯನ್ನು ಕಲಿತಿರುವುದೇಕೆ!
ಮೊದಲೆಲ್ಲ ನಾವು ಅಜ್ಜಿಯ ಕಥೆ ಕೇಳಲು ಉತ್ಸುಕರಾಗಿರುತ್ತಿದ್ದೆವು. ಸ್ಕೂಲಿಗೆ ರಜೆಯಾದೊಡನೆಯೆ ಆಜ್ಜಿಯ ಊರಿಗೆ ಹೋಗಲು ಚೀಲ ರೆಡೀ! ರಾತ್ರಿ ಆಗುವುದನ್ನೇ ಕಾಯುತ್ತಿದ್ದೆವು, ಈಗಿನ ಮಕ್ಕಳಿಗೆ ಈಗ ಅದರಲ್ಲಿ ಆಸಕ್ತಿಯೂ ಇಲ್ಲ, ಅಷ್ಟೇ ಏಕೆ, ಅಜ್ಜ-ಅಜ್ಜಿಯರೆಲ್ಲರೂ ಈಗ ಕೇರ್ ಆಫ್ ವೃದ್ಧಾಶ್ರಮ. ಅವರಿಗೂ ಕೂಡ ಮನೆಯಲ್ಲಿ ಎಲ್ಲರ ಜೊತೆಗೆ ಇದ್ದು ಅವರ ಉದಾಸೀನತೆಗೆ ತುತ್ತಾಗಿ ಮೂಲೆಯಲ್ಲಿಯ ಫರ್ನಿಚರುಗಳಂತೆ ಬಾಳುವುದಕ್ಕಿಂತಲೂ ತಮ್ಮ ಓರಗೆಯವರೊಂದಿಗೆ ತಮ್ಮ ಮನಸ್ಸಿಗೆ ಖುಶಿ ಕೊಡುವ ರೀತಿಯಲ್ಲಿ ಬಾಳುವುದೇ ಹಿತವೆನ್ನಿಸುತ್ತದೆ. ವೃದ್ಧಾಶ್ರಮಗಳೂ ಕೇವಲ ಊಟ-ತಿಂಡಿ ಮುಂತಾದ ಬೇಸಿಕ್ ಬೇಡಿಕೆಗಳಿಗಷ್ಟೆ ಅಲ್ಲ, ಎಲ್ಲ ರೀತಿಯ ಕೋ ಎಂಟರ್ಟೇನ್ಮೆಂಟ್ಗಳಿಂದ ವೃದ್ಧರನ್ನು ರಂಜಿಸುತ್ತ ಮನೆಗಳಿಗಿಂತ ಆಪ್ತವಾದ ನಮ್ಮ ಹಳೆಯ ಶಾಲೆಗಳಲ್ಲಿಯ ಓರಿಗೆಯವರೊಂದಿಗೆ ಕಳೆದಂಥ ಬಿಂದಾಸ್ ವಾತಾವರಣವನ್ನು ಸೃಷ್ಟಿ ಮಾಡುತ್ತಿವೆ. ಹೀಗಿರುವಾಗ ಇನ್ನು ಮನುಷ್ಯ ಮನುಷ್ಯರಲ್ಲಿಯ ಸಂಬಂಧವೇಕಾಗಿ ಬೇಕಾದೀತು? Necessity is the mother of all relations. ಅವಲಂಬನೆಯೇ ಎಲ್ಲ ಬಂಧುತ್ವಗಳ ತಾಯಿ. ಈ ವೈಜ್ಞಾನಿಕ ಯುಗದಲ್ಲಿ ಮಗುವನ್ನು ಧರೆಗೆ ತರಲೂ ಕೂಡ ತಾಯಗರ್ಭದ ಅಗತ್ಯ ಕಡಿಮೆಯಾಗುತ್ತಿದೆ. ಐವಿಎಫ್, ಟೆಸ್ಟ್ ಟ್ಯೂಬ್ ಬೇಬಿ, ಇತ್ಯಾದಿಗಳಿವೆಯಲ್ಲ! ಒಟ್ಟಿನಲ್ಲಿ ಆಧುನಿಕತೆಯ ಪರಿಣಾಮವಾಗಿ ಮಾನವೀಯ ಸಂಬಂಧಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ.
ತಮ್ಮ ವೈಭವೋಪೇತ ಜೀವನದ ಅಗತ್ಯಗಳನ್ನು ಪೂರೈಸುವುದಕ್ಕಾಗಿ, ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕಾಗಿ ತಾಯಿ ತಂದೆಯರು ಹಣ ಗಳಿಸುವ ಪೈಪೋಟಿಯಲ್ಲಿ ತೊಡಗಿ ಮಕ್ಕಳೊಂದಿಗೆ ಸಮಯ ಕಳೆಯಲು ಅಸಮರ್ಥರಾಗಿದ್ದಾರೆ. ಮಕ್ಕಳಿಗೆ ಆಧುನಿಕ ಯುಗದ ವಸ್ತುಗಳನ್ನು ಕೊಡಿಸಿ ಬಿಟ್ಟರಾಯಿತು, ಅವರೂ ಸುಖಿಗಳು, ತಾವೂ ನಿಶ್ಚಿಂತರು ಎಂದುಕೊಂಡಿದ್ದಾರೆ. ಮಕ್ಕಳೂ ಕೂಡ ಇದರಲ್ಲಿಯೆ ಸುಖವನ್ನು ಅರಸಿದ್ದಾರೆ. ಶಾಲೆಯಲ್ಲಿ ಕೂಡ ಕೇವಲ ವಿಷಯಗಳ ಅಧ್ಯಯನ, ಹೆಚ್ಚು ಅಂಕ ಗಳಿಸುವ ತಂತ್ರಗಳು ಇತ್ಯಾದಿಗಳ ಅಧ್ಯಯನವಾಗುತ್ತದೆಯೇ ಹೊರತು, ಸಂಸ್ಕೃತಿ-ಸಂಬಂಧಗಳ ಗಟ್ಟಿತನದ ಬಗೆಗಲ್ಲ. ಗುರುಗಳೂ ನಿರ್ಲಿಪ್ತರಾಗುತ್ತಿದ್ದಾರೆ. ಏಕೆಂದರೆ ಅವರಿಗೂ ಈಗ ರಿಸ್ಟ್ರಿಕ್ಶನ್ಸ್ ಬಹಳ. ಪಾಲಕರಿಗೆ ತಮ್ಮ ಮಕ್ಕಳು ಪಟಪಟನೆ ಇಂಗ್ಲಿಷ್ ಮಾತಾಡಬೇಕು, ಸಾಹಿತ್ಯ ಜ್ಞಾನದ ಅಗತ್ಯವೇನಿಲ್ಲ . ಭಾಷಾ ವಿಷಯದಲ್ಲಿ ಜಸ್ಟ್ ಪಾಸ್ ಸಾಕು. ಆದರೆ ವಿಜ್ಞಾನ ವಿಷಯಗಳಲ್ಲಿ ಮಾತ್ರ 100% ಅಂಕಗಳು ಬೇಕೇ ಬೇಕು. ಮಕ್ಕಳ ಮೇಲೆ ಕೂಡ ಇದೇ ಒತ್ತಡ. ಹೀಗಾಗಿ ಈ ಸ್ಪರ್ಧೆಯಲ್ಲಿ ಮಕ್ಕಳ ಮನೋಲೋಕ ಹಾಳಾಗುತ್ತಿದೆ.
ಎಲ್ಲದರಲ್ಲೂ ಪಾಶ್ಚಿಮಾತ್ಯರನ್ನು ಅನುಕರಿಸುತ್ತ, ಅವರಂತೆಯೆ ಮದರ್ಸ್ ಡೇ, ಫಾದರ್ಸ್ ಡೇ, ಆ ಡೇ ಈ ಡೇ ಎಂದು ವರ್ಷಕ್ಕೊಂದು ದಿನವನ್ನು ಸಂಬಂಧವನ್ನು ವೈಭವೀಕರಿಸಿ ಆಚರಿಸುತ್ತ ಮುಂದಿನ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸುವ ಯುವಪೀಳಿಗೆಯಿಂದಾಗಿ ಸಂಬಂಧಗಳು ಪೊಳ್ಳಾಗುತ್ತಹೊರಟಿವೆ.
ಇದು ಸಂಬಂಧಗಳ ಕೇವಲ ಒಮ್ಮುಖದ ದರ್ಶನ. ಎಲ್ಲಾ ಸಂಬಂಧಗಳಲ್ಲಿಯೂ ಯಾಂತ್ರಿಕತೆಯೇನೋ ಕಂಡುಬಂದಿದ್ದರೂ ತಾಯಿ ಮಗುವಿನ ಸಂಬಂಧದಲ್ಲಿ ಅಂಥ ಯಾಂತ್ರಿಕತೆ ಇನ್ನೂ ಕಂಡುಬಂದಿಲ್ಲವೆಂದು ಕೆಲವು ಬಾರಿ ಅನುಭವಕ್ಕೆ ಬರುತ್ತದೆ. ಅದೂ ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಲ್ಲಿ. ಮೊದಲಿನ ಕಾಲದಲ್ಲಿ ಹೆಣ್ಣು ಮನೆಗೆಲಸಗಳಲ್ಲಿ, ಮಕ್ಕಳನ್ನು ಹೆರುವುದರಲ್ಲಿಯೇ ದಿನಗಳೆಯುತ್ತಿದ್ದಳು. ಏಳೆಂಟು ಮಕ್ಕಳನ್ನು ಹೆರುವುದು, ಅವುಗಳ ಲಾಲನೆ ಪಾಲನೆ , ಹಿರಿಯರ ಆರೈಕೆ ಇವುಗಳಲ್ಲಿಯೇ ಅವಳ ದಿನ ಕಳೆದುಹೋಗುತ್ತಿತ್ತು. ಅವಳಿಗೆ ಸರಿಯಾದ ಶಿಕ್ಷಣ ಇರುತ್ತಿರಲಿಲ್ಲ, ಮನೆಯಿಂದ ಹೊರಗೆ ಹೋಗಿ ಗೊತ್ತಿರಲಿಲ್ಲ, ಹಣ ಗಳಿಸುವ ಜವಾಬ್ದಾರಿಯೂ ಇರಲಿಲ್ಲ. ತಾಯಿ ತನ್ನ ಮಗುವಿಗೆ ತನ್ನ ವಾತ್ಸಲ್ಯವನ್ನು ತೋರ್ಪಡಿಸುವುದು ಕೇವಲ ಆಹಾರದ ಮೂಲಕವೇ! ರುಚಿ ರುಚಿಯಾದ ಅಡಿಗೆ ಮಾಡಿ ಹಾಕಿದರೆ ತನ್ನ ಕರ್ತವ್ಯ ಮುಗಿಯಿತೆಂದುಕೊಳ್ಳುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಸುಶಿಕ್ಷಿತ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಒಳ್ಳೆಯ ಶಿಕ್ಷಣ, ಆರಾಮದಾಯಕ ಜೀವನ ಇವುಗಳನ್ನು ಈಗ ಮಧ್ಯಮ ವರ್ಗದ ಜನರು ಕೂಡ ಮಕ್ಕಳಿಗೆ ನೀಡಬಯಸುತ್ತಾರೆ. ಕೇವಲ ಪ್ರೀತಿಯೊಂದೇ ಉಣ್ಣಲು, ಉಡಲು, ಹಾಸಿ ಹೊದೆಯಲು ಸಾಲದು. ಮಕ್ಕಳಿಗೆ ಬೆಚ್ಚನೆಯ ಸೂರು, ಹೊಟ್ಟೆ ತುಂಬಾ ಊಟ ಎಷ್ಟು ಅವಶ್ಯಕವೋ ಅಷ್ಟೇ ಒಳ್ಳೆಯ ಶಿಕ್ಷಣದ ಅವಶ್ಯಕತೆಯೂ ಇದೆ. ಇದೆಲ್ಲಾ ಯೋಚಿಸಿದ ಮಹಿಳೆಯರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸುರಕ್ಷಿತ ಜೀವನಶೈಲಿ ಇವುಗಳನ್ನು ಕೊಡುವುದಕ್ಕಾಗಿ ಹಣದ ಅವಶ್ಯಕತೆ ಇರುವುದರಿಂದ ಕೇವಲ ಮನೆಯ ಒಪ್ಪ ಓರಣಗಳಿಗಾಗಿ, ಮನೆಗೆಲಸ ಗಳಿಗಾಗಿ ಸಮಯವನ್ನು ಹಾಳು ಮಾಡದೆ ಪತಿಗೆ ಹೆಗಲೆಣೆಯಾಗಿ ದುಡಿಯುತ್ತಾರೆ. ಹಣವನ್ನು ಗಳಿಸಲು ಹೊರಗೆ ಹೋಗಬೇಕೆಂದೇನಿಲ್ಲ, ತಮಗೆ ಬರುವ ವಿದ್ಯೆಯನ್ನು ಹಣಗಳಿಕೆಯ ಸಾಧನವಾಗಿ ಬಳಸುತ್ತಾರೆ, ಬೆಳೆಸುತ್ತಾರೆ. ಇದರಿಂದಾಗಿ ಮನೆಗೆಲಸಗಳು ಭಾರವಾಗುತ್ತವೆ. ಇಡೀ ದಿನ ಹಿರಿಯರ ಯೋಗಕ್ಷೇಮ ತೆಗೆದುಕೊಳ್ಳುತ್ತ ಕೂಡ್ರುವುದೂ ಕಠಿಣವಾಗುತ್ತದೆ. ಯಂತ್ರಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲಸದವರ ಮೇಲೆ ಅವಲಂಬನೆ ಎಂದರೆ ಒಮ್ಮೊಮ್ಮೆ ಅವರು ಕೈಕೊಟ್ಟಾಗ ತೊಂದರೆಯಾಗುತ್ತದೆ. ಯಂತ್ರ ಹಾಗಲ್ಲವಲ್ಲ. ಇನ್ನು ಮಕ್ಕಳ ಆಟದ ವಿಷಯಕ್ಕೆ ಬಂದರೆ, ಒಮ್ಮೊಮ್ಮೆ ಮಕ್ಕಳು ಶಾಲೆಯಿಂದ ಪಾಲಕರಿಗಿಂತ ಮೊದಲೇ ಮನೆಗೆ ಬರುತ್ತಾರೆ. ಅವರಿಗೆ ಒಂಟಿತನ ಕಾಡಬಹುದು. ಅದಕ್ಕಾಗಿ ಈ ವೀಡಿಯೊ ಗೇಮ್ಸ್. ಈಗಿನ ಹುಡುಗರಿಗೆ ಸ್ನೇಹಿತರು ಕಡಿಮೆ. ಎಲ್ಲರೂ ಅಭ್ಯಾಸ, ಟ್ಯೂಶನ್ ಇವುಗಳಲ್ಲಿ ಬಿಜಿ. ಆಡಲು ಮೈದಾನಗಳಾದರೂ ಎಲ್ಲಿ ಉಳಿದಿವೆ? ಎಲ್ಲಾ ಕಡೆಗೂ ಕಾಂಕ್ರೀಟ್ ಕಾಡು! ಹಳ್ಳಿ ಗಳೂ ಕೂಡ ಇದರಿಂದ ಹೊರತಾಗಿ ಉಳಿದಿಲ್ಲ.
ಹಾಗೆ ನೋಡಿದರೆ ಮೊದಲಿನ ಕಾಲದ ತಾಯಂದಿರಿಗಿಂತ ಈಗಿನ ಕಾಲದ ತಾಯಿ ತಂದೆಯರೇ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಅವರ ಸಣ್ಣಪುಟ್ಟ ಬೇಡಿಕೆಗಳಿಗೆ ಸ್ಪಂದಿಸುತ್ತಾರೆ. ಎಂದಾಗ ಸಂಬಂಧ ಶಿಥಿಲಗೊಳ್ಳುವುದೆಂತು? ಇನ್ನು ತಾಯಿ ಮಗುವಿನ ನಡುವಿನ ಪ್ರೀತಿಯ ಸಂಬಂಧ? ಅದು ಎಂದಿಗೂ ಬದಲಾಗದು. ತೋರ್ಪಡಿಸುವ ರೀತಿ ಬದಲಾದೀತು ಅಷ್ಟೇ. ಇಂದಿನ ತಾಯಿ ಸ್ವಯಂ ಪೂರಿತಳು!

ಮಾಲತಿ ಮುದಕವಿ

Leave a Reply