ಶ್ರಾವಣ ಬಂತು

ಶ್ರಾವಣ ಬಂತು

ಶ್ರಾವಣ ಬಂತು ಆನಂದ ತಂತು
ಹಬ್ಬ ಹರಿದಿನಗಳ ಶುಭವೇಳೆ ತಂತು
ಕಡಬು ಹೋಳಿಗೆ ಪಾಯಸಗಳ ಆಗರ
ಮನೆ ಮನೆಯಲೂ ಆನಂದದ ಸಾಗರ

ನೀಲಾಕಾಶ ಬದಲಾಯಿತು
ಮೈಬಣ್ಣ ಕಪ್ಪಾಯಿತು
ಕಪ್ಪು ಮೈಯ್ಯಲಿ ಮೇಘಗಳಾವೃತ
ಗಿರಿಪರ್ವತಗಳಿಗೂ ಮುತ್ತನಿಕ್ಕುತ

ಸುರಿಸುತಿಹ ಜಲಧಾರೆ ಭುವಿಗೆ
ಧರೆಯಲ್ಲಿ ಮೆರೆದೀತು ತಂಪು
ರಮಣೀಯತೆಯ ಕಂಪು
ಹಕ್ಕಿಗಳ ಉಲಿಯುವಿಕೆಯ ಇಂಪು

ಭೂತಾಯಿ ಮೈಬಸಿರು
ಅದಕಾಗೇ ತೊಡೆವಳು ಹಸಿರು
ಭೂಗಿರಿ ಕಂದರಗಳೆಲ್ಲದರ ಮೇಲೆ ಹಸಿರು ಹೊದಿಕೆ
ಶುಭ್ರ ಜಲಧಾರೆ ಆಗಸದಿ ಭೂಮಡಿಲ ಪದರಕೆ

ರವಿ ತಾ ಕಾಣದಾದ ಮೇಘಗಳ ಮರೆಗೆ
ಬಿಡುವಿಲ್ಲದ ರೈತ ಕೆಸರಲಿ ತೊಡಗಿರೆ
ಹಕ್ಕಿಪಕ್ಷಿಗಳ ಉಲಿಯುವಿಕೆ ಮನಕೆ ಸಂತಸ ಒದಗಿಸಿರೆ
ಎಲ್ಲೆಲ್ಲೂ ಆನಂದದ ಲಹರಿ

ಶ್ರಾವಣದ ಶುಭವೇಳೆ
ಮನೆಮನೆಯಲೂ ಗೌರಿಪೂಜೆ
ಮಂಗಳಗೌರಿಯ ಉಪಾಸನೆ
ಮಂತ್ರಾಲಯ ಯತೀವರ್ಯತರ ಆರಾಧನೆ

ಚೌತಿ ಪಂಚಮಿಗಳ ಸಡಗರ
ತವರುಮನೆಗಾಗಮಿಸಿದ ಲಲನಾಮಣಿಗಳ ಆಡಂಬರ
ಹಳ್ಳನದಿ ಕೊಳ್ಳಗಳು ತುಂಬಿ ತುಳುಕುತ
ಪ್ರಕೃತಿ ಮಾತೆಯ ನಯನ ಮನೋಹರ

ಎಲ್ಲೆಡೆ ಉಲ್ಲಾಸ ಹಸಿರ ಪಸೆ
ಮನಕಾನಂದದ ಒರಸೆ
ಜೀವಜಲನದಿಯ ಸೊಗಸೆ
ತುಂಬಿ ಹರಿವ ಜೀವ ಜೀವಕೊ ಉಣಬಡಿಸೆ

ಶ್ರಾವಣ ಬಂತು ಆನಂದ ತಂತು
ಶ್ರಾವಣ ಬಂತು ಆನಂದ ತಂತು.

Leave a Reply