ಸೀಳುನಾಯಿ

ಸೀಳುನಾಯಿ
ಜ್ಯೋತಿ ಮಹಾದೇವ್ [ಕಾವ್ಯನಾಮ – ಸುಪ್ತದೀಪ್ತಿ]
ಹುಟ್ಟೂರು – ಮಂಗಳೂರು; ಬೆಳೆದದ್ದು – ಕಾರ್ಕಳ.
ಹಿಪ್ನೋಥೆರಪಿ ಹಾಗೂ ಪರ್ಸನಲ್ ಫಿಟ್ನೆಸ್ ಟ್ರೈನಿಂಗ್’ಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿಶೇಷ ತರಬೇತಿ ಪಡೆದು, ಒಂದೂವರೆ ದಶಕಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದು, ೨೦೧೦ರಲ್ಲಿ ಪತಿ ಮಹಾದೇವ ಮರ್ಡಿತ್ತಾಯರೊಂದಿಗೆ ಭಾರತಕ್ಕೆ ಮರಳಿಬಂದು ಹಿಪ್ನೋಥೆರಪಿಸ್ಟ್ ಆಗಿ ಮಣಿಪಾಲ್ ನ ಅನಂತನಗರದಲ್ಲಿ ಕಾರ್ಯ ನಿರ್ವಹಿಸುತ್ತ, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮನಃಸ್ವಾಸ್ಥ್ಯದ ಬಗೆಗೆ ಉಪನ್ಯಾಸಗಳನ್ನು ನೀಡುತ್ತ, ವಿದ್ಯಾರ್ಥಿಗಳ ಏಳಿಗೆಯ ಹಾದಿಯಲ್ಲಿ ನೆರವಾಗುತ್ತಿದ್ದಾರೆ.
“….ಸೀಳುನಾಯಿಗಳು ಒಂದು ಜಾತಿಯ ಬೇಟೆ ನಾಯಿಗಳು…… ತಮ್ಮ ದೇಹದ ದೌರ್ಬಲ್ಯವನ್ನೂ ಕಡೆ ಗಣಿಸಿ ಗುಂಪಿಗಾಗಿ ಸೆಣಸಾಡುವಂಥ ಛಾತಿಯುಳ್ಳವು. ….”
ಕಥೆ ಪ್ರಾರಂಭ ಆಗುವುದು ಸೀಳುನಾಯಿಗಳ ವರ್ಣನೆಯಿಂದಲೇ.. ಕಥೆಗೂ ಈ ದೌರ್ಬಲ್ಯದ ಲಿಂಕ್ ಇದೆ..
ಕತೆಗಾತಿ ಜ್ಯೋತಿ ಮಹಾದೇವರವರ ಪರಿಚಯ ಈಗಾಗಲೇ ಮಾಡಿದಂತೆ ಅವರು ಹಿಪ್ನೋಥೆರಪಿಯಲ್ಲಿ ಹಾಗೂ ಪರ್ಸನಲ್ ಫಿಟ್ನೆಸ್ ಟ್ರೇನಿಂಗ್‍ನ್ನು ಪಡೆದವರು. ಅದನ್ನು ಇವರು ಸ್ವಲ್ಪ ಮಟ್ಟಿಗೆ ಈ ಕಥೆಯಲ್ಲೂ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇಲ್ಲಿ ಮನೋವಿಜ್ಞಾನದ ಮೆರುಗಿದೆ, ಜೊತೆಗೇ ದೈಹಿಕ ವಿಜ್ಞಾನದ ಕೆಲ ಅಂಶಗಳೂ ಇವೆ. ಅಷ್ಟೇ ಅಲ್ಲ, ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನರಿರುತ್ತಾರೆ ಎಂಬ ಅಚ್ಚರಿಯ ಅಂಶವನ್ನು ಕೂಡ ಇಲ್ಲಿ ಕತೆಗಾತಿ ಉಪಯೋಗಿಸಿಕೊಂಡಿದ್ದಾರೆ.
ತಂದೆ ಮಗನ ಮಾತುಗಳಲ್ಲಿಯೇ ಲೇಖಕಿ ಅವರಿಬ್ಬರ, ಜೊತೆಗೆ ಅಮ್ಮ ವಾಣಿಯ ಪರಿಚಯ ಮಾಡಿಸುತ್ತಾರೆ. ಕಿಶೋರ ಸೋಲೇ ಇಲ್ಲದ ಗಂಡು. ತಂದೆ ಸೋಲೊಪ್ಪಿಕೊಳ್ಳದ ಗಂಡು. ವಾಣಿ ಇವರಿಬ್ಬರ ನಡುವಿನ ಸಮರಸದ ಕೊಂಡಿ. ವಾಣಿ ಮಗನ ಕ್ರಿಯಾಶೀಲತೆಗೆ ಒತ್ತು ಕೊಟ್ಟವಳು. ಅವನ ಸಾಮರ್ಥ್ಯಕ್ಕೆ ಸಾಕಷ್ಟು ಅವಕಾಶ ಒದಗಿಸಿಕೊಟ್ಟವಳು. ಇದರಿಂದಾಗಿಯೇ ಅವನು ಇಂದು ಸ್ವಸಾಮರ್ಥ್ಯವನ್ನು ಹೊಂದಿದವನಾಗಿ ಹೊರಹೊಮ್ಮಿದ್ದಾನೆ. ಅವನ ಸ್ವಂತಿಕೆಗೆ ಒಂದು ಜ್ವಲಂತ ಉದಾಹರಣೆ ಎಂದರೆ ತನ್ನ 18ನೆಯ ಹುಟ್ಟು ಹಬ್ಬದ ಏಳನೆಯ ದಿನವೇ ಯಾರದೇ ವಿರೋಧವನ್ನೂ ಲೆಕ್ಕಿಸದೆ ಏಳು ದಿನಗಳ ಹಸುಗೂಸನ್ನು ದತ್ತು ಸ್ವೀಕಾರ ಮಾಡಿ ಮನೆಗೆ ತಂದವ. ಇಲ್ಲಿ ವಿಭಿನ್ನ ದೇಶಗಳ ವಿಭಿನ್ನ ರೀತಿಗಳ ಬಗ್ಗೆ ಓದುಗ ತೂಗಿನೋಡಬಹುದಾದ ಸಂದರ್ಭಗಳನ್ನು ನಾವು ಗಮನಿಸಬಹುದಾಗಿದೆ. ನಮ್ಮ ನೆಲದಲ್ಲಿ ಈ ರೀತಿಯ ದತ್ತು ಸ್ವೀಕಾರ ಅಸಾಧ್ಯ. ಆದರೆ ಇದೊಂದು ಭಾರತೀಯ ಕುಟುಂಬವಾದರೂ ವಿದೇಶೀ ಸಂಸ್ಕೃತಿಯ ಪ್ರಭಾವ ಇಲ್ಲಿದೆ. ಮಗ ತನ್ನ ಎಳೆಯ ಹರೆಯದಲ್ಲಿಯೆ ದತ್ತು ಸ್ವೀಕಾರ ಮಾಡಿದರೆ ವಿರೋಧ ಮಾಡಿದರೂ ಒಪ್ಪಿಗೆ ಸೂಚಿಸಿದ್ದಾರೆ. ತರುಣ ಕಿಶೋರ ಅಪ್ಪ ಅಮ್ಮ ಎರಡೂ ಆಗಿ ಅವಳನ್ನು ಸಾಕುತ್ತಾನೆ. ಆ ಕೂಸಿಗಾಗಿ ಅವನು ಡ್ಯೂಕ್ ಯುನಿವರ್ಸಿಟಿಯ ತನ್ನ ಸ್ಕಾಲರ್ಶಿಪ್ ಕೂಡ ನಿರಾಕರಿಸಿ ಕಮ್ಯೂನಿಟಿ ಕಾಲೇಜಿನಲ್ಲಿ ಕಲಿಯುವ ಹಠವಾದಿ. ಮುಂದೆ ಮಗು ಇವರು ಮೂವರ ಪ್ರೀತಿಯಲ್ಲಿ ಬೆಳೆಯುತ್ತದೆ.
ಮುಂದೆ ಅನೇಕ ಸಿನಿಮೀಯ ತಿರುವುಗಳು ಕಥೆಯಲ್ಲಿ ಬರುತ್ತವೆ. ಅವನು ಇದ್ದಕ್ಕಿದ್ದಂತೆ ಕೆಲ ದಿನಗಳಿಂದ ಮೌನವಾಗುತ್ತಾನೆ. ಇದು ಅವನಲ್ಲಿ ಉಂಟಾಗುತ್ತಿರುವ ತಲ್ಲಣದ ಸೂಚನೆ.
ನಂತರದ ಕಥೆ ವೇಗವಾಗಿ ಓಡುತ್ತದೆ. ಒಂದು ವಾರದಿಂದ ಮಗ ಮನೆಗೆ ಬಂದಿಲ್ಲ. ಪೋಲೀಸು ಕಂಪ್ಲೇಂಟ್ ಕೊಟ್ಟಾಗಿದೆ. ಅಂದು ಪೋಲೀಸರಿಗೆ ಸೀಗಲಾರದ ಕಿಶೋರನ ಡೈರಿ ಇಂದು ಆತನ ತಂದೆಗೆ ತನ್ನ ಹಾಸಿಗೆಯ ಅಡಿಯಲ್ಲಿಯೇ ಸಿಕ್ಕಿದೆ. ವಾಣಿ, ನಿಧಿಯನ್ನು ಶಾಲೆಯಿಂದ ಕರೆತರಲು ಹೋದಾಗ ಓದುತ್ತಾನೆ.
ಅದರಲ್ಲಿ ಕಿಶೋರ್ ಮಗುವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರಣ ತಿಳಿಸುತ್ತಾನೆ.. ಅವನ ಒಂದು ಪುಟ್ಟ ನ್ಯೂನತೆಯೇ ಇದಕ್ಕೆ ಕಾರಣವಾಗುತ್ತದೆಯಾದರೂ ಅದನ್ನು ಅವನು ಆ ಗಳಿಗೆಯಲ್ಲಿ ರಟ್ಟು ಮಾಡುವುದಿಲ್ಲ.
ನಂತರ ಇದ್ದಕ್ಕಿದ್ದಂತೆ ಅವನಿಗೆ “ನಿಧಿಗೆ ಈಗ ತನ್ನ ಜನ್ಮರಹಸ್ಯ ಕೂಡ ತಿಳಿದಿದೆ. ಅವಳು ಅವರನ್ನು ಕಂಡು ಹಿಡಿದರೆ? ಅವಳ ಹೆತ್ತವರು ತಮ್ಮ ಮಗುವನ್ನು ಮರಳಿ ಬೇಡಿದರೆ?” ಎಂಬ ಆತಂಕ ಪ್ರಾರಂಭವಾಗುತ್ತದೆ. ಅದಕ್ಕಾಗಿ ಅವನು ಅವರಿಬ್ಬರನ್ನೂ ಸಂಪರ್ಕಿಸುವ ಪ್ರಯತ್ನ ಮಾಡತೊಡಗುತ್ತಾನೆ. ವೇಷಮರೆಸಿ ಅವರ ನೆಲೆಯನ್ನು ಅರಿಯುತ್ತಾನೆ. ಯಶಸ್ವಿಯೂ ಆಗುತ್ತಾನೆ. ಅವರಿಬ್ಬರೂ ಈಗ ಮದುವೆ ಆಗಿರುವುದೂ ತಿಳಿಯುತ್ತದೆ. ಅವರು ನಿಧಿಯನ್ನು ಬೇಡಿದರೆ? ಎಂಬ ಆತಂಕದಿಂದ ಅವಳನ್ನು ಬಿಟ್ಟಿರಲಾರದ ತಾವು ನಾಲ್ವರೂ ತಮ್ಮ ತಾಯ್ನಾಡಿಗೆ ಮರಳೋಣ ಎಂದೂ ಬರೆದಿರುತ್ತಾನೆ. ಅವರನ್ನು ಭೆಟ್ಟಿ ಆಗಿ, ತಾನು ಮಗುವನ್ನು ಕೇಳಬೇಡಿ, ಎಂದು ಹೇಳಿ ಕೊನೆಯ ಉಪಾಯವಾಗಿ ತನ್ನ ನ್ಯೂನತೆಯನ್ನೂ ಹೇಳಿಬಿಡಬೇಕೆಂಬ ನಿರ್ಧಾರವನ್ನು ಡೈರಿಯಲ್ಲಿ ಬರೆದಿದ್ದಾನೆ. ಅವನು ಅದರ ನಂತರ ಕಾಣೆಯಾಗಿದ್ದಾನೆ. ನಂತರದ ಕಥೆ ಬೇರೊಂದು ರೀತಿಯಲ್ಲಿಯೇ ಓಡುತ್ತದೆ. ಇಲ್ಲಿ ಕಥಾಲೇಖಕಿಯ ಮನೋವೈಜ್ಞಾನಿಕ ಜ್ಞಾನ ಕೂಡ ಹಣಿಕುತ್ತದೆ. ವಾಣಿಗೆ ಪದೇ ಪದೇ ಬೀಳುತ್ತಿದ್ದ ಕನಸು…!
ಕಥೆ ಸುಖಾಂತವಾಗುತ್ತದೆ. ಆದರೆ ಈ ನಡುವಿನ ಮೂರೂವರೆ ತಿಂಗಳಲ್ಲಿ ನಡೆದ ಕಥೆಯನ್ನು ಕಿಶೋರ ತಂದೆಗೆ ವಾಣಿ, ನಿಧಿ ಇಬ್ಬರೂ ಮನೆಯಲ್ಲಿಲ್ಲದ ಸಮಯದಲ್ಲಿ ಹೇಳುತ್ತಾನೆ.
ತಾನು ಆರ್ಯನ ಮನೆಯಲ್ಲಿ ಅವರಿಬ್ಬರ ಜೊತೆಗೆ ಇದ್ದದ್ದು. ಆ ದಂಪತಿಗಳು ಒಂದು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡದ್ದು.. ತಾನು ಅವರಿಗೆ ಸಹಾಯ ಮಾಡುವ ಪ್ರಸಂಗ ಒದಗಿದ್ದು… ಆರ್ಯನ ಮೇಲೆ ಕಣ್ಣಿರಿಸಿದ್ದ ಒಬ್ಬ ಗಂಡುಬೀರಿ.. ಅವಳಿಗೊಬ್ಬ ಮಗ… ಆ ಮಗು ಆರ್ಯನದೇ ಎಂದು ಅವರು ಆರ್ಯನ ಮೇಲೆ ಹಾಕಿದ ಕೇಸು… ಆರ್ಯನನ್ನು ಅವಳು ಡಿಎನ್‍ಎ ಟೆಸ್ಟ್ ಮಾಡಿಸಬಹುದು, ಅದರಲ್ಲಿ ಏನಾದರೂ ಕುಯುಕ್ತಿಯನ್ನೂ ಮಾಡಬಹುದು… ಎಂದು ಯೋಚಿಸಿದ ಆರ್ಯ ಕಿಶೋರನು ತನ್ನಂತೆಯೇ ಕಾಣುತ್ತಿದ್ದುದರಿಂದ ಕಿಶೋರನ ನ್ಯೂನತೆಯನ್ನು ಅರಿತಂಥ ಆರ್ಯ ಅವನಿಗೆ ಕೋರ್ಟ‍ಗೆ ಹಾಜರಾಗಲು ಒತ್ತಾಯಿಸಿದ್ದು, ಕೋರ್ಟ್ ಕೇಸಿನಲ್ಲಿ ಆರ್ಯರೂಪಿ ಕಿಶೋರ ಗೆದ್ದುದು, ಮರಳಿ ಬರುವಾಗ ಆದಂಥ ಅಪಘಾತ.. ನಂತರದ ಚೇತರಿಕೆ… ಆ ಕಾಡಿದ ನ್ಯೂನತೆಗೆ ಚಿಕಿತ್ಸೆ… ಕಿಶೋರ್ ಮದುವೆಗೆ ಸಿದ್ಧನಾಗುವುದರೊಂದಿಗೆ ಕಥೆ ಮುಗಿಯುತ್ತದೆ.
ಇಲ್ಲಿ ಇಡಿಯ ಕಥೆ ಕಿಶೋರನ ನ್ಯೂನತೆಯ ಸುತ್ತವೇ ಸುತ್ತುತ್ತದೆ. ಅದರ ಕಾರಣದಿಂದ ನಿಧಿಯನ್ನು ದತ್ತು ಪಡೆಯುವ ಪ್ರಸಂಗ… ಆರ್ಯನು ಕೋರ್ಟ್ ಕೇಸಿನಿಂದ ಪಾರಾಗುವುದು ಕೂಡ ಇದನ್ನು ಉಪಯೋಗಿಸಿಕೊಂಡೇ…. ಈ ಕಥೆಯು ಒಂದು ಕಾದಂಬರಿಯಾಗುವಷ್ಟು ಕಥಾವಸ್ತುವನ್ನು ಹೊಂದಿರುವುದಾದರೂ ಲೇಖಕಿ ಅದನ್ನು ಒಂದು ನಟ್‍ಶೆಲ್‍ನಲ್ಲಿ ಬಂಧಿಸಿಟ್ಟಂಥ ಅನುಭವ ಓದುಗರಿಗೆ ಆಗುತ್ತದೆ.
ಇಲ್ಲಿ ಅನೇಕ ಅಸಂಗತತೆಗಳು ಕೂಡ ಕಾಣುತ್ತವೆ. ಒಂದು ಕಥೆಯನ್ನೋ, ಕಾದಂಬರಿಯನ್ನೋ ಬರೆಯಬೇಕಾದರೆ ಆ ಕಥೆ ನಡೆದಿರುವಂಥ ಸ್ಥಳದ ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ಪರಿಸರಗಳ ಅರಿವನ್ನು ಪಡೆದರೆ ಆ ಕಥೆ ವಾಸ್ತವತೆಯ ಅರಿವನ್ನು ಮೂಡಿಸುತ್ತದೆ. ಇಲ್ಲದೆಹೋದರೆ ಏಳುಸುತ್ತಿನ ಕೋಟೆಯಲ್ಲಿ ಬಂಧಿತ ರಾಜಕುಮಾರಿ, ಗಿಳಿಯಲ್ಲಿ ಪ್ರಾಣವಿರಿಸಿದ ರಾಕ್ಷಸನ ಕಥೆಯಂತೆನ್ನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಇದಕ್ಕೆ ಉದಾಹರಣೆ ಆರ್ಯ ಹಾಗೂ ಕಿಶೋರ ಒಂದೇ ರೀತಿ ಕಾಣುವುದು! ಬಹುಶಃ ಎಲ್ಲ ಚೀನಿಯರು, ಜಾಪಾನಿಗಳೂ.. ಒಟ್ಟಿನಲ್ಲಿ ವಿದೇಶೀಯರೂ ನಮಗೆ ಒಂದೇ ತರ ಕಾಣುವಂತೆ ಭಾರತೀಯರಾದ ಆರ್ಯ, ಕಿಶೋರ್ ಇಬ್ಬರೂ ಅತ್ಯಂತ ಚಾಲಾಕಿ ಹೆಣ್ಣು ಷೆರೀನ್‍ಳಿಗೆ ಒಂದೇ ತರ ಕಂಡರೇ?
ಇನ್ನು ಅಮೆರಿಕದ ನ್ಯಾಯಸಂಹಿತೆಯ ಪ್ರಕಾರ 18 ವರ್ಷದ ವರೆಗೆ ದತ್ತು ಸ್ವೀಕಾರ ಮಾಡಲು ಬರುವುದಿಲ್ಲ. ಆನಂತರವೇ ಅವನು ಅರ್ಜಿ ಹಾಕಿಕೊಳ್ಳಬಹುದು. ನಂತರ ಕಮೀಟಿಯವರು ಅವನ ಮನೆಯಲ್ಲಿ ಮಗುವಿನ ಜವಾಬ್ದಾರಿ ಹೊರುವುದಕ್ಕೆ ಸೂಕ್ತ ವಾತಾವರಣ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಬರುತ್ತಾರೆ. ಇದಕ್ಕೆ ಎಂಟು ದಿನಗಳು ಸಾಕೇ? ಅಲ್ಲದೆ, ಸ್ವತಃ ವಿದ್ಯಾರ್ಥಿಯಾದ ಅವನು ಆರ್ಥಿಕವಾಗಿ ಪರಾವಲಂಬಿ. ಅವನಿಗೆ ದತ್ತು ಸ್ವೀಕಾರ ಮಾಡಲು ಬಾರದು. ಇನ್ನು ಕೋರ್ಟ್ ವಿಷಯ.. ಬೇರೆಯವರ ಐಡಿಯನ್ನು ತನ್ನದೆಂದು ಹೇಳುವುದು ಮಹಾಪರಾಧ… ಜೈಲಿಗೇ ತಳ್ಳುತ್ತಾರೆ.. ಇಂಥ ಅಸಂಗತತೆಗಳು ಕಥೆಯನ್ನು ದುರ್ಬಲಗೊಳಿಸಿವೆ ಎಂದು ನನ್ನ ಅಭಿಪ್ರಾಯ. ಇಲ್ಲದೆ ಹೋದಲ್ಲಿ ಇನ್ನೂ ಛಂದವಾಗುತ್ತಿತ್ತು.
ಕಥೆಯ ಶೈಲಿ ಛಂದ. ಎಲ್ಲಿಯೂ ಬೇಸರವಾಗದು. ಗೋಜಲು ಸನ್ನಿವೇಶಗಳಲ್ಲಿಯೂ ರಹಸ್ಯವನ್ನು ಕಥೆಯ ತಿರುವುಗಳಿಗೆಂದೇ ಉಪಯೋಗಿಸಿದುದು ಕಥೆಗಾತಿಯ ಜಾಣ್ಮೆಗೆ ಒಂದು ನಿದರ್ಶನ. ಕೊನೆಯ ವಾಕ್ಯ “ಅವರಿಬ್ಬರ ಬೆನ್ನ ಮೇಲೆ ಸಂಕ್ರಾಂತಿ ಸೂರ್ಯನ ಸಂಜೆಯ ಕಿರಣಗಳು ಆಟವಾಡುತ್ತಿದ್ದವು! ಎಂಬುದು. ಸಂಕ್ರಾಂತಿ ಇಲ್ಲಿ ಕಿಶೋರನ ಜೀವನದ ಮಹತ್ತರ ತಿರುವಿಗೆ ಸಾಕ್ಷಿಯಾದರೆ, ಸಂಜೆಯ ಸೂರ್ಯ ಮರುದಿನದ ಶುಭಮುಂಜಾವಿಗೆ ಸಾಕ್ಷಿ ಆಗಿದ್ದಾನೆ!
***

Leave a Reply