ಊರಿಗೆ ಒಬ್ಬಳೇನಾ ಪದ್ಮಾವತಿ ?

ಊರಿಗೆ ಒಬ್ಬಳೇನಾ ಪದ್ಮಾವತಿ ?

ಪದ್ಮಪ್ರಿಯಾ ಕನ್ನಡಚಿತ್ರರಂಗದಲ್ಲಿ ಛಾಪು ಮೂಡಿಸಿ ಮರೆಯಾದ ನಾಯಕಿ ನಟಿ. ಪದ್ಮಾ ಖನ್ನಾ ಪಂಚಭಾಷೆಗಳ ಪಂಚ್ ಐಟೆಂ ಹಾಡು ಕುಣಿತಗಳಲ್ಲಿ ಕಚಗುಳಿ ಇಟ್ಟು ಗಲ್ಲಾ ಪೆಟ್ಟಿಗೆ ತುಂಬಿಸಲು ನೆರವಾದ ನಟಿ. ಸದ್ಯ ಮತ್ತೆ ಪದ್ಮಾ ಸುದ್ದಿಯಲ್ಲಿದ್ದಾಳೆ. “ಜಾನಿ ಮೇರಾ ನಾಮ” ಹಿಂದಿ ಮತ್ತು ಕನ್ನಡ ಸಿನಿಮಾದ ಪದ್ಮಾ ನೆನಪಿಗೆ ಬಂತು. “ದಿವಾ ದಿವಾ ತನಾಧಿರಣಾ, ಡೊಂಚು ಯು ನೋ , ಐ ಎಮ್ ವೆರಿ ಸೆಕ್ಸಿ, ಕೈ ಇದೆ, ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡೋ, ಕಣ್ಣಿದೆ, ಕಿವಿ ಇದೆ ಸುಮ್ಮನೆ ಹಾಡು ಕೇಳೋ, ಕೆಂಪೇಗೌಡ ಕಟ್ಟಿದ ಊರಿಗೆ ರಾಣಿ ನಾ, ಕಲರ್ ಕಲರ ಕನಸಿಗೆ ರಾಯಭಾರಿ ನಾ
ಊರಿಗೆ ಒಬ್ಬಳೇ ಪದ್ಮಾವತಿ ಅಂತ ರಾಗಾ ಯಾಕ ಹೇಳ್ತಿ?”
ಸಿನಿಮಾದಲ್ಲಿ ಬರುವ ಈ ಹಾಡು ಬಹುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಲವು ಕನ್ನಡಿ ಹಿಡಿದು “ಸುಮ್ಮನೆ ಸಿನಿಮಾ ನೋಡು ” ಅನ್ನುವ ಉತ್ಪ್ರೇಕ್ಷೆಯ ಧ್ವನಿ ನೀಡುತ್ತದೆ. ಇದೊಂದು ರೀತಿಯ ಕೇಳಿಡಿಯೊಸ್ಕೊಪ ಅಥವಾ ಬಹುರೂಪ ದರ್ಶಕ ಇದ್ದಹಾಗೆ. ಒಂದೋ ಎರಡೋ ಬಳೆಚೂರು ನೋಡದೆ ಅದು ಸೃಷ್ಟಿಸಬಹುದಾದ ವಿನ್ಯಾಸ ನೋಡುವದೇ ಮುಖ್ಯ. ಚಲನ ಚಿತ್ರ ಮತ್ತು ಸ್ಥಿರ ಚಿತ್ರ , ಅಕ್ಷರ ಕಾವ್ಯಗಳಲ್ಲಿ ಇತಿಮಿತಿ ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ತೋರಿಸುತ್ತದೆ.

ಇತಿಹಾಸ ಎಂದರೇನು, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು ಅನ್ನುವ ವಾಕ್ಯಗಳು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಿವೆ ಅಂತ ಯಾಕೋ ಅನಿಸುತ್ತಿದೆ. ಒಂದು ಅರ್ಥದಲ್ಲಿ ಮತ್ತು ದೃಷ್ಟಿಕೋನದಿಂದ ನೋಡಿದಾಗ, ಸಿಕ್ಕ ಅಥವಾ ನಾವು ತಿಳಿದುಕೊಂಡ ಇತಿಹಾಸವೂ, ಆಯಾ ಕಾಲದ ಅಭಿವ್ಯಕ್ತಿ ಸ್ವಾತಂತ್ರವಲ್ಲವೇ? ಹಿಂದಿನ ಕಾಲದಲ್ಲಿಯಂತೂ ಪ್ರತಿ ದೊಡ್ಡ ರಾಜ, ಮಹಾರಾಜರ ಆಸ್ಥಾನದಲ್ಲಿ ಅವರನ್ನ ಹೊಗಳಿ ಹಾಡಿ ಅವರ ನಾಯಕತ್ವ ಗುಣಗಳನ್ನ ಕೇಂದ್ರೀಕೃತಗೊಳಿಸಿ ಕಾವ್ಯ, ಇತಿಹಾಸ ಬರೆಯುತ್ತಿದ್ದರು. ಇಲ್ಲವೇ ಬಾಯಿಮಾತಿನ (ತೊಂಡಿ) ಪರಂಪರೆಯಲ್ಲಿ ಸಾಹಿತ್ಯ ಸಂಸ್ಕೃತಿ ಮುಂದುವರೆಯುತ್ತ ಹೋಗುತ್ತ ಬಂತು. ಪರದೇಶದ ಪ್ರವಾಸಿಗರು ಸಹ ಅವರು ನೋಡಿದ್ದರಲ್ಲಿ, ಅವರಿಗೆ ಬೇಕಾದ, ಮನಸ್ಸಿಗೆ ಹಿಡಿಸಿದದನ್ನು, ಬರೆದರು. ಅದು ಇತಿಹಾಸವಾಯಿತು. ಹೀಗೆ ಇತಿಹಾಸ ಹುಟ್ಟುತ್ತಲೇ ತನ್ನದೇ ಆದ ರೀತಿಯಲ್ಲಿ ಕಂಸಾಲಿ ಡೇಟ ಆಗುತ್ತ ಕಾಲದ ಭಾರದಲ್ಲಿ ಗಟ್ಟಿಯಾಗುತ್ತ ಬಂತು. ನಮ್ಮ ಮಹಾ ಎಪಿಕ್ ಗಳಾದ ರಾಮಾಯಣ, ಮಹಾಭಾರತಗಳು ಸಹ ವಿಧ ವಿಧ ಪ್ರಕಾರ ಮತ್ತು ವೈವಿಧ್ಯತೆ ಒಳಗೊಂಡು ಏಷಿಯಾ ಖಂಡದ ಎಲ್ಲ ದೇಶಗಳಲ್ಲಿ ಇಂದೂ ಜೀವಂತವಾಗಿವೆ. ಈ ವೈವಿಧ್ಯಮಯತೆಯೇ ಆಯಾಕಾಲದ ಅಭಿವ್ಯಕ್ತಿ ಪ್ರಯತ್ನಗಳನ್ನ ಪ್ರತಿನಿಧಿಸುತ್ತವೆ ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಸಿನಿಮಾ ತಯಾರಿಕೆಯೇ ಒಂದು ಸಾಮೂಹಿಕ ಸೃಜನಾತ್ಮಕ ಕಲೆ. ಇದು ಮಾನವಿಕ ಮತ್ತು ತಂತ್ರಜ್ಞಾನ, ಬುದ್ಧಿ ಮತ್ತು ಕೌಶಲ್ಯಗಳ ಸಂಗಮ ಕ್ಷೇತ್ರ. ಕೋಟಿಗಟ್ಟಲೆ ಜನಗಳ ಮೇಲೆ ವಿಶಿಷ್ಟ ಪ್ರಭಾವ ಮತ್ತು ಪರಿಣಾಮ ಬೀರುವ ಬ್ರಹತ್ ಶಕ್ತಿ ಹೊಂದಿರುವ ಒಂದು ಗ್ರೇಟ್ ಸೃಜನಶೀಲತೆ. ಇದೇ ಕಾರಣಕ್ಕಾಗಿ ಈ ಶಕ್ತಿಯ ಬಳಕೆಯನ್ನ ಕಾಳಜಿ ಪೂರ್ವಕವಾಗಿ ಮಾಡುವದು ತೀರ ಅವಶ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ freedom of expression ದ ಇತಿಮಿತಿಗಳೇನು? ಇತಿಮತಿಗಳು ಬೇಕಾ? ಅಭಿವ್ಯಕ್ತಿ ಹೆಸರಿನಡಿಯಲ್ಲಿ ಏನು ಬೇಕಾದರೂ ಮಾಡಬಹುದಾ? ಈ ಹಿನ್ನೆಲೆಯಲ್ಲಿ ಪ್ರಸ್ತುತ ಪದ್ಮಾವತಿ ಪ್ರಕರಣವನ್ನು ಗಮನಿಸಿದರೆ ಎಲ್ಲವೂ ಗ್ರೇಟ ಇಂಡಿಯನ್ ಒಪೆರಾ ಅನಿಸುತ್ತದೆ. ರಾಮಾಯಣದ ರಾಮ, ರಾವಣ, ಅಗ್ನಿಪರೀಕ್ಷೆಗೊಳಗಾದ ಸೀತೆ, ಶೂರ್ಪನಖಿ ಪಾತ್ರಗಳಷ್ಟೇ ಅಲ್ಲದೆ, ಲಕ್ಷ್ಮಣನ ಗೆರೆಹಾಕುವ ಹುನ್ನಾರ, ರಾಮ ಪಾದ ಸ್ಪರ್ಶಕ್ಕೆ ಕಾಯುತ್ತಿರುವ ಕಲ್ಲು ಅಹಲ್ಯೆ, ಎಲ್ಲ ಕ್ರಿಯೆಗಳು ಮತ್ತೆ ನಮ್ಮ ಮುಂದೇ, ನಮ್ಮ ಕಣ್ಣೇದುರೆ ಪುನರಾವೃತ್ತಿ ಆಗುವ ಗೋಚರ ಅಗೋಚರಗಳು ಎದ್ದು ಕಾಣುತ್ತವೆ. ಏನಾದರೂ ಆಗಲಿ, ಹಚ್ಚಿದ ಬೆಂಕಿಗೆ, ಹುಟ್ಟಿದ ಬೆಂಕಿಗೆ ಮೈ ಕಾಸಿಕೊಳ್ಳುವ , ಚಹಾ ಮಾರಲು, ಚಹಾ ಕಾಸಿಕೊಳ್ಳುವ ಪ್ರವೃತ್ತಿಗಳು ಯಾವ ಕಾಲಕ್ಕೂ ಹೊಸತಲ್ಲ. ನಮ್ಮ ಭಾರತದಲ್ಲಿ ದೇವರೇ ಇಲ್ಲ ಅನ್ನುವ ಚಾರ್ವಾಕ ಸಂತತಿ, ತೊಂಡಿ ಪರಂಪರೆಯಲ್ಲಿಯೇ ಅಜರಾಮರವಾದ ವೇದಗಳು, ಒಂದು ಕಾಲದ ಅಧಿಕೃತ ವೈಶ್ಯವಾಟಿಕೆ ಅನಧಿಕೃತವಾಗುವದು ಹೊಸತಲ್ಲ. ನಮ್ಮ ಇದೇ ಭಾರತದಲ್ಲಿ ವಾತ್ಸಾಯನ ಋಷಿ ಕಣ್ಣು ಮುಚ್ಚಿ ಬಾಯಿ ಮುಚ್ಚಿ ನಾವು ಅಶ್ಲೀಲ ಅನ್ನುವ ಕಾಮಸೂತ್ರ ಬರೆಯಲಿಲ್ಲವೇ? ಅದು ಸಹ ಆ ಕಾಲದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿರಲಿಲ್ಲವೇ ? ಯಾಕೆ ಹೀಗೆ ಅಂದರೆ ಕಾಲ ಮಾನ, ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಎಲ್ಲವೂ ಬದಲಾಗುವದು ಅನಿವಾರ್ಯ. ವೈದಿಕ ಪೂರ್ವ ಕಾಲದಿಂದ ಬೌದ್ಧ ಧರ್ಮ, ಜೈನ, ವೈದಿಕ, ದಾಸ ಪಂಥ, ವೀರಶೈವ ಲಿಂಗಾಯತವರೆಗೂ ಒಂದೊಂದು ಕಾಲಮಾನವು ಅಭಿವ್ಯಕ್ತಿ ಸ್ವಾತಂತ್ರ್ಯ ಸವಾಲು, ವಿರೋಧ ಪಡೆಯುತ್ತಾ ಮುಸ್ಲಿಂ ಪ್ರಭಾವದ ಅಧಿಕಾರ ಶಾಹಿ ಪ್ರಭಾವ, ಮತಾಂತರ ಸಮಷ್ಟಿ ಪ್ರಭಾವದಿಂದಾಗಿ ಕಾಲಕಾಲಕ್ಕೆ ಕ್ರೌರ್ಯ, ಹಿಂಸೆಯನ್ನು ಎದುರಿಸುತ್ತಲೇ ಮುಂದೆ ಕ್ರಿಶ್ಚಿಯನ್ ಆಕರ್ಷಣೆಗೂ ಒಳಗಾಗುತ್ತ ಬಂದ ಇತಿಹಾಸವನ್ನು ಗಮನಿಸಿದಾಗ ಈಗಿನ ಕೋಟಿ, ಲಕ್ಷದ, ಇನಾಮುಗಳು, ಹೇಳಿಕೆಗಳು, ಆಗಿನ ಬುದ್ಧಿಜೀವಿಗಳು, ಈಗಿನ ಎಡ ಬಲ ಬುದ್ಧಿಜೀವಿಗಳಿಗೆ, ಕಾನೂನು ಮಾಡುವ ರಾಜರಿಲ್ಲದ ಮಂತ್ರಿ ಚುನಾಯಿತ ವ್ಯವಸ್ಥೆಗೆ ಏನೂ ಫರಕು ಇರುವದಿಲ್ಲ. ಹೀಗಾಗಿ ಇತಿಹಾಸ ಮೂಲ ಭೂತವಾಗಿ ಬದಲಾಗುವದೇ ಇಲ್ಲ ಅವೇ ತಪ್ಪುಗಳು ಬೇರೆ ಬೇರೆ ರೀತಿ ಆಗುತ್ತಲೇ ಇರುತ್ತವೆ. ನಾಟಕ ಒಂದೇ, ಪಾತ್ರಗಳು ಒಂದೇ, ಮಾತುಗಳು ಮಾತ್ರ ಬೇರೆ. ಪ್ರತಿಯೊಂದಕ್ಕೂ ಅದರದೇ ಆದ ಜಸ್ಟಿಫಿಕೇಶನ್. ಅದು ಜೋಧಾಅಕ್ಬರ ಇರಬಹುದು, ಅಲ್ಲಾವುದ್ದೀನ್ ಖಿಲ್ಜಿ ಪದ್ಮಾವತಿ ,ಬಾಜಿರಾವ್ ಮಸ್ತಾನಿ, ಆಂಧಿ ಚಿತ್ರದ ನಾಯಕ ನಾಯಕಿ ಇರಬಹುದು..ಕನ್ನಡದ ಮಯೂರ್, ಕಾಳಿದಾಸ ಹೀಗೆಯೇ ಇದ್ದರೆ ಅಥವಾ ಇಲ್ಲವೋ ಯಾರಿಗೆ ಗೊತ್ತು ? ಅದು ಭಕ್ತಿಪ್ರಧಾನ, ವೀರ ರಸ ಪ್ರಧಾನ ಚಿತ್ರಗಳಾಗಿದ್ದವು ಅಲ್ಲಿ ಯಾರ ಮನಸ್ಸಿಗೂ ನೋವು ತರುವ ಚಿತ್ರಣ ಇರಲಿಲ್ಲ. ಮಂತ್ರಾಲಯ ಮಹಾತ್ಮೆಯ ನಟ ಅಣ್ಣಾ ಅವರೇ ರಾಯರ ಪ್ರತೀಕವಾಗಿ ಅಭಿನಯಿಸಿದಾಗ ಅದು ತಂದ ಬದಲಾವಣೆ ಅಸದೃಶ್ಯ. 500ಕ್ಕೂ ಹೆಚ್ಚು ವರ್ಷ ಹಿಂದಿನ ಪದ್ಮಾವತಿ ಇತಿಹಾಸದ ಭಾಗವಾದವಳಿಗೆ ಸುಮಾರು 240ವರ್ಷ ಹಿಂದೆ ಸೂಫಿ ಸಂತ ಮಲಿಕ್ ಮಹಮದ್ ಜೆಯಾಸಿ, ಅವಧಿ ಭಾಷೆಯಲ್ಲಿ ಬರೆದ ಪ್ರೇಮ ಕಾವ್ಯ, ಕಾಳಿದಾಸನ ಮೇಘದೂತದ ಕಾವ್ಯದ ಹಾಗೆ ಪದ್ಮಾವತಿ ಬರೆದದನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಆಗಿದೆ. ಆಗ ಜೆಯಾಸಿ ಬರೆದಾಗ ಏನೂ ಆಗಲಾರದ್ದು ಈಗ ಕಾಲ ಮಾನ ಬದಲಾಗಿ ಅಭಿಪ್ರಾಯ ಬದಲಾಗಿದ್ದು ಕಣ್ಣಮುಂದೆ ಇದೆ. ಜೆಯಾಸಿ ಇದ್ದ ಪ್ರದೇಶಕ್ಕೂ ಪದ್ಮಾವತಿ ಅದೂ ಜೆಯಸಿಗಿಂತ 300 ವರ್ಷಗಳ ಹಿಂದೆ ಅಜಗಜಾಂತರ. ಭಾಷೆ ಬೇರೆ ಯಾವದೇ ಪ್ರೇಮ ಕಥೆಯಂತೆ ಅದೂ ಸಹ ಕಾಲದ ಗರ್ಭದಲ್ಲಿ ಸಾಕಷ್ಟು ಉಪ್ಪು ಹುಳಿ, ಖಾರಗಳ ಪೋಷಣೆ ಪಡೆಯುತ್ತಾ ಬದಲಾಗಿರಬಹುದಾದ ಸಾಧ್ಯತೆ ಇದೆ. ನಮ್ಮಲ್ಲಿಯ ಸಂಗ್ಯಾ ಬಾಳ್ಯಾ ಕಥೆ ಇದ್ದ ಹಾಗೆ. ಅದು ನಿಜವಾದ ಇತಿಹಾಸವೋ, ಅಥವಾ ಕಲ್ಪಿತ ಕಾವ್ಯವೋ, ಕಥೆಯೋ ಏನೇ ಇದ್ದರೂ ಅಕ್ಷರಗಳ ಪುಟ ದೃಶ್ಯವಾಗಬೇಕಿದ್ದರೆ ಅಕ್ಷರ ಚಿತ್ರವಾಗುವಾಗ ಬದಲಾವಣೆ ಅನಿವಾರ್ಯ. ಕವಿತೆ ಸಂಗೀತ ಪಡೆದು ರಾಗ ಸ್ವರೂಪದಲ್ಲಿ ಬಂದಾಗ ಅದರ ಮಾಧುರ್ಯ ಆಸ್ವಾದಿಸಿದವರಿಗೆ ಗೊತ್ತು. ಸಂಗೀತ ದ್ವೇಷಿ ಔರಂಗಜೇಬರಿಗೆ, ಸಾಂಸ್ಕೃತಿಕ ಕಿವುಡ್ರಿಗೆ ತಿಳಿಯುವದಿಲ್ಲ. ಇದರರ್ಥ ಅಭಿವ್ಯಕ್ತಿ ಹೆಸರಿನಲ್ಲಿ ಏನೂ ಮಾಡಿದ್ರೂ ನಡೆಯುತ್ತದೆ ಅಂತ ಅಲ್ಲ. ಅಲ್ಲಿ ಕಾಣದ ಲಕ್ಷ್ಮಣ ಗೆರೆ ಇರುತ್ತದೆ ಅದನ್ನ ಅರ್ಥ ಮಾಡಿಕೊಂಡು ಸೃಜನಶೀಲತೆಯ ಪ್ರತಿಭೆಯನ್ನ ತೋರಿಸುವದೇ ಒಂದು ಸವಾಲು. ಆಕಾರ ಮತ್ತು ನಿರಾಕಾರದ ಅಂತರ ಅರಿತುಕೊಂಡವರು ದೇವರಿಗೊಂದು ರೂಪು ರೇಖೆ ಕೊಟ್ಟ ಹಾಗೆ ಸರ್ವಶಕ್ತನಿಗೆ ಕೊಡಲು ಅಥವಾ ಕೊಡದೆ ತೋರಿಸುವ ಸೃಜನಶೀಲತೆ ಕಂಡುಕೊಳ್ಳಬೇಕಾಗಿದೆ. ಮಂತ್ರಾಲಯ ಮಹಾತ್ಮೆ, ರಾಮ, ಕೃಷ್ಣ ಈಶ್ವರ ಹೀಗೆ ಹಿಂದೂ ದೇವರುಗಳ ಬಗ್ಗೆ ಚಲನಚಿತ್ರ ತೆಗೆಯಬಹುದಾದರೂ ಪ್ರವಾದಿಗಳ ಬಗ್ಗೆ ತೆಗೆಯಲು ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ ಅನ್ನುವರೆಲ್ಲ ಏಕೆ ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ನಂಬಿಗೆಯೇ ಮುಖ್ಯ ಇಲ್ಲಿ. ಯಾರು ಏನೇ ಹೇಳಿದರೂ ಏನೇ ತೋರಿಸಿದರೂ ಇನ್ನೂ ದೇವರು ಇದ್ದಾನೆ ನಂಬಿಗೆ ಬದಲಾಗಿಲ್ಲ ಅನ್ನುವದೇ ಹಿಂದೂ ಧರ್ಮದ ಗಟ್ಟಿತನ. ಸುಲಭವಾಗಿ ಸೃಜನಶೀಲತೆ ಸಾಧ್ಯ ಅಂದರೆ ಹಿಂದೂ ಧರ್ಮ, ಪುರೋಹಿತಶಾಹಿ ಇತ್ಯಾದಿಗಳಲ್ಲಿ ಸುಲಭವಾಗಿ ಟೀಕಿಸಬಹುದು, ಹೇಗೆ ಬೇಕೋ ಹಾಗೆ ಚಿತ್ರಿಸಬಹುದು ಏಕೆಂದರೆ ಅದೊಂದು ದೊಡ್ಡ ಶಾಕ್ ಎಬಸಾರ್ಬರ. ಅದು ನಿಜ ಸಹಿಷ್ಣುತೆ. ಧರ್ಮ, ಜಾತಿ, ಭಾಷೆ, ಅಮಲೇರಿಸುವ ದ್ರವ pk ಇರುವ ಸ್ಥಿತಿಯಲ್ಲಿ ak ಅರ್ಥವಾಗುವದಿಲ್ಲ ಅನ್ನುವದೇ ಪ್ರಶ್ನೆ. ಪ್ರತಿ ಕ್ರಿಯೇಟಿವ್ ಕಾರ್ಯ ಅದು ಸಿನಿಮಾ ಇರಲಿ, ಚಿತ್ರ ಇರಲಿ, ಸಂಗೀತ, ನೃತ್ಯ ಕಾದಂಬರಿ ಏನೇ ಆಗಿರಲಿ ಎಲ್ಲ ಸ್ತರದ ಜನರನ್ನ ತೃಪ್ತಿಪಡಿಸಲು ಆಗುವದಿಲ್ಲ ಕೆಲವೊಮ್ಮೆ ವಿವಾದಾತ್ಮಕ ಅಂಶಗಳು ವಿವಾದ ಹುಟ್ಟಿದರೂ ಕಾಲ ಕ್ರಮೇಣ ಕಡಿಮೆಯಾಗುತ್ತವೆ. ವಿವಾ��ಕ್ಕೆ ಕಾರಣ ಸತ್ಯ ಅಸತ್ಯಗಳ ಕನಫ್ಯುಶನ್, ಧಾರ್ಮಿಕ ಭಾವನೆಗಳಿಗೆ ನೋವು, ನಂಬಿಕೆಗಳಿಗೆ ಆಘಾತ, ಹಣದ ಆಶೆಗಳು, ಸ್ವಪ್ರತಿಷ್ಠೆಗಳು, ನಮ್ಮನ್ನು ಕೇಳಲೇ ಇಲ್ಲಾ ಅನ್ನುವ ಧೋರಣೆ, ವಿವಾದ ಹಚ್ಚಿ ಯಶಸ್ಸಿಗೆ ಪ್ರಯತ್ನಿಸುವದು ಹೀಗೆ ಏನೇನೋ ಕಾರಣ ಇರಬಹುದು. ಸುಪ್ರೀಮ್ ಕೋರ್ಟು ಪರ ನಿರ್ಣಯ ನೀಡಿದರೂ ಸಹ ಸಿನಿಮಾ ನೋಡುವರು ಪ್ರೇಕ್ಷಕರು ತಾನೇ? ಅವರು ಸಿನೆಮಾ ಥೇಟರಗೆ ಬಂದ್ರೆ ತಾನೇ ನೋಡೋದು. ಬಂದರೆ ಬರಲಿ ನೋಡೋಣ ಅನ್ನುವ ಆಕ್ರಮಣಕಾರಿ ಧೋರಣೆ ಯಾವದೇ ತಾಲಿಬಾನಿಗೂ ಕಡಿಮೆ ಇರುವದಿಲ್ಲ. ಈಗ ಫತ್ವಾಗಳನ್ನು ಯಾರಾದರೂ ಹೊರಡಿಸಬಹುದು ಅನ್ನುವ ಮಟ್ಟಿಗೆ ಬಂದು ನಿಂತಿದೆ. ಮನಸ್ಸನ್ನು ನೋಯಿಸುವ ಎಲ್ಲ ಮಾತು, ಕ್ರಿಯೆಗಳು ಸಹ ಹಿಂಸೆ, ಕ್ರೌರ್ಯದ ಇನ್ನೊಂದು ರೂಪವೇ. ಭಾರತೀಯ ಚಲನಚಿತ್ರದ ಇತಿಹಾಸ ಗಮನಿಸಿದರೆ ಅಭಿವ್ಯಕ್ತಿ ವಿವಾದಾತ್ಮಕ ಅಂಶ ಒಳಗೊಂಡ ಹಲವು ಸಿನಿಮಾಗಳು ಬಂದು ಹೋಗಿವೆ.
ಶೋಲೇ 1975 ರಲ್ಲಿ ಸಾಕಷ್ಟು ಹಿಂಸೆ ಇದೆ ಎನ್ನುವ ಕಾರಣಕ್ಕಾಗಿ ತಡೆ ಹಿಡಿಯಲ್ಪಟ್ಟಿದ್ದರೂ ಮುಂದೆ ಕಟ್ ಆದನಂತರ ಎಲ್ಲ ಗಲ್ಲಾ ಪೆಟ್ಟಿಗೆ ವಿಕ್ರಮ ಮುರಿದು ಹೊಸ ದಾಖಲೆ ಮಾಡಿತು. 77ರಕಿಸ್ಸಾ ಕುರ್ಸಿ ಕಾ ರಾಜಕೀಯ ವಿಡಂಬನೆಯಿಂದ ಮೊದಲು ತಡೆಹಿಡಿದರೂ ಮುಂದೆ ತೆರೆ ಕಂಡಿತು. 1996ರ ಕಾಮಸೂತ್ರ, 2004ರ ಬ್ಲಾಕ್ ಪ್ರಾಯಡೇ, 2000ರ URF ಪ್ರೊಫೆಸರ್, 2000ರ ಆನ್ ಫ್ರಿಡಮ್, 2010 ರ ಇಂಷಾ ಆಲ್ಲಾ ಫುಟ್ ಬಾಲ್ ತಮ್ಮ ಬೇರೆ ಬೇರೆ ವಿವಾದಾತ್ಮಕ ಕಥಾವಸ್ತುವಿನಿಂದಾಗಿ ತೆರೆ ಕಾಣಲಿಲ್ಲ. ಫೈರ್ 1996, ದಿ ಪಿಂಕ್ ಮಿರರ್ 2003, ಫಿರಾಕ್ 2008, ಹವಾ ಆನೆ ದೇ, ಪಾಂಚ್, ಗಾಂಡು , ಸಿನ್ಸ , ವಾಟರ್ 2005 ಇಂಡಿಯಾ ಡಾಟರ್
ಪರ್ಜಾನಿಯಾ2005 , ಚಲನ ಚಿತ್ರಗಳು ತೆರೆಯನ್ನು ಕಾಣಲು ಶಕ್ಯವಾಗಲಿಲ್ಲ. 1973 ರ ಗರಂ ಹವಾ,1975ರ ಆಂಧಿ ಮೊದಲ ಸುತ್ತಿನಲ್ಲಿ ವಿರೋಧ ಹರತಾಳ, ಪ್ರತಿಭಟನೆ ಏನೆಲ್ಲ ಎದುರಿಸಿದರೂ ಗಟ್ಟಿಯಾದ ಅಭಿನಯ, ಹಾಡು , ವಿವಾದಗಳೂ ಸಹ ಆಕರ್ಷಣೆ ಯಾಗಿ ಗಲ್ಲಾ ಪೆಟ್ಟಿಗೆ ಮತ್ತು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡದ್ದು ಈಗ ಇತಿಹಾಸವೇ. ಮೇಲೆ ನಮೂದಿಸಿದ ಕೆಲವು ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗದೆ ಹೊರ ದೇಶದಲ್ಲಿ ಆಗಿ ಹಲವು ಪ್ರಶಸ್ತಿಗಳನ್ನ ಬಾಚಿಕೊಂಡವು. ವಾದ ವಿವಾದಗಳು ಕೂಡಾ ಯಶಸ್ಸಿಗೆ ಕಾರಣವಾಗುತ್ತವೆ ಅನ್ನೋದಕ್ಕ ಈ ಸಿನಿಮಾಗಳೇ ಸಾಕ್ಷಿ. ಇದೇ ಇತಿಹಾಸ ಅಂತ ಹೇಳೋದು ಹೇಗೆ ? ಅದಕ್ಕಾವ DNA ಪರೀಕ್ಷೆ ಇಲ್ಲ. ನಂಬಿಗೆಯೇ ಮುಖ್ಯ. ವಿಶ್ವಾಸವೆ ತಳಹದಿ. ಇನ್ನೂ ಅಭಿವ್ಯಕ್ತಿ ಸ್ವಾತಂತ್ರದ ಪ್ರಶ್ನೆ. ಮನ ನೋಯದ ಹಾಗೆ ಹೇಳುವದೆ ಕ್ರಿಯೇಟಿವ್ ಚಾಲೆಂಜ. ಸದ್ಯ ಪದ್ಮಾವತಿಗೆ ಏನಾಗುತ್ತೋ ಗೊತ್ತಿಲ್ಲ. ರಾಜಕೀಯ ಪಕ್ಷಗಳು ತಮ್ಮದೇ ಆದ ಇಂಟರ್ ಪ್ರಿಟೇಶನ್ ಮಾಡುತ್ತವೆ. ಪಶ್ಚಿಮ ಬಂಗಾಳ ಸರ್ಕಾರವಂತೂ ಪದ್ಮಾವತಿಗೆ ಕೆಂಪು ರತ್ನ ಗಂಬಳಿ ಹಾಕಿ ಸ್ವಾಗತಿಸುತ್ತದೆ ಎಂದು ಹೇಳಿಬಿಟ್ಟಿದೆ. ಕರ್ನಾಟಕ ಅದನ್ನೇ ಮಾಡಿದರೆ ಆಶ್ಚರ್ಯವಿಲ್ಲ. ಇತಿಹಾಸ ನೋಡಿದವರು ಯಾರೂ ಇಲ್ಲ. ಕಥೆ ಕಾವ್ಯ, ಸತ್ಯ , ಕವಿಕಲ್ಪನೆ, ಮಾಧ್ಯಮಂತರ, ಮನರಂಜನೆ, ಲಾಭ ಗಳಿಕೆ, ಅಭಿನಯ, ಸಂಗೀತ, ಸಂಧಾನ ಇವುಗಳೆಲ್ಲದರ ಆರೋಗ್ಯಕಾರಕ ಮಿಶ್ರಣ ಬೇಕು. ಅದು ಇದ್ದಾಗಲೇ ಪದ್ಮಾವತಿಗೆ ಮುಕ್ತಿ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply