ಎಂಜಾಯ್ ಮಾಡಿ ಸಖತ್ ಹಾಟ್ ಮಗಾ!

ಎಂಜಾಯ್ ಮಾಡಿ ಸಖತ್ ಹಾಟ್ ಮಗಾ!
ಬಹಳ ವರ್ಷಗಳ ಹಿಂದೆ ಅಮಿತಾಭ ಬಚ್ಚನ್ ಮತ್ತು ಜಯಪ್ರದಾ ನಟಿಸಿದ್ದ ಸಿನೆಮಾ, ಬಹುಶಃ ಆಖ್ರಿ ರಾಸ್ತಾ. ಅದರಲ್ಲಿ ಹೀರೊ ಅಮಿತಾಭ ಒಬ್ಬ ಮಂತ್ರಿಯ ವಿಪರೀತ ಅಭಿಮಾನಿ ಮತ್ತು ಮಂತ್ರಿ ಅಥವಾ ಅವನ ಪಕ್ಷಕ್ಕಾಗಿ ಏನು ಎಲ್ಲವನ್ನು ಮಾಡಲು ಸಿದ್ಧನಿದ್ದಾಗ ರೇಲ್ ರೋಕೋ ಚಳವಳಿ ಮಾಡಲು ಹೀರೊನ್ನ ಪ್ರೇರೇಪಿಸಿ ಪೊಲೀಸರು ಬಂಧಿಸಿ ಜೇಲಿನಲ್ಲಿ ಇಡುವಂತೆ ಮಾಡಿ ನಂತರ ಪತ್ನಿ ಅವನನ್ನು ಬಂಧ ಮುಕ್ತ ಮಾಡಲು ಮಂತ್ರಿ ಬಳಿ ವಿನಂತಿಸಲು ಬಂದಾಗ ಮಂತ್ರಿ ಆಕೆಯನ್ನು ಬಲಾತ್ಕರಿಸುತ್ತಾನೆ. ನಂತರ ಹೀರೊ ಉಳಿದ ರೀಲುಗಳಲ್ಲಿ ಸೇಡು ತೀರಿಸಿಕೊಳ್ಳುವ ಸಿನಿಮೀಯ ಕಥೆ. ಇಲ್ಲಿ ಕಾಣುವ ಅಂಶವೆಂದರೆ ಸುಂದರ ಮತ್ತು ಸುಸೂತ್ರವಾದ ಪ್ರತಿಯೊಂದು ವಸ್ತು, ವ್ಯವಸ್ಥೆ, ವ್ಯಕ್ತಿ ನಮ್ಮ ಅಧೀನದಲ್ಲಿರಬೇಕು, ನನ್ನ ನಿಯಂತ್ರಣದಲ್ಲಿ ಇರಬೇಕು ಅನ್ನುವ ಮಾನವ ಸಹಜ ದೌರ್ಬಲ್ಯ. ಅದು ವ್ಯವಸ್ಥೆಗೂ ಹೊರತಲ್ಲ. ಸರ್ಕಾರಕ್ಕೂ ಹೊರತಲ್ಲ. ಸರ್ಕಾರವು ಖಾಸಗಿ ಕ್ಷೇತ್ರದಲ್ಲಿ ಸುಂದರ ನಡೆಯುವುದನ್ನು, ಲಾಭದಿಂದ ನಡೆಯುವುದನ್ನು, ಹೆಸರು ಪಡೆಯುವುದನ್ನು ನೋಡುತ್ತ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯಾವ ಯಾವುದೋ ಕಾರಣಗಳ ನೆವಾ ಮಾಡಿ ಸಿದ್ಧವಾಗುತ್ತದೆ. ಅದು ಆಸ್ಪತ್ರೆ, ಸಂಶೋಧನ ಸಂಸ್ಥೆ, ಸಾರಿಗೆ, ಬ್ಯಾಂಕ್, ಮೆಡಿಕಲ್, ಇಂಜನೀಯರಿಂಗ್ ಕಾಲೇಜು ಏನೇ ಆಗಿರಬಹುದು. ನಮ್ಮ ದೇಶದಲ್ಲಿ ವೈದ್ಯರು, ಮಂತ್ರಿಗಳು ದೇವರ ಹೆಸರಿನಲ್ಲಿಯೇ ಪ್ರತಿಜ್ಞೆ ಸ್ವೀಕರಿಸುತ್ತಾರೆ. ಸೇವೆ ಆರಂಭಿಸುವ ಮೊದಲು. ಜನಸೇವೆ ಜನಾರ್ದನ ಸೇವೆ ಅಂತ. ಸೇವೆಗೆ ಸಂಬಳವಿದ್ದರೆ ಸೇವೆನಾ ಅಥವಾ ಕರ್ತವ್ಯವಾ? ಇದು ವೈದ್ಯರಿಗೂ ಚುನಾಯಿತ ಪ್ರತಿನಿಧಿಗಳಿಗೂ ಅನ್ವಯವಾಗುವುದಷ್ಟೇ ಅಲ್ಲದೆ ಚುನಾಯಿತ ಸದಸ್ಯರ ಸಂಬಳ ಮತ್ತು ಸೌಲಭ್ಯಗಳು ಜನ ಸೇವೆಗಳಿಗಾಗಿ ಹೆಚ್ಚಾಗಿವೆಯೇ? ಅದಕ್ಕೂ ಒಂದು ಅಕೌಂಟಿಬಿಲಿಟಿ ಬೇಡವೇ? ಎಲ್ಲ ಕಡೆಗೂ ಸೇವೆ, ಕರ್ತವ್ಯ ಜವಾಬುದಾರಿ, ಪಾರದರ್ಶಿಕತೆ, ಅಕೌಂಟಿಬಿಲಿಟಿ ಬೇಕೆಂದರೆ ಅದು ಎಲ್ಲರಿಗೂ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಇಷ್ಟು ಕನಿಷ್ಠವಾಗಿದ್ದರೂ ಕಾನೂನು ಅವಶ್ಯಕತೆ ಬರುತ್ತಿರಲಿಲ್ಲ.
ಇಲ್ಲಿ ನಾನು ವೈದ್ಯನೂ ಅಲ್ಲ ಮತ್ತು ಸದ್ಯಕ್ಕೆ ರೋಗಿಯೂ ಅಲ್ಲ. ಆದರೆ ರವಿವಾರ ಬಂಧುಗಳಿಗೆ ತೀವ್ರವಾಗಿ ರೋಗ ಅಥವಾ ಜಡ್ಡು ಆದಾಗ ಆಸ್ಪತ್ರೆಯಲ್ಲಿ ಯಾರೂ ವೈದ್ಯರು ಸಿಗದೆ ತೊಂದರೆಪಟ್ಟದ್ದು ನನಗಂತೂ ಅನುಭವಕ್ಕೆ ಬಂದ ಸಂಗತಿ. ಇನ್ನೂ ಈಗ ಖಾಸಗಿ ಆಸ್ಪತ್ರೆ ವೈದ್ಯರ ಸ್ಟ್ರೈಕ್ ಮೇಲೆ ಇದ್ದಾಗ ಎಲ್ಲೆಡೆ ಆಗಬಹುದಾದ ಪರಿಸ್ಥಿತಿ, ಸಾವು, ನೋವು, ದುಗುಡ, ದುಮ್ಮಾನ, ಚಿಂತೆ, ಉದ್ವೇಗ ಒದ್ದಾಟಗಳ ಮತ್ತು ಸಂಕಟಗಳ ಗಾತ್ರ, ಭಾವ ಅರ್ಥವಾಗುತ್ತದೆ. ಆದರೆ ಒಂದುಕ್ಷಣಾ ವಿಚಾರಮಾಡುವ ಮನಸ್ಸು ಮಾಡಿ ಇದು ಏಕೆ ಹೀಗೆ ಅನ್ನೋ ವಿಶ್ಲೇಷಣೆ ಮಾಡಿದಾಗ ಕೆಲವು ಅಂಶಗಳು ಸಹ ಮಹತ್ವ ಪಡೆಯುತ್ತವೆ.
ಖಾಸಗಿ ವೈದ್ಯಕೀಯ ಕ್ಷೇತ್ರವನ್ನೇ ಈಗ ತೆಗೆದುಕೊಂಡರೆ, ಹೊರಗಿನಿಂದ ನೋಡಿದರೆ ಸುಂದರ ಸುವ್ಯವಸ್ಥಿತವಾಗಿ ದುಡ್ಡು ಮಾಡುವ, ಐಷಾರಾಮಿ ಜೀವನದ ಝಲಕುಗಳು ಎದ್ದು ಕಾಣುತ್ತವೆ. ಮತ್ತೆ ಅದರಲ್ಲಿ ಗ್ರಾಮೀಣ, ಪಟ್ಟಣ, ನಗರ, ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ, ಬರೀ ಒಂದು ಪದವಿ, ಸ್ನಾತಕೋತ್ತರ ಸೂಪರ್ ಸ್ನಾತಕೋತ್ತರ, ಕಾರ್ಪೋರೇಟ್ ಸಂಸ್ಕೃತಿಯ ಹೈಟೆಕ್ ಆಸ್ಪತ್ರೆಗಳು ಆಯುರ್ವೇದ, ಹೋಮಿಯೋಪತಿ, ಯುನಾನಿ, ಹೀಗೆ ಹಲವು ಪ್ರಕಾರದ ಚಿಕಿತ್ಸಾ ಆಸ್ಪತ್ರೆಗಳು. ಎಲ್ಲವೂ ದುಡ್ಡು ಮಾಡುವುದಲ್ಲ. ಆದರೆ ಕಾನೂನು ಪ್ರಕಾರ ಎಲ್ಲವು ಸರಕಾರದ ಸುಪರ್ದಿಯಲ್ಲಿ ಇರಬೇಕು ಅನ್ನುವ ಇರಾದೆ. ಸರ್ಕಾರದ ಸುಪರ್ದಿಯಲ್ಲಿ ಇರುವ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಾಲೂಕು ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹೊಂದಿರುವ ಆಸ್ಪತ್ರೆಗಳು ಎಷ್ಟು ಚೆನ್ನಾಗಿವೆ. ಸರಿಯಾದ ಸಂಖ್ಯೆಯ, ಗುಣಮಟ್ಟದ, ಯಾವಾಗಲೂ ಆಸ್ಪತ್ರೆಯಲ್ಲಿರುವ ವೈದ್ಯರು, ದಾದಿಗಳು, ಔಷಧ, ಗುಣಮಟ್ಟದ ಚಾಲ್ತಿ ಅರ್ಹತೆಯಲ್ಲಿರುವ ಉಪಕರಣ, ಯಂತ್ರಗಳು, ಆಸ್ಪತ್ರೆಗೆ ಬೇಕಾದ ಶುಚಿತ್ವ ಉತ್ತಮ ವಾತಾವರಣ ಇವೆಯಾ ಅನ್ನುವುದನ್ನು ಗಮನಿಸಿದಾಗ ಜನ, ರೋಗಿಗಳು ಯಾಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಅನ್ನುವುದು ತಿಳಿಯುತ್ತದೆ. ಇನ್ನೂ ಖಾಸಗಿ ಆಸ್ಪತ್ರೆಗಳಿಗೆ ಬಂದರೆ ಪ್ರತಿ ರೋಗಿಗೆ ಅವಶ್ಯಕ ಇರಲಿ ಬಿಡಲಿ ಎಲ್ಲ ತರಹದ ಪರೀಕ್ಷೆಯಾಗಲೇಬೇಕು. ಏಕೆಂದರೆ ಪ್ರತಿಯೊಂದಕ್ಕೂ ಸಾಕ್ಷಿ, ಆಧಾರ ಬೇಕು. ಒಂದು ಚಿಕಿತ್ಸಾಕ್ರಮದ ನಿರ್ಧಾರ ಆಗಲು ಪರೀಕ್ಷೆಗಳು ಬೇಕು. ಕಾನೂನುಗಳೂ ಬೇಕು. ಇದರ ವೆಚ್ಚ ರೋಗಿ ಅಥವಾ ಸರ್ಕಾರ ಅಥವಾ ವಿಮಾ ಕಂಪನಿ ನೀಡಬೇಕು. ಹೀಗಾಗಿ ಅಲ್ಲಿ ಡಾಕ್ಟ್ರುಗಳ ಪರಿಣಿತಿ, ಅನುಭವದ ಆಧರಿಸಿ ಚಿಕಿತ್ಸೆ ನೀಡದೆ ಎಲ್ಲ ರೀತಿಯ ಪ್ಯಾತೊಲಾಜಿಕಲ್ ಪರೀಕ್ಷೆ ಮಾಡಿಯೇ ಮುಂದೆ ನೋಡುವ ಸೇವಾ ವಿಕ್ರಯಗಳು, ಪ್ರತಿಬಾರಿ ನೋಂದಣಿ ಫೀ, ಕೆಲವು ಕಡೆ ಫೈಲು, ಕಾಗದ ಮುದುಡಿಯಾದರೂ ಮತ್ತೆ ಹೊಸ ಫೀ ವಸೂಲು ಮಾಡುವ ಪದ್ಧತಿಗಳು, ಮುಂಗಡ ವೇಳೆ ಕೊಡುವಲ್ಲಿ ಹೆಚ್ಚಿನ ಫೀ, ಬರೆದು ಕೊಟ್ಟ ಔಷಧ ಆಸ್ಪತ್ರೆಗೆ ಹೊಂದಿಕೊಂಡಿರುವ ಫಾರ್ಮಸಿಗಳಲ್ಲಿಯೇ ಖರೀದಿಸುವ ವ್ಯವಸ್ಥೆ, ಅದರಲ್ಲೂ ಕೆಲವು ಕಂಪನಿಗಳ ಹೆಚ್ಚಿನದರದ ಔಷಧಿಗಳು, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲೇಬೇಕು ಅನ್ನುವ ಅಬ್ಸರವೇಷನ್‍ನಲ್ಲಿ ಇಡಬೇಕು ಅನ್ನುವ ಭಯಾನಕ ಸನ್ನಿವೇಶ ನಿರ್ಮಾಣ, ಸಿಜೆರಿಯನ್ ಅಥವಾ ಶಸ್ತ್ರ ಚಿಕಿತ್ಸೆ ಆಗಲೇಬೇಕು ಎನ್ನುವ ಪ್ರಚೋದನೆಗಳು, ಬಿಳಿ ಸೀರೆ ಉಟ್ಟವರೆಲ್ಲ ನರ್ಸಗಳೇ ಅನ್ನು ಭ್ರಮೆಗಳು, ಹೆಚ್ಚಿನ ಕಡೆ ರಸೀದಿ ಇಲ್ಲದ ವ್ಯವಹಾರಗಳು, ಹಳೆಯ ದಿನ, ಮಾಸಿಕ ಪತ್ರಿಕೆಗಳು ಹೊರ ರೋಗಿಗಳ ವಿಭಾಗದಲ್ಲಿ, ಕಂಪ್ಯೂಟರ್ ಉಪಯೋಗಿಸದೆ ಇರುವದು, ನಗದು ವ್ಯವಹಾರ ಪ್ರಚೋದನೆ ಹೀಗೆ ಇಪ್ಪತ್ತೆಂಟು ವಿಷಯಗಳು ಕಣ್ಣ ಮುಂದೆ ಬರುತ್ತವೆ. ಯಾಕೆ ಹೀಗೆ ಅನ್ನುವ ಪ್ರಶ್ನೆಗೆ ನಿಖರ ಉತ್ತರ ಹೇಳುವುದು ಕಠಿಣ. ನಮ್ಮ ಇಂಡಿಯಾದಲ್ಲಿ ಅದೂ ಪ್ರಸ್ತುತ ಸಮಾಜದಲ್ಲಿ ಇನ್ನೊಂದು ರೀತಿಯ ಸಾಮಾಜಿಕ ಸಮಸ್ಯೆ. ಅದು ಎದ್ದು ಕಾಣುವುದು ಅಪಘಾತಗಳಾದಾಗ. ಚಿಕ್ಕ ವಾಹನದವರ ಮೇಲೆ ಕರುಣೆ, ದೊಡ್ಡ ವಾಹನದವರ ಮೇಲೆ ಸಿಟ್ಟು, ಹಾಗೆಯೇ ಪಾದಚಾರಿಗಳ ಮೇಲೆ ಪ್ರೀತಿ ವಾಹನ ಚಾಲಕನ ಮೇಲೆ ಸಿಟ್ಟು, ಇದೇ ರೀತಿ ವಿಸ್ತರಿಸುತ್ತ ಹೋದಾಗ, ಹೆಣ್ಣು ಗಂಡು, ವಿದ್ಯಾರ್ಥಿ ಶಿಕ್ಷಕ, ಕಾರ್ಮಿಕ ಮಾಲಕ, ಮತದಾರ ಚುನಾಯಿತ ಪ್ರತಿನಿಧಿ, ರೋಗಿ ವೈದ್ಯ ಹೀಗೆ ಒಂದು ರೀತಿಯ have and havenot ಸಂಘರ್ಷಗಳು. ಶೋಷಕ ಮತ್ತು ಶೋಷಿತ ವರ್ಗಗಳು ಹುಟ್ಟಿಕೊಂಡು ಬಿಡುತ್ತವೆ. ಇಂಥಹದರಲ್ಲಿ ಅಸಹನೆ, ರೋಷ, ಸಿಟ್ಟು, ಬಡತನ ಶ್ರೀಮಂತಿಕೆ, ನೋವು ಸಾವು ಎಲ್ಲವೂ ಕೂಡಿ ಬರುತ್ತವೆ. ಸರ್ಕಾರ ಯಾವುದನ್ನಾದರೂ ಅಗತ್ಯ ಚರ್ಚೆ ಸಂಬಂಧಪಟ್ಟವರ ಜತೆ ಮಾಡದೆ ತರಾತುರಿಯಿಂದ ಚುನಾವಣೆ ಬರುತ್ತಿರುವ ಸನ್ನಿವೇಶದಲ್ಲಿ ಕಾನೂನು ಮಾಡಲು ಗಡಿಬಿಡಿ ಮಾಡುವುದೇಕೆ? ಅಷ್ಟೇ ಅಲ್ಲದೆ ಪೂರ್ವಾಪರ ಯೋಚನೆ, ಮುಂಜಾಗರುಕತೆ ಕ್ರಮಗಳಿಲ್ಲದೆ ಸಮರ ಸಾರುವುದು ಏಕೆ ಅನ್ನುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶ್ರೀಮಂತ ಕಂಪನಿಗಳು ಬೆಂಬಲ, ಖ್ಯಾತ ವಿಖ್ಯಾತ ತಜ್ಞರು ಸೂಚಿಸಿದ ಬೆಂಬಲ ಮತ್ತು ಸರ್ಕಾರಿ ಆಸ್ಪತ್ರೆಗಳ ಜಾಣ ನಿಷ್ಕ್ರಿಯತೆ, ಕುಸಿಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಸಮರೋಪಾದಿಯಲ್ಲಿ ಕೆಲಸಮಾಡುವ ಪ್ರವೃತ್ತಿ ಇಲ್ಲದಿರುವ ಮಾನವ ಸಂಪನ್ಮೂಲ ಇತ್ಯಾದಿಗಳ ಗಮನವಿಲ್ಲದಿರುವುದು ಈಗಾಗಲೇ ಎಲ್ಲರ ಅನುಭವಕ್ಕೆ ಬಂದ ಸಂಗತಿ.
ಈ ಲೇಖನ ಪ್ರಕಟವಾಗುವ ಹೊತ್ತಿಗೆ KPME ಕಾನೂನು ಮಂಡನೆಯಾಗಿ ಸ್ವೀಕೃತ ಅಥವಾ ಅಸ್ವೀಕೃತವಾಗಿರಬಹುದು. ಹೈಕೋರ್ಟ್ ತನ್ನದೇ ಆದ ಛಾಟಿಯೇಟುನ್ನಂತೂ ವೈದ್ಯರ ಮೇಲೆ ಹೊಡೆದು ಆಗಿದೆ. ಬಹುಶ ಸರ್ಕಾರ ತನ್ನ ಆಸ್ಪತ್ರೆಗಳನ್ನು ಸರಿಯಾಗಿ ಸಾಮರ್ಥ್ಯಪೂರ್ಣವಾಗಿ ನಡೆಸಲು ಮತ್ತೆ ಯಾರಾದರೂ ಕೋರ್ಟಿಗೆ ಹೋಗಬೇಕಾದೀತು. ಚುನಾಯಿತ ಪ್ರತಿನಿಧಿ ಎಷ್ಟೇ ಶ್ರೀಮಂತನಾಗಿದ್ದರೂ ಸರ್ಕಾರವೇಕೆ ಅವರ ಚಿಕಿತ್ಸಾ ವೆಚ್ಚ ಅದೂ ಸಿಂಗಾಪುರ, ಅಮೆರಿಕಾ ಇತ್ಯಾದಿ ದೇಶಗಳಲ್ಲಿಯದು ವಹಿಸಬೇಕು? ಸರ್ಕಾರಿ ಆಸ್ಪತ್ರೆಗಳು ಇಲ್ಲವೇ? ಸಾಮಾಜಿಕ ಕಳಕಳಿಯಿಲ್ಲದೆ ಕೇವಲ ಹಣಗಳಿಸುವ ಕ್ರಿಯೆಯಲ್ಲಿದ್ದಾಗ ಕಾನೂನಿನ ಸೂಕ್ಷ್ಮಗಳು ತಜ್ಞರಿಗೂ ತಿಳಿಯುವುದಿಲ್ಲ. ಆದರೆ ಕೆಲವು ವಿಷಯ ಮಾಡಬಹುದಾಗಿದೆ. ಸರ್ಕಾರಿ ಆಸ್ಪತ್ರೆಗಳು ಸುಧಾರಿಸಬೇಕೆಂದರೆ ಎಲ್ಲ ಚುನಾಯಿತ ಪ್ರತಿನಿಧಿಗಳು (ಪಂಚಾಯಿತಿಯಿಂದ, ಸಂಸತ್‍ವರೆಗೂ) ಮತ್ತು ಅವರ ಅವಲಂಬಿತರು ಕಡ್ಡಾಯವಾಗಿ ಭಾರತದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಹೊಂದಬೇಕೆಂದು ಕಾನೂನು ಮಾಡುವುದು, ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಮತ್ತು ಸೂಪರ್ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಅತಿಕಡಿಮೆ ಫೀಯಲ್ಲಿ ನೀಡುವ ವ್ಯವಸ್ಥೆ ಮಾಡುವ ಕಾನೂನು, ಎಲ್ಲರಿಗೂ ಉಚಿತವಾದ ಆರೋಗ್ಯವಿಮಾ ಯೋಜನೆ ಭಾಗ್ಯ ಪ್ರಸ್ತುತಮಾಡುವ ಕಾನೂನು, ಅಷ್ಟೇ ಅಲ್ಲದೆ ವೈದ್ಯಕೀಯ ಪದವೀಧರರಿಗೆ ಪ್ರತಿ ಪದವಿ ಮುಗಿಸಿದಾಗ ಕಡ್ಡಾಯವಾಗಿ ಗ್ರಾಮೀಣ ಅಥವಾ ಸೈನ್ಯ ಸೇವಾ ಅನುಕೂಲ ಮಾಡಿಕೊಡುವುದು. ಸೈನ್ಯ ಸೇವೆ ಕನಿಷ್ಠ ಪಕ್ಷ ಕೊಂಚ ದೇಶಾಭಿಮಾನ, ಉಚಿತ ಸ್ನಾತಕೋತ್ತರ ಶಿಕ್ಷಣ, ಗೌರವಯುತ ಸಂಬಳ ಮತ್ತು ಇತರ ಸೌಕರ್ಯಗಳನ್ನು ನೀಡಿ ಸೇವೆಗೆ ಪ್ರೇರೇಪಿಸುತ್ತದೆ. ಅಂಥ ಸೇವೆಯಿಂದ ಬಂದ ವೈದ್ಯರು ಹೆಚ್ಚು ಜನಸ್ಪಂದನಕ್ಕೆ ಸಿದ್ಧರಿರುತ್ತಾರೆ.
ನಮ್ಮ ದೇಶದಲ್ಲಿ ಯಾವುದನ್ನು ಸಹ ದೀರ್ಘಾವಧಿ ಮುಂದಾಲೋಚನೆ, ಆಗಬಹುದಾದ ಪರಿಣಾಮಗಳನ್ನು ಮುಂಚೆ ವಿಚಾರ ಮಾಡದೆ ನಮಗೆನೇ ಬಂಧನಕಾರಿಯಾಗಬಲ್ಲ ಸಂಗತಿಗಳನ್ನು ಹುಟ್ಟಿಸುತ್ತವೆ. ಅಂದರೆ ಹರತಾಳಗಳು, ಬಂದ್‍ಗಳು. ಅಧಿಕ ಹಣ ಇರುವಿಕೆ, ಅಧಿಕ ಹಣ ಇಲ್ಲದಿರುವುದು ಎರಡೂ ಸಂಘಟನೆಗಳ ಅಸ್ತಿತ್ವಕ್ಕೆ ಕಾರಣವಾಗುತ್ತವೆ. ಅಧಿಕಾರ ಮತ್ತಷ್ಟು ಅಮಲೇರಿಸುತ್ತದೆ. ಹೀಗಾಗಿ ಈ ಗೊಂದಲಗಳು, ಸಂಘರ್ಷಗಳು, ಮಾಧ್ಯಮಗಳ ವಿಧವಿಧ ಮಹಿಮೆಗಳು ಎಲ್ಲವೂ ಕಲಸುಮೇಲೋಗರವಾಗಿ ಜನಸಾಮಾನ್ಯರಿಗೆ ಗೊಂದಲ ಮಾಡಿ ಒಂದಿಷ್ಟು ರಾಜಕಾರಣಿಗಳ ಪರ, ಒಂದಿಷ್ಟು ವೈದ್ಯರ ಪರ, ಒಂದಿಷ್ಟು ಅಡ್ಡಗೋಡೆ ಮೇಲೆ ದೀಪ ಇಟ್ಟಹಾಗೆ. ಚುನಾವಣಾ ಸಮಯದಲ್ಲಿ ರಾಜ್ಯದ ಜನತೆಯ ಮೇಲೆ ಒಂದಿಲ್ಲದೊಂದು ಹೊಸ ಹೊಸ ವಿಷಯ, ಮಾಧ್ಯಮಗಳಿಗೆ ತುಸು ಆಹಾರ ಆಪರ, ಈ ಪರ ಎಡ, ಬಲ ಮಧ್ಯಮ ಮಾರ್ಗಗಳ ಹುಡುಕಾಟ ಆರಂಭ! ಎಂಜಾಯ್ ಮಾಡಿ ಸಖತ್ ಹಾಟ್ ಮಗಾ! ಇತ್ತೀಚೆಗೆ ವಾಟ್ಸಾಪ್‍ದಲ್ಲಿ ಬಂದ ಒಂದು ಕಥೆ ಇಲ್ಲಿ ನೆನಪಾಯಿತು.
ಕಳ್ಳರೆಲ್ಲ ಸೇರಿ ಸಭೆ ನಡೆಸಿದರು. “ದಿನದಿಂದ ದಿನಕ್ಕೆ ಕಳ್ಳರ ವಿರುದ್ಧ ಹೊಸ ಹೊಸ ಕಠಿಣ ಕಾನೂನನ್ನು ಜಾರಿಗೊಳಿಸುತ್ತಿದ್ದಾರೆ. ನಾವು ಮುಷ್ಕರ ಹೂಡೋಣ”
ಸರಿ, ಕಳ್ಳರೆಲ್ಲ ಕೆಲವು ದಿನ ಕಳವು ನಡೆಸದೆ ಮುಷ್ಕರ ಹೂಡಲು ತೀರ್ಮಾನಿಸಿದರು. ಪೊಲೀಸರಿಗೆ ಬರುವ ಮಾಮೂಲು ನಿಂತು ಹೋಯಿತು. ಕಳ್ಳರ ಒಡೆಯರಿಂದ ಪಕ್ಷಕ್ಕೆ ಬರುವ ನಿಧಿ ನಿಂತು ಹೋಗಿ ರಾಜಕಾರಣಿಗಳು ಚಿಂತೆಗೊಂಡರು. ಕಾರ್ಯಕರ್ತರ ಕೈಯಲ್ಲಿ ಹಣ ಕಡಿಮೆಯಾಯಿತು. ಬೀಗಗಳ ಉದ್ಯಮ ಕುಸಿಯಿತು. ಬಾಗಿಲು ಮಾಡುವ ಬಡಿಗರು ಕೆಲಸ ಇಲ್ಲದೆ ಬಿದ್ದರು. ಬ್ಯಾಂಕ್‍ಗಳಲ್ಲಿ ಚಿನ್ನ, ಹಣ ಇಡುವವರ ಸಂಖ್ಯೆ ಇಳಿಮುಖವಾಗಿ ಬ್ಯಾಂಕ್ ಬಡವಾಯಿತು. ಪೊಲೀಸರ ಸಂಖ್ಯೆ ಇಳಿಸಲಾಗಿ ನಿರುದ್ಯೋಗ ಸಮಸ್ಯೆ ತಲೆದೋರಿತು. ಶಸ್ತ್ರ ಪೂರೈಕೆ ಉದ್ಯಮಕ್ಕೂ ಹೊಡೆತ ಬಿತ್ತು. ದೇವರ ಹರಕೆ ಹುಂಡಿಗೆ ಬೀಳುವ ಹಣಕ್ಕೆ ಕತ್ತರಿ ಬಿತ್ತು. ಒಟ್ಟಿನಲ್ಲಿ ಅರ್ಥವ್ಯವಸ್ಥೆ ಅಸ್ತವ್ಯಸ್ತವಾಗಿ ಹಾಹಾಕಾರ!
ಸರಕಾರ ಎಚ್ಚೆತ್ತು ಅನಿವಾರ್ಯವಾಗಿ ಕಳ್ಳರ ಮುಖಂಡರ ಜೊತೆ ಮಾತುಕತೆ ನಡೆಸಿತು. ಅವರ ಬೇಡಿಕೆಗಳಿಗೆ ಮಣಿದು ಕಾನೂನನ್ನು ದುರ್ಬಲಗೊಳಿಸಿತು. ಕಳ್ಳರು ಮುಷ್ಕರ ಹಿಂದೆಗೆದರು. ಎಲ್ಲವೂ ಎಂದಿನಂತೆ ಸಹಜ ಸ್ಥಿತಿಗೆ ಮರಳಿ ಬಂದವು!

ಕೃಪೆ : ಸಂಯುಕ್ತ ಕರ್ನಾಟಕ

Leave a Reply