ಓ…ಸಮಾವೇಶ ಸುಮ್ಮನೆ ಆವೇಶ

ಓ…ಸಮಾವೇಶ ಸುಮ್ಮನೆ ಆವೇಶ
ಇತ್ತೀಚಿನ ದಿನಗಳಲ್ಲಿ ಅದೂ ಚುನಾವಣೆ ಸಮೀಪ ಹೊಸ್ತಿಲಲ್ಲಿ ಪ್ರವೇಶಕ್ಕೆ ಅಂತ ತವಕಿಸುತ್ತ ಇರುವಾಗ ಒಂದಿಷ್ಟು ಪುಲಕಗಳು, ದುಗುಡಗಳು, ಒಂದಿಷ್ಟು ಭ್ರಮೆಗಳು, ಅಧಿಕಾರದ ಕುರ್ಚಿಯಲ್ಲಿ ಮೇಲೆ ಮಂತ್ರಿಯಾಗಿಯೋ, ಶಾಸಕರಾಗಿಯೋ, ಸಂಸದರಾಗಿಯೋ ಕುಳಿತಾಗ ಆವೇಶಭರಿತ ಮಾತು, ಕೇಳಲು ಟ್ರಕ್ಕು, ಟ್ರಾಕ್ಟರ್‍ಗಳಲ್ಲಿ ಟ್ರೆನುಗಳಲ್ಲಿ, ಬಸ್ಸುಗಳ ಮೂಲಕ ಜನರನ್ನು ಪೈಪು ಮುಖಾಂತರ ಕೆರೆಗೆ ನೀರು ಹರಿಸಿ ತುಂಬಿದಂತೆ ಸಮಾವೇಶಗಳಲ್ಲಿ ಜನರನ್ನು ಜಮಾಯಿಸಿ ಸವಲತ್ತುಗಳ ಜಾಮ್ ಹಚ್ಚಿ ಧರ್ಮ ಜಾತಿಗಳ ಬಂಡವಾಳ ಹೂಡಿಕೆಯಾಗುತ್ತಿರುವುದು ಬಹಳ ಇಂಟರೆಸ್ಟಿಂಗ್ ವಿಷಯವಾಗಿಬಿಟ್ಟಿದೆ.
ಸಮಾವೇಶಗಳು ಎಲ್ಲ ರಾಜ್ಯಗಳಲ್ಲಿ, ಯಾವುದೇ ಸರ್ಕಾರವಿರಲಿ ಗುಜರಾತಿನಲ್ಲಿ ಪಟೇಲರದ್ದು, ಹರಿಯಾಣ ಪಂಜಾಬ್‍ಗಳಲ್ಲಿ ಜಾಟ್‍ರದ್ದು ಜರಗುವುದು ಸಾಮಾನ್ಯ ವಿಷಯ. ಒಂದೊಂದು ರಾಜ್ಯದಲ್ಲಿ ಒಂದೊಂದು ಸಮಸ್ಯೆ. ಇಲ್ಲಿ ಒಂದು ಮಾತು. ನಿಜವಾದ ಧಾರ್ಮಿಕ ಕಾರಣಕ್ಕಾಗಿ ಲಕ್ಷಗಟ್ಟಲೇ ಭಕ್ತ ಜನ ಬರುವ ಮಸ್ತಕಾಭಿಷೇಕಗಳು, ಕೋಟಿಗಟ್ಟಲೇ ಭಕ್ತ ಜನ ಸೇರುವ ಕುಂಭ ಮೇಳಗಳು ಯಾವ ಮಂತ್ರಿಗಳಿಂದ ಸಂಘಟಿತವಾಗಿರುವುದಿಲ್ಲ ಭಕ್ತಿ ಮತ್ತು ನಂಬಿಕೆ, ಶ್ರದ್ಧೆಗಳೇ ಮುಖ್ಯವಾಗಿರುತ್ತವೆ. ಅಲ್ಲಿ ಯಾರೂ ಯಾರನ್ನೂ ಬೈಯುವದಿಲ್ಲ ಯಾವ ಬೇಡಿಕೆ ಸರ್ಕಾರದ ಮುಂದೆ ಇಡುವುದಿಲ್ಲ. ಸರ್ಕಾರ ಯಾವುದೇ ಪಕ್ಷದ್ದಿರಲಿ ಸಂಬಂಧಪಟ್ಟ ಜನ ಸೌಕರ್ಯಗಳನ್ನು ಒದಗಿಸುತ್ತದೆ. ಇಂಥಹವುಗಳು ಈ ಸಮಾವೇಶಗಳಲ್ಲಿ ಬರುವುದಿಲ್ಲ.
ಚುನಾವಣೆಯ ಸಮಯ ಸಾಧಕ ಸಮಾವೇಶದಲ್ಲಿ ಆವೇಶ ಭರಿತ ಮಾತುಗಳು, ಪ್ರಚೋದಕ ಉಪನ್ಯಾಸಗಳು, ಬೈಗಳುಗಳು ಸಹ ಮಾಮೂಲು. ಹೆಚ್ಚು ಕಡಿಮೆ ಸಮಾವೇಶಗಳು ಸಮರ ಸಾರಿದಂತೆ ಸಾರುವುದು. ಅದೇನೋ ಹೇಳ್ತಾರಲ್ಲ  Everything is fair in love and war ಜಾತಿ ಧರ್ಮ ಭಾಷೆಗಳ ಬೆಂಕಿಯಲ್ಲಿ ಸುತ್ತಲೂ ಕೂತು ಚುನಾವಣೆಯ ಚಳಿಯಲ್ಲಿ ಕೈ ಮೈ ಕಾಸಿಕೊಳ್ಳುವುದು ಅಥವಾ ಕುಡಿಯಲು ಕುಣಿಯಲು ಮೌಜ ಮಸ್ತಿ ಮಾಡಲು ಕ್ಯಾಂಪ್ ಫೈರ್ (Camp fire) ಮಾಡಿ ಉಪಯೋಗಿಸಿಕೊಳ್ಳುವುದು ಸಹ ಅವಕಾಶಗಳಲ್ಲಿ ಬರುವುದು. ಸಮಾವೇಶಗಳ ಹಿಂದಿನ ಮುಂದಿನ ತೋರಿಸುವ ಭಾಗದ ಉದ್ದೇಶಗಳೇ ಬೇರೆ ಬೇರೆಯಾಗಿರುತ್ತವೆ. ಅಧಿಕಾರಸ್ತರು ಸಮಾವೇಶದ ಸಂಘಟಕರಾಗದಿದ್ದರೆ ಸಮಾವೇಶಕ್ಕೆ ಜನ ತಾವು ತಾವಾಗಿಯೇ ಬರುತ್ತಾರೋ? ಹಿಂದೆ ಮಹಾತ್ಮ ಗಾಂಧೀಜಿಯವರು ಭಾಗವಹಿಸುವ ಸಮಾವೇಶಗಳಲ್ಲಿ ಚಕ್ಕಡಿಗಳಲ್ಲಿ, ಆಗಿರುವ ಬಸ್ಸುಗಳಲ್ಲಿ ಟಿಕೇಟ್ ತೆಗೆಸಿಕೊಂಡು ನಡೆದುಕೊಂಡಾದರೂ ಸಭೆಗಳಿಗೆ ಜನ ಸಾಮಾನ್ಯರು ಯಾವ ಜಾತಿ ಮತ ಪಂಥಗಳ ಬಗ್ಗೆ ವಿಚಾರ ಮಾಡದೆ ಗಾಂಧೀಜಿ ಅವರನ್ನು ನೋಡಲು, ಅವರ ಸರಳತೆಯ ಜೀವನ ರೀತಿ ನೋಡಲು, ಮಾತು ಕೇಳಲು ಒಂದಿಲ್ಲದೊಂದು ದಿನ ಸ್ವತಂತ್ರ ಭಾರತ ನಮ್ಮದಾಗಿತೂ ಅಂತ ಜನಸು ಕಾಣುತ್ತಾ ಬರುತ್ತಿದ್ದರು. ಗಾಂಧೀಜಿಯವರಿಗೆ ಯಾವ ಅಧಿಕಾರವಿರಲಿಲ್ಲ ಅವರ ಜತೆ ಯಾವ ಸ್ವಾಮಿಗಳು ಇರುತ್ತಿರಲಿಲ್ಲ, ಯಾವ ಸೆಲೆಬ್ರಿಟಿ ಸಿನಿಮಾ ನಟ ನಟಿಯರು ಇರುತ್ತಿರಲಿಲ್ಲ ಎಂಬುವದು ಗಮನಾರ್ಹ. ಮಾಧ್ಯಮಗಳ ಪ್ರಭಾವವೂ ಈಗಿನಂತೆ ಇರದಿದ್ದರೂ ಅಷ್ಟೆಲ್ಲ ಸಾಧ್ಯವಾಗಿತ್ತು. ಈಗ? ಏನೇ ಮಾಡಬೇಕೆಂದರೂ ಕೈಲ್ಲಿ ಅಧಿಕಾರವಿದ್ದರೆ ಮಾತ್ರ ಸಾಧ್ಯ. ರಾಜೀನಾಮೆ ನೀಡಿಯೇ ನಂಬಿದ ತತ್ವಗಳಿಗಾಗಿ (ಒಂದುವೇಳೆ ನಿಜವಾಗಿ ನಂಬಿದ್ದರೆ) ಸಂಘಟನೆ ಮಾಡಿದಾಗ ಮಾತ್ರ, ಸಾಮರ್ಥ್ಯ ಗೊತ್ತಾಗುವುದು ಇಲ್ಲದಿದ್ದರೆ ಇಲ್ಲ. ಮಠ ಗುಡಿಗಳಿಗೆ ಧನ ಸಹಾಯ ಮಾಡಿ ಸಹಾಯದ ಪ್ರಭಾವದಲ್ಲಿ ಸಿಲುಕಿಸುವುದು ಕಲಚೂರಿ ಬಿಜ್ಜಳನ ಸಾಮ್ರಾಜ್ಯ, ಅಲ್ಲಿಯ ಮಂತ್ರಿಗಳು, ಪ್ರಜೆಗಳು ಸುಧಾರಣೆಗಳು, ಅನುಭವ ಮಂಟಪ ಸಿದ್ಧಾಂತಗಳು, ಸುಧಾರಣೆಗಳು, ಸುಧಾರಣೆಗಳ ಪರಿಣಾಮಗಳು, ಆಗ ಆಳುವವರಲ್ಲಿ ಇರಬಹುದಾದ ದುಗುಡ ದುಮ್ಮಾನಗಳು, ಪ್ರಾಮಾಣಿಕರು ಎದುರಿಸಬಹುದಾದ ಭಯ, ಕನಸುಗಳು ಎಲ್ಲವೂ ಕಣ್ಣ ಮುಂದೆ ಸಾಲು ಸಾಲಾಗಿ ಮೆರವಣಿಗೆಯಲ್ಲಿ ವಿಚಾರ ರೂಪದಲ್ಲಿ ಬರುತ್ತವೆ. ಇತಿಹಾಸ ಮರೆಯುವ ಹಾಗಿಲ್ಲ. ಮರೆತವರಿಗೆ ಭವಿಷ್ಯವಿಲ್ಲ. ಮತ್ತೆ ಅದೇ ತಪ್ಪು ಮಾಡುತ್ತಾರೆ. ಆದರೆ ಆಗಿನ ಮತ್ತು ಈಗಿನ ಪರಿಸ್ಥಿತಿಗಳ ನಡುವೆ ವ್ಯತ್ಯಾಸವಿದ್ದೇ ಇರುತ್ತದೆ. ಬಿಜ್ಜಳ ಯಾರು, ಬಸವಣ್ಣನವರು ಯಾರು ಹೀಗೆ ಹೀಗೆ ಯಾರು ಯಾರು ಅಂತ ವಿಚಾರ ಮಾಡದೆ ವಾಸ್ತವತೆಯ ಸತ್ಯ ಅರಿಯಬೇಕು ಸಮಯಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಮಾತು, ರಾಜರು, ಮಂತ್ರಿಗಳು ಸಹ ವೇಶಕ್ಕನುಗುಣವಾಗಿ ಮಾತನಾಡುತ್ತ ಒಳಗಿನ ಮೂಲಗಳು ಬದಲಾಗದೇ ತಮ್ಮ ಸ್ವರೂಪ ತೋರಿಸಿಯೇ ಬಿಡುತ್ತವೆ. ನಂತರ ಪ್ರಶಂಸೆ, ಕ್ಷಮೆಯಾಚನೆ, ಪ್ರತಿಜ್ಞೆಗಳು, ಎಲ್ಲವೂ ಜರುಗುತ್ತವೆ. ಚುನಾವಣೆ ಸಮಯದಲ್ಲಿ ಇವೆಲ್ಲ ಬೇಕಾಗಿತ್ತಾ ಎನ್ನುವುದಕ್ಕೆ ಕ್ರಿಕೆಟ್ ಆಟಕ್ಕೆ ಮುಂಚೆ ಪಿಚ್ ತಯಾರು ಮಾಡುವುದಿಲ್ಲವೋ ಹಾಗೆ ಈ ಸಮಾವೇಶಗಳು. ಧರ್ಮ, ಜಾತಿ ವಿಷಯಗಳು ಒಂದು ರೀತಿಯಿಂದ ಗಾಂಜಾ ಅಫೀಮು ಇದ್ದಂತೆ ಅಮಲೇರಿತು ಅಂದರೆ ಬಿಡುವುದಿಲ್ಲ ತನ್ನದೇ ಆದ ಭ್ರಮಾಲೋಕ ಹುಟ್ಟಿಸಿ ಅದರಲ್ಲಿ ತೇಲಾಡುವಂತೆ ಮಾಡಿ ತನ್ನದೇ ಆದ ತಿರುಗಣಿ ಮಡುವಿನತ್ತ ಸೆಳೆಯುತ್ತ ಕೊನೆಯತ್ತ ಹೋಗುವಂತೆ ಮಾಡುತ್ತದೆ. ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ಬಹುಮತ ಅನ್ನುವುದು, ಸಂಖ್ಯಾಸೂಚಕವಾಗಿ ಅದೇ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರವನ್ನು ಕಡಿಮೆ ಅಥವಾ ಶೂನ್ಯಮಾಡುತ್ತದೆ ಅನ್ನುವುದು ಸ್ವತಂತ್ರ ಭಾರತದಲ್ಲಿ ಅನುಭವಕ್ಕೆ ಬಂದ ಸಂಗತಿ. ಲಕ್ಷಗಟ್ಟಲೇ ಜನ ಒಂದೆಡೆ ಜಮಾಯಿಸಿದರೆ ಅದು ಬೆಂಬಲ ಅಥವಾ ಸುಳ್ಳು ಸತ್ಯ – ಸತ್ಯ ಸುಳ್ಳು ಆಗುತ್ತದೆಯೇ ಅನ್ನುವ ಸಂಶಯ ಮೂಡುತ್ತದೆ. ಇಂತಹ ಸಮಾವೇಶಗಳಲ್ಲಿ ಆವೇಶಗಳು ಬೇರೆ ದೇಶದಲ್ಲಿ ಇದ್ದಂತೆ ಸಾರ್ವಜನಿಕ ರೆಫರೆಂಡೇಮ ಪದ್ಧತಿ ಇಲ್ಲ. ನಮ್ಮ ದೇಶ ಇನ್ನೊಂದು ದೇಶದ ಭಾಗವಾಗಿರಬೇಕೋ ಬೇಡವೋ ಅನ್ನುವುದೂ ಸಹ ಅಲ್ಲಿ ಚರ್ಚೆಗೆ ಬಂದು ರೆಫರೆಂಡಮ್ ಆಗುತ್ತದೆ. ನಮ್ಮ ದೇಶದ ಇನ್ನೊಂದು ದುರಂತವೆಂದರೆ ಒಬ್ಬ ತಪ್ಪು ಮಾಡಿದ್ದಿರಲಿ ಅಥವಾ ಇಲ್ಲದಿರಲಿ ಅವನ ಉಳಿವಿಗಾಗಿ ಕೊನೆಗೆ ಬಳಸಿಕೊಳ್ಳುವ ಅಸ್ತ್ರವೆಂದರೆ ಆ ವ್ಯಕ್ತಿಯ ಅಥವಾ ಅವನ ವಿರುದ್ಧ ವ್ಯಕ್ತಿಯ ಜಾತಿಯ ಅಥವಾ ಧರ್ಮದ ವಿಷಯ. ಈ ಸಮಾವೇಶಗಳು ನಿಜವಾಗಿ ಅವಶ್ಯಕವೋ ಇಲ್ಲವೋ ಅನ್ನುವುದು ಬೇರೆ ವಿಷಯ. ಬಹುಜನ ಅಭಿಪ್ರಾಯ ಅಂತ ಹೇಗೆ ಹೇಳುವುದು ಅವರಾಗಿಯೇ ಬಂದರೆ ಅವರ ಒಪ್ಪಿಗೆ ಇದ್ದೇ ಇದೆ ಅಂತ ಹೇಗೆ ಹೇಳೋದು?
ಇಷ್ಟೆಲ್ಲ ಜನ ಬರುವದು, ಹೋಗುವುದು, ಆತಿಥ್ಯ ಎಲ್ಲದರ ವೆಚ್ಚ ಹೇಗೆ ನಿಭಾಯಿಸುವದು? ಒಂದು ಮಾತಿದೆ. There is no free lunch ಅಂತ. ಇದರರ್ಥ ಜಗತ್ತಿನಲ್ಲಿ ಯಾವುದೂ ಉಚಿತ ಅಂತ ಇಲ್ಲ. ಯಾವ ಭಾಗ್ಯಗಳು ಉಚಿತವಲ್ಲ. ಎಷ್ಟೋ ಜನ ಕರದಾತರು ಕರ ನೀಡಿದ ಹಣ. ಪ್ರಜಾಪ್ರಭುತ್ವದ ರಾಬಿನ್ ಹುಡ್ಡ್ ಮಾದರಿಯಲ್ಲಿ ಉಳ್ಳವರಿಂದ ಇಲ್ಲದವರಿಗೆ ತಮ್ಮ ಭಾಗ್ಯಗಳ ಉಚಿತ ವಿತರಣೆ. ಯಾರೂ ತಮ್ಮ ಕಿಸೆಯಿಂದ ಕೊಡುವುದಿಲ್ಲ. ಸರ್ಕಾರದ್ದು! ಈಗ ನಮ್ಮದು ಮುಂದೆ ಗೊತ್ತಿಲ್ಲ. ಉರಿಯುತ್ತಿರುವ ಬಣಿವೆಯಲ್ಲಿ ಹೀರಕೊಂಡದ್ದೇ ಬಂತು ಅನ್ನುವ ಮನೋಧೋರಣೆ ಸಾಧಾರಣವಾಗಿ ಎಲ್ಲರ ಮತ. ಸರ್ವೇ ಜನಾಃ ಸುಖಿನೋಭವಂತು ಸರ್ವೆಸಂತು ನಿರಾಮಯಾಃ ಅನ್ನುವ ತತ್ವ ಗೀತೆಯನ್ನು ನಂಬಿರಿ ಅಥವಾ ಬಿಡಿರಿ ಪಾಲಿಸುವುದಂತೂ ಸತ್ಯ.
ಯಾರು ಇದಕ್ಕೆ ಜವಾಬುದಾರಿ ಅಂತ ಅದರ ಲೆಕ್ಕಪತ್ರದಲ್ಲಿ ತಲೆ ಹಾಕಿದ್ರೆನೆ ಅದು ಗೊತ್ತಾಗುವುದು. ಹಾಕುವರು ಯಾರು? ತೋರಿಸೋರು ಯಾರು?

ಕೃಪೆ : ಸಂಯುಕ್ತ ಕರ್ನಾಟಕ

Leave a Reply