ಚಂಪಾ ಕಲಿ ಸಾಹಿತ್ಯ ಸಂಭ್ರಮ

ಚಂಪಾ ಕಲಿ ಸಾಹಿತ್ಯ ಸಂಭ್ರಮ
ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. ಸಿಹಿ ತಿಂಡಿಗೆ ಚಂಪಾಕಲಿ ಅಂತ ಹೆಸರು ಯಾಕೆ ಇಟ್ಟರೋ ಗೊತ್ತಿಲ್ಲ ಬಹುಶಃ ಹಿಂದಿಯಲ್ಲಿ ಕಲಿ ಅಂದರೆ ಹೂ ಮತ್ತು ಈ ಸಿಹಿತಿಂಡಿ ಹೂವಿನ ಹಾಗೆ ಬಿಳಿ, ಮೃದು ನಡುವೆ ಕೆಂಪು ಮತ್ತು ಸಿಹಿ ಪದಾರ್ಥಗಳಲ್ಲಿ ಶ್ರೇಷ್ಠ ವೀರ ಅಂತನೂ ಇರಬಹುದು ಏನೋ. ಆ ಹಾಗೆಯೇ ಕನ್ನಡ ಸಾಹಿತಿಗಳಲ್ಲಿ ಒಂದಿಷ್ಟು ಕಲಿಗಳು ಇದ್ದರೂ ಎಲ್ಲರೂ ಕಲಿಗಳಲ್ಲ. ಒಂದಿಷ್ಟು ಮಜಾ ನೋಡಿ ನಲಿಯುವರು ಕೆಲವರು ಕಲಿಯುವರು ಕೆಲವರು ಇನ್ನೂ ಬಲಿಯುವವರು ಆದರೆ ಒಳ್ಳೆಯ ತಲಿಯವರು. ಸಿಕ್ಕ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವರು. ಆರ್ಡರ್ ಹೇಳಲು ಸಿದ್ಧ ಇದ್ದಾಗ ಚಂಪಾಕಲಿ ಯಾವಾಗಲೂ ತಯಾರ್ರೆ. ಒಂದಿಷ್ಟು ಸಿಹಿ ಪಾಕು ನಡುವೆ ಸಿಕ್ಕ ಕ್ರೀಮ್ ಹಾಕಿಕೊಂಡು ಕೆಂಪು ಚೇರಿ, ಎಡ, ಬಲಗಳ ಬಿಳಿ ಸ್ಪಾಂಜ್ನಲ್ಲಿ ನಿರೀಕ್ಷಿಸಿದ್ದ ಸಿದ್ಧ ಚಂಪಾಕಲಿ ರುಚಿ ಬೌದ್ಧಿಕ ಶುಚಿ ಇಲ್ಲದ ಬಾಯಿಗೆ ವಾಂತಿಗೆ ಕಾರಣವಾಗುತ್ತದೆ. ಈ ಸಿಹಿ ತಿಂಡಿಯ ಪುರಾಣ ಯಾಕೆ ಬಂತೆಂದರೆ ಈ ಬಾರಿಯ ಸಾಹಿತ್ಯ ಸಮ್ಮೇಳನ ರಾಜಕೀಯ ಒಲವು, ಆಶೆ, ಚುನಾವಣೆ ನಾಟಕಕ್ಕೆ ನಾಂದಿ ಹಾಡು ಹಾಡಿದಂತೆ, ಒಂದು ಪಕ್ಷದ ಕೊರಸ್ ಹಾಡನ್ನು ಆರಂಭದಲ್ಲಿ ಪ್ರಸ್ತುತ ಮಾಡಿದಂತೆ ಇತ್ತು. ವ್ಯವಸ್ಥೆಯ ವಿರುದ್ಧವಾಗಿ ಯಾವಾಗಲೂ ಬಂಡಾಯ ಪ್ರವೃತ್ತಿ ಬೆಳೆಸಿಕೊಂಡವರು ಇಂಗ್ಲೀಷನ್ನೇ ಹೊಟ್ಟೆಯ ಅನ್ನದ ಭಾಷೆ ಮಾಡಿಕೊಳ್ಳುತ್ತ, ಯಾವಾಗಲೂ ಸಂಘ ವಿರೋಧಿಸುತ್ತ, ಸಂಘದ ಪಾಪುಗಳನ್ನು ಸಹ ಎದುರಿಸಲಾಗದೆ ಅಧಿಕಾರದ ಕುರ್ಚಿಗಳಿಗಾಗಿ ಮಾರ್ಗ1, ಮಾರ್ಗ2 ಹೀಗೆ ಹೀಗೆ ಪರ್ಯಾಯ ಪೀಠಸ್ಥರಾಗುತ್ತಾ ಕನ್ನಡ ಸರಸ್ವತಿಯ ಪೂಜೆ ಮಾಡುತ್ತಾ ಮನುವನ್ನು ವಿರೋಧಿಸುತ್ತ ಕಡೆಗೂ ಎಡ ಬಿಟ್ಟು ಮನು ಬಲದಲ್ಲಿಯೇ ಪ್ರತಿಷ್ಠಾಪನೆಗೊಳ್ಳುವುದು ಚುನಾವಣೆಯ ಸಮಯದ ವಿಶೇಷ. ಮೈಸೂರು ಪೇಟಾ ಬೇಡವೆನ್ನತ್ತಲೇ ಸಾರೋಟ ಸುಖ ಅನುಭವಿಸುತ್ತ ಹೆಡ್ ಲೈಟು ಇರದ ಗಾಡಿಯಲ್ಲಿ, ಮಾಧ್ಯಮದ ಹೆಡ್ ಲೈನ್ ಪ್ರಚಾರ ಗಿಟ್ಟಿಸುತ್ತ ಕೊಂಕುಗಳ ಸೋಂಕಿನಲ್ಲಿ ಸ್ಕಾರ್ಫ್ ಸುತ್ತಿಕೊಂಡು ವಿಜ್ರಂಭಿಸಿದವರು ಕೆಲವರು ಸಿದ್ಧರಿಗೆ ಬಲು ಮುದ್ದು.
ಸಾಹಿತ್ಯ ಸಮ್ಮೇಳನಗಳಿಗೆ ರಾಜಕೀಯ ಸ್ವರೂಪ ಯಾಕೆ ಬರುತ್ತದೆ ಅಂತ ವಿಚಾರ ಮಾಡಿದಾಗ, ಎಡ ಬಲ ಪಂಥಗಳ ಬುದ್ಧಿಜೀವಿಗಳ ಅಧಿಕಾರ, ಹಣ, ಮತ್ತು ಸ್ಥಾನಮಾನ, ಅಂತಸ್ತು, ಜನಪ್ರಿಯತೆಯ ಭ್ರಮೆಗಳು, ಸಾಹಿತ್ಯದ ಗಾಳಿ ಮತ್ತು ಧೂಳಿಯಲ್ಲಿ ಸಿಕ್ಕಿದ್ದನ್ನು ತೂರಿಕೊಳ್ಳುವ, ಮಾರಿಕೊಳ್ಳುವ ಹಪಾಪಿತನಗಳು, ಇದರ ಜತೆ ಜತೆಯಲ್ಲಿ, ಜಸ್ಟ್ ಪಿಸುಮಾತುಗಳಲ್ಲಿ ಮೂಡಬಹುದಾದ ಸಂಭವನೀಯ ವೋಟುಗಳ ಎಣಿಕೆ, ಜಾತಿ ಮತಗಳ ಲೆಕ್ಕ ಹಾಕೋ ರಾಜಕಾರಣಿಗಳ ಉಪಸ್ಥಿತಿ, ಅದಕ್ಕೆ ರಾಜಕೀಯ ತುಪ್ಪ ಎರೆಯುವ ರಾಜಕೀಯ ಸಾಹಿತಿಗಳು ಸುಮಾರು ಹತ್ತು ಹದಿನೈದು ಪ್ರಶಸ್ತಿಗಳು ಹೇಗೆ ಬರಬಹುದು ಎನ್ನುವ ಲೆಕ್ಕಹಾಕುವ ಸಾಮಾಜಿಕ ಗಣಿತಜ್ಞರು ಪ್ರತಿವರ್ಷ ಏನಾದರೂ ಮಡ್ತಾ ಮಾತಾಡ್ತಾ ಇರುವ, ಹೊಸದಾಗಿ ಏನೂ ಬರೆಯಲಾಗದ ಲೇಖಕರು ಎಲ್ಲರೂ ಸೇರಿರುತ್ತಾರೆ. ಅದರಲ್ಲೂ ಬ್ಯುರೋಕ್ರಾಟ್ ಅಧಿಕಾರಸ್ಥ ಅಥವಾ ಜಾಗ್ರತ ಬ್ರಂದಾವನಸ್ಥ ಸಾಹಿತಿಗಳು, ಮಾಜಿ ಅಥವಾ ಹಾಲಿ ಮಂತ್ರಿಗಳು ಸೇರಿಬಿಟ್ಟರೆ ಪರಿಷತ್ ಮತ್ತು ಸಮ್ಮೇಳನಗಳಲ್ಲಿ ಬಹು ಬೇಗ ಸಿದ್ಧ ಯೋಗಿಗಳಿಗೆ ಛತ್ರ ಚಾಮರ ಬೀಸಲಾರಂಭಿಸುತ್ತಾರೆ. ಹೀಗಾಗಿ ಯಾವುದೇ ಸಮ್ಮೇಳನಗಳು ಸರ್ಕಾರದ ಶಂಖ ವಾದ್ಯ, ಸನಾದಿ, ಭಜಂತ್ರಿ ಆಗುತ್ತವೆ. ಸರ್ಕಾರ ದುಡ್ಡು ಕೊಡುತ್ತದೆ ಅಂದ ಮಾತ್ರಕ್ಕೆ ಸರ್ಕಾರದ ಮಂತ್ರಿ ಮಹೋದಯರನ್ನು ಕರಿಯಲೇಬೇಕೆಂದು ನಿಯಮ ಇದೆಯಾ ಅಥವಾ ನಿಯಮ ಸಂಘಟಕರು ಮಾಡಿಕೊಳ್ಳುತ್ತಾರೋ, ಅಲಿಖಿತವಾಗಿ ಅಧಿಕಾರಿಗಳು ಹೇಳುತ್ತಾರೋ, ಸ್ವಾಯುತ್ತತೆ ಇರುತ್ತದೋ ಇಲ್ಲವೋ, ನೆರೆದ ಲಕ್ಷಗಟ್ಟಲೆ ಜನರ ಮುಂದೆ ಕಾಣಿಸಿಕೊಂಡು, ಕೆಲವು ಮಾತು ಹೇಳಬೇಕೆನ್ನುವ ಚಾನ್ಸು ಯಾಕೆ ಬಿಡಬೇಕು ಅನ್ನುವ ತೇವಲುಗಳು ಹೀಗೆ ಸಂಕೀರ್ಣ ವ್ಯವಸ್ಥೆಯಲ್ಲಿ ಯಾವ ದೇವರಿಗೂ ಈ ಕಾರಣಕ್ಕಾಗಿಯೇ ಅಂತ ಹೇಳಲು ಸಾಧ್ಯವಿಲ್ಲ. ಸರ್ಕಾರ ಅನ್ನುವುದು ಎಲ್ಲಿ ಎಲ್ಲಿ ಬರುತ್ತದೋ ಅಲ್ಲಿ ಅಧಿಕಾರದ ಕಬಂಧ ಬಾಹುಗಳ ಅಕ್ರಮ ಪ್ರವೇಶ ಬರುವುದು ಮಾಮೂಲು ವಿಷಯ. ಅದು ಯಾವ ಯಾವ ರೂಪದಲ್ಲಿ ಬರುತ್ತದೋ ಗೊತ್ತಾಗುವುದಿಲ್ಲ. ಭಾಷಣ ಮಾಡಿಸುವುದರಿಂದ ಹಿಡಿದು ಚಪ್ಪಲಿ, ಕಲ್ಲಿ ಒಗೆಸುವರೆಗೂ ಬಂದರೂ ಆಶ್ಚರ್ಯವಿಲ್ಲ.

ಈ ಎಲ್ಲ ಸಂಗತಿಗಳ ಮಧ್ಯೆ ಸೃಜನಶೀಲತೆಗೆ ಹೆಸರಾದ ಧಾರವಾಡದಲ್ಲಿ ಒಂದು ಹೊಸ ವಿಚಾರಬಂತು. ಪೂರ್ತಿಯಾಗಿ ಹೊಸದು ಅಂತ ಹೇಳಲು ಬರುವುದಿಲ್ಲ. ಅದು ಜೈಪುರದ ಘರಾಣೆ ಸಮ್ಮೇಳನ ನೋಡಲು ಹೋಗಿ ಅಲ್ಲಿಯ ವ್ಯಕ್ತಿಗತ ಗ್ಲಾಮರ್ಗಳ ರೋಮಾಂಚಕತೆ ಅನುಭವಿಸಿ ನಮ್ಮ ಊರಿನವರಿಗೂ ಹೊಸ ಪುಳಕ ನೀಡಬೇಕು ಆದರೆ ನಮ್ಮ ಲೇವಲ್ಗೆ ಇರಬೇಕು, ರಾಷ್ಟ್ರೀಯ ಮಟ್ಟದವರನ್ನು ಆ ಪ್ರಮಾಣದಲ್ಲಿ ಕರೆದರೆ ನಂತರ ನಮ್ಮನ್ನು ನಮ್ಮವರೇ ಯಾರೂ ಗಮನಿಸಲಿಕ್ಕಿಲ್ಲ. ನಮ್ಮ TRPಗಳು ಏರದೆ ಹೋಗಬಹುದು ಅನ್ನುವ ಎಲ್ಲ ದುಗುಡ, ಆತಂಕಗಳೊಂದಿಗೆ ಹೊಸ ಸಂಭ್ರಮದ ಕನ್ನಡ ಲಿಮಿಟೆಡ್ ಸಂಭ್ರಮ ಪ್ರತಿಷ್ಠಿತವಾಯಿತು. ಅದರ ಸಂಭ್ರಮದ ಮಾನಸ ಗಂಗೋತ್ರಿ ಸಾಹಿತ್ಯಿಕ ಹಿಮಾಲಯದ ಅಟ್ಟದಲ್ಲಿದ್ದರೂ ಸಹ ಜಡಭರಥ ಭಗೀರಥರು ತರದೆ ಇದ್ದ ಎಲ್ಲ ಉಪನದಿಗಳು ಬೇರೆ ಬೇರೆ ಜಲಾನಯನ ಪ್ರದೇಶದಿಂದ ಹರಿದು ಬಂದು ಕೂಡಿಕೊಂಡು ಹೊಸ ಮನ್ವಂತರದ ಸಂಭ್ರಮ ಆರಂಭವಾಯಿತು. ಉದಾತ್ತ ಉದ್ದೇಶಗಳಲ್ಲಿ ರಾಜಕೀಯ ವ್ಯಕ್ತಿಗಳನ್ನು ದೂರವಿಡುವ, ಪ್ರತಿಭೆ ಒಂದೇ ಮಾನದಂಡವಾಗಿ, ಜನಾಕರ್ಷಣೆ ಮತ್ತೊಂದು ಅಳತೆಗೋಲಾಗಿ ವಾಹವಾ ಹೀಗಿರಬೇಕು ಅಂತ ಶುರುವಾಯಿತು. ನಮ್ಮಂಥ ದೊಡ್ಡವರು ಕಾಣಲಿಲ್ಲವೇ, ನಮಗೇನು ಆಮಂತ್ರಣವಿಲ್ಲವೇ ರಾಷ್ಟ್ರೀಯ ಮಟ್ಟದ ಶಿಸ್ತಿನ ನಿಯಮಗಳು ಭದ್ರತೆ ನಿಯಮಗಳು ಯಾಕೆ, ಕೇವಲ ಮನು ಮನಸುಗಳಿಂದ ಇಂಥ ಕನಸುಗಳು ಯಾಕೆ ಅಂತ ವಿರೋಧ ಸುರು ಆಗಿ ಅವುಗಳ ನಡುವೆಯೂ ಗುಣಮಟ್ಟದ, ಶಿಸ್ತಿನ ಪ್ರಯತ್ನದಿಂದಾಗಿ ಮತ್ತು ಅದರದೇ ಆದ ಹೊಸತನಗಳಿಂದ ಅಭೂತಪೂರ್ವ ಯಶಸ್ಸು ಪಡೆಯಿತು. ಯಾವುದೇ ಬದಲಾವಣೆಗೆ ಮೊದಲು ವಿರೋಧ ನಂತರ ಸ್ವೀಕಾರವಾದರೂ ಕಂಪನಗಳು ತಮ್ಮದೇ ಆದ ಬಿರುಕುಗಳನ್ನು ಹುಟ್ಟಿಸಿರುತ್ತವೆ. ಬಿರುಕುಗಳ ಮುಚ್ಚುವಿಕೆಯ ಭರದಲ್ಲಿ ಆ ಸಿಮೆಂಟ್, ಈ ಸಿಮೆಂಟ್ ಆ ಊರು ಈ ಊರು ಅಂತ ಕದಡಿದ ನೀರುವಿನಲ್ಲಿ ಸತ್ತವರ ನೆರಳು ಕಾಣುವ ಪ್ರಯತ್ನದಲ್ಲಿ ಸಾವಕಾಶವಾಗಿ ಧರ್ಮ ಸೆರೆ ಬಿಡಿಸಿಕೊಳ್ಳುತ್ತ ಜಾಗತಿಕ ವಿಶ್ವಮಾನವ ಸಾಹಿತ್ಯದ ಮೂಕ ಬಲಿ ನೀಡುತ್ತ ರುಂಡ ಬೇಕೋ ಮುಂಡ ಬೇಕೋ ಅಂತ ತಿಳಿಯಲಾರದ ಪದ್ಮಿನಿ ಪರಿಸ್ಥಿತಿಯಲ್ಲಿ ಕೇಳಿದ್ದನ್ನು ಅನುಗ್ರಹಿಸುವ ಹಯವದನನೂ ಆಗದೆ, ತನ್ನದೇ ಆದ ನಾಗಮಂಡಲ ಸೃಷ್ಟಿಸಿಕೊಂಡು, ಪ್ರತಿ ಸಂಭ್ರಮದಲ್ಲಿ ಸ್ವಲ್ಪ ಅಗ್ನಿ ಮತ್ತು ಮಳೆ ಸುರಿಯುವಾಗ ಮಾರಿಚನ ಬಂಧುಗಳು ಏನೇ ಮಾಡಿದರೂ ಸಾಹಿತ್ಯ ಸಂಭ್ರಮದ ಯಜ್ಞ ಸುಸೂತ್ರವಾಗಿ ನಡೆದು ಎಲ್ಲ ಒಳ್ಳೆಯತನಕ್ಕೂ ಹೆಸರಾಗಿ ಜನಪ್ರಿಯತೆ ಗಳಿಸಿಕೊಂಡು 6ನೇ ವರ್ಷಕ್ಕೂ ಕಾಲಿಡುವಾಗ ಮಾಡಿದವರಿಗೂ ಭಾವಹಿಸುವವರಿಗೂ ಖುಷಿ ಮತ್ತು ನಿಜ ಸಂಭ್ರಮ. ಇಂತಹ ಸಿಹಿ ಸಂಭ್ರಮದಲ್ಲಿ ನಿಜವಾಗಿಯೂ ಸಿಹಿತನದ ಚಂಪಾ ಕಲಿ ಬೇಕಾಗಿದೆ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply