ದಯಾಮರಣವೋ ಪ್ರಿಯ ಮರಣವೋ

ದಯಾಮರಣವೋ ಪ್ರಿಯ ಮರಣವೋ

ಒಮ್ಮೊಮ್ಮೆ ಕಾಕತಾಳೀಯ ಎನಿಸುವಷ್ಟು ಘಟನೆಗಳು ಜರುಗಿಬಿಡುತ್ತವೆ. ಹೋದ ವಾರ ನನ್ನದೇ “ಸಾವಿನ ಹಿಂದಿನ ಗೌಪ್ಯತೆ” ಅಂತ ಅಂಕಣ ಪ್ರಕಟವಾದ ಎರಡೇ ದಿನದಲ್ಲಿ ಸುಪ್ರೀಂ ಕೋರ್ಟ್ ದಯಾಮರಣ ಕುರಿತಾದ ತನ್ನ ಅಭಿಪ್ರಾಯ ಮತ್ತು ವಾದಿಯ ಪರ ನಿರ್ಣಯ ನೀಡಿ ಪ್ರಾರ್ಥನೆಗೆ ತಥಾಸ್ತು ಅಂತ ಹೇಳಿಯೂ ಬಿಟ್ಟಿತು. ಅದನ್ನು ಓದುತ್ತಿದ್ದಂತೆ ಹಲವಾರು ವಿಚಾರಗಳೂ ಬಂದು ಬಿಟ್ಟವು. ನಮ್ಮ ಭಾರತದಂತಹ ದೇಶದಲ್ಲಿ ಏನೇನು ಆಗಬಹುದು ಏನೇನು ಆಗಲಿಕ್ಕಿಲ್ಲ ಅನ್ನುವ ವಿಚಾರಗಳೇ. ಸುಪ್ರೀಂ ಕೋರ್ಟ್ ಎಲ್ಲವನ್ನೂ ವಿಚಾರ ಮಾಡಿ ನಿರ್ಧಾರಕ್ಕೆ ಬಂದಿರಬಹುದು. ದಯಾಮರಣದ ಬಗ್ಗೆ ಪರ ಮತ್ತು ವಿರೋಧವಾಗಿ ಸಾಕಷ್ಟು ಚರ್ಚೆ ಆಗಿದ್ದರೂ ಸಹ ನಮ್ಮ ಇತಿಹಾಸ, ನಮ್ಮ ಸಮಕಾಲೀನ ಭ್ರಮೆಗಳು, ಹಿಂಸೆ, ಅಹಿಂಸೆಗಳ ಕಲ್ಪನೆಗಳು, ಹೆಚ್ಚುತ್ತಿರುವ ಸಮುದಾಯದ ಭಿನ್ನತೆಗಳು, ಆಸ್ತಿಪಾಸ್ತಿಗಳ ಮೋಹ, ಹಪಾಪಿತನಗಳು ಎಲ್ಲವೂ ಕೂಡಿ ಅಥವಾ ಬೇರೆ ಬೇರೆಯಾಗಿ ತನ್ನದೇ ಆದ ಪರಿಣಾಮ, ಪ್ರಭಾವಗಳನ್ನು ನಮ್ಮ ಸಮಾಜದ ಮೇಲೆ ಬಿಟ್ಟೆ ಬಿಡುತ್ತವೆ. ಇಲ್ಲಿ ಪರ್ಲ್ ಬಕ್‍ರ ಮಾತನ್ನು ಗಮನಿಸಬಹುದಾಗಿದೆ.
“ದಯಾಮರಣ ಅನ್ನುವ ಶಬ್ದವೇ ಬಹಳ ಸಹಾನುಭೂತಿ ಅನುಭೂತಿ ಹುಟ್ಟಿಸುವುದು. ಶಬ್ದವು ಎಷ್ಟು ಒಳ್ಳೆಯ ಆಕರ್ಷಕ ಶಬ್ದವೋ ಅಷ್ಟೇ ಅಪಾಯಗಳನ್ನು ತನ್ನೊಳಗೆ ಇಟ್ಟುಕೊಂಡಿದೆ ಏನಿದ್ದರೂ ಅಪಾಯಕಾರಿ”
ಸಾವು ಅನ್ನುವುದು ಎಲ್ಲರನ್ನೂ ಕಾಡುವುದೇ. ಯಾರಿಗೂ ಬಿಟ್ಟದ್ದಲ್ಲ. ತಮ್ಮ ತಮ್ಮ ಸಾವು ಹೇಗೆ ಅಂತ ಯಾರಿಗೂ ಗೊತ್ತಿಲ್ಲ. ಮಹಾಭಾರತದ ಭೀಷ್ಮನು ಉತ್ತರಾಯಣದ ಪುಣ್ಯ ಕಾಲದಲ್ಲಿ ಇಚ್ಛಾ ಮರಣಿ ಆಗುವ ವರ ಹೊಂದಿದ್ದರೂ ಸಹ ಅವನು ಎಷ್ಟೇ ಶೂರ, ಬಲಾಢ್ಯನಾಗಿದ್ದರೂ ಸಹ ತಾನು ಮಾಡಿದ ಕೆಟ್ಟ ಕಾರ್ಯಗಳಿಗಾಗಿ, ಮಹಾಭಾರತ ಎಲ್ಲ ದುರ್ಘಟನೆಗಳಿಗೆ ಅಸಹಾಯಕ ಮೂಕ ಸಾಕ್ಷಿಯಾಗಿ ನಿಂತು ಕೊನೆಗೆ ಯುದ್ಧದಲ್ಲಿ ಸಾಯದೇ, ವೀರ ಮರಣ ಹೊಂದದೆ, ಬಾಣಗಳ ಶಿಲುಬೆ ಶಯ್ಯೆಯಲ್ಲಿ ಮಲಗುತ್ತಾನೆ. ಈಗ ಉತ್ತಮ ಮುಹೂರ್ತದ ಪ್ರಸವಕ್ಕಾಗಿ ಸಿಜೆರಿಯನ್ ಆಪರೇಷನ್ ಹೇಗೆ ಮುಹೂರ್ತ ನೋಡಿ ನಿಗದಿಪಡಿಸಿಕೊಳ್ಳುತ್ತಾರೋ ಹಾಗೆ ಭೀಷ್ಮ ತನ್ನ ಸಾವಿಗೆ ಮುಹೂರ್ತ ನಿಗದಿಪಡಿಸಿಕೊಳ್ಳುತ್ತಾನೆ ಅನ್ನುವುದನ್ನು ನಮ್ಮ ಮಹಾಭಾರತ ಹೇಳುತ್ತದೆ. ಅದೇ ಮಹಾಭಾರತ ಪ್ರತಿಯೊಂದು ಪಾತ್ರ ತನ್ನ ಹಿಂದಿನ ಜೀವನದ ಕರ್ಮಕ್ಕನುಸಾರವಾಗಿ, ಶಾಪಕ್ಕನುಸಾರವಾಗಿಯೋ, ಜೀವನದ ಎಲ್ಲ ಕಷ್ಟ ಕೋಟಲೆಗಳನ್ನು ಅನುಭವಿಸಿ ಕೊನೆಗೊಮ್ಮೆ ಮುಕ್ತಿ ಹೊಂದುತ್ತದೆ. ಕರ್ಮ ಸಿದ್ಧಾಂತವು ನಮ್ಮ ಫಿಲಾಸಫಿ. ಈಗ ಪ್ರಶ್ನೆ ಉದ್ಭವಿಸುವುದು ಇಚ್ಛಾ ಮರಣವು ಅಥವಾ ದಯಾಮರಣವು ನಮ್ಮ ಕರ್ಮಫಲವಾಗುತ್ತದೋ ಅಥವಾ ಯಾರು ಈ ದಯಾಮರಣದ ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರದ್ದೋ. ಈಗ ಪ್ರಶ್ನೆ ಎದ್ದಿರುವ ಕಾರಣಿ ಕರ್ತೆ ಕರ್ನಾಟಕ ಮೂಲದ ಬಾಂಬೆಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನುಭಾಗ್ ಆಕೆ ತನ್ನದಲ್ಲದ ತಪ್ಪಿಗೆ ಕೋಮಾಕ್ಕೆ ಬಲಿಯಾಗುವ ದಾರುಣ ಸನ್ನಿವೇಶ ಆಕೆಯನ್ನು ದಯಾಮರಣದ ಬೇಡಿಕೆಯ ಸ್ಥಿತಿಗೆ ತಂದಿತ್ತು. ಇದಕ್ಕೆ ಕಾರಣೀಕರ್ತನಾದವನಿಗೆ ಏನಾಯಿತು ಅನ್ನೋದು ಏನೇ ಇದ್ದರೂ ಅರುಣಳ ಸ್ಥಿತಿ ಸುಧಾರಿಸುವಂತೆ ಇರಲಿಲ್ಲ. ಆಕೆ ನುಮೋನಿಯಾಗೆ ಬಲಿಯಾದಳು. ಪ್ರಶ್ನೆ ಪ್ರಶ್ನೆಯಾಗಿ ಉಳಿದಿತ್ತು. ಈಗ ಸುಪ್ರೀಂ ಕೋರ್ಟಿನ ನಿರ್ಧಾರದಿಂದ ಮೇಲ್ನೋಟಕ್ಕೆ ಉತ್ತರ ಸಿಕ್ಕಂತೆ ಆಗಿದೆ ಆದರೆ ಹಲವಾರು ಸಾಧ್ಯತೆಗಳ ಬಾಗಿಲುಗಳು ಸಿದ್ಧವಾಗಿವೆ. ಎಷ್ಟೋ ದೇಶಗಳು ಇನ್ನೂ ದಯಾಮರಣವನ್ನು ಸಿಂಧು ಮಾಡಿಲ್ಲ. ಪಾಪಕರ್ಮಕ್ಕೆ ಅನುಸಾರವಾದ ಶಿಕ್ಷೆಯನ್ನು ಏಳೇಳು ಜನ್ಮಗಳಿಗೂ ವಿಸ್ತರಿಸಿಕೊಂಡಿರುವ ನಮ್ಮ ಸಂಸ್ಕೃತಿಯ ಏಳು ಸುತ್ತಿನ ಕೋಟೆಯನ್ನು ದಾಟಿ ಬರುವ ಅನಿವಾರ್ಯತೆ ಆವರಿಸಿಕೊಂಡಿರುವಾಗ ಏನೇನು ಪರಿಣಾಮಗಳು ಆಗಬಹುದು ಅಂತ ವಿಚಾರ ಮಾಡಿದರೆ ಒಮ್ಮೊಮ್ಮೆ ಆಘಾತಗಳು ಆಗಬಹುದು. ಬಡವರಲ್ಲಿ ಹೆಚ್ಚು ಆಗದೆ ಇರಬಹುದು ಅವರು ತಮ್ಮ ತಮ್ಮ ಕರ್ಮಗಳಿಗಾಗಿ ಅನುಭವಿಸುವುದನ್ನು ಒಪ್ಪಿಕೊಂಡು ಬಿಡುತ್ತಾರೆ. ಆದರೆ ಶ್ರೀಮಂತರಲ್ಲಿ, ಎಲ್ಲಿ ಉಯಿಲುಗಳು, ಆಸ್ತಿಗಳು ಮುಖ್ಯವಾಗುತ್ತವೆಯೋ ಅಲ್ಲಿ ನೀರವ ಹುಟ್ಟುವ ಸಂಭವಗಳು ಜಾಸ್ತಿ ಆಗಬಹುದು. ಒಂದು ತರಹದ ಲೇಟರ್ ಆಫ್ ಕ್ರೆಡಿಟ್‍ಗಳು, ಲೆಟರ್ ಆಫ್ ಗ್ಯಾರಂಟಿಗಳು ಹೆಚ್ಚಾಗಬಹುದು. ನಮ್ಮ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಹಾಗೆ ಈಗಾಗಲೇ ದಯಾಮರಣ ಕೋರಿ ಬರೆದ ಏಳು ಪ್ರಾರ್ಥನೆಗಳು ಏಳು ಸಾವಿರವಾದರೂ ಆಶ್ಚರ್ಯವಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಅನುವಂಶಿಕ ರೋಗಿಗಳು ಸಂಪೂರ್ಣವಾಗಿ ಮುಕ್ತಿ ಪಡೆಯಬಹುದು. ಇಲ್ಲಿ ಯಾರು ಮುಖ್ಯವಾಗುತ್ತಾರೆ, ಡಾಕ್ಟರ್‍ಗಳಾ? ಸಂಬಂಧಿಕರಾ? ಆಸ್ತಿಗಳಾ? ಗುಣಪಡಿಸಲಾಗದ ಜಡ್ಡುಗಳಾ? ಆಸ್ತಿಗಳಿಗಾಗಿ ಅನುವಂಶಿಕ ರೋಗಗಳ ಚರಿತ್ರೆ ಗೊತ್ತಿದ್ದೂ ಮದುವೆಯಾಗುವ ಪ್ರಯತ್ನಗಳು ಆಗಬಹುದಾ? ಹೀಗೆ ಪ್ರಶ್ನೆಗಳ ಸರಮಾಲೆಯೇ ತಯಾರು ಆಗುತ್ತದೆ. ಅದರಲ್ಲೂ ಕೆಲವು ಶ್ರೀಮಂತ ಸಮುದಾಯಗಳಲ್ಲಿ ಆ ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳಿಂದ ಅನುವಂಶಿಕ ರೋಗಗ್ರಸ್ತರು ಹುಟ್ಟುವ ಸಂದರ್ಭಗಳು ಹೆಚ್ಚು. ಮಹಾಭಾರತದಲ್ಲಿ ಕ್ಲಿಷ್ಟಕರ ಸಂದರ್ಭಗಳಲ್ಲಿ ವ್ಯಾಸ ಮಹರ್ಷಿಗಳು ಬರುತ್ತಾರೆ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಸಾವಿನ ಭಯವಿಲ್ಲದ ವಜ್ರಕಾಯನಾದ ದುರ್ಯೋಧನನಿಗೂ ಅವನ ತೊಡೆಯಲ್ಲಿ ಸಾವಿನ ಬೀಜ ಇಟ್ಟೇ ಬಿಡುತ್ತಾರೆ ವ್ಯಾಸರು. ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ಗ್ಯಾರಂಟಿ. ಆದರೆ ಅದು ಬರುವ ತನಕ ಸಾವಿನ ಸಮಯದ ಹಾದಿ ನೋಡುತ್ತಾ ಪರಿತಪಿಸುತ್ತ ಇರುವುದೇ ದೇವರು ನಮ್ಮ ಪಾಪಕರ್ಮಗಳಿಗೆ ನೀಡುವ ಶಿಕ್ಷೆ. ಈಗ ಈ ಇನ್ಸ್ಟಂಟ್ ಗ್ರೇಟಿಫಿಕೇಶನ್ ಕಾಲದಲ್ಲಿ ದಯಾಮರಣ ಒಂದು ಸರಳವಾದ ಪರಿಹಾರ ಮಾರ್ಗ. ಆದರೆ ಪ್ರಶ್ನೆ ಬರುವುದು ಏನೆಂದರೆ ಯಾರು ಇದನ್ನು ಬಯಸುವವರು? ರೋಗಿಯೇ, ಸಾವಿಗಾಗಿ ಕಾಯುತ್ತಿರುವ ಸಂಬಂಧಿಕರೆ, ಪ್ರಮಾಣ ಪತ್ರ ನೀಡುವರೆ? ಲೀವಿಂಗ್ ವಿಲ್ ಅಂದರೆ ತನ್ನ ಸಾವಿಗೆ ಎಲ್ಲ ರೀತಿಯ ಒಪ್ಪಿಗೆ ನೀಡುವ ರೋಗಿಯೇ? ಆ ರೀತಿ ಚಿಂತಿಸುವ ರೋಗಿ ನಿಜವಾಗಲೂ ತನ್ನ ಸಾವನ್ನು ಬಯಸುತ್ತಾನೆಯೇ? ಅನ್ನುವುದು ಸಹ ಮುಖ್ಯ. ಎಪ್ಪತ್ತೋ ಎಂಬತ್ತೋ ದಾಟಿದ ವೃದ್ಧರನ್ನು ಹೇಗಿದ್ದೀರಿ ಅಂತ ಕೇಳಿದಾಗ ಗೊತ್ತಾಗುತ್ತದೆ. ದೇವರು ಯಾವಾಗ ಒಯ್ಯುತ್ತಾನೆ ಗೊತ್ತಿಲ್ಲ, ಜೀವನ ಸಾಕಾಗಿದೆ, ಇನ್ನೂ ಏನೇನು ನೋಡುವದಿದೆ ನನ್ನ ಭಾಗ್ಯದಲ್ಲಿ ಅನ್ನೋದು ಮಾಮೂಲು ಅನುಭವ ಮರುಕ್ಷಣವೇ, ಈ ಕೆಲಸಾ ಯಾಕ ಆಗಿಲ್ಲ, ಯಾರು ಬಂದರು ಯಾರು ಹೋದರು ನೀವು ನನ್ನ ಮಾತು ಕೇಳುವುದಿಲ್ಲ ಅನ್ನುವ ಪ್ರಶ್ನೆಗಳೇ ಜೀವನದ ಮುಖ್ಯ ಉತ್ಸಾಹಗಳಾಗಿರುತ್ತವೆ.
ಗುಣಪಡಿಸಲಾಗದ ಜಡ್ಡು ಜೀವನದ ಅನಿವಾರ್ಯವಾದ ಕರ್ಮಫಲ ಅಂತ ಸ್ವೀಕರಿಸಿ ಇದ್ದಷ್ಟು ಕಾಲ ಜೀವನೋತ್ಸಾಹದಿಂದ ನಾಳೆ ಅನ್ನೋದೇ ಇಲ್ಲ ನಾಳೆ ಅನ್ನೋದನ್ನು ಕಂಡವರಾರು ಅಂತ ಜೀವಿಸಬೇಕು ಅನ್ನುವದು ಒಂದು ದೃಷ್ಟಿಕೋನವಾದರೆ ಇನ್ನೊಂದು ಎಲ್ಲ ಮುಗಿದು ಹೋಯಿತು. ಸುಮ್ಮನೆ ದುಡ್ಡು, ಸಮಯ, ಎಲ್ಲರಿಗೂ ಇದ್ದಾಗಲೂ ತೊಂದರೆ ಸತ್ತಮೇಲೂ ತೊಂದರೆ ಅನ್ನುವ ಲೌಕಿಕ ದೃಷ್ಟಿಕೋನದ ವ್ಯವಹಾರಿಕ ಜಗತ್ತುಗಳ ಸಂಘರ್ಷಗಳಲ್ಲಿ, ಎಲ್ಲೋ ಒಂದುಕಡೆ ಸತ್ತ ಮೇಲೂ ಆತ್ಮ ತಿರುಗಿ ಬರುವುದು ಅಂತ ನಂಬಿದ ಈಜಿಪ್ತ ನಾಗರಿಕತೆಯಲ್ಲಿ ಪಿರಾಮಿಡ್‍ಗಳು ನಂಬಿಕೆ ಇರದಿದ್ದರೆ ಬರುತ್ತಿದ್ದವಾ? ಸತ್ತವರಿಗಾಗಿ ಸಮಾಧಿಗಳು, ಬೃಂದಾವನ ಬರುತ್ತಿದ್ದವಾ? ಪವಾಡಗಳು ಯಾವಾಗಲಾದರೂ ಸಂಭವಿಸಬಹುದು. ಅದಕ್ಕೆ ದಯಾ ಮರಣದ ನಿರ್ಧಾರ ತೆಗೆದುಕೊಳ್ಳವರ ಮನೋಶಕ್ತಿ, ಪ್ರಾಮಾಣಿಕತೆ, ನಂಬಿಕೆ, ಲೌಕಿಕವನ್ನೂ ಮೀರಿದ ಅಲೌಕಿಕತತ್ತ್ವಗಳ ಮೇಲೆ ಅವಲಂಬಿತವಾಗಿರುವಾಗ ನಮ್ಮ ಸಮಾಜ ಅದಕ್ಕೆಲ್ಲ ಸಿದ್ಧವಾಗಿದೆಯೇ ಅನ್ನೋದೆ ಯಕ್ಷಪ್ರಶ್ನೆ. ಈ ಯಕ್ಷಪ್ರಶ್ನೆಗೆ ಉತ್ತರ ನೀಡುವ ಧರ್ಮರಾಜನನ್ನು ಕಾಲವೇ ನೀಡುವುದು.

Courtesy : Samyukta Karnataka

Leave a Reply