ಬನಿಯನ್ – ಬನಿಯಾ

ಬನಿಯನ್ – ಬನಿಯಾ

ಚತುರತೆ, ಚಾಣಾಕ್ಷತೆ, ಕುಶಾಗ್ರಮತಿ ಈ ಎಲ್ಲ ಪದಗಳನ್ನು ಗಮನಿಸಿದರೆ ಏನೇನು ಅರ್ಥಗಳು ಮಥಿಸಿದಾಗ ಬರಬಹುದು? ಅವೆಲ್ಲವೂ ಸಂದರ್ಭ ಸನ್ನಿವೇಶಕ್ಕೆ ತಕ್ಕ ಹಾಗೆ ಅರ್ಥ ಮಾಡಿಕೊಳ್ಳುವುದೆ? ಅಥವಾ ಯಾವುದೇ ವ್ಯಕ್ತಿಗೆ ಅದನ್ನ ಅನ್ವಯಿಸಿ ಅರ್ಥ ಕಲ್ಪಿಸಬಹುದೇ? ನಮ್ಮ ರಾಷ್ಟ್ರಪಿತ ಮೋಹನದಾಸ್ ಕರಮಚಂದ ಗಾಂಧಿಯವರು ಒಬ್ಬ ಚತುರ ಬನಿಯಾ (ವ್ಯಾಪಾರಿ ಮನುಷ್ಯ) ಆಗಿದ್ದರಾ ಅಥವಾ ಇಲ್ಲವೆ? ಅದು ಅವರ ಬಗ್ಗೆ ಚಿಂತಿಸುವವರ ವಿವೇಚನೆಗೆ ಬಿಟ್ಟಿದ್ದು. ನಮ್ಮ ಇತಿಹಾಸದಲ್ಲಿ ಚತುರ ಚಾಣಕ್ಯನ ಐತಿಹ್ಯವೂ ಒಂದು ಉದಾಹರಣೆ ಆಗಬಹುದು. ಚಾಣಕ್ಯ-ಗಾಂಧೀಜಿ ಹೋಲಿಸಬಹುದೊ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರೂ ರಾಜರಾಗಲಿಲ್ಲ. ಮತ್ತೊಬ್ಬರನ್ನು ರಾಜನನ್ನಾಗಿ ಮಾಡಿದರು. ಇಬ್ಬರೂ ಪರಕೀಯರಿಂದ, ಅಧಿಕಾರದಲ್ಲಿ ಇರುವವರಿಂದ ಅಪಮಾನ ಅನುಭವಿಸಿದವರೇ. ಅವರ ಅಪಮಾನಗಳ ಸನ್ನಿವೇಶಗಳು ಯಾವ ಭೀಷ್ಮ ಪ್ರತಿಜ್ಞೆಗೆ ಕಡಿಮೆಯಾಗಿಲ್ಲ. ಚಾಣಕ್ಯ ಮತ್ತು ಗಾಂಧೀಜಿ ಇಬ್ಬರೂ ಪ್ರತಿಭಾವಂತರು. ಇಬ್ಬರೂ ಬಟ್ಟೆ ಕಡಿಮೆ ಧರಿಸುತ್ತಿದ್ದರು. ಇಬ್ಬರೂ ತಮ್ಮ ಸಲುವಾಗಿ ಆಸ್ತಿಗಳನ್ನು ಮಾಡಲಿಲ್ಲ ಮತ್ತು ಅದರ ಮೋಹವೂ ಇರಲಿಲ್ಲ. ಇಬ್ಬರೂ ಬರೆದ ಗ್ರಂಥಗಳು ಅಜರಾಮರವಾಗಿವೆ. ಚಾಣಕ್ಯನ ಅರ್ಥಶಾಸ್ತ್ರ. ಗಾಂಧೀಜಿಯವರ ಸತ್ಯದ ಜತೆ ನನ್ನ ಪ್ರಯೋಗಗಳು. ಎರಡೂ ಪುಸ್ತಕಗಳು ಅವರ ಕುಶಾಗ್ರಮತಿಗೆ ಸಾಕ್ಷಿ. ಇಬ್ಬರೂ ನೇರವಾದ ಯುದ್ಧವನ್ನು ನಂಬಲೇ ಇಲ್ಲ. ಚಾಣಕ್ಯ ತಂತ್ರಗಾರಿಕೆಯ ಹಲವು ರೂಪಗಳನ್ನು ಉಪಯೋಗಿಸಿಕೊಂಡರೆ ಗಾಂಧೀಜಿ ತಮ್ಮದೇ ಆದ ಚತುರ ತಂತ್ರಗಾರಿಕೆಯನ್ನು ಕಾಲಮಾನಕ್ಕೆ ತಕ್ಕಂತೆ ಅಹಿಂಸೆಯ ತತ್ವದ ಹಿನ್ನೆಲೆ ಅಥವಾ ಅದರ ಚೌಕಟ್ಟಿನಲ್ಲಿ ಸತ್ಯಾಗ್ರಹದ ರೇಖೆಗಳನ್ನು ಬರೆಯುತ್ತ ತಮ್ಮದೇ ಆದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಅನ್ನುವ ಚಿತ್ರ ಬರೆದರು. ಇಬ್ಬರೂ ಶಿಷ್ಯರನ್ನು ತಯಾರು ಮಾಡಿದರು. ಚಾಣಕ್ಯನು ಮೂಲತಃ ಬ್ರಾಹ್ಮಣನಾದರೂ ಆಗಿನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಬೌದ್ಧ ಧರ್ಮದ ಸನ್ಯಾಸಿಗಳ ಇರುವಿಕೆಯನ್ನು ಬಳಸಿಕೊಂಡ. ಗಾಂಧೀಜಿ ಕಾಲಮಾನಕ್ಕೆ ತಕ್ಕಂತೆ ಹರಿಜನ-ಗಿರಿಜನ. ಮುಸ್ಲಿಂ-ಕ್ರಿಶ್ಚಿಯನ್ ಎಲ್ಲ ಸಮುದಾಯದವರನ್ನು ಬಳಸಿಕೊಂಡರು. ಚಾಣಕ್ಯ ವ್ಯಾಪಾರಿಗಳ ಆಗಿನ ಕಾಲದ ಸಾರ್ವಜನಿಕ ಜೀವನದಲ್ಲಿ ಬೆರೆತು ಹೋದ ಎಲ್ಲ ವಾರಾಂಗನೆಯರನ್ನು ಬಳಸಿಕೊಂಡ. ಗಾಂಧೀಜಿ ಆ ಕಾಲದ ಪ್ರಸಿದ್ಧ ಉದ್ದಿಮೆದಾರರಾದ ಬಿರ್ಲಾ, ಟಾಟಾರ ಜತೆ ಸಂಬಂಧಗಳನ್ನು ಬಹಳ ಬಹಳ ಹಾರ್ದಿಕವಾಗಿ ಇಟ್ಟುಕೊಂಡರು. ಟಾಟಾ, ಬಿರ್ಲಾ ಮತ್ತಿತರ ವಣಿಕ ಶ್ರೇಷ್ಠಿಗಳಿಗೆ ಭಾರತ ಸ್ವತಂತ್ರವಾಗಬೇಕಿತ್ತು. ಸ್ವತಂತ್ರ ಭಾರತದ ಅಸಂಖ್ಯಾತ ಜನಸಂಖ್ಯೆಯ ಬೇಡಿಕೆ ಮತ್ತು ಬೇಕುಗಳ ಸಂಪೂರ್ಣ ಚಿತ್ರ ಅವರ ದೂರದೃಷ್ಟಿಗೆ ಗೋಚರಿಸಿದ್ದೂ ಗಾಂಧೀಜಿಯವರಿಗೆ ಗೊತ್ತಿತ್ತು. ಅದಕ್ಕಾಗಿ ಎಲ್ಲ ದೊಡ್ಡ ವ್ಯಕ್ತಿಗಳಲ್ಲಿ ದೊಡ್ಡ ಕನಸುಗಳು ಮೂಡಿದ್ದು, ಕೂಡಿದ್ದು ಸ್ವಾತಂತ್ರ್ಯ ಸಂಗ್ರಾಮದ ಬೃಹತ್ ಚಳವಳಿ ಸ್ವರೂಪಗಳಿಗೆ ನೆರವಾದವು. ಸರ್ವೇಜನಾಃ ಸುಖಿನೋ ಭವಂತು ಸರ್ವೆಸಂತು ನಿರಾಮಯಾ ಅನ್ನುವಂತೆ ಸುಂದರ ಸುಖದ ಕನಸುಗಳನ್ನು ಚಾಣಕ್ಯ-ಗಾಂಧೀಜಿ ಯಾರ್ಯಾರಿಗೆ ಏನು ಬೇಕೊ ಅದನ್ನೆಲ್ಲ ಕಾಣುವ ಪಡೆಯುವ ಕನಸುಗಳ ವ್ಯಾಪಾರಿಗಳಾಗಿದ್ದರೆ ಅದರಲ್ಲಿ ತಪ್ಪಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ಭಾರೀ ಕೆಲಸಕ್ಕೆ ಹೇಗೆ ಪ್ರೇರಣೆ ಪಡೆಯುತ್ತಾನೆ; ಮತ್ತು ಅವನನ್ನು ಉದ್ರೇಕ ಅಂದರೆ ಸ್ಫೂರ್ತಿಗೊಳಿಸಲು ಏನೇನು ಕಾರಣಗಳ ಸೃಷ್ಟಿ ಮತ್ತು ಸಂಯೋಜನೆ ಮಾಡುವ ಕುಶಾಗ್ರಮತಿಗಳ ಸಾಮರ್ಥ್ಯ ಇಬ್ಬರಲ್ಲೂ ಇತ್ತು. ಅವರವರ ಕಾಲಕ್ಕೆ ತಕ್ಕಂತೆ ಇರುವ ಎಲ್ಲ ಮಾಧ್ಯಮದವರನ್ನು, ಮಾಡೆಲ್‍ಗಳನ್ನು, ವಿದ್ಯಾಲಯಗಳನ್ನು, ವ್ಯಾಪಾರಿ ವರ್ಗದವರನ್ನು ಬೀದಿ ವ್ಯಾಪಾರಿಗಳನ್ನು, ಸಾಕ್ಷಿ, ಪುರಾವೆ ನೀಡುವ, ಬಯಸುವ ವ್ಯವಸ್ಥೆ ಮತ್ತು ಮನಸಿಲ್ಲದಿದ್ದರೂ ಒಪ್ಪಲೇಬೇಕಾಗುವ ಎಲ್ಲ ಸನ್ನಿವೇಶಗಳನ್ನು ಇಬ್ಬರೂ ತಮಗರಿವಿಲ್ಲದಂತೆ ತಮ್ಮ ತಮ್ಮ ಗುರಿ ಮುಟ್ಟಲು ಹುಟ್ಟಿಸಿದರು, ಬಳಸಿದರು. ಸಾರ್ಥಕತೆ ಪಡೆದುದರಲ್ಲಿ ಆಶ್ಚರ್ಯವಿಲ್ಲ. ಇಬ್ಬರೂ ಸುಳ್ಳು ಹೇಳಲಿಲ್ಲ. ಸತ್ಯವನ್ನೆ, ಅಹಿಂಸೆಯನ್ನೇ ಪ್ರತಿಪಾದಿಸಿದರು. ಸುಳ್ಳು ವ್ಯಾಪಾರ ಮಾಡಲಿಲ್ಲ. ಸತ್ಯವನ್ನು ಧರ್ಮರಾಜನ ರೀತಿಯಲ್ಲಿ ಪಡಿತರ ವ್ಯವಸ್ಥೆಯಲ್ಲಿಯೇ ನೀಡಿದರು. ಲಂಡನ್‍ನ ದುಂಡುಮೇಜಿನ ಪರಿಷತ್‍ನಲ್ಲಿ ಎಲ್ಲ ಉಳಿದ ವ್ಯಕ್ತಿಗಳು ಸೂಟು-ಬೂಟು ಹಾಕಿಕೊಂಡು ಭಾಗವಹಿಸಿದಾಗ ಗಾಂಧೀಜಿ ಒಬ್ಬರೆ ತುಂಡು ಪಂಜೇಲಿ ಅದೂ ಲಂಡನ್ ಚಳಿಯಲ್ಲಿ ಭಾಗವಹಿಸಿದ್ದುದು ಒಂದು ದಿಢೀರ್ ಜನಪ್ರಿಯತೆಯನ್ನು, ಪ್ರಚಾರವನ್ನು ಒದಗಿಸಿಕೊಟ್ಟಿತು. ಇಂದಿನ ಜಾಹೀರಾತು ವಿಷಯವನ್ನು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಿಗೆ ಬೋಧಿಸಬೇಕಾದರೆ ಹಲವು ತಂತ್ರ-ತತ್ವ-ಕಲಿಕೆಯ ತತ್ವಗಳನ್ನು ಹೇಳಲಾಗುತ್ತದೆ. ಇದು ಸಹ ಅಂತಹದೇ ಮಾದರಿ ಎಂದು ತಿಳಿದುಕೊಳ್ಳಲು ಅಡ್ಡಿಯಿಲ್ಲ. ಇಂದೂ ಸಹ ಕ್ರಿಕೆಟ್ ದೂರದರ್ಶನದ ಕವರೇಜ್‍ನಲ್ಲಿ ಕ್ಯಾಮರಾ ಯಾರ, ಯಾವ ಪ್ರೇಕ್ಷಕರ ಮೇಲೆ ಗಮನ ಕೇಂದ್ರೀಕರಿಸುವುದನ್ನು ನೋಡಿದರೆ ಅರ್ಥವಾಗುತ್ತದೆ. ಚಾಣಕ್ಯ ಸಹ ತನ್ನ ಜೀವಮಾನದುದ್ದಕ್ಕೂ ಯಾವ ವೈಭವ ಬಯಸದೇ ತನ್ನ ವಿಚಾರ ತಂತ್ರಗಾರಿಕೆಯಿಂದಲೇ ಆ ಕಾಲದ ಪೌರರಿಂದ ಪಂಡಿತರವರೆಗೆ ಎಲ್ಲರ ಹೃದಯ ತಲುಪಿ ಹೃದಯ ವೈಭವ ಪಡೆದುಕೊಂಡ. ಚಾಣಕ್ಯ ಆ ಕಾಲಕ್ಕೆ ತಕ್ಕಂತೆ ವಾರಾಂಗನೆ, ವಿಷಕನ್ಯೆಯರನ್ನು ಬಳಸಿಕೊಂಡ. ಮಾಹಿತಿಗಳನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ತಕ್ಕಂತೆ ತಂತ್ರಗಳನ್ನು ರೂಪಿಸಲು ಉಪಯೋಗಿಸಿದ. ಗಾಂದೀಜಿ ಅಂತಹದನ್ನು ಮಾಡಲಿಲ್ಲ. ಆದರೆ ಅವರ ಸಮೀಪವರ್ತಿಗಳು ಬ್ರಿಟಿಷ್ ಅಧಿಕಾರಿ ವರ್ಗದವರ ಜತೆ ಸಲುಗೆಯ ಮಿತ್ರರಾಗಿ ಇರುವುದನ್ನು ಗಮನಿಸುತ್ತಿದ್ದರು; ಮತ್ತು ಅವರಿಗೆ ಬೇಕಾದ ವಿಚಾರಗಳನ್ನು ಅವರಿಂದ ತಿಳಿದುಕೊಳ್ಳುತ್ತಿದ್ದರೆ ಅದರಲ್ಲೂ ಸಹ ಆಶ್ಚರ್ಯಪಡುವಂತಿಲ್ಲ. ಇವೆಲ್ಲವುಗಳೂ ಅವರವರ ಇಂಟಲಿಜೆನ್ಸ್ ದ ಹಲವು ಆಯಾಮಗಳು. ಒಂದು ವ್ಯವಸ್ಥೆ ಒಂದು ಸರ್ಕಾರ ಸರಿಯಾಗಿ ನಡೆಯಬೇಕೆಂದರೆ ಇಂಟಲಿಜೆನ್ಸ್ ಅನ್ನುವದು ಬೇಕೇಬೇಕು. ಅದರಲ್ಲಿ ಗಾಂಧೀಜಿ Means are equally important to ends ಅಂತಾ ನಂಬಿದ್ದವರು. ಚಾಣಕ್ಯನಿಗೆ ಗುರಿಮುಖ್ಯವಾಗಿತ್ತು. ಗುರಿಯ ದಾರಿ ಮುಖ್ಯವಾಗಿದ್ದರೂ ಅವನ ಕಾಲಕ್ಕೆ ತುಳಿದಿದ್ದೆ ದಾರಿಯಾಗಿತ್ತು. ಮನುಷ್ಯ ಯಾವಾಗ ವ್ಯಾಪಾರಿಯಾಗುತ್ತಾನೆ, ಯಾವಾಗ ಸನ್ಯಾಸಿಯಾಗುತ್ತಾನೆ, ಯಾವಾಗ ಬ್ರಾಹ್ಮಣನಾಗುತ್ತಾನೆ, ಯಾವಾಗ ಶೂದ್ರನಾಗುತ್ತಾನೆ ಯಾವುದೂ ಹೇಳಲು ಆಗುವುದಿಲ್ಲ. ನಮ್ಮ ನಮ್ಮ ಕರ್ಮಗಳು, ನಮ್ಮ ನಮ್ಮ ಕಾರ್ಯಗಳು ಅವುಗಳನ್ನು ನಿರ್ಧರಿಸುವವು. ಮನುಷ್ಯ ಯಾವುದೇ ಜಾತಿಯವನಿರಲಿ, ತನ್ನ ಅನುಭವ, ಶಿಕ್ಷಣದ ಹಿನ್ನೆಲೆಯನ್ನು ತನ್ನಲ್ಲಿ ರೂಪಿತಗೊಂಡ ಚಿಂತನೆಯನ್ನು ತಿಳಿಯುವಂತೆ ಹೇಳುವ ಸಾಮರ್ಥ್ಯ ಪಡೆದುಕೊಂಡಾಗ ಬ್ರಾಹ್ಮಣನಾಗುತ್ತಾನೆ. ತನಗಿರುವ ಬುದ್ಧಿಯನ್ನು ಲಾಭ ಮತ್ತು ಜೀವನೋಪಾಯಕ್ಕೆ ಮಾರಹತ್ತಿದಾಗ ವ್ಯಾಪಾರಿಯಾಗುತ್ತಾನೆ. ಹೀಗೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಎಲ್ಲ ಹಂತಗಳಲ್ಲಿ ಬೆಳೆಯುವವರೇ ಬೆಳೆಯುವ ಸಾಮರ್ಥ್ಯ ಇರುವವರಲ್ಲ. ತಮ್ಮ ಕುಶಾಗ್ರಮತಿಯನ್ನು ದೂರದೃಷ್ಟಿಯಿಂದ ಯೋಜನೆ ಮಾಡಿ ಯೋಚಿಸಿ, ವ್ಯಕ್ತಿಗತ ಜೀವನ, ಸಾಂಸ್ಥಿಕ ಸ್ಥಾನಮಾನ, ಸಾಮಾಜಿಕ ಅಂತಸ್ತು, ಮಾನ್ಯತೆ ಪಡೆದಾಗ ಅವರೆಲ್ಲರಲ್ಲಿ ಒಳ ಅರಿವೆಯಾದ ಬನಿಯನ್, ಬನಿಯಾ ರೂಪದಲ್ಲಿ ಹೊರಬಂದರೆ ಏನೇನೂ ಆಶ್ಚರ್ಯಪಡಬೇಕಾಗಿಲ್ಲ.

ಕೃಪೆ :ಸಂಯುಕ್ತ ಕರ್ನಾಟಕ

Leave a Reply