ಮಹಿಳೆ ಇಂದು ಅಂದು ಎಂದೆಂದಿಗೂ ಸೈ

ಮಹಿಳೆ ಇಂದು ಅಂದು ಎಂದೆಂದಿಗೂ ಸೈ

                                                              ಲೇಖಕಿ : ಶಿಲ್ಪಾ ರಘೋತ್ತಮ್ ಕೊಪ್ಪರ್

ಮಹಿಳಾ ದಿನಾಚರಣೆ ಬಂದಾಗ ಮಾತ್ರ ಮಹಿಳೆಯರ ಬಗ್ಗೆ ಅಸಂಖ್ಯ ಲೇಖನಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ರಾರಾಜಿಸುತ್ತವೆ., ಮತ್ತೆ ಅಂತಹ ಲೇಖನಗಳು, ಕಾರ್ಯಕ್ರಮಗಳು ಬರುವುದು ಮುಂದಿನ ವರುಷವೇ! … ಇರಲಿ ನಮಗಾಗಿ ಎಲ್ಲ ದಿನ ಪತ್ರ್ರಿಕೆಗಳಲ್ಲಿ ಒಂದೊಂದು ಪುರವಣಿಗಳಿರುತ್ತವೆ ಮತ್ತು ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮಗಳಿರುತ್ತವೆ. ಅಷ್ಟು ಸಾಕು.

“ಈ ಅಧುನಿಕ ಕಾಲದಲ್ಲಿ ಮಹಿಳೆ ಪುರುಷನಿಗೆ ಸಮಾನವಾಗಿದ್ದಾಳೆ” ಎಂಬ ಮಾತು ಎಲ್ಲ ಕಡೆಗೆ ಕೇಳಿ ಬರುವುದು ಸಾಮಾನ್ಯ. ಕೂಲಂಕಷವಾಗಿ ಇದರ ಬಗ್ಗೆ ಪರಾಮರ್ಶಿಸಿದಾಗ ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪುರಾತನ ಕಾಲದಲ್ಲೂ ಮಹಿಳೆ ಪುರುಷನಿಗೆ ಸಮಾನವಾಗಿಯೇ ಕೆಲಸ ಮಾಡುತ್ತಿದ್ದಳು. ಆ ಕಾಲದಲ್ಲಿ ಅವರ ಕೆಲಸಗಳ ಬಗ್ಗೆ ಕೊಂಚ ಯೋಚಿಸಿ. ಕುಂಬಾರನ ಹೆಂಡತಿ ಮಡಿಕೆ ಮಾಡುತ್ತಿರಲಿಲ್ಲವೇ? ಕಮ್ಮಾರನ ಹೆಂಡತಿ ಅವನಿಗೆ ಸಾಥ್ ನೀಡುತ್ತಿರಲಿಲ್ಲವೇ? ಚಮ್ಮಾರಿಕೆ ಮಾಡುವವನ ಹೆಂಡತಿ ಅವನೊಡನೆ ಕೈ ಜೋಡಿಸುತ್ತಿರಲಿಲ್ಲವೇ? ಅಷ್ಟೇ ಏಕೆ ಹೊಲಕ್ಕೆ ಹೋಗುವ ಗಂಡನಿಗೆ, ಬಾವಿಯಿಂದ ನೀರು ಸೇದಿ ತಂದು, ಅಡುಗೆ ಮಾಡಿ, ಅವನ ಜೊತೆಗೆ ಚಕ್ಕಡಿ ಏರಿ ಹೊಲಕ್ಕೆ ಹೋಗಿ, ದಿನಗೂಲಿ ಪಡೆಯದೆ ದಿನವಿಡೀ ಕೆಲಸ ಮಾಡುವ ಹೆಣ್ಣಾಳು ಇವಳಾಗಿರಲಿಲ್ಲವೇ. ಇದಲ್ಲದೇ ಮನೆಯಲ್ಲಿಯ ಕೆಲಸಗಳ ಜವಾಬ್ದಾರಿ ಬೇರೆ! ಕೃಷಿಯಾಧಾರಿತ ಕುಟುಂಬಗಳಲ್ಲಿ ಮಹಿಳೆ ಪಾತ್ರ ಮತ್ತು ಜವಾಬ್ದಾರಿ ತುಸು ಹೆಚ್ಚೇ ಅಂದರೂ ಅತಿಶಯೋಕ್ತಿಯಲ್ಲ.
ಆ ಕಾಲದಲ್ಲಿ ಆಹಾರ ತಯಾರಿಕಾ ಪದ್ಧತಿ ಶ್ರಮದಾಯಕವಾಗಿರುತ್ತಿತ್ತು. ಬೀಸುವುದು, ಕುಟ್ಟುವುದು, ಹಸಮಾಡುವುದು, ನೆನೆಹಾಕುವುದು, ಒಳ್ಳಲ್ಲಿ ರುಬ್ಬುವುದು ಒಂದೇ ಎರಡೇ. ಈಗಿನಂತೆ ರೆಡಿಮೇಡ್ ಫುಡ್ ಆಗ ಸಿಗುತ್ತಿರಲಿಲ್ಲ. ಪ್ರತಿದಿನ ತಿನ್ನುವ ಆಹಾರಕ್ಕೆ ಬಹಳಷ್ಟು ಶ್ರಮಪಡಬೇಕಾಗಿತ್ತು. ಅದು ಅವರ ತಪ್ಪದ ದಿನಚರಿ ಕೂಡ ಆಗಿರುತ್ತಿತ್ತು. ಹಾಲು ಮೊಸರು ಬೇಕೆಂದರೆ ಈಗಿನ ಹಾಗೆ ಕಾಂಡಿಮೆಂಟ್ಸ್ ಇರಲಿಲ್ಲ. ಮನೆಯಲ್ಲಿ ಕಟ್ಟಿದ ಆಕಳದ ಕಡೆಗೆ ಹೋಗಿ ಅದಕ್ಕೆ ಮೇವು ಇಟ್ಟು ಹಾಲು ಕರೆಯಬೇಕು. ಈಗಿನ ಹಾಗೆ ನಲ್ಲಿ ತಿರುವಿದರೆ ನೀರು ಬರುತ್ತಿರಲಿಲ್ಲ. ರೊಟ್ಟಿ ಮಾಡಬೇಕೆಂದರೆ ಜೋಳವನ್ನು ಹಸ ಮಾಡಿ ಕುಟ್ಟಿ, ಬೀಸಿ ನಂತರ ಹಿಟ್ಟು ಕಲಸಿ, ಒಲೆ ಹಚ್ಚಿ ಊದಿದ ನಂತರವೇ ರೊಟ್ಟಿ. ಪಲ್ಯ ಬೇಯಿಸಲು ಈಗಿನ ಹಾಗೆ ಕುಕ್ಕರ್ ಇರಲಿಲ್ಲ. ಶ್ಯಾವಿಗೆ ಒಣ ಹಾಕಲು ಬೇಸಿಗೆ ಕಾಲದ ವರೆಗೆ ಕಾದು ನಂತರ ವರ್ಷಕ್ಕೆ ಬೇಕಾದಷ್ಟು ಶ್ಯಾವಿಗೆಯನ್ನು ಹೊಸೆದುಕೊಳ್ಳಬೇಕಾಗುತ್ತಿತ್ತು. ಹಪ್ಪಳ ಸಂಡಿಗೆ ಮಾಡಲು ಕೂಡ ಹೆಚ್ಚು ಸಮಯ ಬೇಕಾಗುತ್ತಿತ್ತು. ಮಹಿಳೆಯರ ಈ ಎಲ್ಲ ಶ್ರಮದಾಯಕ ಜೀವನದ ಅನಾವರಣವನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ, ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‍ನ ಶಿಲ್ಪ ಕಲಾಕೃತಿಗಳಲ್ಲಿ ಕಾಣಬಹುದು.

ಈಗ ಕಾಲ ಬದಲಾಗಿದೆ?

ಈಗ ಕಾಲ ಬದಲಾಗಿದೆ. ಆದರೂ ಅವಳು ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತಾಳೆ. ಬೆಳಿಗ್ಗೆ ಆದರೆ ಸಾಕು ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿ ಮಾಡಬೇಕು. ಅವರಿಗೆ ಹಾಲು, ಬೋರ್ನ್‍ವಿಟಾ, ತಿನಿಸು ಮತ್ತು ಕ್ಯಾರಿಯರ್ ಕಟ್ಟಬೇಕು. ಗಂಡನಿಗೆ ಚಹಾ/ಕಾಫಿ ಮಾಡಿ, ಸ್ನಾನಕ್ಕೆ ನೀರು ತೋಡಿ, ಅವರಿಗಿಷ್ಟವಾದ ಟಿಫಿನ್ ತಯಾರಿಸಿ, ಅವರಿಗೂ ಡಬ್ಬಿ ಕಟ್ಟಬೇಕು. ಇಷ್ಟೆಲ್ಲ ಮಾಡಿ ಗಂಡ ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಿದ ಮೇಲೆ ಉಫ್…..ಅವಳ ಕೆಲಸ ಮುಗಿಯಲಿಲ್ಲ…ಪಾತ್ರೆ, ಬಟ್ಟೆ, ಮನೆ ಸ್ವಚ್ಛತೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಜಾಬ್ ಮಾಡುವ ಮಹಿಳೆಯ ಪಾಡಂತೂ ಅಬ್ಬಬ್ಬ…. ಎಲ್ಲ ಕೆಲಸ ಮುಗಿಸಿ, ತಾನು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ಸಂಜೆ ದಣಿದು ಮನೆಗೆ ಬಂದರೆ ಒಂದು ಕಪ್ ಚಹಾ/ಕಾಫಿನೂ ಇರಲ್ಲ, ಅದನ್ನು ಅವಳೇ ಮಾಡಿಕೊಳ್ಳಬೇಕಲ್ಲವೆ! ನಮ್ಮ ಕಚೇರಿಯ ಕೆಲಸಕ್ಕೆ ರವಿವಾರ, ಹಬ್ಬ ಹರಿದಿನಗಳು, ಇ.ಎಲ್. ಪಿ.ಎಲ್, ಆರ.ಎಚ್. ಎಲ್ಲಾ ಇರುತ್ತವೆ. ಆದರೆ ಮಹಿಳೆಗೆ ಮನೆ ಕೆಲಸಕ್ಕೆ ಯಾವ ರಜೆಯೂ ಇಲ್ಲ. ಅವಳು ಮಾಡಿದರೆ ರಜಾ, ಗಂಡ ಮಕ್ಕಳ ಹೊಟ್ಟೆಗೆ ಸಜಾ. ಇದನ್ನು ಮಹಿಳಾ ಸ(ಅ)ಬಲೀಕರಣ ಅನ್ನಬಹುದೇ!
ಇದು ಸ್ಪರ್ಧಾತ್ಮಕ ಜಗತ್ತು. ಮಹಿಳೆಯೂ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಮನೆಕೆಲಸ ಮಾತ್ರ ಅವಳಿಗೆ ತಪ್ಪಿದ್ದಲ್ಲ. ಹಳೆಯ ಕಾಲದಲ್ಲಿ ಮಹಿಳೆಯರು ಹಿಟ್ಟನ್ನು ಬೀಸುತ್ತಿದ್ದರು, ಕವದಿಯನ್ನು ಹೊಲಿಯುತ್ತಿದ್ದರು, ಭತ್ತ ಕುಟ್ಟುತ್ತಿದ್ದರು, ಶ್ಯಾವಿಗೆ ಹೊಸೆಯುತ್ತಿದ್ದರು, ನೂಲು ತೆಗೆಯುತ್ತಿದ್ದರು. ಇಂದು ಕಾಲ ಬದಲಾಗಿದೆ ಆದರೆ ಕೆಲಸವಲ್ಲ; ಮಾಡುವ ವಿಧಾನವಷ್ಟೇ ಬೇರೆ. ಬೀಸುವ ಕಲ್ಲಿನ ಬದಲು ಗ್ರೈಂಡರ್ ಬಂದಿದೆ, ನೂತನ ಟೇಲರಿಂಗ್ ಮಶಿನ್‍ಗಳು ಬಂದಿವೆ. ಆಫೀಸ ಇರಲಿ ಅಡುಗೆ ಮನೆಯಿರಲಿ ಕೆಲಸವೆಂದರೆ ಮಹಿಳೆ; ಮಹಿಳೆ ಅಂದರೆ ಕೆಲಸ ಎನ್ನುವಂತಾಗಿದೆ.

ನಗರೀಕರಣದಿಂದ ಗಂಡಸರು ಊರು ಬಿಟ್ಟ ಮೇಲೆ ಮಹಿಳೆಯರೂ ಬೇರೆ ಬೇರೆ ಉದ್ಯೋಗ ಕಂಡುಕೊಳ್ಳಬೇಕಾಯಿತು. ನಗರಗಳಲ್ಲಿ ಗುರುತು ಪರಿಚಯವಿಲ್ಲದ ಜಾಗಗಳಲ್ಲಿ ಕೆಲಸ ಮಾಡುವುದು ಮಹಿಳೆಯರಿಗೆ ಕಿರಿಕಿರಿಯೆನಿಸಿದರೂ ಹೊಂದಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೂ ಮಹಿಳೆಯರು ಇಂದು ಯಾವ ಕೆಲಸಕ್ಕೂ ಹಿಂಜರಿಯದೇ ಮುನ್ನುಗ್ಗುತ್ತಿದ್ದಾರೆ. ಎಲ್ಲ ತರಹದ ಕ್ಷೇತ್ರಗಳಲ್ಲೂ ಮಿಂಚಿ ಸಾಧಿಸಿ ತೋರಿಸಿದ್ದಾರೆ. ಮಾನವ ಸಂಪನ್ಮೂಲ ವಿಭಾಗ, ಮಾರುಕಟ್ಟೆ ವಿಭಾಗ, ಗ್ರಾಹಕರ ಸೇವಾ ವಿಭಾಗ ಇವುಗಳಿಗೆ ಮಹಿಳೆಯೇ ಸೈ ಎಂಬಂತಾಗಿದೆ. ಈ ಎಲ್ಲವನ್ನು ತಿಳಿದವರು ಈ ಕಾಲದಲ್ಲೂ ಹೆಣ್ಣು ಮಗು ಅಂದರೆ ಬೇಡ ಅನ್ನುತ್ತಾರಲ್ಲ ಎಂಬುದು ಮಾತ್ರ ಖೇದದ ಸಂಗತಿ.

Leave a Reply