ಸೂರಿಯ ಷೇಕ್ಸ್ ಪಿಯರ್ ಸಂಜೆ

ಸೂರಿಯ ಷೇಕ್ಸ್ ಪಿಯರ್ ಸಂಜೆ

ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ ಯಾಂತ್ರಿಕವಾಗುತ್ತಾ ಹೋಗುತ್ತೇವಾ? ಷೇಕ್ಸ್ ಪಿಯರ್ ಅಸಾಧ್ಯ ಅಶಿಸ್ತಿನ ಜಗಳಗಂಟ, ವ್ಯಾಮೋಹಿ, ಕುಡುಕನಾಗಿದ್ದ ಅಂತ ಊಹಿಸಿದರೆ ಅದು ತಪ್ಪಾ?
ಹಾಗೆಲ್ಲ ಯೋಚಿಸುವ ಹೊತ್ತಿಗೇ ಷೇಕ್ಸ್ ಪಿಯರ್ ಹೇಳಿದ್ದು ನೆನಪಾಗುತ್ತದೆ; Suit the word to the action, the action to the word. ಬಸವಣ್ಣನವರ ಮಾತಲ್ಲಿ ಹೇಳುವುದಾದರೆ ನುಡಿದಂತೆ ನಡೆ, ನಡೆದಂತೆ ನುಡಿ. ಅದೇ ಅಂತರಂಗ ಶುದ್ಧಿ.
ಮತ್ತೆ ಮತ್ತೆ ಷೇಕ್ಸ್ ಪಿಯರ್ ನೆನಪಾಗುತ್ತಿದ್ದಾನೆ. ಅವನ ನಾಟಕವನ್ನು ಮೊಟ್ಟ ಮೊದಲು ನೋಡಿದ ಮಹಿಳೆಯೊಬ್ಬರು ಇದೇನ್ರೀ ಬರೀ ಉದ್ಗಾರಗಳೇ ಇವೆಯಲ್ಲ ಅಂತ ಉದ್ಗರಿಸಿದ್ದಳಂತೆ. ಷೇಕ್ಸ್ ಪಿಯರ್ ಅನೇಕರಿಗೆ ಗೊತ್ತಿರುವುದು ಆತನ ಪ್ರಸಿದ್ಧ ಕೊಟೇಶೇನ್ ಗಳ ಮೂಲಕ. ಆತನ ನಾಟಕದ ಸಂಭಾಷಣೆಗಳೆಲ್ಲ ತತ್ವಶಾಸ್ತ್ರದ ಸಾಲುಗಳಂತಿದ್ದವು. ಪ್ರೇಮಕ್ಕೆ, ಕಾಮಕ್ಕೆ, ಮದುವೆಗೆ, ವ್ಯಾಮೋಹಕ್ಕೆ, ಸಾವಿಗೆ, ಬದುಕಿಗೆ ಅವನ ಬಳಿ ಮಾತುಗಳಿದ್ದವು. ಆ ಮಾತುಗಳೋ ಬುದ್ಧಿಜೀವಿಗಳ ಹೇಳಿಕೆಗಳಂತಿರಲಿಲ್ಲ. ಜನಪದದ ಜಾಣನ ಸರಳ ಉದ್ಗಾರಗಳಂತೆ ತೋರುತ್ತಿದ್ದವು. ಹೆಣ್ಣನ್ನು ಹೊಗಳುವ ಹೊತ್ತಿಗೂ ಆತ ಸುಮ್ಮನೆ ; age cannot wither her, nor custom stale her infinite variety ಅಂದುಬಿಡುತ್ತಿದ್ದ. ತೃಪ್ತಿಯಾಗುವಂತೆ ಬಡಿಸಿದ ಮೇಲೂ ಹಸಿವೆ ಉಳಿಯುವಂತೆ ಮಾಡಬಲ್ಲವಳು ಅನ್ನುತ್ತಿದ್ದ. ಹರೆಯ ಮತ್ತು ವೃದ್ಧಾಪ್ಯ ಎಂದೂ ಜೊತೆಗಿರಲಾರದು. ಹರೆಯ ಬೇಸಗೆಯ ಸುಡುಹಗಲು, ವೃದ್ಧಾಪ್ಯ ಚಳಿಗಾಲದ ಇಳಿಸಂಜೆ ಎಂದು ಸರಳವಾಗಿ ಮಾತಾಡಿಸಿಬಿಡುತ್ತಿದ್ದ. ಕುಡಿತದ ಮಾತು ಬಂದಾಗ ಅಷ್ಟೇ ಬಿಡುಬೀಸಾಗಿ `ಆಲ್ಕೋಹಾಲು ಆಸೆಗಳನ್ನು ಕೆರಳಿಸುತ್ತದೆ, ಕ್ರಿಯೆಯನ್ನು ಮಂಕುಗೊಳಿಸುತ್ತದೆ’ ಅಂತ ಅಪ್ಪಟ ಅನುಭವಿಯ ಮಾತು ಆಡಿಬಿಡುತ್ತಿದ್ದ. ನಮ್ಮ ಕಷ್ಟಕ್ಕೆ ನಮ್ಮ ಹತ್ರಾನೇ ಪರಿಹಾರ ಇದೆ. ಆದ್ರೆ ನಾವು ಉದಾರಿಗಳು. ಸುಮ್ಮನೆ ದೇವರು ಕಾಪಾಡಿದ ಅಂತೀವಿ ಎಂದು ಗೇಲಿ ಮಾಡುತ್ತಿದ್ದ. ತುಂಬ ಕಾವ್ಯಾತ್ಮಕವಾಗಿ ಕಾಲದ ಕೇಳದ ಹೆಜ್ಜೆಯ ಸದ್ದು ಎಂದು ಬರೆದುಬಿಡುತ್ತಿದ್ದ. ಪ್ರೀತಿ ನಿನ್ನನ್ನು ಕಷ್ಟಕ್ಕೆ ಸಿಲುಕಿಸಿತು ಅಂತ ಒಂದೇ ಒಂದು ಸಲ ಅಂದುಕೊಂಡರೂ ಸಹಿತ ನೀನು ಪ್ರೀತಿಸಿದ್ದೇ ಸುಳ್ಳು ಅಂದುಬಿಡಬಲ್ಲ ಶಕ್ತಿ ಅವನಿಗಿತ್ತು. ಹೆಂಗಸರ ಬಗ್ಗೆ ತುಂಬ ಪ್ರೀತಿಯಿಂದಲೇ ತಮಾಷೆ ಮಾಡುತ್ತಿದ್ದ; ನಾನು ಹೆಣ್ಣು ಕಣೋ. ನನ್ನ ಪ್ರಕಾರ ಯೋಚನೆ ಮಾಡೋದು ಅಂದ್ರೆ ಮಾತಾಡೋದು ಎಂದು ತನ್ನ ಪಾತ್ರವೊಂದರ ಕೈಲಿ ಹೇಳಿಸಿದ್ದ.
ಹೀಗೆ ಶೇಕ ಓದುತ್ತಾ ಹೋದರೆ ನೆನಪಾಗುವುದು ನಮ್ಮ ಜನಪದ. ಅವನು ಇಂಗ್ಲೆಂಡಿನ ಜನಪದವೇ ಆಗಿದ್ದನೋ ಏನೋ? ಅವನು ತುಂಬ ಪಾಲಿಷ್ಡ್ ಆದ ಕವಿ ಆಗಿದ್ದಿರಲಾರ. ಅವನು ನಾಟಕಗಳನ್ನು ಒಂದು ಕಡೆ ಶಿಸ್ತಿನಿಂದ ಕೂತು ಬರೆದಿರಲಿಕ್ಕಿಲ್ಲ. ಒಂದೇ ಸಾರಿ ಇಡೀ ನಾಟಕವನ್ನು ಬರೆದು ಕೊಟ್ಟಿರಲಿಕ್ಕಿಲ್ಲ. ಅವನು ತುಂಬ ಚಂಚಲನಾಗಿರಬೇಕು.
ಹಾಗನ್ನಿಸುತ್ತದೆ. ಅವನು ನಿಜಕ್ಕೂ ಹೇಗಿದ್ದ ಅನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ. ಆತನ ಜೀವನ ಚರಿತ್ರೆಯೇ ಮೂರು ಸಾವಿರ ಪುಟಗಳಷ್ಟು ಅಚ್ಚಾಗಿದೆ. ಒಬ್ಬೊಬ್ಬರು ಒಂದೊಂದು ಥರ ಅವನ ಬಗ್ಗೆ ಬರೆದಿದ್ದಾರೆ. ಆದರೆ ನಮಗದು ಮುಖ್ಯವಾಗುವುದೇ ಇಲ್ಲ. ಕವಿಯ ಬಗ್ಗೆ ನಾವು ಊಹಿಸಿಕೊಂಡದ್ದು ಉತ್ತಮ, ಬೇರೆಯವರಿಂದ ಕೇಳಿದ್ದು ಮಧ್ಯಮ, ಓದಿ ತಿಳಿದದ್ದು ಅಧಮ. ಯಾಕೆಂದರೆ ಬರೆಯುವ ಹೊತ್ತಿಗೆ ಅಲ್ಲಿ ತಮಾಷೆ, ವ್ಯಂಗ್ಯ, ಆಪ್ತತೆ, ಪ್ರೀತಿ ಎಲ್ಲಾ ನಾಶವಾಗಿರುತ್ತದೆ. ಕೇವಲ ಪದವ್ಯಾಮೋಹ ಮತ್ತು ನಮ್ಮನ್ನು ನಾವು ಕಂಡುಕೊಳ್ಳುವ ಕಷ್ಟವಷ್ಟೇ ಉಳಿದಿರುತ್ತದೆ.
******
ಹೀಗೆ ಷೇಕ್ಸಪಿಯರ್ ಈ ನಡುಬೇಸಗೆಯ ಸುಡುಸುಡು ಸಂಜೆ ನೆನಪಾಗುವಂತೆ ಮಾಡಿದ್ದು ಸೂರಿ. ಷೇಕ್ಸಪಿಯರ್ ನಾಟಕವೊಂದನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ಕಾಮಿಡಿ ಆಫ್ ಎರರ್ಸ್ ನಾಟಕವನ್ನು ನಮ್ಮ ಭಾಷೆ, ನಮ್ಮ ನುಡಿಗಟ್ಟು, ನಮ್ಮ ತಮಾಷೆಗಳನ್ನಿಟ್ಟುಕೊಂಡು ನಮ್ಮ ಮುಂದಿಟ್ಟಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಹೆಸರು ನೀನಾನಾದ್ರೆ ನಾ ನೀನೇನಾ?.
ಷೇಕ್ಸಪಿಯರ್ ಭಾಷೆಯನ್ನು ಅನುವಾದಿಸುವುದು ಕಷ್ಟ. ಹದಿನಾರನೇ ಶತಮಾನದ ಸುಮಾರಿಗೆ ಆತ ಬರೆದ ನಾಟಕವನ್ನು ಯಥಾವತ್ತಾಗಿ ಕನ್ನಡಕ್ಕೆ ತರುವುದೂ ದಡ್ಡತನ. ಸೂರಿ ಆ ಕೆಲಸ ಮಾಡುವುದಕ್ಕೆ ಹೋಗಿಲ್ಲ. ಇಡೀ ನಾಟಕ ಸೂರಿಯ ಪ್ರತಿಭೆಯಲ್ಲಿ ಅರಳಿಕೊಂಡಿದೆ. ಅಲ್ಲಿ ಆಡುವ ಮಾತುಗಳು ನಮ್ಮವು ಅನ್ನಿಸುವಂತೆ ಮುಂದಿನ ಮಾತು ನಮಗೆ ಹೊಳೆದೂ ಹೊಳೆಯದಂತೆ ಹೊಳೆಯದೆಯೂ ಹೊಳೆಯುವಂತೆ ಸೂರಿ ಬರೆಯಬಲ್ಲರು. ಒಂದು ಅನುವಾದದ ಶಕ್ತಿ ಇರುವುದು ಅಂಥ ಭಾವಾನುವಾದದಲ್ಲೇ.
ಸೂರಿ ಕನ್ನಡ ಸಿನಿಮಾಗಳನ್ನು ದಂಡಿಯಾಗಿ ಗೇಲಿ ಮಾಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಒಂದೊಂದು ಸನ್ನಿವೇಶಕ್ಕೂ ಒಂದೊಂದು ಹಾಡು ಬಳಸುವುದು ಈ ನಾಟಕದಲ್ಲಿ ನಗು ಹುಟ್ಟಿಸುತ್ತದೆ. ಈ ನಾಟಕ ನೋಡಿದ ನಂತರ, ಹಳೆಯ ಕನ್ನಡ ಸಿನಿಮಾ ನೋಡಿದರೆ ಮತ್ತಷ್ಟು ನಗು ಉಕ್ಕುವುದು ಖಂಡಿತಾ. ಅದರಲ್ಲೂ ಕಳೆದು ಹೋದ ಮಕ್ಕಳನ್ನು ಹುಡುಕುವ ಮಾರ್ತಾಂಡರಾಯ ಹಾಡುವ `ಯುನೈಟಿಂಗ್ ಸಾಂಗ್’ ಚಿಕ್ಕ ಮಕ್ಕಳು.. ಚಿಕ್ಕ ಚಿಕ್ಕ ಮಕ್ಕಳು, ಪುಟ್ಟ ಮಕ್ಕಳು ಪುಟ್ಟ ಪುಟ್ಟ ಮಕ್ಕಳು’ ಅದ್ಭುತ ಕಲ್ಪನೆ.
ಇಡೀ ನಾಟಕ ನಿಲ್ಲುವುದು ಮಾತಿನ ಮೇಲೆ. ಮಾತಲ್ಲೇ ಅವರು ನಗೆಯ ಸೌಧ ಕಟ್ಟುತ್ತಾರೆ. ನಾನು ಯಾರು ಅನ್ನುವುದನ್ನು ಪಾತ್ರಗಳೇ ಮರೆತಿವೆಯೇನೋ ಅನ್ನುವ ಅನುಮಾನ ಹುಟ್ಟಿಸುವಂಥ ಗೊಂದಲವನ್ನೂ ಅವರು ನಿರಾಯಾಸದಿಂದ ನಿಭಾಯಿಸಿದ್ದಾರೆ.
ಇದನ್ನೇ ಸಿನಿಮಾ ಮಾಡುವುದು ಸುಲಭ. ಯಾಕೆಂದರೆ ಸಿನಿಮಾದಲ್ಲಿ ದ್ವಿಪಾತ್ರದ ಅನುಕೂಲವಿದೆ. ನಾಟಕದಲ್ಲಿ ಹಾಗಲ್ಲ. ಎರಡೂ ಪಾತ್ರಗಳು ಏಕಕಾಲದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹಾಗಿದ್ದೂ ಅಲ್ಲಿ ಇಬ್ಬರಿದ್ದಾರೆ ಅನ್ನಿಸುತ್ತಿರಬೇಕು. ಆ ಗೊಂದಲದಲ್ಲೇ ಹಾಸ್ಯ ಸೃಷ್ಟಿಯಾಗಬೇಕು. ಅದನ್ನು ಸಾಧಿಸಬೇಕಿದ್ದರೆ ತುಂಬ ನಾಜೂಕಾದ ಲೆಕ್ಕಾಚಾರದ ಮಾತುಗಳು ಮತ್ತು ಸನ್ನಿವೇಶಗಳು ಬೇಕಾಗುತ್ತವೆ. ಅದನ್ನು ಗಣಿತಜ್ಞನ ಪರಿಣತಿಯಿಂದ ಸೂರಿ ಸಾಧಿಸಿದ್ದಾರೆ. ಕೊನೆಯ ಸನ್ನಿವೇಶವಂತೂ ಅವರ ಕಲ್ಪನಾಶಕ್ತಿಗೆ ಕನ್ನಡಿ ಹಿಡಿಯುತ್ತದೆ. ತಾವೇ ಸೃಷ್ಟಿಸಿದ ನಾಲ್ಕು ಪಾತ್ರಗಳನ್ನು ಎರಡಕ್ಕೆ ಇಳಿಸುವಲ್ಲಿ ಅವರ ಜಾಣ್ಮೆ ವ್ಯಕ್ತವಾಗುತ್ತದೆ.
ಖಳನಾಯಕನ ಪಾತ್ರವಂತೂ ನಮ್ಮ ಚಿತ್ರರಂಗದ ಡಾನ್ ಗಳನ್ನು ನಿವಾಳಿಸಿ ಎಸೆಯುವಂತಿದೆ. ಆತನ ಅಸಹಾಯಕತೆ, ಗೊಂದಲ ಮತ್ತು ಮಿತಿಗಳನ್ನು ಸೂರಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ. ನರಸಿಂಹಯ್ಯನವರ ಕಾದಂಬರಿಯನ್ನು ಓದಿ ಅದರ ಸನ್ನಿವೇಶಗಳನ್ನು ಊಹಿಸಿಕೊಳ್ಳುವುದೂ ಮಜವಾಗಿದೆ.
******
ನಾಟಕ ನೋಡಿದ ನಂತರ ಸಿಕ್ಕ ಇಂಗ್ಲಿಷ್ ಪಂಡಿತರೊಬ್ಬರು ಅದು ಷೇಕ್ಸಪಿಯರ್ ನಾಟಕ ಅಲ್ಲ. ಅವನು ಅದನ್ನು ರೋಮ್ ನಾಟಕಕಾರ ಪ್ಲೂಟಸ್ ನಾಟಕದಿಂದ ಎರವಲು ತಗೊಂಡಿದ್ದು ಎಂದು ಅದ್ಯಾವುದೋ ವಿಚಿತ್ರ ಹೆಸರು ಹೇಳಿದರು. ಮೂಲ ನಾಟಕಕ್ಕೂ ಶೇಕನಾಟಕಕ್ಕೂ ವ್ಯತ್ಯಾಸ ಏನಿತ್ತು ಎಂಬ ಪ್ರಶ್ನೆಗೆ ಷೇಕ್ಸಪಿಯರ್ ನಾಟಕಕ್ಕೆ ಪನ್ ಪ್ರಾಣ ಅಂದರು. ಭಾಷೆಯೇ ಅದರ ಶಕ್ತಿ ಅಂದರು.
ಸೂರಿ ನಾಟಕದಲ್ಲೂ ಅದೇ ಆಗಿದೆ. ಭಾಷೆಯೇ ಅದರ ಸತ್ವ. ಕನ್ನಡವನ್ನು ಸೂರಿ ರಣಧೀರ ಕಂಠೀರವನ ಖಡ್ಗದಂತೆ ಬಳಸುತ್ತಾರೆ.
******
ಮತ್ತೆ ಷೇಕ್ಸಪಿಯರ್ ತಂಟೆಗೆ ಬಂದರೆ ಆತನ ಮತ್ತಷ್ಟು ಮಾತುಗಳು ನೆನಪಾಗುತ್ತವೆ. ಒಮ್ಮೆ ಮಹಾನ್ ತರಲೆಯಂತೆ, ಒಮ್ಮೊಮ್ಮೆ ಗಾಢ ಪ್ರೇಮಿಯಂತೆ ಕಾಣುವ ಆತ ಎಷ್ಟೆಷ್ಟು ಒಳ್ಳೆಯ ಪ್ರೇಮಗೀತೆಗಳನ್ನು ಬರೆದ. `ಪಾತ್ರ ಬದಲಿಸುವ ಅವಕಾಶ ಇದ್ದಾಗಲೂ ಬದಲಾಗದೆ ಹರಿಯುವುದೇ ಪ್ರೇಮ’ ಎಂದ. I am a man more sinned against sinning ಎಂದು ಬರೆದ. ಕಷ್ಟಗಳು ಬರುವಾಗ ಒಂಟಿಯಾಗಿ ಬರುವುದಿಲ್ಲ ಎಂದು ಕೊರೆದ. ಹತಾಶರಿಗೆ ಆಶೆಯೇ ಮದ್ದು ಎಂದ. ಹೆಂಡತಿಯನ್ನು ಕರುಣೆಯಿಂದಷ್ಟೋ ಕೊಲ್ಲಬಲ್ಲಿರಿ ಎಂದು ಸಾರಿದ. ನಾನು ಸಹಜವಾಗಿ ಪ್ರಾಮಾಣಿಕನಲ್ಲ, ಆಕಸ್ಮಿಕವಾಗಿ ಒಮ್ಮೊಮ್ಮೆ ಪ್ರಾಮಾಣಿಕನಂತೆ ಕಾಣಿಸ್ತೇನೆ ಎಂದು ನಕ್ಕ.
ಅಂದಹಾಗೆ ಶೇಕಮಾತುಗಳೆಲ್ಲ ಅವನ ಪಾತ್ರಗಳ ಮೂಲಕವೇ ಹೊರಹೊಮ್ಮಿದವು, ಅವನ ಪಾತ್ರಗಳೇ ಆಡಿದ ಮಾತುಗಳವು. ಹೀಗಾಗಿ ಆಯಾ ಪಾತ್ರದ ಸಮಯ ಸಂದರ್ಭಕ್ಕೆ ತಕ್ಕಂತಿವೆ ಆ ಮಾತುಗಳು. ಆದರೆ ನಾಟಕವನ್ನು ಹೊರತು ಪಡಿಸಿ ನೋಡಿದರೂ ಆ ಮಾತುಗಳಿಗೆ ವಿಶೇಷ ಅರ್ಥವಿದೆ.
ಷೇಕ್ಸಪಿಯರ್ ಓದಿದ ನಂತರ ಇಂಗ್ಲೆಂಡಿನ ಕವಿಯೊಬ್ಬ ಹೇಳಿದನಂತೆ; ಚೆನ್ನಾಗಿ ಬರೀತಾನೆ ಅಂತ ಎಲ್ಲರೂ ಹೇಳ್ತಿದ್ರು. ಆದ್ರೆ ಅವನು ನಿಜವಾಗ್ಲೂ ಚೆನ್ನಾಗೇ ಬರೀತಾನೆ ಕಣ್ರೀ.

Leave a Reply