ಹಕ್ಕಿ ಹಾರುತಿದೆ ನೋಡಿದಿರಾ

ಹಕ್ಕಿ ಹಾರುತಿದೆ ನೋಡಿದಿರಾ

ದೇಶದಾದ್ಯಂತ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದು ಮಾಡುವ ಬಗ್ಗೆ ಪತ್ರಿಕಾ ವರದಿಗಳು ಸಾಕಷ್ಟು ಬಂದಿವೆ. ಕೂಲಂಕುಷವಾಗಿ ಪರಿಶೀಲಿಸಿದರೆ ಕೆಲವು ಪಾಲಿಟೆಕ್ನಿಕ್ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿಯ ಕೆಲವು ಕೋರ್ಸುಗಳು ಮಾತ್ರ ಮುಚ್ಚಲು ಆದೇಶಿಸಲಾಗಿದೆ. ಪೂರ್ತಿಯಾಗಿ ಮುಚ್ಚುವುದು ಅಲ್ಲ, ಯಾವ ಕೋರ್ಸುಗಳಿಗೆ ಪ್ರವೇಶ ಕಡಿಮೆ, ನಿಕೃಷ್ಟವಾಗಿವೆ ಅವುಗಳಿಗೆ ಮಾತ್ರ. ಇದು ಒಂದು ರೀತಿಯಿಂದ ಮ್ಯಾನೇಜ್ಮೆಂಟ್ಗಳಿಗೆ ವರವೇ. ಸರ್ಕಾರಿ ವ್ಯವಸ್ಥೆಯಿದ್ದಲ್ಲಿ ಸಾಧ್ಯವಾದ ಆಂತರಿಕ ವರ್ಗಾವಣೆ ಇಲ್ಲದಿದ್ದರೇ ಅವರವರ ಇಚ್ಛೆಗೆ ಸಂಬಂಧಿಸಿದ ಹಾಗೆ. ಇನ್ನೂ ಈ ವರ್ಷದಿಂದ ಇಂಟರ್ನಶಿಪ್ AICTEಯವರು ಕಡ್ಡಾಯ ಮಾಡಿರುವ ಕಾರಣ ಮತ್ತೆ ಕೆಲವು ಕಡೆ ಪ್ರವೇಶ ಕಡಿಮೆ, ಪ್ರಾಧ್ಯಾಪಕರ ಮೇಲೆ ಒಂದು ತರಹ ಒತ್ತಡ, ಸರ್ಕಾರಿ ಕಾಲೇಜುಗಳಲ್ಲಿ “ನಿಮ್ಮ ಫೀ ಕಡಿಮೆ ನೀವೇ ನೋಡಿಕೊಳ್ಳಿ” ಅನ್ನುವ ಆಡಳಿತ ಧೋರಣೆ ಯಾವುದೂ ಆಶ್ಚರ್ಯವಲ್ಲ. ಪ್ರವೇಶ ಕಡಿಮೆ, ಕೆಲಸ ಸಂಭವ, ನೇಮಕಾತಿ ಸಂಭಾವ್ಯತೆ ಕಡಿಮೆ ಅನ್ನುವದು, ಆಂತರಿಕ ಸೌಲಭ್ಯಗಳು ಕಡಿಮೆ, ಉದ್ಯಮಗಳಿಂದ ಭೌಗೋಲಿಕ ಮಾನಸಿಕ ದೂರು ಅಂತರಗಳು, ಆಡಳಿತ ಮಂಡಳಿಯ, ಪ್ರಾಚಾರ್ಯರ ಲವಲವಿಕೆಗಳು ಕಡಿಮೆ ಅಥವಾ ‘ಇದು ನಮ್ಮ ಕೆಲಸವಲ್ಲ’ ಅನ್ನುವ ಭಾವನೆ. ಇಂತಹ ಪ್ರಸಂಗ ಮತ್ತು ಸನ್ನಿವೇಶಗಳು ಈಗ ವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಹೆಚ್ಚು ಮಾಮೂಲು. ಇಲ್ಲಿ ಹೀಗ್ಯಾಕೆ ಅಂತ ಪ್ರಶ್ನೆ ನಾವೇ ಮಾಡಿಕೊಂಡರೇ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕವಾಗಿ ಹಾಸು ಹೊಕ್ಕಾಗಿ ಇರಬೇಕಾದ ರಕ್ಷಣೆಯ ತಾಂತ್ರಿಕ ಯೋಚನೆಯ ಚಿಂತನೆ ಇಲ್ಲದಿರುವದು. ಅಂದರೆ ಇಂಗ್ಲಿಷನಲ್ಲಿ ಹೇಳಬೇಕೆಂದರೆ Lack of Strategic Planning ಅಂತಾ. ಸಾಮಾನ್ಯನು ಸಹ ತನ್ನ ಮತ್ತು ಅವಲಂಬಿತರ ರಕ್ಷಣೆ ಮತ್ತು ಭವಿಷ್ಯದ ಭದ್ರತೆಗಾಗಿ ವಿಮೆ ಇಳಿಸುತ್ತಾನೆ. ಆದರೆ ತಾನು ಕಾರ್ಯ ಮಾಡುವ ಸಂಸ್ಥೆ/ಕಚೇರಿಗಳಿಗಾಗಿ ಮಾಡುವುದಿಲ್ಲ ಎಂಬುದೇ ದುರಂತ. ಭದ್ರತೆ ರಕ್ಷಣೆ ಅದೂ ಭವಿತವ್ಯದ ದ್ರಷ್ಟಿಯಿಂದ ಸಂಸ್ಥೆಗೆ ಮಾಡಬಹುದಾದ ಅಧಿಕಾರ ಇಲ್ಲದಿರಬಹುದು. ಆದರೆ ಚಿಂತನೆಗೆ ಅಧಿಕಾರ ಬೇಕಿಲ್ಲ. ವೈಯಕ್ತಿಕವಾಗಿ ಸಂಸ್ಥೆಯ ಬಗ್ಗೆ ಚಿಂತನೆ ಕೂಡ ಒಂದಿಲ್ಲ ಒಂದು ದಿನ ಒಳ್ಳೆಯದಿದ್ದರೆ ಮನ್ನಣೆ ಸಿಕ್ಕೇ ಸಿಗುತ್ತದೆ. ರಾಜಕೀಯ ಪಕ್ಷಗಳಿಂದ, ಇತರ ದೇಶದ ರಾಜಕಾರಣಿಗಳಿಂದ, ಬೇರೆ ಬೇರೆ ಕ್ಷೇತ್ರಗಳಲ್ಲಿ ಅನುಭವಿಕರಿಂದ ಸಾಕಷ್ಟು ಕಲಿಯಬಹುದಾಗಿದೆ. ಜರ್ಮನಿ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಸಿಂಗಾಪುರ, ಮಲೇಷಿಯಾ, ಇಸ್ರೇಲ್, ಫಿನ್ಲ್ಯಾಂಡ್ ದೇಶಗಳೆಲ್ಲ ಭಾರತಕ್ಕೆ ಹೋಲಿಸಿದರೆ ಚಿಕ್ಕ ರಾಷ್ಟ್ರಗಳು, ಆದರೆ ಈ Strategic Planning ದಲ್ಲಿ ಅಂದರೆ ರಕ್ಷಣೆ ಭದ್ರತೆ ತಂತ್ರ ವಿನ್ಯಾಸ ಯೋಜನೆಯನ್ನು ಮಾಡುವುದರ ಮುಖಾಂತರ ಅವು ಕ್ಷಿಪ್ರಗತಿಯ ಅಭಿವೃದ್ಧಿ ಮಾಡಿ ತೋರಿಸಿ ಜಗತ್ತು ಬೆರಳು ಕಚ್ಚುವಂತೆ ಮಾಡಿದವು. ಅದಕ್ಕಾಗಿಯೇ ದೇಶಕ್ಕೊಂದು ಸಂಸ್ಥೆಗೊಂದು, ಮನೆಗೂ ಒಂದು ಭದ್ರವಾದ ಯೋಜನೆ Strategic Planning ಇರಬೇಕು ಅನ್ನುವದು. ಕೇಂದ್ರ ಸರ್ಕಾರದ ಮಂತ್ರಿಗಳ ಸಂಪುಟದಲ್ಲಿ ಪುನಾರಚನೆ ಇಂತಹ ಭದ್ರತಾ ಯೋಜನೆಯ ಒಂದು Latest ಹೊಸ ಉದಾಹರಣೆಯಾಗಿದೆ. ಕರ್ನಾಟಕದ ನಾಮೇ ನಾಮೇ ಹೆಸರುಗಳನ್ನು ಬಿಟ್ಟು ಅನಿರೀಕ್ಷಿತವಾದ ಹೆಸರೊಂದು ಅನಂತಕುಮಾರ ಹೆಗಡೆ ರೂಪದಲ್ಲಿ ಬಂದಾಗ ಆಶ್ಚರ್ಯ, ಆಘಾತ, ನಿರಾಶೆ, ಆನಂದ, ಎಲ್ಲವನ್ನೂ ಹುಟ್ಟಿಸದರೂ ಏನಿರಬಹುದು ಅನ್ನುವ ಕುತೂಹಲವೇ. ಈ ವಿಚಾರ ಬರಲು ಕಾರಣವಾಯಿತು. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಚಾಣಕ್ಯನ ನೆನಪಾಗುತ್ತದೆ. ಯುದ್ಧವಿಲ್ಲದೇ ವೈರಿಗಳ ನಾಶ ಮಾಡುವ, ಸ್ಪರ್ಧಿಗಳ ಕಡಿಮೆ ಮಾಡುವ ಗುರಿ ಮುಟ್ಟುವ ಛಲ, ಮನೋಬಲ ಎದ್ದು ಕಾಣುವಂತೆ ಮಾಡಿದ್ದು, ‘ಸಿದ್ಧ’ವಾದ ಒಪ್ಪುವದಾದರೇ, ಪ್ರಮುಖ ಜಾತಿಯನ್ನೇ ಒಡೆದು ಸಿದ್ಧ ಸಿದ್ದಾಂತವನ್ನು ತಂದು ವೈರಿಗಳ ಬಲಕ್ಕೊಂದು ಅಂತ್ಯ ಕಾಣಿಸುವುದು ಸಹ ಒಂದು ಭದ್ರತಾ ತಂತ್ರವೇ ಸರಿ. ವರ ನೀಡಿದ ಪರಮೇಶ್ವರನನ್ನೇ ಚಿಂತೆಗೀಡು ಮಾಡಿದ ರಾಕ್ಷಸರು ಪುರಾಣದಲ್ಲಿ ಬರುವದು ಹೊಸದಲ್ಲ. ರಾಕ್ಷಸರು ನಿಜವಾಗಿ ಮನುಕುಲ ನಾಶಕ್ಕೆ ಹೊರಟಾಗ ದೇವರು ಹಲವಾರು ಅವತಾರಗಳನ್ನು ತಾಳಲಿಲ್ಲವೇ? ಹಾಗೆಯೇ ದಮನಕ್ಕಾಗಿ ಮನ ಚಡಪಡಿಸಿದಾಗ ಹೊಸ ತಂತ್ರಗಳು ಹುಟ್ಟುವವು. ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನುವದು ಸತ್ಯವೇ ಸರಿ ಅನ್ನುವದು ಇಬ್ಬರು ಜಗಳವಾಡುವಾಗ ಗೊತ್ತಾಗುವುದೇ ಇಲ್ಲ. ಅರಿವು ಬರುವುದೇ ಇಲ್ಲ. ಇವೆಲ್ಲವೂ ಕರ್ಮ ಸಿದ್ಧಾಂತದ ಪ್ರಕಾರ ನಮ್ಮ ನಮ್ಮ ಕರ್ಮಗಳಿಗೆ ನಾವೇ ಜವಾಬುದಾರಿ ಹೊರಬೇಕಾಗುವದು. ನರೇಂದ್ರ-ಅಮಿತ ಮೂಲಕ ಅನಂತ ಅಸ್ತ್ರವನ್ನು ತಂತ್ರಗಾರಿಕೆಯ ಫಲವಾಗಿ ಉಪಯೋಗಿಸಿದ್ದರೇ ಅದರಲ್ಲಿ ಆಶ್ಚರ್ಯವಿಲ್ಲ! ಅನಂತದ ಆಳ ಯಾವಾಗಲೂ ದಾಳವೇ. ಚದುರಂಗದಾಟದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಅಂತಿಮ ಗುರಿ, ಕ್ಷಿಪ್ರ ಆಚರಣೆ ಎಲ್ಲವೂ ಮುಖ್ಯವೇ. ನಮ್ಮ ಶಕ್ತಿ ಸಾಮ ರ್ಥ್ಯ ಹೆಚ್ಚಳ, ದೌರ್ಬಲ್ಯಗಳನ್ನು ಕಡಿಮೆ ಮಾಡುವದೇ ಈ ವಿನ್ಯಾಸದ ತಿರುಳು. ನಾಯಕನೊಬ್ಬ ನಾಯಕನಾಗಿಯೇ ಉಳಿಯುವದು. ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಕಾದ ಅವಶ್ಯಕತೆಗಳನ್ನು ಹೊಂದುತ್ತ ಪ್ರತಿ ಅವಕಾಶದ ಉಪಯೋಗ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ರೋಮ್ ಸಾಮ್ರಾಜ್ಯ ಒಂದೇ ದಿನದಲ್ಲಿ ಆಗಲಿಲ್ಲ. ಮೊಘಲ ಸಾಮ್ರಾಜ್ಯ ಒಂದೇ ದಿನದಲ್ಲಿ ಆಗಲಿಲ್ಲ. ಹಾಗೆಯೇ ಭಾರತಕ್ಕೆ ಅಹಿಂಸಾ ಮಾರ್ಗದಿಂದ ಒಮ್ಮೆಲೇ ಸ್ವಾತಂತ್ರ್ಯ ಸಿಗಲಿಲ್ಲ. ಪ್ರತಿಯೊಂದಕ್ಕೆ ಯೋಜನೆ ಬೇಕು. ಅದೂ ಸಹ Strategic ಅಂದರೇ ರಕ್ಷಣೆ, ಭದ್ರತೆ ಅಭಿವೃದ್ಧಿ ಎಲ್ಲವುಗಳ ಸಂಗಮವಾಗಿರಬೇಕು. ಅದಕ್ಕಾಗಿ ದೂರದೃಷ್ಟಿಯುಳ್ಳ ನಾಯಕ, ಚಿಂತಿಸುವ ನಾಯಕ, ಗುರಿ ಮುಟ್ಟುವದಕ್ಕಾಗಿ ದುಡಿಯುವ ನಾಯಕ, ದುಡಿಯುವ ಚಿಂತಿಸುವ ಸಮಾನ ಮನಸ್ಕರ ಹುಡುಕಿ ತೆಗೆದು, ಮಾಡುವ, ಕಟ್ಟುವ ಮನಸು ಮಾರ್ಗವಿರುವ ನಾಯಕನಿರಬೇಕು. ಮಾರ್ಗ ಅಂದರೆ ಸರಿಯೋ ಅಥವಾ ತಪ್ಪು ಅಂತ ಅಲ್ಲ. ಇಂದು ಉತ್ತರ ಕೋರಿಯಾದ ಕಿಮ್ ಉನ್ ಜಿನ್ ಇರಬಹುದು, ಮಾರ್ಟಿನ್ ಲೂಥರ್ ಕಿಂಗ್ ಇರಬಹುದು, ಗಾಂಧೀಜಿಯಾಗಿರಬಹುದು, ಸಾಮ್ರಾಜ್ಯ ಕಟ್ಟಿದ ವಿದ್ಯಾರಣ್ಯರಿರಬಹುದು, ಶೈಕ್ಷಣಿಕ ಸಾಮ್ರಾಜ್ಯದ ಕನಸು ಕಂಡ ಸಪ್ತರ್ಷಿಗಳಿರಬಹುದು ಯಾರೇ ಇರಲಿ, ಗುರಿ ಗುರುತರವಾಗಿದ್ದು ನಿಜ. ಹಿಟ್ಲರ್, ಮುಸಲೋನಿ, ಲೆನಿನ್, ಕ್ರುಶ್ಚೈವ್, ಅಲೆಕ್ಜಾಂಡರ್, ಚಾಣಕ್ಯ, ಇತ್ಯಾದಿ ಹಲವಾರು ಏಳುಬೀಳುಗಳನ್ನು ಇತಿಹಾಸ ಕಂಡಿದೆ. ಪ್ರತಿಯೊಬ್ಬರ ಬೆಳವಣಿಗೆ, ಅಭಿವೃದ್ಧಿಯಲ್ಲಿ ಅವರದೇ ಆದ ಚಿಂತನೆ ಫಲವಾಗಿ ಅವರೆಲ್ಲ ಅವರ ಅವರ ಗುರಿ ಮುಟ್ಟಿದರು. ಹಾಗೆಯೇ ಇಂದು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿ ಸಂಸ್ಥೆಯೂ ತನ್ನದೇ ಆದ ಭವಿಷ್ಯದ ಕನಸು ಕಾಣುತ್ತ ತಂತ್ರ ಭದ್ರತೆ, ರಕ್ಷಣೆಗಳ ವಿನ್ಯಾಸ ಮಾಡಿಕೊಳ್ಳುವುದು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವಕ್ಕೆ ಅವಶ್ಯವಾಗಿದೆ. ಈ Strategic Planning ಅನ್ನುವುದೇ ಮುಂಬರುವ ಒಂದು, ಎರಡು, ಮೂರು, ಐದು, ಹತ್ತು ವರ್ಷಗಳಲ್ಲಿ ಭವಿಷ್ಯ ಹೇಗಿರಬಹುದು ಎಂದು ಯೋಚಿಸುತ್ತ ನಮ್ಮ ನಮ್ಮ ಸಾಮ ರ್ಥ್ಯ, ಕನಸುಗಳಿಗೆ ಅನುಗುಣವಾಗಿ ಮಾಡುತ್ತ, ತಿದ್ದಿಕೊಳ್ಳುತ್ತ, ನಿಯಮಿತವಾಗಿ ಹಿಂದಿನದನ್ನೇ ವಿಶ್ಲೇಷಿಸುತ್ತ ಮುಂದೇ ಸಾಗುವದು ಜೀವಂತಿಕೆಯ ಲಕ್ಷಣ ಮತ್ತು ಉತ್ತಮ ನಾಯಕತ್ವದ ಗುಣಧರ್ಮಗಳು. ಅಂತಹ ಸಂಸ್ಥೆಗಳು ಮುಚ್ಚುವುದಿಲ್ಲ. ಯಾರು ಮನಸ್ಸನ್ನು ಬಿಚ್ಚುವದಿಲ್ಲವೊ, ಮುಚ್ಚಿಕೊಳ್ಳುವದನ್ನು ತಪ್ಪಿಸಲು ಸಾಧ್ಯವಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಈ ರೀತಿಯ ಆಧ್ವಾನಗಳು ಇರುವವೇ. ಅವುಗಳಿಗೆಲ್ಲ ನಾಯಕನಾದವನ್ನು ತಂತ್ರಗಳನ್ನು ಉಪಯೋಗಿಸಬೇಕಾಗುವದು, ಅನಿವಾರ್ಯವಾದುದು. ಮನಸ್ಸೆಂಬ ಪ್ಯಾರಾಚೂಟ ಬಿಚ್ಚಿಕೊಂಡಾಗಲೇ, ಸುಭದ್ರವಾಗಿ ನೆಲದ ಮೇಲೆ ಇಳಿಯಬಹುದು. ರೆಕ್ಕೆ ಬಿಚ್ಚಿದಾಗ ಮಾತ್ರ ಹಕ್ಕಿ ಹಾರುವದಲ್ಲವೇ. ಹಕ್ಕಿ ವಾತಾವರಣಕ್ಕೆ ತಕ್ಕಂತೆ ರೆಕ್ಕೆ ಬಡಿಯುತ್ತಲೇ ಮೇಲೇರುತ್ತದೆ. ರೆಕ್ಕೆ ಅಗಲಿಸಿ ತಟಸ್ಥವಾಗುತ್ತದೆ. ಅದಕ್ಕೆ ಹೇಳುವದು ನಾವು ಕಲಿಯುವದು ಇದೆ. “ಹಕ್ಕಿ ಹಾರುತಿದೆ ನೋಡಿದಿರಾ”.

ಕೃಪೆ : ಸಂಯುಕ್ತ ಕರ್ನಾಟಕ

Leave a Reply