ಹರಟೆ ಕಟ್ಟೆ

ಹರಟೆ ಕಟ್ಟೆ
ಸ್ನೇಹಿತರೆ, ನಮಸ್ಕಾರ.ತಮಗೆಲ್ಲರಿಗೂ ಹರಟೆ ಕಟ್ಟೆಗೆ ಆದರದ ಆಮಂತ್ರಣ. ಯಾಕ್ರೀ ,ಮೂಗು ಮುರಿತೀರಾ?

ಇವತ್ತು ನಾಳಿನ ಈ ಗಡಿಬಿಡಿ ಜೀವನದಾಗ ಸರಿಯಾಗಿ ಊಟ -ನಿದ್ದಿ ಮಾಡಲಿಕ್ಕೆ ಟೈಮ್ ಇಲ್ಲ ; ಹಡೆದ ಅವ್ವಾ – ಆಪ್ಪಗ “ಹೆಂಗಿದ್ದಿರಿ ?” ಅಂತ ಕೇಳಲಿಕ್ಕೆ ಪುರಸೊತ್ತು ಇಲ್ಲ ;ಕಟಗೊಂಡ ಹೆಂಡತಿ – ಮಕ್ಕಳ ಜೋಡಿ ಕೂತು ಎರಡು ಮಾತಾಡೂ ವ್ಯವಧಾನವಿಲ್ಲ ….ಇನ್ನ ನಿಮ್ಮ ಹರಟೆ ಕಟ್ಟೆಗೆ ಬಂದು ಹರಟಿ ಹೊಡಿಲಿಕ್ಕೆ ಯಾರ ಹತ್ರ ಟೈಮ್ ಅದ ಅಂತಿರೇನು? ಅಲ್ಲದ ” ಹಾಳು ಹರಟಿ ಕೈಯಾಗ ಪರಟಿ ” ಅಂತ ಮುಖ ತಿರುವಿ ಹೊಂಟ ಬಿಡಬ್ಯಾಡ್ರಿ . ಅಷ್ಟು ಹಗುರ ತಗೂಬ್ಯಾಡ್ರಿ ಹರಟಿನಾ .

ಎನ್ಕೆ ಅವರು ತಮ್ಮ ” ಲಲಿತ ಪ್ರಬಂಧಗಳು ” ಪುಸ್ತಕದಲ್ಲಿ ಹೇಳುತ್ತಾರೆ -” ಬೇಂದ್ರೆಯವರು “ಹಾಳು ಹರಟಿ ಕೈಯಾಗ ಪರಟಿ ” ಎಂದು ಹರಟೆಗೆ ಬಂದಿದ್ದ ಅಪಕೇರ್ತಿಯನ್ನು ತೊಲಗಿಸಿ ,ಹರಟೆಯೆಂದರೆ ಉತ್ತಮ ಸಾಹಿತ್ಯ ಪ್ರಕಾರದ ಮೌಲ್ಯ ಪಡೆಯಬಹುದೆಂಬುದನ್ನು ತೋರಿಸಿದರಲ್ಲದೆ ಅದರಿಂದಾಗಿ ಹರಟೆಯು ಉತ್ತರ ಕರ್ನಾಟಕದೊಂದು ಪ್ರತಿಷ್ಠೆಯ ಸಾಂಸ್ಕೃತಿಕ ತುಣುಕು ಎಂದೂ ಸಿದ್ಧ ಮಾಡಿಕೊಟ್ಟರು.

” ಹಳೆಯ ಹರಟೆಯ ಮನೆತನ ದೊಡ್ಡದು. ರಾಜರ ಸುಖ ಸಂಕಥಾ ವಿನೋದದಲ್ಲಿ ಮೊಳೆತು,ಪಂಡಿತರ
ಕಾವ್ಯ ಶಾಸ್ತ್ರ ವಿನೋದದಲ್ಲಿ ಚಿಗಿತು, ಕವಿಗಳ ಅಕ್ಕರಗೊಟ್ಟಿಯಲ್ಲಿ ಬೆಳೆದು, ವೇಶ್ಯಾ ವಾಟದ ವಿಟ ವಿದೂಷಕರಲ್ಲಿ ಶಾಖೋಪಶಾಖೆಯಾಗಿ ,ಚೆದುರೆಯರ ಮಾತಿನಲ್ಲಿ ಹೂತು ವಿಲಾಸ ವಿಲಾಸವಾಗಿ ಅದು ನಾಟ್ಯವಾಡಿದೆ.”—
(“ಸಾಹಿತ್ಯದ ವಿರಾಟ್ ಸ್ವರೂಪ “–ಬೇಂದ್ರೆ “)

ಹರಟೆಯ ಹೂರಣ ದೊಡ್ಡದು. ಒಂದರ್ಥದಲ್ಲಿ ಹರಟೆಯೂ ಪರಮಾತ್ಮನ ಪ್ರತಿರೂಪವೇ. ಅನಾದಿ-ಅನಂತ .

ಅವಧಾನಿ ಗಂಗಾಬಾಯಿಯ ಹೂರಣದ ಹೋಳಿಗೆಯಿಂದ ಶುರುವಾದ ಹರಟಿ ಅದ್ಯಾವಾಗ ‘ರಾಮ್ ತೇರೀ ಗಂಗಾ ಮೈಲಿ’ಯ ಮಂದಾಕಿನಿಯನ್ನು ಮುಟ್ಟಿರುತ್ತದೋ ಗೊತ್ತೇ ಆಗದು .ಡಿಕ್ಟೇಟರ ಅತ್ತೆ -ದಿಪ್ಲೊಮ್ಯಾ ಟಿಕ್ ಮಾವಂದಿರಿಂದ ಗಯ್ಯಾಳಿ ಸೊಸೆಯಂದಿರು
-ಅಚ್ಛಾದ ಅಳಿಯಂದಿರವರೆಗೆ ,
ಮಾವಿನ ಮಿಡಿಗಾಯಿಯಿಂದ ಮಿಡಿ-ಮಿನಿಯ ಹುಡುಗಿಯರವರೆಗೆ ,ಮೆಂತ್ಯೆ ಸೊಪ್ಪಿನ ಕಟ್ಟಿನಿಂದ ಹಿಪ್ಪಿಕಟ್ಟಿನ ಹುಡುಗರವರೆಗೆ ಮೂರುಕಾಸಿನ ಕೊತ್ತಂಬರಿಯಿಂದ ಸರಾಫ್ ಬಜಾರದ ಕಾಸಿನಸರದವರೆಗೆ ,ಮಂದಿರದ ಮಂಗಳಾರತಿಯಿಂದ ಮಸೀದಿಯ
ಮುಲ್ಲಾನವರೆಗೆ ,ಮನೆಗೆಲಸದ ತಿಮ್ಮಿಯಿಂದ ಎಮ್ಮೆಲ್ಲೆ ಮಾದಪ್ಪನವರ ಪೊಮೇರಿಯನ್ ಪಮ್ಮಿಯವರೆಗೆ ,
ಅಗಸರ ಒಬವ್ವನಿಂದ ಅಮೇರಿಕಾದ ಒಬಮಾನವರೆಗೆ ,ಪುಟ್ಯಾನ ಮನೆಯ ಪುಸ್ಸಿ ಕ್ಯಾಟ ನಿಂದ ವಿಕ್ಟೋರಿಯ ರಾಣಿಯವರೆಗೆ ——-ಹೀಗೆ ಎಲ್ಲರನ್ನೂ ,ಎಲ್ಲವನ್ನೂ ತನ್ನೊಳಗೆ ಇರಿಸಿಕೊಳ್ಳುವ ವಿಶ್ವಂಭರ ಅದು …..
ವಿಶ್ವತೋಚಕ್ಷು ..,,ವಿಶ್ವತೋಮುಖ ……
ಹಂಗಾರ ಈಗರೇ ಹರಟೀನ ಅಸಡ್ಡೆ ಮಾಡೂದು ಬಿಟ್ಟು ಸವಡು ಮಾಡಿಕೊಂಡು ಬರ್ತಿರಲಾ ನಮ್ಮ ಕಟ್ಟಿಗೆ ಹರಟಿ ಹೊಡಿಲಿಕ್ಕೆ ……

ಚಿತ್ರ: ಗೂಗಲ್

1 Comment

  1. ಹರಟೀ ಕಟ್ಟೆಗೆ ಬರೋಕೆ ನಾವ್ ತಯಾರಿದ್ದೇವೆ …..

    ಅಂತರ್ಜಾಲಾನು ಹರಟೆ ಕಟ್ಟೆ ಮುಂದ ಏನೂ ಅಲ್ಲ ಯಾಕಂದರ ಹರಟೆ ಕಟ್ಟೆಯಲ್ಲಿ ಚರ್ಚಿಸುವ ವಿಷಯ ಆದರ್ಕಿಂತ ಜಾಸ್ತಿ ಇರ್ತದ….

    ನಾವ್ ಬಂದೆವು…ನೀವೆಲ್ಲರೂ ಬರ್ತೀರಂಥ ನಂಬೀವ್

Leave a Reply