Some times it is O.K ‘ Not to be O.K.’..

Some times it is O.K ‘ Not to be O.K.’..

ನನ್ನ ಓದುವ ಹವ್ಯಾಸ ನನ್ನ ಚಿಕ್ಕಂದಿನದು..ಬಹಳ ತಿಳಿಯಬೇಕು, ಸಾಧ್ಯವಾದರೆ ಬರೆಯಬೇಕು ಅಂತೇನೂ ಅಲ್ಲ. ಮನೆಯಲ್ಲಿ ಸಾಕಷ್ಟು ಜನರಿದ್ದು ಕೆಲಸದ ಹೊರೆ ಕಡಿಮೆ.ನನ್ನೂರು ಪುಟ್ಟ ಹಳ್ಳಿಯಾದ್ದರಿಂದ ಮತ್ತೊಂದು ಸುತ್ತು ಹಾಕಿದರೆ ಮುಗಿದೇ ಹೋಗುವಷ್ಟು ಚಿಕ್ಕದು.ಸಿಕ್ಕ ಸಮಯದಲ್ಲಿ ಆಡಿ ಉಳಿದ ಒಂದಿಷ್ಟು ಸಮಯ ಓದಿಗೆ ಎಂಬ ಅನಿಸಿಕೆ. ಅದೇ ಅಷ್ಟಿಷ್ಟು ಬೆಳೆದು ಒಂದಿಷ್ಟು ಗೀಚುವ ಗೀಳು ಅಂಟಿಕೊಂಡಿದ್ದು.ಆಗ ಅಂಥ ಹವ್ಯಾಸಗಳು ವಿಶೇಷ ಅನಿಸುವಂಥವೇನೂ ಆಗಿರಲಿಲ್ಲ .ಶಾಲೆಯಲ್ಲಿ ಮಾಸ್ತರರ ಶಭಾಶಗಿರಿ ಅಷ್ಟಿಷ್ಟು, ಆಗಾಗ ಸಿಕ್ಕದ್ದು ಬಿಟ್ಟರೆ ಪ್ರೋತ್ಸಾಹವೂ ಶೂನ್ಯ..ಗೆಳತಿಯರಲ್ಲೇ ಚೂರು ಪಾರು ಹವಾ…
‌ ಆದರೂ ಒಳಗೆಲ್ಲೋ ಆಳದಲ್ಲಿ ತುಡಿತವಿದ್ದಿರಲೇಬೇಕು. ಆಗಾಗ ಕವನ ರಚಿಸುವದು ಪ್ರಾರಂಭವಾಗಿ ಕುಡಿಯೊಡೆದು ಶಿಕ್ಷಕಿಯಾಗಿ ಸೇರಿಕೊಂಡಮೇಲೆ ಮಕ್ಕಳಿಗೆ ಕಲಿಸುವಲ್ಲಿ, ಬೇರೆ ಭಾಷೆಗಳ ಕವನ ಗಳನ್ನು ಅನುವಾದಿಸುವಲ್ಲಿ, ಅಂಥದೇ ಹವ್ಯಾಸದ ಮಕ್ಕಳು ಸಹಾಯ ಬೇಡಿದರೆ ಸ್ವಲ್ಪು ಮಟ್ಟಿಗೆ ಮಾರ್ಗ ದರ್ಶನ ಮಾಡುವಲ್ಲಿ, ಆಗಾಗ ವಿಶೇಷ ಕಾರ್ಯಕ್ರಮಗಳು, ಹಬ್ಬ,ಸಮಾರಂಭ,ಶಾಲಾ ಚಟುವಟಿಕೆಗಳಿಗೆ ಅನ್ವಯಿಸುವ ಕಾವ್ಯ ರಚನೆಯಲ್ಲಿ ತೊಡಗಿಕೊಳ್ಳುವಲ್ಲಿ ಉಪಯೋಗವಾದದ್ದು ನಿಜವಾದರೂ ಮನೆ, ಶಾಲೆಗಳ ನಡುವಿನ ಜವಾಬ್ದಾರಿಗಳು ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಲು ನನಗೆ ಆಸ್ಪದಕೊಡಲಿಲ್ಲ…
‌‌‌ ಯಾವುದೇ ಉತ್ತಮ ಬರಹ ಕಂಡಾಗ ನನ್ನ ಹಿನ್ನೆಡೆ ನನ್ನನ್ನು ಕಾಡುತ್ತಿತ್ತು.ಆದರೆ ಎಲ್ಲವನ್ನೂ ಬದಿಗಿಟ್ಟು ಅದಕ್ಕೆ ಬೆನ್ನುಬಿದ್ದು ಬೆಳೆಸಿಕೊಳ್ಳುವ ಸಾಹಸ ನನ್ನದಾಗಿಸಿ ಕೊಳ್ಳುವ ರೀತಿಯಲ್ಲಿ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ…
ನಿವೃತ್ತಿಹೊಂದಿ ಬೆಂಗಳೂರು ವಾಸಿಯಾದಮೇಲೆ ಅದರಲ್ಲೂ ಅಂತಃಪುರದ ಸದಸ್ಯಳಾದ ಮೇಲೆಯೇ ನನ್ನ ಆಳ ನನಗೆ ತಿಳಿದದ್ದು…ಕ್ರಮಿಸಿದ, ಕ್ರಮಿಸ ಬೇಕಾದ ದಾರಿಯ ಅಂದಾಜು ಸ್ಪಷ್ಟವಾಗಿ ಸಿಕ್ಕಿದ್ದು…ಸುಮಾರು ಮೂವತ್ತರಿಂದ ಎಪ್ಪತ್ತೈದು ದಾಟಿದ ವಯಸ್ಸಿನ ಸದಸ್ಯೆಯರು ಇಲ್ಲಿದ್ದು ಬಹುತೇಕ ಜನ ದಣಿವರಿಯದವರು…ಹೊಸದಕ್ಕೆ ತೆರೆದುಕೊಳ್ಳುವವರು,ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಪರಿಣಿತರು..ಮೇಲಾಗಿ ವಯಸ್ಸಿನ ಭೇದವಿಲ್ಲದೇ ಎಲ್ಲರೊಡನೆ ಬೆರೆಯುವವರು…‌ಸಣ್ಣ ಪುಟ್ಟ ವೈಯಕ್ತಿಕ ಅಭಿಪ್ರಾಯ ಭೇದಗಳನ್ನು ಅವುಗಳ ಮಟ್ಟಿಗೆ ಹಿಂದೆ ಬಿಟ್ಟು ಮುನ್ನಡೆವ ಮನದವರು…
ನನ್ನ ಬರಹಗಳಿಗೂ ಸಿಕ್ಕ, ಸಿಗುತ್ತಿರುವ ಮೆಚ್ಚುಗೆಯಿಂದಾಗಿ ನಾನೂ ಆಗಾಗ,ಆದಷ್ಟು ಏನಾದರೂ ಬರೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದರೆ ಅದು ಇಂಥ ಮನದವರಿಂದಲೇ… ಇವರಿಂದಾಗಿಯೇ..
ಆದರೆ ಇತ್ತೀಚೆಗೆ ನನಗೆ ಬೇರೆಯೇ ವಿಚಾರ ಸುಳಿಯುತ್ತಿದೆ..ನಾವು ಬರೆದರೆ ನಮಗೆ ಗೊತ್ತಿದ್ದುದನ್ನೇ ಮೆಲುಕು ಹಾಕಿದಂತೆ.ಮುನ್ನೆಲೆಗೆ ತಂದಂತೆ…ಮೊದಲಿನಂತೆ ಮತ್ತೆ ಓದಬೇಕು, ಇನ್ನೂ ಓದಬೇಕು,ಮತ್ತೂ ಓದಬೇಕು. ಅರಿವು ವಿಸ್ತಾರವಾದರೆ ಬರಹ ತೂಕದ್ದಾಗಿರುತ್ತದೆ ಎಂಬುದನ್ನು
ನಮ್ಮ ಅಂತಃಪುರದ ಸಖಿಯರ ಲೇಖನಗಳು ಆಗಾಗ ತಲೆ ಮೆಟ್ಟಿ ನೆನಪಿಸುತ್ತಲೇ ಇರುತ್ತವೆ…
ಇದೊಂದು ರೀತಿಯ” “ಮದುವೆಯಾಗದೇ ಹುಚ್ಚು ಬಿಡದು…ಹುಚ್ಚು ಬಿಡದೇ ಮದುವೆಯಾಗದು” ಎಂಬಂತೆ… ಬರೆದರೆ ತಾನೇ ಹೇಗೆ ಬರೆಯಬೇಕೆಂಬುದು ತಿಳಿಯುವದು!! ಎಂತಲೂ ಅನಿಸಿ ಮತ್ತೆ ಬರೆಯುವ ಸಾಹಸಕ್ಕಿಳಿಯುತ್ತೇನೆ…
‌‌‌‌ ಎಲ್ಲ ಹಣ್ಣುಗಳೂ ಒಂದು‌ಕಾಲಕ್ಕೆ ‘ಕಚ್ಚಾಕಾಯಿ’ ಆಗಿ ಬಂದುವೇ…ಹಣ್ಣಾಗಲು ಕಾಲ ಕೂಡಿಬರಬೇಕು…ಮಾಗಬೇಕು…ಅದುವರೆಗೂ ಕಾಯಬೇಕು..ಆಗಲಿಲ್ಲವೋ…ಅದೂ OK.
ಏಕೆ ಅಂತೀರಾ? ಅದೇ… Sometimes it is OK ‘ not to be OK ‘

Leave a Reply