ಕಾಲು ಮುರಿದ ಪುಟ್ಟ ಹಕ್ಕಿ

ಕಾಲು ಮುರಿದ ಪುಟ್ಟ ಹಕ್ಕಿ
ಚಿತ್ರಕಥಾಪಟ

ಒಂದು ಪುಟ್ಟ ಹಕ್ಕಿಯ ಕಾಲು ಮುರಿದಿತ್ತು. ಅದಕ್ಕೆ ವಾಸಿಸಲು ಎಲ್ಲೂ ಜಾಗ ಇರಲಿಲ್ಲ. ಆಶ್ರಯಕ್ಕಾಗಿ ಆ ಪುಟ್ಟ ಬಾಳೆಗಿಡದ ಹತ್ತಿರ ಹೋಯಿತು.
“ಬಾಳೆಗಿಡದಣ್ಣ, ಬಾಳೆಗಿಡದಣ್ಣ, ನನ್ನ ಕಾಲು ಮುರಿದಿದೆ. ಈ ಮಳೆಗಾಲದಲ್ಲಿ ಎಲ್ಲೂ ಹೋಗಲು ಆಗುತ್ತಿಲ್ಲ. ನನಗೆ ಇರಲು ಸ್ವಲ್ಪ ಜಾಗ ಕೊಡುತ್ತೀಯಾ?” ಅಂತ ಕೇಳಿತು. ಆಗ ಬಾಳೆಗಿಡ, “ಕಾಲು ಮುರಿದ ಹಕ್ಕಿಗೆ ನಾನು ಜಾಗ ಕೊಡೋದಿಲ್ಲ. ನೀನು ಮುಂದೆ ಹೋಗಿ ಪಪ್ಪಾಯಗಿಡವನ್ನು ಕೇಳು” ಎಂದಿತು.

ಪುಟ್ಟ ಹಕ್ಕಿ ಪಪ್ಪಾಯಗಿಡದ ಹತ್ತಿರ ಹೋಯಿತು.
“ಪಪ್ಪಾಯಗಿಡದಣ್ಣ ಪಪ್ಪಾಯಗಿಡದಣ್ಣ, ನನ್ನ ಕಾಲು ಮುರಿದಿದೆ. ಈ ಮಳೆಗಾಲದಲ್ಲಿ ಎಲ್ಲೂ ಹೋಗಲು ಆಗುತ್ತಿಲ್ಲ. ನನಗೆ ಇರಲು ಸ್ವಲ್ಪ ಜಾಗ ಕೊಡುತ್ತೀಯಾ?” ಅಂತ ಕೇಳಿತು. ಆಗ ಪಪ್ಪಾಯಗಿಡ, “ಕಾಲು ಮುರಿದ ಹಕ್ಕಿಗೆ ನಾನು ಜಾಗ ಕೊಡೋದಿಲ್ಲ ನೀನು ಮುಂದೆ ಹೋಗಿ ತೆಂಗಿನಮರದ ಹತ್ತಿರ ಕೇಳು” ಎಂದಿತು.

ಪುಟ್ಟ ಹಕ್ಕಿ ತೆಂಗಿನಮರದ ಹತ್ತಿರ ಹೋಯಿತು.
“ತೆಂಗಿನಮರದಕ್ಕ, ತೆಂಗಿನಮರದಕ್ಕ, ನನ್ನ ಕಾಲು ಮುರಿದಿದೆ. ಈ ಮಳೆಗಾಲದಲ್ಲಿ ಎಲ್ಲೂ ಹೋಗಲು ಆಗುತ್ತಿಲ್ಲ. ನನಗೆ ಇರಲು ಸ್ವಲ್ಪ ಜಾಗ ಕೊಡುತ್ತೀಯಾ?” ಅಂತ ಕೇಳಿತು. ಆಗ ತೆಂಗಿನಮರ, “ಕಾಲು ಮುರಿದ ಹಕ್ಕಿಗೆ ನಾನು ಜಾಗ ಕೊಡೋದಿಲ್ಲ. ನೀನು ಮುಂದೆ ಹೋಗಿ ಆಲದ ಮರದ ಹತ್ತಿರ ಕೇಳು” ಎಂದಿತು.

ಪುಟ್ಟ ಹಕ್ಕಿ ಆಲದಮರದ ಹತ್ತಿರ ಹೋಯಿತು.
“ಆಲದಮರದಮ್ಮ, ಆಲದಮರದಮ್ಮ, ನನ್ನ ಕಾಲು ಮುರಿದಿದೆ. ಈ ಮಳೆಗಾಲದಲ್ಲಿ ಎಲ್ಲೂ ಹೋಗಲು ಆಗುತ್ತಿಲ್ಲ. ನನಗೆ ಇರಲು ಸ್ವಲ್ಪ ಜಾಗ ಕೊಡುತ್ತೀಯಾ?” ಅಂತ ಕೇಳಿತು. ಆಗ ಆಲದಮರ, “ನಿನಗಲ್ಲದೆ ಇನ್ಯಾರಿಗೆ ಕೊಡಲಿ, ಬಾ ಪುಟ್ಟ ಹಕ್ಕಿ ನನ್ನ ಪೊಟರೆಯಲ್ಲಿಯೇ ಇರು” ಎಂದಿತು.

ಪುಟ್ಟ ಹಕ್ಕಿಗೆ ತುಂಬಾ ಖುಷಿ ಆಯಿತು. ಆಲದಮರದ ಪೊಟರೆಯಲ್ಲಿಯೇ ವಾಸ ಮಾಡಿತು.

ಸ್ವಲ್ಪ ಹೊತ್ತಿನಲ್ಲಿಯೇ ಜೋರಾಗಿ ಗಾಳಿ-ಮಳೆ ಬಂದಿತು. ಆ ಗಾಳಿ-ಮಳೆಗೆ ಬಾಳೆಗಿಡ, ಪಪ್ಪಾಯಗಿಡ, ತೆಂಗಿನಮರ ಉರಳಿ ಹೋದವು. ಆಗ ಪುಟ್ಟ ಹಕ್ಕಿ ತನ್ನ ಮನಸಲ್ಲೆ ವಿಚಾರ ಮಾಡಿತು. “ನನಗೆ ಅವರು ಆಶ್ರಯ ಕೊಟ್ಟಿದ್ದರೆ ಗಾಳಿ-ಮಳೆಗೆ ಸಿಕ್ಕಿ ನಾನು ಸಾಯ್ತಿದ್ದೆ. ನನ್ನ ಪ್ರಾಣ ಉಳಿಸಿದ ಬಾಳೆಗಿಡದಣ್ಣ, ಪಪ್ಪಾಯಣ್ಣ, ತೆಂಗಿನಮರಕ್ಕೆ ನಾನು ಎಷ್ಟು ಕೃತಜ್ಞತೆಯನ್ನು ಹೇಳಿದರೂ ಕಡಿಮೆನೇ” ಎಂದು ಮನಸ್ಸಿನಲ್ಲಿ ಆ ಮರಗಳಿಗೂ ಕೃತಜ್ಞತೆಯನ್ನು ತಿಳಿಸಿತು.

Leave a Reply