ಚಿನ್ನದ ಕಡ್ಡಿ

ಚಿನ್ನದ ಕಡ್ಡಿ

ಒಂದಾನೊಂದು ಕಾಲದಲ್ಲಿ ಗಂಡ ಹೆಂಡತಿ ಇದ್ದರು. ಮರ ಕಡಿದು ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಒಂದು ದಿನ ಗಂಡ ಅಡವಿಗೆ ಹೋಗಿ ಮಾವಿನ ಮರ ಕಡಿಯಲೆಂದು ಕೊಡಲಿಯನ್ನು ಎತ್ತಿದ. ಕೂಡಲೇ ಮರವು ಮಾತಾಡಿತು:
ಮಾಮರ: “ಅಣ್ಣಾ ಅಣ್ಣಾ ಮರ ಕಡಿವಣ್ಣ, ದಯಮಾಡಿ ಕಡಿಯಬೇಡ ನನ್ನ, ಅಣ್ಣಾ ಮರ ಕಡಿವಣ್ಣಾ, ಚಿಗುರಿ ಹೂ ಬಿಡಲಿರುವ ನನ್ನನ್ನು ಕಡಿಯಬೇಡಣ್ಣ. ನನ್ನ ಚಿಗುರಿಗಾಗಿ ಎಷ್ಟೊಂದು ಗಿಳಿ, ಗುಬ್ಬಿ, ಗೊರವಂಕಗಳು ಥರಾವರಿ ಹಾಡುತ್ತಾ ನನ್ನ ಸುತ್ತ ಸಂಭ್ರಮದಿಂದ ಹಾರಾಡುತ್ತಿವೆ ನೋಡು! ಕೋಗಿಲೆಯಂತೂ ತಾಸಿಗೊಂದು ಹೊಸ ಹಾಡು ಕಟ್ಟುತ್ತ ಸುತ್ತಲಿನ ಪಕ್ಷಿಗಳನ್ನೆಲ್ಲಾ ನನ್ನ ಕಡೆಗೇ ಕರೆಯುತ್ತಿದೆ. ಪಕ್ಷಿಗಳ ಸಂತೋಷ ನೋಡಿದಷ್ಟೂ ನನಗೆ ರೋಮಾಂಚನವಾಗುತ್ತಿದೆ! ರೋಮಾಂಚನ ಹೆಚ್ಚಾದಷ್ಟೂ ನನ್ನ ಚಿಗುರು ಹೆಚ್ಚುತ್ತಿದೆ. ಇಂಥ ಆನಂದವನ್ನು ಪಡೆಯುವ ಭಾಗ್ಯ ನನಗೆ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ದಯಮಾಡಿ ನನ್ನನ್ನು ಈಗ ಕಡಿಯಬೇಡಣ್ಣ”.
ಮರ ಕಡಿಯುವವನಿಗೆ ಭಾರೀ ಆಶ್ಚರ್ಯವಾಯಿತು. ಮರ ಮನುಷ್ಯರಂತೆ ಮಾತನಾಡುವುದು ಸಾಮಾನ್ಯವೇ! ಮಾತು ಕೇಳಿ ಆ ಕಡೆ, ಈ ಕಡೆ ನೋಡಿ ಬೇರೆ ಯಾರೂ ಅಲ್ಲ ಮರವೇ ಮಾತಾಡಿತು ಎಂದು ಖಾತ್ರಿ ಮಾಡಿಕೊಂಡ.
ಆಮೇಲೆ ಇದು ಬೇಡವೆಂದು ಹೊಂಗೆಯ ಮರದ ಬಳಿಗೆ ಹೋಗಿ ಕೊಡಲಿ ಎತ್ತಿದ.
ಹೊಂಗೆಮರ ಹೇಳಿತು: “ಅಣ್ಣಾ ಮರ ಕಡಿವಣ್ಣ ನನ್ನ ಕಡಿಯ ಬೇಡಣ್ಣ. ನನ್ನ ಮೈಗಂಟಿ ಬೆಳೆದು ನಳನಳಿಸುವ ಈ ಎಳೆಯ ಬಳ್ಳಿಯನ್ನಾದರೂ ನೋಡು. ಎಷ್ಟು ಮೃದು! ಎಷ್ಟು ಕೋಮಲ! ನನ್ನ ಆಸರೆಯಲ್ಲಿ ಮೈಮರೆತು ಹೂವಿನ ಕನಸು ಕಾಣುತ್ತಿರುವ ಅದರ ಕಣ್ಣಿನಲ್ಲಿ ದಯಮಾಡಿ ನಿನ್ನ ಕೊಡಲಿಯ ನೆರಳು ಚೆಲ್ಲಬೇಡ. ನನ್ನನ್ನು ಕಡಿದರೆ ಇದರ ಗತಿ ಏನಾದೀತೆಂದು ಒಂದು ಕ್ಷಣವಾದರೂ ಯೋಚಿಸು; ಹೋಗಲಿ ನನ್ನ ನೆರಳಲ್ಲಿ ಮಲಗಿರುವ ದನಕರುಗಳ ನೆಮ್ಮದಿಯನ್ನಾದರೂ ನೋಡು. ಹಕ್ಕಿಗಳಂತೆ ಕೂಗುತ್ತ ಪ್ರಾಣಿಗಳಂತೆ ಕುಪ್ಪಳಿಸುತ್ತ ನಗಾಡುವ ದನಗಾಹಿ ಹುಡುಗ-ಹುಡುಗಿಯರನ್ನಾದರೂ ನೋಡು!
ಮರ ಕಡಿಯುವವನಿಗೆ ಇನ್ನೂ ಆಶ್ಚರ್ಯವಾಯಿತು. ಮಾತಾಡಿದ್ದು ಹೊಂಗೆಯ ಮರವೇ! ಮರ ಮತ್ತೊಮ್ಮೆ ಹೇಳಿತು:
ಹೋಗಲಿ ಮೈತುಂಬ ಹೂವು ಬಿಟ್ಟ ನನ್ನನ್ನು ಕಣ್ತುಂಬ ನೋಡದೆ ಒಂದು ಪ್ರಾಣಿ ಪಕ್ಷಿಯೂ ಈ ತನಕ ಮುಂದೆ ಹೋಗಿಲ್ಲ. ನನ್ನ ಹೂಗಳನ್ನು ನೋಡಿದ ಮೇಲೂ ನಿನಗೆ ಕಡಿಯುವ ಆಸೆ ಆಗುತ್ತದೆಯೇ? ನಿಜ ಹೇಳು.
ನಿಜ, ಆ ಹೂವು ತನಗೆ ಕಂಡೇ ಇರಲಿಲ್ಲ! ದಟ್ಟವಾದ ಹಸಿರಿನಲ್ಲಿ ಆ ಹೂವುಗಳು ನಕ್ಷತ್ರಗಳ ಹಾಗೆ ಫಳಫಳ ಹೊಳೆಯುತ್ತಿದ್ದವು. “ಅಯ್ಯೋ ದೇವರೇ ನನಗೆ ಇವತ್ತು ಏನಾಗಿದೆ!” ಎಂದು ಮರ ಕಡಿಯುವವನಿಗೆ ದಿಗಿಲಾಯಿತು. ತನಗೆಲ್ಲೋ ಭ್ರಾಂತಿಯಾಗಿರಬಹುದೊ? ಅಥವಾ ಈ ಸ್ಥಳದಲ್ಲಿ ಭೂತ, ಪಿಶಾಚಿ ಇರಬಹುದೊ? ಆದರೆ ಬರಿಗೈಯಲ್ಲಿ ಮನೆಗೆ ಹೋದರೆ ಹೆಂಡತಿ ಸುಮ್ಮನಿರುವುದಿಲ್ಲ. ಏನು ಮಾಡುವುದು?
ಹೀಗೆಂದು ಯೋಚಿಸುತ್ತ ಬೇರೊಂದು ಸ್ಥಳಕ್ಕೆ ಬಂದ. ಇಲ್ಲಿ ಅಡವಿ ದಟ್ಟವಾಗಿರಲಿಲ್ಲ. ಒಂದೇ ಸಣ್ಣ ಮೆಳೆ ಇತ್ತು. ಅದರಲ್ಲಿಯೇ ಒಂದು ಸಣ್ಣ ಗಿಡ. ಇವತ್ತಿಗಿದು ಸಾಕು ಎಂದು ಕೊಡಲಿ ಎತ್ತಿದ.
ಅಗೋ ಅದೂ ಮಾತಾಡಿತು: “ಮರ ಕಡಿವಣ್ಣ ನನ್ನ ಕಡಿಯಬೇಡಣ್ಣ” ಕಣ್ಣೆತ್ತಿ ನೋಡಿದರೆ ಅದೊಂದು ಸಂಪಿಗೆಯ ಎಳೆಯ ಗಿಡ. ಇದೇ ವರ್ಷ ಪ್ರಥಮ ಬಾರಿ ಹೂವು ಬಿಟ್ಟ ಸಂಭ್ರಮ ತುಂಬಿತ್ತು. ಚಿಕ್ಕ ಚಿಕ್ಕ ಹೂವುಗಳು ಶಾಂತವಾಗಿ ಉರಿಯುತ್ತಿರುವ ತುಪ್ಪದ ಎಳೇ ದೀಪಗಳ ಹಾಗೆ ಕಂಡವು. ಚಿನ್ನದ ಬಿಸಿಲಿನಲ್ಲಿ ಎಲೆಗಳ ಪಾರದರ್ಶಕ ಹಸಿರು ಕಣ್ಣಿಗೆ ಆನಂದದಾಯಕವಾಗಿತ್ತು.
“ಎಲಾ ದೇವರೆ, ಈವರೆಗೆ ನಾನು ಇದನ್ನು ನೋಡಲೇ ಇಲ್ಲವೇ! ಆಯ್ತು ಭೂತ ಪಿಶಾಚಿಗಳು ಮಾತಾಡಿರಲಿ ಅಥವಾ ತನ್ನ ಕಣ್ಣಿಗೆ ಮಾಯೆ ಮೆತ್ತಿರಲಿ, ಇನ್ನು ಮೇಲೆ ಮರ ಕಡಿಯುವುದು ತನ್ನಿಂದ ಸಾಧ್ಯವಿಲ್ಲ” ಎಂದು ತೀರ್ಮಾನಿಸಿ ಕುಸಿದು ಕೂತ.
ಅಷ್ಟರಲ್ಲಿ ಯಾರೋ ‘ಅಯ್ಯಾ’ ಎಂದು ಕರೆದಂತಾಯಿತು. ತಿರುಗಿ ನೋಡಿದ. ಕಾಡಿನಿಂದೊಬ್ಬ ದೇವತೆ ಅವನ ಬಳಿಗೇ ಬಂದಳು. ಬಹುಶಃ ನೆಮ್ಮದಿಯಿಂದ ನಗುತ್ತಿದ್ದ ಆಕೆಯನ್ನು ನೋಡಿ, ತನಗೇ ಗೊತ್ತಿಲ್ಲದಂತೆ ಕೈಮುಗಿದು ನಿಂತುಕೊಂಡ.
“ಯಾಕಪ್ಪ, ಮುಖ ಬಾಡಿದೆ?” ಎಂದಳು.
“ಏನು ಹೇಳಲೀ ತಾಯಿ, ಮರ ಕಡಿಯಬೇಕೆಂದರೆ ಅಡವಿಯ ಮರಗಳು ನಮ್ಮ ಹಾಗೆ ಅಥವಾ ನಮಗಿಂತ ಮುದ್ದಾಗಿ ಮಾತಾಡುತ್ತಿವೆ! ಒಂದಕ್ಕಿಂತ ಒಂದು ಚೆಂದಾಗಿ ಕಾಣುತ್ತಿವೆ! ಕಡಿಯಲು ಮನಸ್ಸೇ ಬರುತ್ತಿಲ್ಲ. ಆದರೆ ಮರ ಕಡಿಯದೇ ಜೀವನ ಸಾಗುವಂತಿಲ್ಲ. ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ”.
ದೇವತೆ: ನನ್ನ ಮಕ್ಕಳ ಮೊರೆ ನಿನ್ನ ಕಿವಿಗೆ ಕೇಳಿಸಿತಲ್ಲ! ಉಪಕಾರವಾಯಿತಪ್ಪ, ನಿನಗೆ ಒಳ್ಳೆಯದಾಗಲಿ. ನಾನು ಅಡವಿಯ ತಾಯಿ. ನನ್ನ ಮಕ್ಕಳ ಮೇಲೆ ಕರುಣೆ ತೋರಿದ್ದಕ್ಕೆ ನಿನಗೆ ಏನಾದರೂ ಕೊಡೋಣವೆಂದು ಅನ್ನಿಸುತ್ತಿದೆ.
ಇನ್ನು ಮೇಲೆ ನೀನು ಮರ ಕಡಿಯಬೇಕಾದ್ದಿಲ್ಲ. ಇಕೋ ಇದು ಚಿನ್ನದ ಕಡ್ಡಿ. ಸೂರ್ಯನಾರಾಯಣ ಸ್ವಾಮಿ ನನಗೆ ಇದನ್ನು ಕೊಟ್ಟಿದ್ದು. ಸಾಮಾನ್ಯವಾದುದೆಂದು ತಿಳಿಯಬೇಡ; ಬೇಡಿದ್ದನ್ನು ಕೊಡುವಂಥಾದ್ದು. ಮನೆ ಬೇಕೇ? ಇರುವೆ ಹುತ್ತದ ಬಳಿ ಹೋಗಿ ವಾಸಕ್ಕೊಂದು ಮನೆ ಆಗಲಿ ಅನ್ನು. ಆಗುತ್ತದೆ. ಗದ್ದೆಯ ಬಳಿ ಹೋಗಿ ಈ ಕಡ್ಡಿ ಆಡಿಸಿ “ದವಸ ಧಾನ್ಯ ಬರಲಿ” ಎನ್ನು, ಬರುತ್ತದೆ. ದನಗಳ ಬಳಿ ಹೋಗಿ ಹಾಲು ಕೇಳು, ಹಾಲು ಸುರಿಸುತ್ತವೆ. ಜೇನುಗೂಡಿನ ಬಳಿ ಹೋಗಿ ಜೇನು ಸುರಿಯಲಿ ಅನ್ನು. ಗಡಿಗೆ ತುಂಬ ಜೇನು ಸಿಗುತ್ತದೆ. ಜೇಡನ ಬಳಿ ಹೋಗಿ ನಿನಗೆ ಬೇಕಾದಂತ ಬಣ್ಣದ ಬಟ್ಟೆ ಕೇಳು, ನಿನಗೆ ಬಟ್ಟೆ ನೇಯ್ದು ಕೊಡುತ್ತದೆ. ಆದರೆ ನೆಪ್ಪಿರಲಪ್ಪ (ನೆನಪಿರಲಪ್ಪ)-ಯಾವುದಕ್ಕೂ ಮಿತಿ ಅಂತ ಒಂದಿರಲಿ. ಅತಿ ಆಸೆ ನಿನಗೂ ಕೇಡು. ನಿನ್ನ ಕುಟುಂಬಕ್ಕೂ ಕೇಡು” ಎಂದು ಹೇಳುತ್ತ ದೇವತೆ ಚಿನ್ನದ ಕಡ್ಡಿಯನ್ನು ಮರ ಕಡಿಯುವವನಿಗೆ ನೀಡಿ ಮಾಯವಾದಳು.
ತಕ್ಷಣ ಅವನಿಗೆ ನೆನಪಾದ್ದು ತನ್ನ ಚಂಡಿ ಹೆಂಡತಿ. ಚಿನ್ನದ ಕಡ್ಡಿಯ ಮಹಿಮೆಯನ್ನು ಈಗಲೇ ಪರೀಕ್ಷಿಸಬೇಕೆಂದುಕೊಂಡು ಪಕ್ಕದಲ್ಲಿದ್ದ ಒಣಗಿದ ಮರದ ಮೇಲೆ ಚಿನ್ನದ ಕಡ್ಡಿ ಆಡಿಸಿ ನನಗೆ ಒಂದು ಡೋಲು ಬರಲಿ ಎಂದ. ಬಂದೇಬಿಟ್ಟಿತೇ! ಸಂತೋಷದಿಂದ ಹಾಡುತ್ತ, ಕುಣಿಯುತ್ತ ಮನೆಯ ಕಡೆ ಹೊರಟ.
ತಲೆಯ ಮೇಲೆ ಮರದ ಹೊರೆ ಇಲ್ಲದೆ ಕುಣಿಯುತ್ತ ಬರುತ್ತಿದ್ದ ಗಂಡನನ್ನು ನೋಡಿ ಹೆಂಡತಿಯ ಕೋಪ ನೆತ್ತಿಗೇರಿತು. “ಮರ ಎಲ್ಲಿ” ಎಂದು ಕಿರಿಚಿದಳು. “ಇಕೋ ಇಲ್ಲಿದೆ” ಎಂದು, ಚಿನ್ನದ ಕಡ್ಡಿಯನ್ನು ಅವಳ ಮೇಲೆ ಆಡಿಸಿ “ನಾನು ಡೋಲು ಬಾರಿಸುವ ತನಕ ಇವಳು ಕುಣಿಯುತ್ತಿರಲಿ” ಎಂದು ಡೋಲು ಬಾರಿಸತೊಡಗಿದ. ಬೈಯೋದಕ್ಕೆ ಬಾಯಿ ತೆಗೆಯುವ ಮೊದಲೇ ಅವಳು ಕುಣಿಯಲಾರಂಭಿಸಿದಳು. ಇವನು ಬಾರಿಸಿದ. ಅವಳು ಕುಣಿದಳು. ಕುಣಿದು, ಕುಣಿದು ಹೆಜ್ಜೆ ಇಡಲಾರದಷ್ಟು ಕಾಲು ನೋವಾದವು. ಕೊನೆಗೂ ಡೋಲು ನಿಲ್ಲುವ ತನಕ ಕುಣಿತ ನಿಲ್ಲಿಸುವುದಕ್ಕೆ ಆಗುವುದಿಲ್ಲವೆಂದು ತಿಳಿಯಿತು.
“ದಮ್ಮಯ್ಯಾ ನಿನ್ನ ಕಾಲು ಹಿಡಿಯುತ್ತೇನೆ ನಿಲ್ಲಿಸು” ಎಂದು ಬೇಡಿಕೊಂಡಳು. ದಯಮಾಡಿ ನಿಲ್ಲಿಸಿದ. ಈಗ ತನ್ನ ಚಂಡಿ ಹೆಂಡತಿಯನ್ನು ದಾರಿಗೆ ತರುವ ದಾರಿ ತಿಳಿಯಿತು. ಅಡವಿಯ ದೇವತೆಗೆ ಮನಸ್ಸಿನಲ್ಲೇ ನೂರು ಶರಣು ಮಾಡಿದ. ಚಿನ್ನದ ಕಡ್ಡಿಯಿಂದ ತನ್ನ ಸುದೈವದ ಬಾಗಿಲು ತಟ್ಟಬೇಕೆಂದು ನಿರ್ಧರಿಸಿದ. ಅಡವಿಗೆ ಹೋಗಿ ಇರುವೆಯ ಹುತ್ತವಿದ್ದಲ್ಲಿ ಮೂರು ಬಾರಿ ಚಿನ್ನದ ಕಡ್ಡಿಯನ್ನು ಆಡಿಸಿ “ನನಗೆ ಒಂದು ಮನೆ ಆಗಲಿ” ಎಂದ, ಮನೆ ಆಯಿತು. ಮನೆ ತುಂಬಾ ಆಳುಕಾಳಾಯ್ತು. ದನದ ಕೊಟ್ಟಿಗೆಯಾಯ್ತು. ಅದರ ತುಂಬಾ ದನವಾಯಿತು. ಹೊಲವಾಯ್ತು, ಹೊಲದ ತುಂಬ ಪೈರಾಯಿತು. ಥರಾವರಿ ಬಟ್ಟೆಬರೆಯಾಯಿತು. ಚಂಡಿ ಹೆಂಡತಿಗೆ ಡೋಲಾಯಿತು. ಮಕ್ಕಳು ಮರಿಗಳು ಆಗಿ ಸುಖದಿಂದ ಇದ್ದ.
ಆದರೆ ಅವನೆಂದೂ ಅತಿಯಾಸೆ ಮಾಡಲಿಲ್ಲ. ಸಂತೋಷದಿಂದ ತುಂಬು ಜೀವನ ನಡೆಸಿ ಕೊನೆಗೊಂದು ದಿನ ಮಕ್ಕಳು ಮರಿಗಳನ್ನು ಕರೆದು ಚಿನ್ನದ ಕಡ್ಡಿ ಕೊಟ್ಟು ಅತೀ ಆಸೆ ಮಾಡಬೇಡಿರೆಂದು ಎರಡೆರಡು ಬಾರಿ ಹೇಳಿ ಸತ್ತ. ಅವನ ಮಕ್ಕಳು ಮರಿಗಳೂ ಇಲ್ಲಿಯವರೆಗೆ ಹಾಗೇ ಇದ್ದರು.

Leave a Reply