ತಿಂದಿದ್ದು ಅವನ ಹೊಟ್ಟೆ; ತೇಗಿದ್ದು…

ಪ್ರತಿದಿನ ಶಾಲೆಗೆ ತಿಂಡಿಡಬ್ಬ ಒಯ್ಯುತ್ತಿದ್ದ ಮಗ, ಆ ದಿನ ಪುಸ್ತಕದ ಭಾರ ಹೆಚ್ಚೆಂದು ತಿಂಡಿ ಡಬ್ಬ ಒಯ್ಯಲೇ ಇಲ್ಲ. ವಿಷಯ ಅರಿತ ತಂದೆ, ಫ್ಯಾಕ್ಟರಿಯ ಊಟದ ವೇಳೆ ಪಾಳಿಯ ಮುಖ್ಯಸ್ಥನಿಗೆ ತಿಳಿಸಿ ಶಾಲೆಯ ಕಡೆ ಓಡಿದ. ಬಹಳ ದಿನಗಳಿಂದ ಹೋಟೆಲಲ್ಲಿ ತಿನ್ನುವ ಆಸೆ ವ್ಯಕ್ತಪಡಿಸುತ್ತಿದ್ದ ಮಗನಿಗೆ ಇಂದಾದರೂ ಹೋಟೆಲಿಗೆ ಕರೆದೊಯ್ದು ಹೊಟ್ಟೆ ತುಂಬ ತಿನ್ನಿಸಬೇಕೆಂದುಕೊಂಡ. ಮಗ ಒತ್ತಾಯಿಸುತ್ತಿದ್ದರೂ ತನಗೆ ಹಸಿವಿಲ್ಲವೆನ್ನುತ್ತ, ಮಗ ತಿಂಡಿ ತಿಂದ ಸಮಾಧಾನದಲ್ಲಿ ಫ್ಯಾಕ್ಟರಿ ಕಡೆ ಹೆಜ್ಜೆ ಹಾಕಿದ. ಶಾಲೆಯ ಕಾಂಪೌಂಡ್ ದಾಟಿ ತರಗತಿಗೆ ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಮಗ ಏಕೋ ಅಪ್ಪನತ್ತ ಒಮ್ಮೆ ತಿರುಗಿದ. ರಸ್ತೆಯ ದೂರದ ತಿರುವಿನ ನಲ್ಲಿಯಲ್ಲಿ ಅಪ್ಪ ಹೊಟ್ಟೆ ತುಂಬ ನೀರು ಕುಡಿಯುತ್ತಿದ್ದುದು ಕಣ್ಣಿಗೆ ರಾಚಿತು. ನಾಲಿಗೆಯೆಲ್ಲ ಕಹಿ ಕಹಿ!

-ಹೊಸ್ಮನೆ ಮುತ್ತು

Leave a Reply