ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ

ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ

ಗೋಪಾಲಕೃಷ್ಣ ಸೋಮಯಾಜಿ ಒಬ್ಬನೇ ಬರಲಿಲ್ಲ. ಅವನ ಜೊತೆಗೆ ಅವನ ಮಗಳು ನರ್ಮದೆಯೂ ಉಪ್ಪಿನಂಗಡಿಗೆ ಬಂದಳು. ನರ್ಮದೆಯ ಪುಟ್ಟ ತಂಗಿ ಜಾಹ್ನವಿಯೂ ಜೊತೆಗಿದ್ದಳು. ನರ್ಮದೆ ಆಗಷ್ಟೇ ಕೇರಳದಲ್ಲಿ ಹನ್ನೆರಡನೆ ತರಗತಿ ಓದುತ್ತಿದ್ದಳು. ಗೋಪಾಲಕೃಷ್ಣ ಸ್ಕೂಲಿನ ಮೇಷ್ಟ್ರುಗಳ ಹತ್ತಿರ ಮಾತನಾಡಿ, ಮತ್ತೆ ಪರೀಕ್ಷೆಗೆ ಹಾಜರಾಗುತ್ತಾಳೆಂದೂ ಅಷ್ಟು ದಿನ ಮನೆಯಲ್ಲೇ ಓದಿಕೊಳ್ಳುತ್ತಾಳೆಂದೂ ದಯವಿಟ್ಟು ಹಾಜರಿ ಕೊಡಬೇಕೆಂದೂ ವಿನಂತಿಸಿಕೊಂಡು ನರ್ಮದೆಯನ್ನು ಉಪ್ಪಿನಂಗಡಿಗೆ ಕರೆದುಕೊಂಡು ಬಂದಿದ್ದ.
ಅವಳನ್ನು ಗುರುವಾಯೂರಿನಲ್ಲೇ ಬಿಟ್ಟು ಬರಲು ಅವನಿಗೆ ಭಯ. ನರ್ಮದೆ ತುಂಬುಸುಂದರಿ. ಹದಿನೇಳನೆಯ ವಯಸ್ಸಿಗೇ ಯೌವನ ಅವಳನ್ನು ಮನೆತುಂಬಿಸಿಕೊಂಡಿತ್ತು. ತೆಳುಮಧ್ಯಾಹ್ನದ ನೀಲಾಕಾಶವನ್ನು ಹೋಲುವ ಕಣ್ಣುಗಳಲ್ಲಿ ಆರ್ದ್ರತೆಯಿತ್ತು. ತೇವ ಆರದ ಕೆನ್ನೆಗಳಲ್ಲಿ ಹೊಳಪಿತ್ತು. ಕೊಂಚ ಮೊಂಡು ಎನ್ನಬಹುದಾದ ಮೂಗಿನಲ್ಲಿ ಉಡಾಫೆಯಿತ್ತು. ಸಮುದ್ರದ ಅಲೆಗಳನ್ನು ನೆನಪಿಸುವಂಥ ಮುಂಗುರುಳು ಯಾವ ಬಂಧನಕ್ಕೂ ಸಿಲುಕಲಾರೆ ಎಂಬಂತೆ ಅವಳ ಹಣೆಕಪೋಲಗಳನ್ನು ಕೆಣಕುತ್ತಿತ್ತು. ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆಯಿದ್ದುದನ್ನು ಪ್ರಯತ್ನಪಟ್ಟರೆ ಗುರುತಿಸಬಹುದಾಗಿತ್ತು.
ಅಂಥ ಸುಂದರಿಯನ್ನು ಗುರುವಾಯೂರಿನಲ್ಲಿ ಬಿಟ್ಟು ಬಂದರೆ ಏನಾಗುತ್ತದೆ ಅನ್ನುವುದು ಗೋಪಾಲಕೃಷ್ಣನಿಗೆ ಗೊತ್ತಿತ್ತು. ಹೀಗಾಗಿ ಆತ ಅವಳನ್ನು ಉಪ್ಪಿನಂಗಡಿಗೆ ಕರೆತಂದು ಅಲ್ಲೇ ಓದುವಂತೆ ತಾಕೀತು ಮಾಡಿದ. ಆಕೆ ಓದಿ ಸಾಧಿಸಬಹುದಾದದ್ದೇನೂ ಇಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. ಆದರೆ ಗೋಪಾಲಕೃಷ್ಣನ ಹೆಂಡತಿ ಮೀರಾಳ ಆಸೆ ಬೇರೆಯೇ ಆಗಿತ್ತು. ಆಕೆಗೆ ಗಂಡ ಕೈಗೊಂಡ ವೃತ್ತಿಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅವರಿವರ ಮನೆಯಲ್ಲಿ ತಿಥಿ, ಮುಂಜಿ, ಮದುವೆ ಮಾಡಿಸಿಕೊಂಡಿರುವ ಪುರೋಹಿತರ ಹೆಂಡತಿಯಾಗಿ ಬಾಳುವುದರ ಕಷ್ಟದ ಅರಿವು ಆಕೆಗಿತ್ತು. ಆ ಬದುಕಿನ ಕಠೋರ ಶ್ರದ್ಧೆಯ ನಡುವೆ ವಿಶ್ರಾಂತಿಗೆ ಬಿಡುವೇ ಇಲ್ಲ ಎನ್ನವುದು ಆಗಲೇ ಅವಳ ಗಮನಕ್ಕೆ ಬಂದಿತ್ತು.
ನರ್ಮದೆಯ ಸೌಂದರ್ಯ ಅವಳ ಅಮ್ಮ ಮೀರಾಳಿಂದ ಬಂದದ್ದು. ಆಕೆಯೂ ಅಪ್ರತಿಮ ಸುಂದರಿಯೇ. ಕಾಸರಗೋಡು ಪ್ರಾಂತ್ಯದಲ್ಲಿ ತೀರಾ ಅಪರೂಪವೆನ್ನಬಹುದಾದ ಕೋಟ ಬ್ರಾಹ್ಮಣರ ಕುಟುಂಬದ ಮಗಳು ಆಕೆ. ತಂದೆತಾಯಿಗಳು ತೀರಾ ಬಡವರಾದ್ದರಿಂದ ಗೋಪಾಲಕೃಷ್ಣ ಸೋಮಯಾಜಿಯನ್ನು ಆಕೆ ಮದುವೆಯಾಗಲೊಪ್ಪಿದ್ದು. ಆದರೆ ಆಕೆಗೆ ಆ ಮದುವೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ದೂರದ ಊರಲ್ಲಿ ಆಫೀಸರ್ ಆಗಿದ್ದವನ ಕೈಹಿಡಿದು ಬಾಳಬೇಕು ಎಂದುಕೊಂಡಿದ್ದವಳು ಆಕೆ. ಅದಕ್ಕೆ ಪ್ರೇರಣೆಯಾದದ್ದು ಆಕೆ ಓದುತ್ತಿದ್ದ ಸಾಯಿಸುತೆಯ ಕಾದಂಬರಿಗಳು. ಅಲ್ಲಿ ಬರುವ ಸ್ನಿಗ್ಧಮುಗ್ಧ ಸುಂದರಿಯರ ಜೊತೆ ತನ್ನನ್ನು ಹೋಲಿಸಿಕೊಂಡು ಮೀರಾ ತನ್ನ ಗಿರಿಧರನಿಗಾಗಿ ಕಾಯುತ್ತಿದ್ದಳು.
ಗೋಪಾಲಕೃಷ್ಣ ಸೋಮಯಾಜಿಯನ್ನು ಮದುವೆಯಾದ ಒಂದೇ ವಾರಕ್ಕೆ ಆಕೆಗೆ ತನ್ನ ಭವಿಷ್ಯದ ಪೂರ್ತಿ ಚಿತ್ರಣ ಸಿಕ್ಕಿಬಿಟ್ಟಿತು. ಬೆಳಗಾಗೆದ್ದರೆ ಒದೆಯುವ ಗೌರಿಹಸುವನ್ನು ಪುಸಲಾಯಿಸಿ ಹಾಲು ಕರೆಯುವುದು. ನಂತರ ತಣ್ಣೀರಿನಲ್ಲಿ ಸ್ನಾನ ಮುಗಿಸಿ, ಒದ್ದೆ ಬಟ್ಟೆ ಉಟ್ಟುಕೊಂಡು ನೈವೇದ್ಯ ತಯಾರುಮಾಡುವುದು. ಅದಾದ ನಂತರ ಗಂಡ ಪೂಜೆ ಮಾಡುವ ತನಕ ಕಾದಿದ್ದು, ನಂತರ ಅವನಿಗೆ ತಿಂಡಿ ಕೊಟ್ಟು ನಂತರ ತಾನು ಕಾಫಿ ಕುಡಿಯುವುದು. ಮತ್ತೆ ಮಧ್ಯಾಹ್ನ ಯಾರದೋ ಮನೆಯಲ್ಲಿ ಸೋಮಯಾಜಿ ಊಟ ಮಾಡಿದರೆ ಅವಳಿಗೆ ಹೊತ್ತಿಗೆ ಸರಿಯಾಗಿ ಊಟ.
ಶೂದ್ರರ ಮನೆಗೆ ಪೌರೋಹಿತ್ಯಕ್ಕೆ ಹೋದರೆ ಅವರು ಬರುವ ತನಕ ಕಾಯಬೇಕು. ಊಟವಾಗುವುದು ಸಂಜೆ ನಾಲ್ಕಾಗುವುದೂ ಉಂಟು. ಮುಸ್ಸಂಜೆ ಹೊತ್ತಿಗೆ ಸೋಮಯಾಜಿ ಕುಮಾರವ್ಯಾಸ ಭಾರತದ ಪಾರಾಯಣ ಶುರುಮಾಡುತ್ತಾನೆ. ಅದನ್ನು ಭಕ್ತಿಯಿಂದ ಕೇಳುತ್ತಾ ಕುಳಿತುಕೊಳ್ಳಬೇಕು. ಆಕಳಿಕೆ ಬಂದರೂ ಆಕಳಿಸಕೂಡದು. ಅದು ಮುಗಿಯುತ್ತಿದ್ದಂತೆ ಮುತ್ತೈದೆಯರಿಗೆ ಕುಂಕುಮ ಕೊಡಬೇಕು. ಅವರ ಕಾಲಿಗೆ ಬೀಳಬೇಕು. ಅದರಿಂದೆಲ್ಲ ಪಾರಾದದ್ದು ಗೋಪಾಲಕೃಷ್ಣ ಸೋಮಯಾಜಿ ಊರು ಬಿಟ್ಟು ಕೇರಳಕ್ಕೆ ಹೋಗುವ ನಿರ್ಧಾರಕ್ಕೆ ಬಂದಾಗ. ಗುರುವಾಯೂರಿನ ದೇವಸ್ಥಾನದಲ್ಲಿ ಅವನಿಗೊಂದು ಕೆಲಸ ಸಿಕ್ಕಿತು. ದೇವಸ್ಥಾನದ ಪಕ್ಕದಲ್ಲೇ ಉಳಿದುಕೊಳ್ಳಲು ಮನೆಯೂ ಸಿಕ್ಕಿತು.
ದೇವಸ್ಥಾನದ ಇತರ ಅರ್ಚಕರ ಪತ್ನಿಯರೂ ಮೀರಾಳಂತೆ ಸೌಂದರ್ಯವತಿಯರೇ. ಹೀಗಾಗಿ ಅವರೆಲ್ಲರ ಆಸೆಗಳೂ ಒಂದೇ ಆಗಿದ್ದವು. ಅವರ ಜೊತೆಗೆ ಸೇರಿ ತನ್ನ ಅತೃಪ್ತ ಆಶೆಗಳನ್ನು ಹೇಳಿಕೊಳ್ಳುತ್ತಾ ಮೀರ ಕಷ್ಟಗಳನ್ನು ಮರೆತಳು. ಇಬ್ಬರು ಹೆಣ್ಣುಮಕ್ಕಳು ಎಂಟು ವರುಷದ ಅಂತರದಲ್ಲಿ ಹುಟ್ಟಿದರು. ಬದುಕು ಏಕತಾನತೆಗೆ ಹೊಂದಿಕೊಂಡಿತು. ಅಷ್ಟರಲ್ಲೇ ಮತ್ತೆ ಊರುಬಿಟ್ಟು ಹೋಗುವ ಯೋಚನೆ ಸೋಮಯಾಜಿಗೆ ಬಂದದ್ದು ಮೀರಾಳನ್ನು ಕಂಗೆಡಿಸದೇ ಇರಲಿಲ್ಲ. ಆದರೆ ಈ ಬಾರಿ ಗೋಪಾಲಕೃಷ್ಣ ಮತ್ತೊಂದಷ್ಟು ಆಮಿಷಗಳನ್ನು ಒಡ್ಡಿದ. ಎಲ್ಲ ಸರಿ ಹೋದರೆ ಪೌರೋಹಿತ್ಯ ಬಿಟ್ಟು ಒಂದು ಅಂಗಡಿ ತೆರೆಯುವುದಾಗಿ ಘೋಷಿಸಿದ. ವ್ಯಾಪಾರಕ್ಕೆ ಇಳಿಯುವುದಾಗಿ ಆಣೆ ಮಾಡಿದ. ಅದರಿಂದ ಪ್ರೇರಿತಳಾಗಿ ಮೀರಾ ಮಕ್ಕಳ ಸಹಿತ ಉಪ್ಪಿನಂಗಡಿಗೆ ಬಂದು ನೆಲೆಯಾದಳು.
ಆದರೆ ನಂತರ ನಡೆದ ಘಟನಾವಳಿಗಳು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅನಂತಕೃಷ್ಣ ಸೋಮಯಾಜಿಗಳು ಮುಖ್ಯಮಂತ್ರಿಗಳು ತಮ್ಮ ಅಕೌಂಟಿನಲ್ಲಿಟ್ಟ ದುಡ್ಡನ್ನು ನಂಬಿ, ತಮಗೆ ಗೊತ್ತಿದ್ದ ಕಡೆಯಿಂದೆಲ್ಲ ಯಾಜಕರನ್ನು ಕರೆಸಿದರು. ಅವರಿಗೆಲ್ಲ ಒಂದು ಮೊತ್ತದ ಸಂಭಾವನೆ ನಿಗದಿ ಮಾಡಿದರು. ಇತ್ತ ಅಯುತ ಚಂಡಿಕಾ ಯಾಗಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಅದು ಮುಖ್ಯಮಂತ್ರಿಗಳ ಪ್ರೀತ್ಯರ್ಥ ನಡೆಯುತ್ತಿರುವ ಯಾಗ ಎನ್ನುವುದು ಜಗಜ್ಜಾಹೀರಾಗಿ ಸ್ಥಳೀಯ ರಾಜಕೀಯ ಮುಖಂಡರೆಲ್ಲ ಅದರ ಮುಂದಾಳತ್ವ ವಹಿಸಿಕೊಂಡಿದ್ದರು. ದೊಡ್ಡ ಸಂಭ್ರಮದ ವಾತಾವರಣ ನೆಲೆಗೊಂಡಿತ್ತು.
ಈ ಸಂಭ್ರಮದ ನಡುವೆಯೇ ಅಯುತ ಚಂಡಿಕಾಯಾಗ ನಡೆದೂಹೋಯಿತು. ಅತಿಥಿಗಳು ಅಭ್ಯಾಗತರು ಬಂದರು. ಹಳ್ಳಿಗೆ ಹಳ್ಳಿಯೇ ನೆರೆದು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಸಂತೋಷಪಟ್ಟಿತು. ಧರ್ಮರಾಯನ ಅಶ್ವಮೇಧ ಯಾಗಕ್ಕೆ ಅದನ್ನು ಹೋಲಿಸಿ ಲೋಕ ಸಂತೋಷಪಟ್ಟಿತು. ಆದರೆ, ಸೋಮಯಾಜಿಗಳಿಗೆ ಸಮಸ್ಯೆ ನಂತರ ಶುರುವಾಯಿತು. ಅವರು ಕರೆಸಿಕೊಂಡ ಪುರೋಹಿತರಿಗೆ ಸಂಭಾವನೆ ಕೊಡುವುದಕ್ಕೆ ಯಾರೂ ಮುಂದೆ ಬರಲಿಲ್ಲ. ಗೋಪಾಲಕೃಷ್ಣ ಸೋಮಯಾಜಿ ಕರೆಸಿಕೊಂಡ ಅಡುಗೆಯವರಿಗೆ ಸಲ್ಲಬೇಕಾದ ಮಜೂರಿ ಕೊಡುವುದಕ್ಕೆ ಯಾರೂ ಬರಲಿಲ್ಲ. ಮುಖ್ಯಮಂತ್ರಿಯವರ ಬಳಿ ಹೋಗಿ ಕೇಳೋಣ ಎಂದುಕೊಂಡರೆ ಅಷ್ಟು ಹೊತ್ತಿಗಾಗಲೇ ಅವರು ಅಧಿಕಾರ ಕಳಕೊಳ್ಳುವ ಹಂತ ತಲುಪಿದ್ದರು. ಅವರನ್ನು ಸಂಪರ್ಕಿಸುವುದು ಕೂಡ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ನಿಮ್ಮ ಕೈಗೆ ಕೋಟ್ಯಂತರ ರೂಪಾಯಿ ಕೊಟ್ಟಿರಬೇಕಲ್ಲ ಸೋಮಯಾಜಿಗಳೇ ಎಂದು ಊರಿನ ಮುಖಂಡರು ಕೈತೊಳೆದುಕೊಂಡರು. ಪುರೋಹಿತರ, ಅಡುಗೆಯವರ ಪೀಡನೆಯಿಂದ ಪಾರಾಗುವ ದಾರಿಕಾಣದೆ ಸೋಮಯಾಜಿಗಳು ಸಾಲ ಸೋಲ ಮಾಡಿ, ತಾವು ಆಸ್ತಿ ಮಾರಿದ ದುಡ್ಡನ್ನೂ ಸೇರಿಸಿ ಎಲ್ಲರಿಗೂ ಒಂದಷ್ಟು ಕಾಸು ಕೊಟ್ಟು ಆಪತ್ತಿನಿಂದ ಪಾರಾದರು. ಅಲ್ಲಿಗೆ ಅವರ ಖ್ಯಾತಿಯೂ ಸಾಲವೂ ಏಕಪ್ರಕಾರವಾಗಿ ಬೆಳೆದವು.
ಗೋಪಾಲಕೃಷ್ಣ ಸೋಮಯಾಜಿಯ ವ್ಯಾಪಾರ ಮಾಡುವ ಆಸೆ ಮುರುಟಿಹೋಗಿ ವಾಪಸ್ಸು ಗುರುವಾಯೂರಿಗೆ ಹೋಗುವುದಕ್ಕೂ ಸಾಧ್ಯವಾಗದೆ ಆತ ಉಪ್ಪಿನಂಗಡಿಯಲ್ಲೊಂದು ಜ್ಯೋತಿಷ್ಯಶಾಲೆ ಆರಂಭಿಸಿದ. ಸೋಮಯಾಜಿಗಳು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಒಂಟಿಯಾದರು.

Leave a Reply