ಪಕ್ಷಿ ಕುಟೀರ

ಪಕ್ಷಿ ಕುಟೀರ

ಒಂದು ನಗರ. ನಗರದ ಸುತ್ತಲೂ ಹಳೆಯ ಕೋಟೆ. ಕೋಟೆಯ ಆಚೆ ಕೀರ್ತಿನಗರ ಬಡಾವಣೆ. ಆ ಬಡಾವಣೆಯಲ್ಲಿ ವಿವಿಧ ಕುಟುಂಬಗಳ ವಾಸ.
ಅವರೆಲ್ಲ ಪರ ಊರಿನಿಂದ ಕೆಲಸಕ್ಕೆಂದೇ ನಗರಕ್ಕೆ ಬಂದವರು. ಆ ಬಡಾವಣೆಯಲ್ಲಿ ಒಂದು ದರ್ಗಾ. ದರ್ಗಾದಿಂದ ಸ್ವಲ್ಪ ದೂರದಲ್ಲಿಯೇ ದೇವಾಲಯ. ದರ್ಗಾದಲ್ಲಿ ಉರುಸು ನಡೆದರೆ ಅಲ್ಲಿ ಎಲ್ಲರೂ ಕೂಡಿ ದೇವಾಲಯದ ಕೆಲಸ-ಕಾರ್ಯಗಳಲ್ಲಿ ಸಂಭ್ರಮದಿಂದ ಭಾಗವಹಿಸಿ ಜಾತ್ರೆಯನ್ನು ನೆರವೇರಿಸುವರು.
ಅದೇ ಬಡಾವಣೆಯಲ್ಲಿ ‘ಕವಿಕೀರ್ತಿ’ ಎಂಬ ಹೆಸರಿನ ಮನೆಯಿತ್ತು. ಆ ಮನೆಯ ಎದುರಿಗೆ ಆಟದ ಮೈದಾನ, ಮೈದಾನದ ಆಚೆ ಹಳೆಯ ಗುಮ್ಮಟ. ಆ ಗುಮ್ಮಟದಲ್ಲಿ ಕೆಲವು ಪಾರಿವಾಳಗಳು ವಾಸ ಮಾಡುತ್ತಿದ್ದವು. ‘ಕವಿಕೀರ್ತಿ’ ಎಂಬ ಮನೆಯಲ್ಲಿ ಒಬ್ಬರು ಅಜ್ಜ ವಾಸಿಸುತ್ತಿದ್ದರು. ಶರಣಪ್ಪ ಅಂತ ಅವರ ಹೆಸರು. ಅವರಿಗೆ ಎಲ್ಲರೂ ಶರಣಪ್ಪ ಅಜ್ಜ ಎಂದು ಕರೆಯುತ್ತಿದ್ದರು.
ಅಜ್ಜ ಮಕ್ಕಳಿಗೆಲ್ಲ ಕಥೆಗಳನ್ನು, ಹಾಡುಗಳನ್ನು ಕಲಿಸುತ್ತಿದ್ದರು. ಅದಕ್ಕಾಗಿ ಕೇರಿಯ ಮಕ್ಕಳು ಅಲ್ಲಿ ಸೇರುತ್ತಿದ್ದರು. ‘ಕವಿಕೀರ್ತಿ’ ಎಂಬ ಆ ಮನೆಯು ದಿನವೂ ಮಕ್ಕಳು ಸೇರುವ ಜಾಗವಾಯಿತು. ಸಾಯಂಕಾಲ ಬಯಲಿನಲ್ಲಿ ಮಕ್ಕಳು ಆಟ ಆಡುತ್ತಿದ್ದರು.
ಹಾಗೆಯೇ ಗುಮ್ಮಟದ ಸುತ್ತ ಪಾರಿವಾಳಗಳು ಹಾರಾಡುತ್ತಿದ್ದವು. ಈ ದೃಶ್ಯವು ಅಲ್ಲಿನ ನಿತ್ಯದ ನೋಟವಾಗಿತ್ತು.
ಒಂದು ದಿನ ಸಂತೋಷ, ಸಲೀಮ, ನಟರಾಜ, ಡೇವಿಡ್, ಲಕ್ಷ್ಮೀ, ರಜಿಯಾ, ರುದ್ರಮ್ಮ ಮತ್ತು ತೆರೆಸಾ ಎಲ್ಲರೂ ಅಜ್ಜನ ಹಾಡು ಕೇಳುತ್ತಾ ಕುಳಿತಿದ್ದರು. ಒಮ್ಮೆಲೆ ಅವರಿಗೆ ಪಾರಿವಾಳದ ಆರ್ತನಾದ ಕೇಳಿಸಿತು. ಎಲ್ಲ ಮಕ್ಕಳೂ ಹೊರಗೆ ಓಡಿ ಬಂದರು. ನೋಡುವಷ್ಟರಲ್ಲಿ ಗುಮ್ಮಟದ ಕೆಳಗೆ ಪಾರಿವಾಳ ಬಿದ್ದಿತ್ತು. ಪಾರಿವಾಳದ ಮೈಯಿಂದ ರಕ್ತ ಸುರಿಯುತ್ತಿತ್ತು. ಮಕ್ಕಳೆಲ್ಲ ಆ ಕಡೆ ಓಡಿದರು. ಅಯ್ಯೋ ಪಾಪ ಎಂದು ನೊಂದುಕೊಂಡರು. ಅಷ್ಟರಲ್ಲಿ ಒಬ್ಬ ತರುಣ ಬಂದ. ಅವನ ಕೈಯಲ್ಲಿ ಕ್ಯಾಟರ್ ಬಿಲ್ ಇತ್ತು. ಸತ್ತ ಪಾರಿವಾಳವನ್ನು ಅವನು ಎತ್ತಿಕೊಂಡ.
‘ಪಾರಿವಾಳವನ್ನು ಏಕೆ ಕೊಂದೆ?’ ಎಂದು ಸಲೀಮ್ ಕೇಳಿದ. ‘ಪಶು ಪಕ್ಷಿಗಳನ್ನು ಪ್ರೀತಿಯಿಂದ ಕಾಣಬೇಕು’ ಎಂದು ಲಕ್ಷ್ಮೀ ಹೇಳಿದಳು. ತರುಣ ಯಾವುದಕ್ಕೂ ಲಕ್ಷ್ಯ ಕೊಡಲಿಲ್ಲ. ಗರ್ವದ ನೋಟ ಬೀರುತ್ತ ಹೊರಟು ಹೋದ. ಮಕ್ಕಳು ನಿಸ್ಸಹಾಯಕರಾಗಿ ನಿಂತುಕೊಂಡರು. ಮತ್ತು ಬಹಳ ನೊಂದುಕೊಂಡರು.
ಮತ್ತೊಂದು ದಿನ. ಎಲ್ಲಾ ಮಕ್ಕಳು ಸೇರಿದ್ದರು. ಬಯಲಿನಲ್ಲಿ ಆಟ ಆಡುತ್ತಿದ್ದರು. ಮತ್ತೆ ಆ ತರುಣ ಬಂದ. ಕ್ಯಾಟರ್ ಬಿಲ್ ನಿಂದ ಗುರಿಯನ್ನು ಇಟ್ಟು ಮತ್ತೊಂದು ಪಾರಿವಾಳವನ್ನು ಕೊಂದ. ಮತ್ತೊಮ್ಮೆ ಪಾರಿವಾಳದ ಆರ್ತನಾದ ಮಕ್ಕಳಿಗೆ ಕೇಳಿಸಿತು. ಕೂಡಲೆ ಮಕ್ಕಳು ಓಡಿ ಹೋದರು.
ಪಾರಿವಾಳದ ಸ್ಥಿತಿ ಕಂಡು ಮರುಗಿದರು. ಸಮೀಪದಲ್ಲಿಯೇ ನಿಂತ ತರುಣನನ್ನು ನೋಡಿದರು.
‘ನಿನ್ನಲ್ಲಿ ಕರುಣೆ ಇಲ್ಲವಾ?’ ಎಂದು ರಜಿಯಾ ಕೇಳಿದಳು.
‘ದಯವಿಟ್ಟು ಅವುಗಳನ್ನು ಕೊಲ್ಲಬೇಡ’ ಎಂದು ಡೇವಿಡ್ ವಿನಂತಿಸಿದ.
‘ಪಾರಿವಾಳದ ಮಾಂಸದ ರುಚಿ ನಿಮಗೇನು ಗೊತ್ತು’ ಎಂದು ತರುಣ ವ್ಯಂಗ್ಯವಾಗಿ ನಕ್ಕ.
‘ಅಯ್ಯೋ ಪಾಪಿ’ ಎಂದು ತೆರೆಸಾ ಗೊಣಗಿದಳು.
‘ನಾನು ಈ ಪಾರಿವಾಳಗಳನ್ನು ಕೊಲ್ಲುತ್ತೇನೆ. ಕೇಳುವವರು ನೀವು ಯಾರು? ಇವು ನಿಮ್ಮ ಪಾರಿವಾಳಗಳೇ?’ ಎಂದು ತರುಣ ಬಿಂಕದಿಂದ ನುಡಿದ. ಅವನು ಪಾರಿವಾಳವನ್ನು ಎತ್ತಿಕೊಂಡು ಹೊರಟು ಹೋದ.
ಮಕ್ಕಳು ಪಾರಿವಾಳಗಳ ರಕ್ಷಣೆಗೆ ಯೋಜನೆ ಹಾಕಿದರು. ಗುಮ್ಮಟದ ಕೆಳಗೆ ಕಾಳುಗಳನ್ನು ಚೆಲ್ಲಿದರು. ದೂರ ನಿಂತು ನೋಡತೊಡಗಿದರು. ಪಾರಿವಾಳಗಳು ಕೆಳಗೆ ಬಂದವು. ಕಾಳುಗಳನ್ನು ತಿಂದವು. ಹಾರಿ ಹೋದವು. ಈ ಕಾರ್ಯ ನಿತ್ಯವೂ ನಡೆಯತೊಡಗಿತು.
ಮಕ್ಕಳು ಒಂದು ದಿನ ಕಾಳುಗಳನ್ನು ಗುಮ್ಮಟದಿಂದ ‘ಕವಿಕೀರ್ತಿ’ ಎಂಬ ಮನೆಯವರೆಗೆ ಚೆಲ್ಲಿದರು. ಪಾರಿವಾಳಗಳು ಕಾಳುಗಳನ್ನು ತಿನ್ನುತ್ತಾ ಮಕ್ಕಳ ಸಮೀಪಕ್ಕೆ ಬಂದವು. ಮಕ್ಕಳು ಹಾಗೂ ಪಾರಿವಾಳಗಳ ಮಧ್ಯೆ ಸ್ನೇಹ ಬೆಳೆಯಿತು.
ಸಲೀಮ ನಾಲ್ಕಾರು ಕೋಲುಗಳನ್ನು ತಂದ. ರುದ್ರಮ್ಮ ತಮ್ಮ ಹೊಲದಿಂದ ಜೋಳದ ದಂಟುಗಳನ್ನು ತಂದಳು. ಡೇವಿಡ್ ತಂತಿ ಜಾಳಿಗೆ ತಂದ. ಸುನೀಲ ತಗ್ಗು ತೋಡಿದ. ರಾಜು ಕೋಲು ನೆಡಿಸಿದ. ಸಂತೋಷನು ಮೇಲೆ ಕೋಲುಗಳನ್ನು ಕಟ್ಟಿದ. ನಟರಾಜ ಮತ್ತು ತೆರೆಸಾ ಸುತ್ತಲೂ ಜಾಳಿಗೆ ಕಟ್ಟಿದರು. ರಜಿಯಾ ಮತ್ತು ಲಕ್ಷ್ಮೀ ಮೇಲೆ ದಂಟುಗಳನ್ನು ಹೊಂದಿಸಿ, ನೆರಳು ಮಾಡಿದರು. ಪಾರಿವಾಳಗಳಿಗಾಗಿ ಕುಟೀರ ಸಿದ್ಧಪಡಿಸಿದರು. ಕೆಲವು ಗಡಿಗೆಗಳನ್ನು ತಂದರು. ಕುಟೀರದಲ್ಲಿ ತೂಗು ಬಿಟ್ಟರು. ಕಾಳುಗಳನ್ನು ಕುಟೀರದಲ್ಲಿ ಚೆಲ್ಲಿದರು. ತೆರೆದ ಪಾತ್ರೆಯಲ್ಲಿ ನೀರು ಹಾಕಿ ಇಟ್ಟರು. ಪಾರಿವಾಳಗಳು ಬಂದವು. ಕಾಳುಗಳನ್ನು ತಿಂದವು. ನೀರು ಕುಡಿದವು. ತೂಗುಬಿಟ್ಟ ಗಡಿಗೆಗಳಲ್ಲಿ ವಿಶ್ರಾಂತಿ ಪಡೆಯತೊಡಗಿದವು.
ಮಕ್ಕಳು ಪಾರಿವಾಳಗಳ ಯೋಗಕ್ಷೇಮ ನೋಡಿಕೊಳ್ಳತೊಡಗಿದರು. ಅವು ನೆಮ್ಮದಿಯಿಂದ ಬದುಕತೊಡಗಿದವು. ಮಕ್ಕಳೂ ಸಂತೋಷಪಟ್ಟರು.
ನಿತ್ಯವೂ ಪಾರಿವಾಳಗಳು ಹೊರಗೆ ಹೋಗುತ್ತಿದ್ದವು. ಗಿಡದಿಂದ ಗಿಡಕ್ಕೆ ಹಾರಾಡುತ್ತಿದ್ದವು. ಸಂತೋಷದಿಂದ ಕಾಲಕಳೆಯುತ್ತಿದ್ದವು. ಸಾಯಂಕಾಲವಾಗುತ್ತಲೇ ಕುಟೀರ ಸೇರುತ್ತಿದ್ದವು. ಮತ್ತೆ ಅವು ಗುಮ್ಮಟದ ಕಡೆ ಸುಳಿಯಲೇ ಇಲ್ಲ. ಹೀಗೆ ಅವುಗಳ ದಿನಚರಿ ಸಾಗಿತು.
ಮತ್ತೊಂದು ದಿನ ಪಾರಿವಾಳ ಕೊಲ್ಲಲು ಆ ತರುಣ ಬಂದ. ಗುಮ್ಮಟದ ಕೆಳಗೆ ಪಾರಿವಾಳಗಳ ಬರುವಿಗಾಗಿ ಕಾಯುತ್ತಲೇ ಇದ್ದ. ಅವು ಕಾಣಿಸಲೇ ಇಲ್ಲ. ಬಹಳ ಹೊತ್ತು ನಿಂತುಕೊಂಡು ಕಾದ.
ನಿರಾಶೆಗೊಂಡು ಅವನು ಹಾಗೆಯೇ ಸುತ್ತಲೂ ನೋಡತೊಡಗಿದ. ಇದ್ದಕ್ಕಿದ್ದಂತೆ ಅವನ ದೃಷ್ಟಿ ‘ಕವಿಕೀರ್ತಿ’ ಮನೆಯ ಕಡೆಗೆ ಹೋಯಿತು. ಮಕ್ಕಳು ಪಾರಿವಾಳಗಳ ಜೊತೆ ಆಡುತ್ತ ನಲಿಯುವುದನ್ನು ನೋಡಿದನು.
ಈ ದೃಶ್ಯವನ್ನು ಕಂಡು ಅವನಲ್ಲಿ ಹೊಸ ಅರಿವು ಮೂಡಿದಂತಾಯಿತು. ಅವನಲ್ಲಿ ಪಶ್ಚಾತ್ತಾಪ ಭಾವನೆ ಮೂಡಿತು. ಅಂದಿನಿಂದ ಅವನು ಮತ್ತಾವುದೇ ಪ್ರಾಣಿ ಪಕ್ಷಿಗಳನ್ನು ಕೊಲ್ಲಲು ಪ್ರಯತ್ನಿಸಲಿಲ್ಲ.

Leave a Reply