ಸತ್ಯವೇ ದೇವರು

ಸತ್ಯವೇ ದೇವರು

katha-mantap-3-2

ಬಹಳ ಹಿಂದೆ ಜಪಾನ್ ದೇಶದಲ್ಲಿ ಸೂಬೇ ಅನ್ನೋ ಹೆಸರಿನ ಹುಡುಗಿ ಇದ್ದಳು. ಬಹಳ ಚೆಂದದ ಹುಡುಗಿ, ತುಂಬಾ ಬುದ್ಧಿವಂತೆ, ಒಳ್ಳೇ ಗುಣವಂತೆ. ಇಷ್ಟಿದ್ರೂ ಅವಳಿಗೆ ಮದುವೇನೆ ಆಗಿರಲಿಲ್ಲ. ಯಾಕೆ ಗೊತ್ತಾ? ಅವಳ ಬಲಹುಬ್ಬಿನ ಮೇಲೆ ಆಳವಾದ ಗಾಯದ ಕಲೆ ಇತ್ತು. ಅದರಿಂದ ಅವಳು ತನ್ನ ಕೂದಲನ್ನ ಹುಬ್ಬಿನ ಮೇಲೆ ಬರೋ ಹಾಗೆ ಬಾಚಿಕೊಳ್ತಾ ಇದ್ದಳು. ನೋಡುವವರಿಗೆ ಕಲೆ ಕಾಣ್ತಾ ಇರಲಿಲ್ಲ. ಆದ್ರೆ ಅವಳು ತನ್ನ ಮದುವೆಯಾಗೋಕೆ ಕೇಳಿದವರಿಗೆ, ಮುಖದ ಕಲೆಯನ್ನ ತೋರಿಸಿ, ಇರೋ ವಿಷಯ ಹೇಳ್ತಾ ಇದ್ದಳು.
ಒಮ್ಮೆ, ಮೇ ತಿಂಗಳಲ್ಲಿ ಚೆರ್ರಿ ಹೂಗಳ ಹಬ್ಬ ಬಂತು. ಚೆರ್ರಿ ತೋಟದಲ್ಲಿ ಹಾಡುತ್ತಾ, ನರ್ತಿಸುತ್ತಿದ್ದ ಸೂಬೇಯನ್ನು ಆ ದೇಶದ ರಾಜಕುಮಾರ ನೋಡಿದ. ಮದುವೆಯಾದ್ರೆ ಅವಳನ್ನೆ ಅಂತ ಹಟ ಹಿಡಿದ. ಸೂಬೇಯ ಹೆತ್ತವರಿಗೆ ತುಂಬಾ ಸಂತೋಷವಾಯಿತು.
ಆದ್ರೆ ಸೂಬೇಗೆ ಮಾತ್ರ ದುಃಖವಾಯಿತು. “ರಾಜಕುಮಾರ ನನ್ನ ಮುಖದ ಮೇಲಿನ ಕಲೆಯನ್ನ ನೋಡಿಲ್ಲ. ಅವನು ಕಲೆಯನ್ನು ನೋಡಬೇಕು, ಅನಂತರವೂ ಅವನ ಮನಸ್ಸು ಬದಲಾಗದಿದ್ರೆ ನೋಡೋಣ” ಅಂದಳು.
ಅವಳ ವಿನಂತಿಯಂತೆ ರಾಜಕುಮಾರ ಅವಳ ಮನೆಗೆ ಬಂದ. ಗೊಂಚಲು ಗೊಂಚಲು ಹೂ ತುಂಬಿದ ಚೆರ್ರಿ ಮರದ ಕೆಳಗೆ ಇವರಿಬ್ಬರೂ ಭೇಟಿಯಾದರು. ಸೂಬೇ ಕೂದಲು ಸರಿಸಿ, ಗಾಯದ ಕಲೆ ಕಾಣೋ ಹಾಗೆ ಮಾಡಿದಳು.
ರಾಜಕುಮಾರ ದಂಗಾದ. ಅಷ್ಟು ಕೆಟ್ಟದಾಗಿ ಕಾಣ್ತಾ ಇತ್ತು ಆ ಕಲೆ. ರಾಜಕುಮಾರ ಒಳ್ಳೆಯವನು. ಅವಳ ಕಣ್ಣಿನಿಂದ ಸುರಿಯುತ್ತಿದ್ದ ನೀರನ್ನ ಕಂಡು ಅವನ ಹೃದಯವು ಕರಗಿತು. “ಇದು ಹ್ಯಾಗಾಯ್ತು? ಚಿಕ್ಕವಳಿದ್ದಾಗ ಬಿದ್ದು ಹೀಗಾಯಿತೇ?” ಎಂದು ವಿಚಾರಿಸಿದನು.
ಅದಕ್ಕೆ ಅವಳು “ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬ ಅಜ್ಜನ ಮನೆಗೆ ಹೋಗ್ತಾ ಇತ್ತು. ದಾರೀಲಿ ವಿಶ್ರಾಂತಿಗೆ ಅಂತ ಒಂದು ತೋಪಿನಲ್ಲಿ ಬೀಡು ಬಿಟ್ಟಿದ್ವಿ.
ಆ ಸಂಜೆ ಅಲ್ಲಿಗೆ ಹುಡುಗರ ಒಂದು ಗುಂಪು ಆಟಕ್ಕೆ ಅಂತ ಬಂತು. ಬಂದವರಲ್ಲಿ ರಾಜಕುಮಾರ, ಮಂತ್ರಿಕುಮಾರ, ಇತ್ಯಾದಿ ತುಂಬಾ ದೊಡ್ಡ ಮನುಷ್ಯರ ಮಕ್ಕಳೆಲ್ಲಾ ಇದ್ರು. ರಾಜಕುಮಾರ ಬೀಸಿ ಒಗೆದ ಕಲ್ಲು ಬಂದು ನನ್ನ ಹಣೆಗೆ ಬಡೀತು. ನಾನು ಕಣ್ಣು ಕತ್ತಲು ಬಂದು ಬಿದ್ದೆ. ಅದನ್ನ ನೋಡಿ ಹುಡುಗರೆಲ್ಲಾ ಹೆದರಿ ಓಡಿಹೋದರಂತೆ. ನನ್ನ ಹೆತ್ತವರು ನನಗೆ ಔಷಧೋಪಚಾರ ಮಾಡಿ, ವಾಪಸ್ಸು ನಮ್ಮೂರಿಗೆ ಬಂದರು.”
“ಅನಂತರ ಎಷ್ಟು ಪ್ರಯತ್ನಿಸಿದರೂ ಗಾಯದ ಕಲೆ ಮಾತ್ರ ಹಾಗೇ ಉಳೀತು. ಮುಂದೆ ನಾನು ಬೆಳೀತಾ ಇದ್ದ ಹಾಗೆ ಅದೂ ಬೆಳೀತು. ಇದರಿಂದ ಯಾರೂ ನನ್ನನ್ನ ಮದುವೆಯಾಗೋಕೆ ಒಪ್ಪೋದಿಲ್ಲ” ಅಂತ ದಳದಳಾಂತ ಅತ್ತೆ ಬಿಟ್ಟಳು.
ಈಗ ಅಳೋ ಸರದಿ ರಾಜಕುಮಾರನದಾಯಿತು. ಅವಳ ಕೈಹಿಡಿದು, “ಆ ರಾಜಕುಮಾರ ನಾನೇ. ಮಕ್ಕಳಾಟಿಕೆಯಿಂದ ಹೊಡೆದ ಕಲ್ಲು ನಿನ್ನ ತಲೆಗೆ ಬಡಿದು ನೀನು ಬಿದ್ದೆ ನೋಡು, ಆಮೇಲೆ ನಿನ್ನ ಹಣೆಯಿಂದ ರಕ್ತ ಸುರಿಯೋಕೆ ಶುರುವಾಯ್ತು. ಅದು ನಿನ್ನ ಕಣ್ಣಿನಿಂದ ಇಳೀತಾ ಇರೋ ಹಾಗೆ ಕಾಣಸ್ತಾ ಇತ್ತು. ಬಹುಶಃ ನಿನ್ನ ಕಣ್ಣಿನ ಗುಡ್ಡೆನೇ ಒಡೆದು ಹೋಗಿದೆ, ನೀನು ಕುರುಡಿಯಾಗಿದ್ದೀಯಾ ಅಂತ ನಾನು ಹೆದರಿದೆ. ಮನೆಯವರಿಗೆ ಗೊತ್ತಾದರೆ ರಂಪವಾಗೋದು ಖಂಡಿತವಾಗಿತ್ತು. ಅದಕ್ಕೆ ನಾನು ಓಡಿಹೋದೆ. ಮತ್ತೆ ನಡೆದದ್ದನ್ನ ಯಾರಿಗೂ ಹೇಳಲಿಲ್ಲ. ನಿಜಕ್ಕೂ ನನ್ನನ್ನ ನಂಬು. ಇಷ್ಟು ವರ್ಷಗಳೂ ತಪ್ಪಿತಸ್ಥ ಭಾವನೆಯಿಂದ ನರಳಿದ್ದೀನಿ. ಇವತ್ತು ನಿನ್ನ ಕಣ್ಣಿಗೆ ಏನೂ ತೊಂದರೆಯಾಗಲಿಲ್ಲ ಅಂತ ತಿಳಿದು ಸಮಾಧಾನ ಅನ್ನಿಸ್ತಾ ಇದೆ.
ಮತ್ತೆ ನಾನು ನಿನ್ನನ್ನೇ ಮದುವೆಯಾಗೋದು” ಅಂತ ಅಂದ. ಮಾತು ಕೊಟ್ಟ ಹಾಗೆ ಅವಳನ್ನೇ ಮದುವೆಯಾದ.
ಪ್ರತೀ ದಿನ ತನ್ನ ಕುಂಚದಿಂದ ಅವಳ ಹುಬ್ಬನ್ನ ಕಲೆ ಕಾಣದ ಹಾಗೆ ತಿದ್ದುತ್ತಿದ್ದ. ಅದು ಎಷ್ಟು ಸುಂದರವಾಗಿ ಕಾಣ್ತಾ ಇತ್ತು ಅಂದರೆ ಜಪಾನ್, ಚೀನಾಗಳಲ್ಲಿ ಹೆಂಗಳೆಯರು ಸರಿಯಾಗಿರೋ ತಮ್ಮ ಹುಬ್ಬುಗಳನ್ನೂ ಮಸಿಯಿಂದ ತಿದ್ದಿಕೊಳ್ಳೋ ಫ್ಯಾಶನ್ ಶುರುವಾಯ್ತು ಅಂತಾರೆ.
ಸೂಬೇಯಲ್ಲಿದ್ದ ಸತ್ಯಸಂಧತೆ ಅವಳ ಬದುಕನ್ನು ಹಸನಾಗಿಸಿತು. ಹಾಗೇ ರಾಜಕುಮಾರನ ಸತ್ಯ ಪ್ರೇಮದಿಂದ ಅವನಿಗೆ ಸೂಬೇಯಂಥ ಒಳ್ಳೇ ಹೆಂಡತಿ ಸಿಕ್ಕಿದಳು. ಬದುಕಿನಲ್ಲಿ ಯಾರು ಸತ್ಯವನ್ನೇ ಆಚರಿಸ್ತಾರೋ ಅಂದರೆ, ಮಾತಿನಿಂದ, ಕೆಲಸದಿಂದ, ಮನಸ್ಸಿನಿಂದ ಪಾಲಿಸ್ತಾರೋ ಅವರಿಗೆ ಸಕಲ ಸುಖ, ಶಾಂತಿ ಸಿಕ್ಕೇ ಸಿಗುತ್ತದೆ ಅಂತಾರೆ ನಮ್ಮ ಹಿರಿಯರು.

Leave a Reply