ಸನ್ಯಾಸಿ ನರಿ

ಸನ್ಯಾಸಿ ನರಿ

ಅದೊಂದು ಭಯಂಕರ ಕಾಡು. ಆ ಕಾಡಿನ ಮೃಗಗಳಲ್ಲಿ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯ ಉಂಟಾಗಿ ಹಗೆ ಪ್ರಾರಂಭವಾಯಿತು. ಈ ಕಲಹದಿಂದ ಕಾಡುಪ್ರಾಣಿಗಳು ಬದುಕುವುದೇ ಕಷ್ಟವಾಯಿತು. ಸಿಂಹ, ಆನೆ, ಒಂಟೆ, ಕಾಡುಕುದುರೆ, ಹಾವು, ಕಾಡುಕೋಣ ಮುಂತಾದವು ಒಂದು ಗುಂಪಾದರೆ, ಹುಲಿ, ಚಿರತೆ, ಹೆಬ್ಬಾವು, ನರಿ, ಮುಂಗುಸಿ, ತೋಳ, ಜಿರಾಫೆ, ಮತ್ತಿತರ ಪ್ರಾಣಿಗಳದೇ ಇನ್ನೊಂದು ಗುಂಪು.
ತಮ್ಮ ತಾತ, ಮುತ್ತಾತರ ಕಾಲದಲ್ಲಿದ್ದಂತೆ ಆರೋಗ್ಯ, ನೆಮ್ಮದಿ, ಸಂತೋಷದಿಂದ ಬದುಕುವುದೇ ಕಷ್ಟ ಆಯಿತು. ಭಯ ಭೀತಿಗಳು ಎರಡು ಗುಂಪಿನಲ್ಲೂ ಹಾಸುಹೊಕ್ಕಾಗಿ ಎಲ್ಲ ಜೀವಿಗಳ ಮೈಮನಗಳಲ್ಲಿ ದ್ವೇಷ, ಅಸೂಯೆ ಹೆಚ್ಚಾಯಿತು. ಆಗ ಆ ಕಾಡಿನ ಒಂದು ಮುದಿ ನರಿಯ ತಲೆಯಲ್ಲಿ ಒಂದು ಉಪಾಯ ಹೊಳೆಯಿತು.
“ಇದೆಂತಹ ಕತೆ! ಎಲ್ಲಾ ಕಡೆಯೂ ಇದೇ ಬಗೆಯ ಅಸೂಯೆ ಹಬ್ಬಿ ದ್ವೇಷ ಇಮ್ಮಡಿಸಿದರೆ ಮುಂದೆ ನಾವು, ನಮ್ಮ ಎಲ್ಲಾ ಸಂತತಿ ಬದುಕುವುದು ಹೇಗೆ? ಈ ಕಾಡಿನಲ್ಲಿ ನಮ್ಮ ಮುಂದಿನ ಪೀಳಿಗೆಗೆ ಹೊಣೆ ಯಾರು?” ಎಂಬ ಪ್ರಶ್ನೆ ಬಂತು. ಆಲೋಚನೆಯಲ್ಲಿ ತೊಡಗಿತು. “ಇಲ್ಲ ಎಲ್ಲಾ ಪ್ರಾಣಿಗಳ ಹಿರಿಯ ಮುಖಂಡರನ್ನು ಕಂಡು ಈ ಸಮಸ್ಯೆಯನ್ನು ಹೋಗಲಾಡಿಸಬೇಕು. ನಾವೆಲ್ಲರೂ ಕೂಡಿ ಬಾಳಿಕೊಂಡು ಅವರವರ ಬದುಕುಗಳನ್ನು ಸ್ವರ್ಗ ಮಾಡಿಕೊಳ್ಳದೆ, ವಿನಾಕಾರಣ ಹೀಗೆಯೇ ಮುಂದುವರಿಸಿಕೊಂಡು ಹೋದರೆ ಯಾರಿಗೂ ಯಾವ ಫಲವೂ ಲಭಿಸುವುದಿಲ್ಲ” ಎಂದು ಸನ್ಯಾಸಿಯ ವೇಷ ಧರಿಸಿ ಮೂರು ಮಂದಿ ಶಿಷ್ಯರೊಡನೆ ಎಲ್ಲರ ಹಿತ ಬಯಸಿ ಕಾಡಿನಲ್ಲಿ ಇರಲು ನಿರ್ಧರಿಸಿತು.
ಪ್ರಾಣಿ-ಪಕ್ಷಿಗಳ ವಿರಾಮಧಾಮ ಆಗಿದ್ದ ಆ ಪ್ರದೇಶವು ಅರಳಿ, ಆಲ, ಮಾವು, ಬೇವು, ಮರಗಳು ಒಂದಕ್ಕೊಂದು ತಬ್ಬಿಕೊಂಡು ಅಲ್ಲಿನ ಪ್ರಕೃತಿ ತುಂಬಾ ಸುಂದರವಾಗಿತ್ತು. ಆದರೆ ಈಗ ಒಂದು ಕಡೆ ಬಹು ದೊಡ್ಡ ಮಾವಿನ ಮರದಡಿ ಸಿಂಹ, ಆನೆ, ಒಂಟೆ, ಕುದುರೆಗಳ ಬಳಗ. ಮತ್ತೊಂದು ಮೂಲೆಯ ಬೇವಿನ ಮರದಡಿಯಲ್ಲಿ ಹುಲಿ, ಚಿರತೆ, ತೋಳ, ಜಿರಾಫೆಗಳ ಗುಂಪು ನೆರೆದಿತ್ತು. ಪರಸ್ಪರ ದ್ವೇಷ ಪ್ರಾಣಿಗಳ ಮುಖಗಳಲ್ಲಿಯೂ ಮಿಂಚುತ್ತಿತ್ತು.
ಯಾರೋ ಸ್ವಾಮಿಗಳು ಬಂದರೆಂದು ಹಣ್ಣು ಹೂವುಗಳನ್ನು ಹೊತ್ತು ಶುಭ ಹಾರೈಕೆ ಕೋರಿ ಒಂದು ತಂಡ ಬಂದರೆ, ಮರು ತಂಡವೂ ಅದೇ ರೀತಿ ಸ್ವಾಮಿಗಳಿಗೆ ಸ್ವಾಗತಿಸಿ ಭಯ, ಭಕ್ತಿ, ವಿನಯಗಳಿಂದ ಶುಭಾಶೀರ್ವಾದ ಕೋರಿದವು.
ನರಿ ಸನ್ಯಾಸಿಯ ಉಪಾಯಕ್ಕೆ ಶುಭ ಸೂಚನೆ ದೊರೆತಂತಾಯಿತು. “ನಾವು ಮುಂದೆ ಹೋಗುವವರಿದ್ದೇವೆ. ದಯಮಾಡಿ ನಿಮ್ಮ ಎಲ್ಲಾ ಪ್ರಾಣಿಗಳನ್ನು ತುರ್ತು ಸಭೆ ಕರೆದು ಕೂಡಿಸಿ” ಎಂದಿತು. ನರಿ ಸನ್ಯಾಸಿಯ ಶಿಷ್ಯ ಬಳಗವು “ನಮ್ಮ ಗುರುಗಳಿಗೆ ದ್ವೇಷ, ಅಸೂಯೆ ಎಂದರಾಗದು. ನಿಮ್ಮ ನಡುವಿನ ದ್ವೇಷ ತಿಳಿದು ನಿಮ್ಮ ಹಿತ ಬಯಸಿ ಈ ಮಾರ್ಗದಲ್ಲಿ ಬಂದಿದ್ದೇವೆ. ಅವರಿಗೆ ಯಾರೂ ಕೂಡ ಕೊಂಚವೂ ಎದುರಾಡದೆ ಗೌರವ ಕೊಡಿ” ಎಂದು ಸೂಕ್ಷ್ಮವಾಗಿ ಹೇಳಿದವು.
“ನಿಮ್ಮ ನಡುವಿನ ದ್ವೇಷ ಅಸೂಯೆ ನಮಗೆ ಮಾರ್ಗ ಮಧ್ಯದಲ್ಲಿ ತಿಳಿಯಿತು. ನಿಮಗೆ ಹಿತ ಸಂದೇಶ ನೀಡಲು ಇಲ್ಲಿಗೆ ಬಂದಿದ್ದೇನೆ. ಮಹಾಶಯರೆ, ಎಲ್ಲಾ ಜೀವ ಬಳಗವೂ ಮುಂದೆ ಬನ್ನಿರಿ. ಶಾಂತಿ, ಸಮಾಧಾನ, ಸೈರಣೆ ಮತ್ತು ಸಮತೆಯಿಂದ ಕಿವಿಗೊಡಬೇಕು. ಯಾರಿಂದಲೇ ಆಗಲಿ ನಿಮಗೆ ತೊಂದರೆಗಳಾಗಿದ್ದರೆ ಬಾಯಿ ಬಿಟ್ಟು ಹೇಳಿ.” ಮುನಿ ನರಿಯ ಉಪನ್ಯಾಸ ಆರಂಭವಾಯಿತು. “ಈ ಬಗೆಯ ನಿಮ್ಮ ದ್ವೇಷಕ್ಕೆ ಯಾರು ಕಾರಣ? ಎರಡು ಗುಂಪಾಗಿದ್ದಾದರೂ ಏಕೆ? ಕೂಡಿ ಬಾಳುವ ಸ್ನೇಹ ಬಾಂಧವ್ಯದ ಹಂಬಲ ಯಾರಿಗೂ ಇಲ್ಲವೇ? ಇದ್ಯಾವುದೂ ಇರದೆ ಈ ದೊಡ್ಡ ಕಾಡಿನಲ್ಲಿ ಹಿರಿಯರ ಕೃಪೆ, ಹರಕೆ, ರಕ್ಷಣೆ ಮತ್ತು ಹಾರೈಕೆಗಳು ಇರದೆ ಇಷ್ಟು ದೊಡ್ಡವರಾಗಿರುವಿರಾ? ಅವರವರ ಶಕ್ತ್ಯಾನುಸಾರ ಅವರವರು ಬದುಕಿಕೊಂಡು ಹೋಗುವುದು ಕೂಡ ನಿಮಗೆ ಆಸೆಯಿಲ್ಲವೇ?”
“ಇವೆಲ್ಲವೂ ಖಂಡಿತಾ ಬೇಡ. ಈ ಕೂಡಲೇ ಎಲ್ಲರೂ ತಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ಮುರಿದು ಹಾಕಿ, ವೈರವನ್ನು ಮರೆತು ಕೂಡಿ ಬಾಳುವ ಹಾದಿಗೆ ಬರಲೇಬೇಕು. ಒಬ್ಬರಿಗೊಬ್ಬರು ದ್ವೇಷದಲ್ಲಿ ತೊಡಗಿ ಜೀವ ಬಿಡುವಂತಹುದಾದರೂ ಏನಿದೆ? ಈ ಬಗೆಯ ನೋವು, ನಷ್ಟ, ಸಾವುಗಳು ಬೇಡ. ಎಲ್ಲರೂ ಒಂದಾಗಿಯೇ ಮುಂದೆ ಸಾಗುವ ಹಾದಿಗೆ ಬನ್ನಿ. ಈ ಕಾಡು ಯಾರಿಗೂ ಶಾಶ್ವತವಲ್ಲ. ವಿಶ್ವಾಸ ಬದುಕು, ಒಂದಾಗಿ ಬಾಳುವ ಗುರಿ ಎಲ್ಲರದೂ ಆಗಲಿ. ಯಾರಲ್ಲಿಯೂ ದ್ವೇಷ ಇರಬಾರದು- ಇದೇ ನಮ್ಮ ಸಂದೇಶ” ಎಂದು ಮುನಿ ನರಿ ತನ್ನ ಆಶಯ ಸಾರಿತು.
ಎಲ್ಲಾ ಪ್ರಾಣಿಗಳೂ ನಿಶ್ಯಬ್ದವಾಗಿ ಮುನಿ ನರಿಯ ಮಾತನ್ನು ಆಲಿಸಿ ಒಳ್ಳೆಯ ಹಾದಿಗೆ ಬಂದವು. “ಅಸೂಯೆಯ ಛಲದಿಂದ ಹೋರಾಡಿ ಯಾರಿಗೂ ನಷ್ಟವಾಗುವುದು ಬೇಡ. ಎಲ್ಲರೂ ಗೆಳೆಯರಂತೆ ಕೂಡಿ ಬಾಳೋಣ. ಸನ್ಯಾಸಿ ನರಿಯ ಹಿತ ವಚನಕ್ಕೆ ಸರ್ವರೂ ಬದ್ಧರಾಗೋಣ” ಎಂದು ಎಲ್ಲಾ ನಾಯಕ ಪ್ರಾಣಿಗಳೂ ಒಪ್ಪಿಕೊಂಡು ಎಲ್ಲರಿಗೂ ವಂದಿಸಿ ಹಿತವಚನ ಸಾರಿದ ಮುನಿ ನರಿ ಶಿಷ್ಯರನ್ನು ಸಂತೋಷದಿಂದ ಬೀಳ್ಕೊಟ್ಟರು. ಸ್ವರ್ಗ, ನರಕಗಳೆರಡೂ ನಮ್ಮ ನಡವಳಿಕೆಗಳಿಂದಲೇ, ಲಭ್ಯ. ಸ್ನೇಹ, ವಿಶ್ವಾಸಗಳಿಂದ ಸ್ವರ್ಗ. ದ್ವೇಷ, ಅಸೂಯೆಗಳಿಂದ ನರಕ ಎಂಬುದನ್ನು ಅರಿತು ಎಲ್ಲರೂ ಕಾಡಿನಲ್ಲಿ ಶಾಂತಿಯಿಂದ ಬಾಳಿದರು.

Leave a Reply