ಸಾಲದ ಕಂತು ಮತ್ತು ಡಾಕ್ಟರ್ ಫೀಸು..!

ಸತೀಶನಿಗೆ ಎರಡು ದಿನದಿಂದ ಅದೇಕೋ ಜ್ವರ ಕಾಯುತ್ತಲೇ ಇತ್ತು. ಇನ್ನು ಉದಾಸೀನ ಬೇಡವೆಂದು ತನಗೆ ಪರಿಚಯವಿದ್ದ ಡಾಕ್ಟರ್ ಶಾಪಿನತ್ತ ಹೆಜ್ಜೆ ಹಾಕಿದ. ಅಂದು ಅದೇಕೋ ಸ್ವಲ್ಪ ಹೆಚ್ಚೆನ್ನುವಷ್ಟು ಜನ. ಸತೀಶ ತನ್ನ ಸರದಿಗಾಗಿ ಕಾದು ಕುಳಿತ. ಸ್ವಲ್ಪ ಹೊತ್ತಿನಲ್ಲೇ ಕರೆ ಬಂತು. ಉಭಯಕುಶಲೋಪರಿ ನಂತರ ಡಾಕ್ಟರ್ ಬಳಿ ಇನ್ನೇನು ತನ್ನ ಸಂಕಟ ತೋಡಿಕೊಳ್ಳಬೇಕು ಅನ್ನುವಷ್ಟರಲ್ಲಿ, ದಡಾರ್ ಎಂದು ಬಾಗಿಲು ತಳ್ಳಿಕೊಂಡು ಒಳನುಗ್ಗಿದ ನರ್ಸ್ ಕೈಯಲ್ಲಿ ಆಗಷ್ಟೇ ಅಂಚೆಯಣ್ಣ ಕೊಟ್ಟುಹೋದ ಕೆಲ ಪತ್ರಗಳಿದ್ದವು. ಪತ್ರಗಳು ಅತ್ತ ಡಾಕ್ಟರ್ ಕೈಗೆ ಸೇರುತ್ತಿದ್ದಂತೆ, ಇತ್ತ ಸತೀಶ ತನಗೆ ಚಿಕಿತ್ಸೆ ಮಾಡುವಂತೆ ಅವಸರಿಸತೊಡಗಿದ.

‘ಯಾಕೋ ಸತೀಶ…! ನಿನಗೆ ಏನೂ ಆಗಿಲ್ಲ ಬಿಡಯ್ಯ… ಕಲ್ಗುಂಡು…, ಕಲ್ಗುಂಡು…. ಕಣಯ್ಯ ನೀನು’ ಎನ್ನುತ್ತಾ ಡಾಕ್ಟರ್ ಪತ್ರ ನೋಡಲು ಉತ್ಸುಕರಾದರೆ; ಮತ್ತೆ ಇವ ಅವಸರ ಮಾಡತೊಡಗಿದ. ಅವನ ಹಾವ-ಭಾವ ಕಂಡು ಏನೊಂದೂ ಅರ್ಥವಾಗದ ಡಾಕ್ಟರಿಗೋ ಅಚ್ಚರಿ. ಅರೇ ಇವನಾ…! ಈ ಮಾಣಿಗೆ ಇಂದು ಇದೆಂಥಾ ಅವಸರ…, ಅಂತ ಕತ್ತು ಕೊಂಕಿಸಿ ತೊಟ್ಟ ದಪ್ಪ ಗಾಜಿನ ಕನ್ನಡಕದಿಂದಲೇ ಬಿರುಗಣ್ಣು ಬಿಟ್ಟು, ಸತೀಶನನ್ನು ಮೇಲಿಂದ ಕೆಳಗಿನವರೆಗೂ ದಿಟ್ಟಿಸಿದ ಡಾಕ್ಟರು; ಆ ತಕ್ಷಣಕ್ಕೆ ಪರೀಕ್ಷಿಸಿ ಗುಳಿಗೆ ಕೊಟ್ಟರೇನೋ ಸರಿ. ಆದರೆ ಈತ ಯಾಕೆ ಹೀಗೆ ಅತ್ತೂ ಬಿಡದೇ, ಇತ್ತೂ ಬಿಡದೇ ಅವಸರಪಡಿಸಿದ ಎಂಬ ತೀವ್ರ ಕುತೂಹಲ ಅವರದ್ದು. ವಿಚಾರಿಸಿದರೆ; ಸತೀಶ ‘ಇಲ್ಲಾ…, ಇಲ್ಲಾ…, ಹಂಗೇನಿಲ್ಲ’ ಅಂತ ಕೊಂಚ ಹಿಂಜರಿಯುತ್ತಲೇ… ಮೆಲುದನಿಯಿಂದ’ ಡಾಕ್ಟ್ರೇ…. ಆ ಪತ್ರಗಳೆಲ್ಲಾ ಎಲೈಸಿ… ಮನೆ ಸಾಲದ ಕಂತು ತುಂಬುವ ಪತ್ರಗಳಲ್ಲವೆ….? ಅದನ್ನು ನೋಡಿದ ನೀವು ಎಲ್ಲಿ ನನ್ನ ಫೀಸು ಏರಿಸಿಬಿಡುತ್ತೀರೋ…!’ ಅಂತಂದ. ಡಾಕ್ಟರ್ ಮೈ ಕುಲುಕಿಸುತ್ತಾ, ಗಿಟಿಗಿಟಿ ನಗುವಾಗ ಸತೀಶ ಪಿಳಿಪಿಳಿ ಕಣ್ಣು ಬಿಡುತ್ತಾ, ಸದ್ದಿಲ್ಲದೆ ಜಾಗ ಖಾಲಿ ಮಾಡಿದ.

                                                                                                                                                      – ಹೊಸ್ಮನೆ ಮುತ್ತು.

1 Comment

  1. ಮೊದ್ಲಿಗೆ ಮೆಡಿಕಲ್ ಕೊರ್ಸಲ್ಲಿ ಗಣಿತ ಹೇಳಿಕೊಡ್ತಿರಲಿಲ್ಲ, ಈಗೀಗ ಎಕನಾ ಮಿಕ್ಸ್ ಮಾಡಿದಾರೆ

Leave a Reply