ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ ಆಗಲಿಲ್ಲ.
ಅವಳಿಗೆ ಆ ಊರಲ್ಲಿ ಗೊತ್ತಿದ್ದವರು ಯಾರೂ ಇರಲಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟಬಾರದು ಅಂತ ಅವಳು ನಿರ್ಧಾರ ಮಾಡಿಬಿಟ್ಟಿದ್ದಳು. ಏನಿದ್ದರೂ ರಾಜನ ಬಳಿ ಕೇಳಬೇಕು. ಮಹಾರಾಜ ಕೊಟ್ಟರೆ ಅವನು ಗೆಲ್ಲುತ್ತಾನೆ. ಕೊಡದಿದ್ದರೆ ಅವನು ಸೋಲುತ್ತಾನೆ. ಅವನ ಸೋಲು ಗೆಲುವುಗಳು ನಿರ್ಧಾರ ಆಗಿಬಿಡಲಿ ಎಂದು ನೇರವಾಗಿ ಅರಮನೆಯತ್ತ ಹೆಜ್ಜೆ ಹಾಕಿದಳು. ಮಹಾದ್ವಾರದ ಬಳಿ ಗಸ್ತು ಕಾಯುತ್ತಿದ್ದ ಸೈನಿಕರಿಗೆ ಅವಳು ಕಾಣಿಸಲಿಲ್ಲ. ಒಳ ಬಾಗಿಲಲ್ಲಿ ಭರ್ಜಿ ಹಿಡಿದು ನಿಂತವರ ಕಣ್ಣಿಗೂ ಅವಳು ಬೀಳಲಿಲ್ಲ. ಅರಗಿಳಿಯಾಗಿ ಅರಮನೆಯೊಳಗೆ ಕಾಲಿಟ್ಟಳು. ಅಂತಃಪುರದೊಳಗೆ ಹೋಗಿ ಮಹಾರಾಜನ ಮುಂದೆ ನಿಂತಳು.
ಮಹಾರಾಜ ಸುಸ್ಥಿತಿಯಲ್ಲಿರಲಿಲ್ಲ. ಅವನು ರಾಜಕ್ಷೌರಿಕನ ಎದುರು ಕುಳಿತಿದ್ದ. ಅವಳು ಬಂದಿದ್ದನ್ನೂ ಅವನು ಗಮನಿಸಲಿಲ್ಲ. ಕ್ಷೌರಿಕನ ಜತೆ ಮಾತಾಡುತ್ತಿದ್ದ. ಅವರಿಬ್ಬರ ಮಾತು ಕೇಳುತ್ತಾ ಅವಳು ಸುಮ್ಮನೆ ನಿಂತಳು.
‘ಪ್ರಜೆಗಳೆಲ್ಲ ಸುಖವಾಗಿದ್ದಾರಾ?’
‘ಹಾಗಂದುಕೊಳ್ಳಬಹುದು.’
‘ನನಗೆ ಪ್ರಾಮಾಣಿಕವಾದ ಉತ್ತರ ಬೇಕು. ನನ್ನ ರಾಜ್ಯದಲ್ಲಿ ಅಧರ್ಮ ತಲೆಯೆತ್ತುವಂತಿಲ್ಲ. ಯಾರೂ ಯಾರನ್ನೂ ವಂಚಿಸಕೂಡದು. ಯಾರನ್ನೂ ಯಾರೂ ಹಿಂಸಿಸಕೂಡದು. ಪ್ರೇಮ, ಪ್ರೀತಿಗಳಿಂದ ತುಂಬಿರಬೇಕು. ಅರಳುವ ಒಂದೊಂದು ಹೂವು ಕೂಡ ಸುಗಂಧವನ್ನೇ ಬೀರಬೇಕು. ಮಕ್ಕಳು ಆರೋಗ್ಯಕರವಾಗಿ, ಮಹಿಳೆಯರು ಸಂತೋಷಕರವಾಗಿ, ಗಂಡಸರು ಉತ್ಸಾಹಿತರಾಗಿ, ಮುದುಕರು ನೆಮ್ಮದಿಯಿಂದ ಇರಬೇಕು. ಅದು ಸಾಧ್ಯವಾಗಿದೆಯಾ?’
ಕ್ಷೌರಿಕನಿಗೆ ಏನು ಉತ್ತರಿಸಬೇಕು ಅಂತ ತಿಳಿಯದಾಯಿತು. ಅರಸನ ಕತ್ತು ತನ್ನ ಕೈಯಲ್ಲಿದೆ. ಅರಸ ತನ್ನನ್ನು ಕೊಲ್ಲಲಾರ. ಕೈಯಲ್ಲಿರುವ ಕತ್ತನ್ನು ತಾನು ಕತ್ತರಿಸಲಾರೆ. ಅದು ತನ್ನ ವೃತ್ತಿಗೆ ಬಗೆಯುವ ದ್ರೋಹ. ಸತ್ಯ ಹೇಳಲೋ ಬೇಡವೋ? ಪ್ರಭುವಿನ ಎದುರು ಸುಳ್ಳಾಡಿದರೆ ರೌರವ ನರಕ.
‘ನಿನಗೆ ಉತ್ತರ ಕೊಡಲಿಕ್ಕಾಗುತ್ತದೋ ಇಲ್ಲವೋ’ ಎಂದು ಮಹಾರಾಜನ ದನಿ ಬಿರುಸಾಯಿತು. ಮತ್ತೆ ತಗ್ಗಿದ ದನಿಯಲ್ಲಿ ಹೇಳತೊಡಗಿದ. ‘ನನ್ನನ್ನು ಅರ್ಥ ಮಾಡಿಕೋ. ನಮ್ಮಪ್ಪನ ಹಾಗಲ್ಲ ನಾನು. ಅವರು ದರ್ಪದಿಂದ ಆಳಿದರು. ನಾನು ವಿನಯದಿಂದ ಗೆಲ್ಲಲು ಹೊರಟಿದ್ದೇನೆ. ಅವರು ಅಹಂಕಾರದಿಂದ ಬಾಳಿದರು. ನಾನು ಸಂತನ ಹಾಗಿರಲು ಬಯಸುತ್ತೇನೆ. ನನ್ನ ಸಿಟ್ಟು ನನ್ನದಲ್ಲ ಎಂದುಕೊಂಡು ಸಿಟ್ಟಾಗುತ್ತೇನೆ. ನನ್ನ ನಿರ್ಧಾರದಿಂದ ನನಗೆ ಲಾಭ ಆಗಕೂಡದು. ಪ್ರಜೆಗಳಿಗೆ ಲಾಭ ಆಗಬೇಕು ಎಂಬುದೇ ನನ್ನಾಸೆ. ನನ್ನ ಆಳ್ವಿಕೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ, ಹೆಣ್ಣಾಗಲೀ ಗಂಡಾಗಲಿ ಅತೃಪ್ತಿಯ ಮಾತಾಡಕೂಡದು. ನೀನು ಊರೂರು ಸುತ್ತುವವನು. ಕ್ಷೌರ ಮಾಡೋ ಹೊತ್ತಲ್ಲಿ ಎಲ್ಲರೂ ನಿನಗೆ ರಹಸ್ಯಗಳನ್ನು ಹೇಳುತ್ತಿರುತ್ತಾರೆ. ಅವನ್ನು ನನಗೆ ಹೇಳು.’
ಕ್ಷೌರಿಕ ಒಂದು ಕ್ಷಣ ಸುಮ್ಮನಿದ್ದ. ಮತ್ತೆ ದಿಟ್ಟತನದಿಂದ ಹೇಳಿದ. ‘ನಾನೇನೇ ಹೇಳಿದರೂ ನೀವು ಸಿಟ್ಟಾಗಬಾರದು, ಬೇಸರ ಮಾಡಿಕೊಳ್ಳಬಾರದು. ನನ್ನನ್ನು ಗಲ್ಲಿಗೇರಿಸಬಾರದು. ಹಾಗಂತ ಮಾತು ಕೊಡಿ.’
ಮಹಾರಾಜನಿಗೆ ಅಚ್ಚರಿಯಾಯಿತು. ಅಂಥದ್ದೊಂದು ರಹಸ್ಯ ಇವನ ಬಳಿ ಇರುವುದಕ್ಕಾದರೂ ಸಾಧ್ಯವಾ? ಅಂಥದ್ದೊಂದಿದ್ದರೆ ತಿಳಿದುಕೊಳ್ಳಲೇಬೇಕು. ಇಲ್ಲದೇ ಹೋದರೆ ನನ್ನ ಆಡಳಿತದಲ್ಲೊಂದು ಕೊರತೆ ಉಳಿದುಬಿಡುತ್ತದೆ. ತಾನಂದುಕೊಂಡ ಸಮಾಜ ಸೃಷ್ಟಿಸಲು ಸಾಧ್ಯವೇ ಆಗುವುದಿಲ್ಲ.
‘ಹೇಳು, ನಿನ್ನನ್ನು ಕ್ಷಮಿಸುತ್ತಿದ್ದೇನೆ. ಅದೆಂಥಾ ಮಹಾಪರಾಧ ಮಾಡಿದರೂ ನಿನ್ನನ್ನು ನಾನು ಶಿಕ್ಷೆಗೆ ಒಳಪಡಿಸುವುದಿಲ್ಲ. ಸಿಂಹಾಸನದ ಮೇಲಾಣೆ’
‘ಅಷ್ಟೇ ಅಲ್ಲ. ಸಮಸ್ಯೆಯನ್ನು ಹೇಳಿದ ನಂತರ ಅದಕ್ಕೆ ಪರಿಹಾರವನ್ನೂ ಸೂಚಿಸಬೇಕು.’
ಮಹಾರಾಜ ಒಪ್ಪಿಗೆಯಿಂದ ತಲೆಯಾಡಿಸಿದ.‘ ನಾನು ಸಮಸ್ಯೆ ಇಂಥದ್ದು ಎಂದು ಗೊತ್ತಾದರೆ ಪರಿಹಾರ ಸೂಚಿಸದೇ ಇರುವುದಕ್ಕೆ ಕಾರಣವೇ ಇಲ್ಲ. ನನ್ನ ಸಾಮ್ರಾಜ್ಯವನ್ನು ಒತ್ತೆಯಿಟ್ಟಾದರೂ ತಕ್ಕ ಪರಿಹಾರ ಕೊಡಿಸುತ್ತೇನೆ. ಹೇಳು’.
ಕ್ಷೌರಿಕ ಬಾಯ್ತೆಗೆಯುವುದಕ್ಕೆ ಮುಂಚೆ ಅವಳು ಮಾತಾಡಿದಳು. ‘ಬೇಡ ದೊರೆ. ಮಾತು ಕೊಡಬೇಡ. ಆಮೇಲೆ ತುಂಬಾ ಕಳೆದುಕೊಳ್ಳಬೇಕಾಗುತ್ತದೆ’.
ಅವಳಾಡಿದ ಮಾತು ಕ್ಷೌರಿಕನಿಗೆ ಕೇಳಲಿಲ್ಲ. ಮಹಾರಾಜನಿಗಷ್ಟೇ ಕೇಳಿಸಿತು. ಅವನು ಅಚ್ಚರಿಯಿಂದ ತಿರುಗಿ ನೋಡಬೇಕು ಅಂದುಕೊಂಡ. ಆದರೆ ಕತ್ತು ಕ್ಷೌರಿಕನ ಕೈಯಲ್ಲಿತ್ತು. ಅಲ್ಲಾಡುವ ಹಾಗಿರಲಿಲ್ಲ. ಹೀಗಾಗಿ ಅವಳು ಯಾರೆಂದು ನೋಡುವುದಕ್ಕಾಗದೇ ಅವನು ಕೇಳಿದ ‘ಯಾರು ನೀನು, ಯಾಕೆ ಮಾತು ಕೊಡಬೇಡ ಅನ್ನುತ್ತಿದ್ದಿ. ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಹೇಡಿಯಲ್ಲ ನಾನು. ನನ್ನ ಸಂಪತ್ತು, ಶೌರ್ಯ, ಸಾಮರ್ಥ್ಯಗಳ ಮೇಲೆ ಯಾರಿಗೂ ಅನುಮಾನ ಇಲ್ಲ. ನಿನಗಿದೆಯಾ?’
ಆಕೆ ನಕ್ಕಳು. ಮಹಾರಾಜನಿಗೆ ಮಾತ್ರ ಅದು ಕೇಳಿಸಿತು. ನಗು ಮುಗಿಯುತ್ತಿದ್ದಂತೆ ಉತ್ತರ ಬಂತು.‘ದೊರೆ, ನೀನು ನಾಡನ್ನಾಳಬಲ್ಲೆ, ದೇಶವನ್ನಾಳಬಲ್ಲೆ, ಭೂಮಂಡಲವನ್ನೇ ಆಳಬಲ್ಲೆ. ಆದರೆ ಮನಸ್ಸನ್ನು ಪ್ರತಿಬಿಂಬಿಸಲಾರೆ. ಯೋಚನೆಗಳನ್ನು ನಿರ್ಬಂಧಿಸಲಾರೆ. ನೀನು ಆಳುವ ಜಗತ್ತನ್ನು ಯಾರು ಬೇಕಾದರೂ ಆಳಬಲ್ಲರು. ಅದಕ್ಕೆ ಬೇಕಾಗಿರುವುದು ಹುಂಬತನ,  ಅಮಾನವೀಯತೆ ಮತ್ತು ದರ್ಪ. ನಾನು ಆಳುತ್ತಿದ್ದೇನೆ ಅನ್ನುವುದು ನಿನ್ನ ಭ್ರಮೆ. ಪ್ರಜೆಗಳು ದುಡಿಯುತ್ತಿದ್ದಾರೆ. ಪ್ರಜೆಗಳು ತಿನ್ನುತ್ತಿದ್ದಾರೆ. ಮದುವೆಯಾಗುತ್ತಾರೆ, ಮಕ್ಕಳನ್ನು ಹೆರುತ್ತಾರೆ. ಆ ಮಕ್ಕಳಿಗೋಸ್ಕರ ಮತ್ತಷ್ಟು ದುಡಿಯುತ್ತಾರೆ. ಕಣ್ಮುಂದೆ ಬಿದ್ದಿರುವ ಭೂಮಿಯನ್ನು ದುಡ್ಡುಕೊಟ್ಟು ಕೊಳ್ಳುತ್ತಾರೆ. ಅದಕ್ಕೆ ಬೇಲಿ ಹಾಕಿ ತಮ್ಮದು ಅನ್ನುತ್ತಾರೆ. ನೀನು ಅವರನ್ನು ಶ್ರೀಮಂತರನ್ನಾಗಿ ಮಾಡಬಲ್ಲೆ. ಅದಕ್ಕೇ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಲ್ಲೆ.’
ಮಹಾರಾಜನಿಗೆ ನಗು ಬಂತು. ಈಕೆ ಯಾರೋ ಮೂರ್ಖಳಂತೆ ಮಾತಾಡುತ್ತಿದ್ದಾಳೆ ಅಂದುಕೊಂಡ. ಅವಳಿಗೆ ರಾಜನೀತಿಯ ಪಾಠ ಕಲಿಸುವುದಾದರೂ ಹೇಗೆ? ಉತ್ತರ ಕೊಡದಿರುವುದೇ ಒಳ್ಳೆಯದು ಅಂದುಕೊಂಡು ಸುಮ್ಮನಾದ. ಕ್ಷೌರಿಕ ತನ್ನ ಕೆಲಸ ಮುಂದುವರಿಸಿದ್ದ. ಮಹಾರಾಜ ಗಂಭೀರವಾಗಿ ಹೇಳಿದ. ‘ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವವನು ಮಹಾರಾಜ. ಅವನ ಕೆಲಸ ಅಷ್ಟೇ. ಆ ಪ್ರತಿ-ಲದ ಸುಖ ಶ್ರಮಿಕನ ಕಣ್ಣಲ್ಲಿ ಪ್ರತಿಫಲಿಸುತ್ತದೆ. ರೈತ ಗದ್ದೆ ಉಳುತ್ತಾನೆ, ಬಿತ್ತುತ್ತಾನೆ. ಬೆಳೆ ಬರುತ್ತದೆ. ಅದೇ ಅಲ್ಲವೇ ಜಗತ್ತು?’
ಮತ್ತೆ ಅವಳು ನಕ್ಕಳು. ‘ಶ್ರಮದ ಪ್ರತಿಫಲ. ಪ್ರತಿಫಲದ ಸುಖ. ಒಂದಕ್ಕೊಂದು ಸಂಬಂಧವೇ ಇಲ್ಲ. ರೈತ ಬಿತ್ತುತ್ತಾನೆ, ಬೆಳೆಯುತ್ತಾನೆ. ಮತ್ತೆ ಬಿತ್ತುತ್ತಾನೆ. ಮತ್ತೆ ಫಸಲು ಬರುತ್ತದೆ. ಈ ಚಕ್ರ ಸುತ್ತುತ್ತಲೇ ಇರುತ್ತದೆ. ನಿನ್ನದೇನು ಪಾಲಿದೆ ಅದರಲ್ಲಿ. ಮಣ್ಣು ನಿನ್ನದಲ್ಲ, ಬೀಜ ನಿನ್ನದಲ್ಲ. ಯಾವ ದೇಶದಲ್ಲಿ ಬಿತ್ತಿದರೂ ಬೆಳೆ ಬಂದೇ ಬರುತ್ತದೆ. ಅದಕ್ಕೆ ದೊರೆ ಯಾಕೆ ಬೇಕು?’
ಮಹಾರಾಜನಿಗೆ ಕಸಿವಿಸಿಯಾಯಿತು. ಅವಳು ಕೇಳುತ್ತಿರುವುದರಲ್ಲೂ ಅರ್ಥವಿದೆ. ಏಕಕಾಲಕ್ಕೆ ಇಬ್ಬರು ಅತೃಪ್ತರು. ತನ್ನ ಆಡಳಿತದ ಬಗ್ಗೆ ಅವಳಿಗೂ ಖುಷಿಯಿಲ್ಲ. ಕ್ಷೌರಿಕನಿಗೂ ತೃಪ್ತಿಯಿದ್ದಂತಿಲ್ಲ. ಹಾಗಿದ್ದರೆ ಎಲ್ಲೋ ಏನೋ ತಪ್ಪಾಗಿರಲೇಬೇಕು. ಅದನ್ನು ಸರಿ ಮಾಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಮನಸ್ಸಿನಲ್ಲೇ ನಿರ್ಧರಿಸಿದ ಮಹಾರಾಜ ಮತ್ತೆ ಅವಳನ್ನು ಕೇಳಿದ.
‘ನಿನ್ನ ಮಾತಿನ ಅರ್ಥವೇನು?’
ಅವಳು ಮಗದೊಮ್ಮೆ ನಕ್ಕಳು. ಆ ನಗುವಿನಲ್ಲಿ ಅವನಿಗೆ ಪ್ರಶ್ನೆಗಳು ಕಾಣಿಸಿದವು. ತನ್ನ ಅಸ್ತಿತ್ವವನ್ನೇ ಅವಳು ಅಲ್ಲಾಡಿಸುತ್ತಿದ್ದಾಳೆ ಎಂಬಂತೆ ಭಾಸವಾಯಿತು. ಅವಳೆಡೆಗೆ ತಿರುಗಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಬರೀ ದನಿಯಷ್ಟೇ ಬರುತ್ತಿತ್ತು. ಗಿಳಿಯೊಂದು ಹಾರಿ ಅವನ ಎಡದಿಕ್ಕಲ್ಲಿ ಕೂತಿತು.
‘ನಿನಗೆ ಏಕಾಂತದಲ್ಲಿ ನಂಬಿಕೆ ಇದೆಯಾ? ’ ಅವಳು ಕೇಳಿದಳು. ‘ನಿನ್ನ ಪ್ರಜೆಗಳು ನಿನ್ನವರಲ್ಲ, ನಿನ್ನ ರಾಜ್ಯ ನಿನ್ನದಲ್ಲ. ನಿನ್ನ ಸಂಪತ್ತು ನಿನ್ನದಲ್ಲ. ಮೂರ್ಖನಿಗೆ ಯಾತನೆಗಳಿರುವುದಿಲ್ಲ. ಹುಂಬನಿಗೆ ಪ್ರಶ್ನೆಗಳಿರುವುದಿಲ್ಲ. ದಡ್ಡನಿಗೆ ಅನುಮಾನಗಳಿರುವುದಿಲ್ಲ. ನೀನು ಈ ಕೋಟೆ ನಿನ್ನನ್ನು ರಕ್ಷಿಸುತ್ತದೆ ಎಂದು ನಂಬಿದವನು. ನಾನು ಪ್ರಜೆಗಳನ್ನು ಸಂತೋಷವಾಗಿಟ್ಟಿದ್ದೇನೆ ಎಂದುಕೊಂಡಿರುವವನು. ನೀನು ಕೊಡುವುದಕ್ಕೂ ಅವರು ಪಡೆಯುವುದಕ್ಕೂ ಸಂಬಂಧವೇ ಇಲ್ಲ. ನೀನು ಯಾವತ್ತಾದರೂ ನಿನ್ನ ಮೊದಲನೇ ರಾಣಿಯ ಜೊತೆ ಸುಖಿಸಿದ್ದೀಯಾ? ಪ್ರೇಮದಲ್ಲಿ ನೀನು ಕೊಡುವುದ��� ಬೇರೆ, ಅವಳು ಪಡಕೊಳ್ಳುವುದೇ ಬೇರೆ. ನೀನು ಕೊಟ್ಟಷ್ಟೂ ಅವಳಿಗೆ ದಕ್ಕಿರೋದಿಲ್ಲ. ಅವಳಿಗೆ ದಕ್ಕಿದ್ದನ್ನು ನೀನು ಕೊಟ್ಟಿರುವುದಿಲ್ಲ. ಈ ಸಾಮ್ರಾಜ್ಯವನ್ನು ಮೀರಿದ, ಯಾರ ಅಳವಿಗೂ ಸಿಗದ, ಯಾರೂ ಬೇಲಿ ಹಾಕಲಾರದ ಮತ್ತೊಂದು ಲೋಕ ಪ್ರತಿಯೊಬ್ಬರೊಳಗೂ ಇದೆ. ನೀನು ಕೊಟ್ಟಿರೋ ಅಲ್ಪಸುಖವನ್ನು ಅನುಭವಿಸುತ್ತಾ ಅವರೆಲ್ಲ ಆ ಮಹತ್ತರ ಸುಖದಿಂದ ವಂಚಿತರಾಗುತ್ತಿದ್ದಾರೆ. ನೀನು ಅವರಿಗೆ ಮೋಸ ಮಾಡುತ್ತಿದ್ದೀಯ.’
ಮಹಾರಾಜ ನೋಡುತ್ತಿದ್ದಂತೆ ಗಿಳಿ ಹಾರಿಹೋಯಿತು. ಗವಾಕ್ಷಿಯ ಮೂಲಕ ಹೊರಗೆ ಹೋಗಿದ್ದನ್ನು ಮಹಾರಾಜ ನೋಡಿದ. ಅವಳು ಹೇಳಿದ ಮಾತು ಒಂದಿಷ್ಟೂ ಅರ್ಥವಾಗಿರಲಿಲ್ಲ. ಕ್ಷೌರಿಕ ಮಹಾರಾಜನ ಗಡ್ಡಕ್ಕೆ ಕೈ ಹಾಕಿದ. ಹರಿತವಾದ ಅಲಗಿನಿಂದ ಕ್ಷೌರ ಶುರು ಮಾಡಿದ. ಮಹಾರಾಜನತ್ತ ತಿರುಗಿ ‘ಹೇಳಲೇ’ ಎಂದು ಕೇಳಿದ. ಮಹಾರಾಜ ಹೇಳು ಅಂತ ತಲೆಯಾಡಿಸಿದ.
‘ನಮ್ಮ ರಾಜ್ಯದ ಹೆಣ್ಣೊಬ್ಬಳು ನನ್ನ ಮುಂದೆ ಒಂದು ಬೇಡಿಕೆ ಇಟ್ಟಿದ್ದಾಳೆ. ಅವಳಿಗೆ ಗಂಡನ ಜೊತೆಗಿನ ಬಾಳು ಸಾಕಾಗಿದೆಯಂತೆ. ನನ್ನ ಸಂಸರ್ಗ, ಸನಿಹ, ಸಾಂಗತ್ಯ ಅವಳಿಗೆ ಬೇಕಂತೆ. ಈ ರಾಜ್ಯದಲ್ಲಿ ಯಾರು ಏನು ಕೇಳಿದರೂ ಇಲ್ಲ ಎನ್ನಬಾರದು ಎಂದು ತಾವೇ ನಿಯಮ ಮಾಡಿದ್ದೀರಿ. ಈಗೇನು ಮಾಡಲಿ. ಇದರಿಂದ ನಾನೂ ಬೇಸರದಲ್ಲಿದ್ದೇನೆ. ಅವಳು ನೊಂದಿದ್ದಾಳೆ’.
ಮಹಾರಾಜನಿಗೆ ಅವಳು ಹೇಳಿದ ಮಾತು ಅರ್ಥವಾಗುತ್ತಿದೆ ಅನ್ನಿಸಿತು. ಎಲ್ಲ ನಿಯಮಗಳೂ ಸುಳ್ಳಾಗುವ, ಎಲ್ಲಾ ಕಾನೂನುಗಳೂ ಪೊಳ್ಳಾಗುವ, ಎಲ್ಲ ನಿರ್ಧಾರಗಳೂ ಜೊಳ್ಳಾಗುವ ಮತ್ತೊಂದು ಜಗತ್ತು ಇದೆ ಹಾಗಿದ್ದರೆ. ಅದನ್ನು ತಾನು ಆಳಬಲ್ಲೆನೇ? ಗೆಲ್ಲಬಲ್ಲೆನೇ? ಆ ಜಗತ್ತು ತನ್ನೊಳಗಿದೆಯೋ ಪ್ರಜೆಗಳ ಒಳಗಿದೆಯೋ?
‘ನೀನೇನು ಹೇಳಿದೆ?’
‘ಮಹಾಪ್ರಭುಗಳ ಬಳಿ ಮಾತಾಡುತ್ತೇನೆ ಎಂದು ಹೇಳಿದೆ. ಅವಳ ಆಸೆ ಇಷ್ಟೇ. ನಾನು ಅವಳ ಗಂಡನನ್ನು ಸಾಯಿಸಬೇಕು. ಅವಳನ್ನು ಜೊತೆಗಿಟ್ಟುಕೊಳ್ಳಬೇಕು. ಅವಳಿಗೆ ಆಗಲೇ ಸಂತೋಷ. ಅದನ್ನು ಅವಳು ಅತ್ಯಂತ ದೈನ್ಯದಿಂದ ಕೇಳಿಕೊಂಡಿದ್ದಾಳೆ. ನಾನೇನು ಮಾಡಲಿ?’
ಇದು ಸಂದಿಗ್ಧ ಪರಿಸ್ಥಿತಿ ಅನ್ನಿಸಿತು. ಮಹಾರಾಜನ ಬಳಿಯೇ ಕೊಲೆ ಮಾಡಲು ಅನುಮತಿ ಕೇಳುತ್ತಿದ್ದಾನೆ. ಈ ತಪ್ಪಿಗೆ ಅವನನ್ನು ಗಲ್ಲಿಗೇರಿಸಬೇಕು. ಆದರೆ ಮಾತು ಕೊಟ್ಟಾಗಿದೆ.’
‘ತುಂಬ ಹಿಂಸೆ, ಕ್ರೂರ. ಗಂಡನನ್ನು ಕೊಲ್ಲುವುದು ಕೌರ್ಯವೋ, ಆ ಹೆಣ್ಣಿನ ಆಸೆಯನ್ನು ಹತ್ತಿಕ್ಕುವುದು ಕ್ರೌರ್ಯವೋ? ನಾನೀಗ ಏನು ಮಾಡಲಿ ಹೇಳಿ ಪ್ರಭೂ.’
ಮಹಾರಾಜನಿಗೆ ಅವಳು ಗಿಳಿಯಾಗಿ ಹಾರಿಹೋಗುವ ಮುನ್ನ ಆಡಿದ ಮಾತುಗಳು ನೆನಪಾದವು. ಎಲ್ಲ ಮಿತಿಮೀರುತ್ತಿದೆ ಅನ್ನಿಸಿತು. ಜೋರಾಗಿ ಉಸಿರೆಳೆದುಕೊಂಡು ‘ಗಂಡನನ್ನು ಕೊಂದುಬಿಡು. ಅದರ ಪಾಪದ ಹೊಣೆ ನನ್ನದು. ಅಷ್ಟಕ್ಕೂ ಆ ಹೆಣ್ಣು ಯಾರೆಂದು ಹೇಳಿಬಿಡು’ ಅಂದ.
ಎಳಕೊಂಡ ಉಸಿರು ಬಿಡುವ ಮೊದಲು ಕ್ಷೌರಿಕನ ಕತ್ತಿ ಮಹಾರಾಜನ ಕೊರಳನ್ನು ಕತ್ತರಿಸಿತು. ಕತ್ತಲು ಕವಿಯುವ ಮುನ್ನ ಕ್ಷೌರಿಕ ಹೇಳಿದ್ದು ಕೇಳಿಸಿತು. ‘ಮಹಾರಾಣಿ ಪ್ರಭೂ. ಆ ಹೆಣ್ಣು ಮಹಾರಾಣಿ’.

Leave a Reply