ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ- ಶೈಲಜಾ ಹೂಗಾರ

ಇಂಟ್ರೊ: ಹುಬ್ಬಳ್ಳಿ–ಧಾರವಾಡದವರು ವರ್ಗವಾಗಿ ಬೇರೆ ಯಾವುದಾದರೂ ರಾಜ್ಯ ಅಥವಾ ದೇಶಕ್ಕೆ ಹೋದಾಗಲೂ ಇಲ್ಲಿನ ಏನೆಲ್ಲವನ್ನು ಮಿಸ್‌ ಮಾಡಿಕೊಳ್ಳುವುದು ಇದೆ. ಹಾಗೇ ಹಳೆಯ ಸಂಗ್ಯಾಬಾಳ್ಯಾ ನಾಟಕದ ಝಲಕ್‌ಅನ್ನು ನಮ್ಮ ಮುಂದಿನ ಪೀಳಿಗೆಗೂ ತೋರಬಯಸಿದರೆ ಅದೂ ಸಾಧ್ಯ. ಬರೀ ಈ ವೆಬ್‌ಸೈಟ್‌ಗೆ ಹೋಗಿ ನಾಟಕ ಡೌನ್‌ಲೋಡ್‌ ಮಾಡಿ. ನಾವು ಮರೆತ ನಮ್ಮ ದೇ ಭಾಷೆಯ ಸೊಗಡಿನ ಡೈಲಾಗ್‌ ಕೇಳುತ್ತ ದೃಶ್ಯಗಳ ಸೊಬಗು ಸವಿಯುತ್ತ, ಪೂರ್ತಿ ಅರ್ಥವಾಗದೆ ಕಣ್‌ ಕಣ್‌ಬಿಡುವ ನಮ್ಮ ಮಕ್ಕಳಿಗೆ ಇಂಗ್ಲಿಷ್‌ ಸಬ್‌ಟೈಟಲ್‌ ತೋರುತ್ತ ನಾಟಕ ನೋಡಿ ಆನಂದಿಸಬಹುದು. ಹೌದು, ಇಂಥ ನಮ್ಮೂರ ತಿನಿಸು, ಹಳೆಯ ಚಿತ್ರಗಳು, ನಮ್ಮೂರಿನ ಸಾಹಿತ್ಯ ಕೃತಿಗಳ ರಸದೌತಣ ಸವಿಯುವ ಅನುಭೂತಿ ಮೂಡಿಸುವ ಡಿಜಿಟಲೀಕರಣ ಕಾರ್ಯದ ಕನಸೊಂದು ಕೈಗೂಡಲಿದೆ….ಶೈಲಜಾ ಹೂಗಾರ ವಿವರಿಸಿದ್ದಾರೆ

VIVIDLIPI in London Kannada event

ಅದು ಕಳೆದ ವರ್ಷದ ಜನವರಿ ತಿಂಗಳು. ಧಾರವಾಡ ಸಾಹಿತ್ಯ ಸಂಭ್ರಮದ ಮೂರನೇ ಆವೃತ್ತಿಯ ಕೊನೆಯ ದಿನದಾರ್ಧ. ಕನ್ನಡಕ್ಕೆ ಪ್ರಸ್ತುತತೆಯ ಕನ್ನಡಿ ಎಂಬ ಪ್ರಾತ್ಯಕ್ಷಿಕೆ ಆರಂಭ. ಸಾಹಿತ್ಯ ಮತ್ತು ಅದರ ಜತೆಗೇ ಕನ್ನಡದ ಉಳಿವಿಗೂ ನಡೆಯುತ್ತಿರುವ ನೂತನ ಪ್ರಯೋಗ ಇದು ಎಂದ ಮಾತಿಗೆ ಕುತೂಹಲ ಕೆರಳಿತ್ತು. ತಂತ್ರಜ್ಞಾನ ಭಾಷೆಯ ಉಳಿವಿಗೆ ಹೇಗೆ ಪೂರಕವಾಗಬಲ್ಲದು, ಅದರಲ್ಲಿ ಸಾಹಿತಿಗಳು, ಸಾಹಿತ್ಯಪ್ರೇಮಿಗಳು, ಕನ್ನಡ ಭಾಷಿಕರು ತಾವೂ ಹೇಗೆ ಭಾಗಿಯಾಗಬಹುದು ಎಂಬ ಮಾಹಿತಿ ಬಿಚ್ಚಿಕೊಳ್ಳುತ್ತ ಸಾಗಿದಂತೆ ಸಭಿಕರ ಕಣ್ಣರಳಿದ ಕ್ಷಣ. ವಿವಿಡ್ಲಿಪಿ ಯೋಜನೆಯ ಸಲಹೆಗಾರರಾದ ಎಚ್‌.ಸಿ. ಶ್ರೀನಿವಾಸ್‌ ಮತ್ತು ತಂಡ ಮೂಕ ವೆಂಚರ್ಸ್‌ ಪರವಾಗಿ ಪ್ರಸ್ತುತಪಡಿಸಿದ ಪ್ರಾತ್ಯಕ್ಷಿಕೆ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿತ್ತು. ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಪ್ರೇಮಿಗಳು ಮಾತ್ರವಲ್ಲದೆ, ಕನ್ನಡ ಬಾರದವರಿಗಾಗಿಯೂ ಹಲವು ಅಂಶಗಳನ್ನು ಒಳಗೊಂಡ ಬಗೆಯನ್ನು ಅವರು ವಿವರಿಸುತ್ತ ಹೋದಂತೆ ಸಭಿಕರು ಕಣ್ಣರಳಿಸಿದರು. ಲಂಡನ್‌ನಲ್ಲಿರುವ ಸತ್ಯಪ್ರಮೋದ್ ಎಲ್. ಎಸ್. ಅವರ ಪರಿಕಲ್ಪನೆ ಇದು. ಲಂಡನ್ನಿನಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಸೆಕ್ಯೂರಿಟಿ (Information Technology and Information Security) ಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ಮೂರ್ತಿ, ತಾಯಿ ಕಮಲ ಅವರ ಮೊದಲ ಅಕ್ಷರಗಳಿಂದ ಮೂಡಿದ ಮೂಕ ವೆಂಚರ್ಸ್‌ ಎಂಬ ಹೆಸರು. ತಾಂತ್ರಿಕ ಆವಿಷ್ಕಾರಗಳು ಭಾಷೆಯಿಂದ ದೂರವಾಗುತ್ತ ಹೋದಂತೆ ಭಾಷೆ ಮತ್ತು ತಾಂತ್ರಿಕತೆ ಎರಡೂ ಬೇರೆಯದೇ ಪರಿಧಿಯಲ್ಲಿ ಬೆಳೆಯಬೇಕಾಗುತ್ತದೆ. ಇದನ್ನು ಮನಗಂಡು ಹೊಸ ಆಟಿಕೆಗಳಾದ ಟ್ಯಾಬ್ಲೆಟ್‌, ಐಪ್ಯಾಡ್‌, ಫೋನ್‌ಗಳ ಮೂಲಕ ಕನ್ನಡಿಗರನ್ನು ಕನ್ನಡ ತಲುಪುವ ಉದ್ದೇಶ ಅವರದು. ಜಗತ್ತಿನ ಮೂಲೆ ಮೂಲೆಗೆ ಸಂಪರ್ಕ ಪಡೆಯಲು ಲಭ್ಯ ಇರುವ ಮಾಧ್ಯಮಗಳು ಇವು. ಇವುಗಳ ಮೂಲಕವೂ ಕನ್ನಡದ ಕಂಪು ಪಸರಿಸಲು ಹವಣಿಸುತ್ತಿದೆ ಮೂಕ ವೆಂಚರ್ಸ್‌. ಸದ್ಯಕ್ಕೆ ಮೂಕ ವೆಂಚರ್ಸ್‌ನ ವಿವಿಡ್ಲಿಪಿ ಆ್ಯಪ್‌ Android ಅಪ್ಲಿಕೇಶನ್ ನಲ್ಲಿ ಲಭ್ಯವಿದೆ; ವಿಂಡೋಸ್ ಡೆಸ್ಕ್‌ಟಾಪ್ ಹಾಗೂ ಆಪಲ್ ಐ ಓ ಎಸ್‌ (IOS )ನಲ್ಲಿ ಕೆಲವು ದಿನಗಳಲ್ಲಿ ಲಭ್ಯವಾಗಲಿದೆ. ಈ ಬಾರಿಯ ಧಾರವಾಡ ಸಾಹಿತ್ಯ ಸಂಭ್ರಮ – ಅಂತರ್ಜಾಲದಲ್ಲಿ ನೇರ ಪ್ರಸಾರವಾಗಲಿದ್ದು ಜನರ ಆಸಕ್ತಿಗೆ ಹಾಗೂ ಅಗತ್ಯಗಳಿಗೆ ಇನ್ನೂ ಹತ್ತಿರದಿಂದ ಸ್ಪಂದಿಸುವ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನಗಳಿಂದ ದೇಶ ವಿದೇಶದ ಜನರು ಒಂದು ವೇದಿಕೆಯಲ್ಲಿ ಒಂದಾಗಬೇಕು ಎನ್ನುವುದು ಅವರ ಉದ್ದೇಶ. ಲಂಡನ್ ನಗರದಲ್ಲಿ ಪ್ರಮೋದ್‌ ಅವರು 5-6 ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕಗಳನ್ನು ಮಾರಿದಾಗ ಜನರು ತೋರಿಸಿದ ಆಸಕ್ತಿ ಮತ್ತು ಖುಷಿ ತಮ್ಮ ಕನಸು ನನಸಾಗುವ ದಾರಿಯಲ್ಲಿದೆ ಎಂಬ ನಂಬಿಕೆ ಅವರಲ್ಲಿ ಮೂಡಿಸಿದೆಯಂತೆ. ಈ ಪ್ರಯತ್ನ ಹೀಗೇ ಮುಂದುವರೆದು ಮುಂದಿನ ಪೀಳಿಗೆಯನ್ನು ಒಂದುಗೂಡಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎನ್ನುತ್ತಾರೆ ಅವರು. ಇ ಪುಸ್ತಕ, ಧ್ವನಿಮುದ್ರಿತ ಪುಸ್ತಕ, ಅಲ್ಲದೆ ಅಂತರ್ಜಾಲದಲ್ಲಿ ರಂಗಪ್ರಯೋಗಕ್ಕೂ ತಯಾರಿ ನಡೆದಿದೆ. ಅದಕ್ಕಾಗಿ ಮುದ್ರಣ ಪ್ರಕಾಶಕರು, ರಂಗನಿರ್ದೇಶಕರು, ಸಾಹಿತಿಗಳೊಡನೆ ಒಪ್ಪಂದ, ಸಹಯೋಗ, ಮಾತುಕತೆ ಆಗುತ್ತಿವೆ. ಬರುವ ಲಾಭದಲ್ಲಿ ಎಲ್ಲರೂ ಹಂಚಿಕೊಂಡು ಆರ್ಥಿಕ ನಿರ್ಭರತೆ ಹೊಂದುವ ಯೋಜನೆ ಕೂಡ ಇದೆ. ಗಮ್ಯಸ್ಥಳ ಛಾಪು ಮೂಡಿಸುವ ಯತ್ನವೂ ಇದರಲ್ಲಿ ಅಡಕವಾಗಿರುವುದು ವಿಶೇಷ. ಮೊದಲು ಧಾರವಾಡವನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಂಡಾಗಿದೆ. ಡೆಸ್ಟಿನೇಶನ್‌ ಬ್ರಾಂಡಿಂಗ್‌ ರೀತಿಯಲ್ಲಿ ಧಾರವಾಡವನ್ನು ಪ್ರಸ್ತುತಪಡಿಸಲು ಹವಣಿಸುತ್ತಿದ್ದಾರೆ. ‘ವಿಷಯ ಒಂದುಗೂಡಿಸುವುದು ಅಥವಾ ಸಂಗ್ರಹಿಸುವುದು’ (Content Aggregation ) ಗಮ್ಯಸ್ಥಳ ಛಾಪು ಯೋಜನೆಯ ಮೊದಲ ಹಂತ. ವಿಷಯ ಅಂದರೆ ಸಾಹಿತ್ಯವಾಗಿರಬಹುದು, ಸಂಗೀತವಾಗಿರಬಹುದು, ಚಿತ್ರವಾಗಿರಬಹುದು ಅಥವಾ ಓದುಗರ ಅನಿಸಿಕೆ ಇರಬಹುದು. ಈ ವಿಷಯಗಳ ಒಡನಂಟನ್ನು (Correlation ) ಉಪಯೋಗಿಸಿ ಗಮ್ಯಸ್ಥಳ ಛಾಪು ಮೂಡಿಸುತ್ತೇವೆ ಎನ್ನುತ್ತಾರೆ ಪ್ರಮೋದ್‌. ಸದ್ಯಕ್ಕೆ ವಿಷಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ, ಸಾಹಿತ್ಯದ ಕಂಪಿನಲ್ಲಿ, ಸಂಗೀತದ ಇಂಪಿನಲ್ಲಿ, ಭಾವಚಿತ್ರದ ನೆನಪುಗಳು, ತಿನಿಸಿನ ರುಚಿಯನ್ನೂ ಸೇರಿಸಿ ಧಾರವಾಡದ ಅನುಭೂತಿ ಮೂಡಿಸುವ ಕಾರ್ಯ ಗಮ್ಯಸ್ಥಳ ಛಾಪು ಇನ್ನು ಕೆಲವು ತಿಂಗಳಲ್ಲಿ ಹಂತ ಹಂತವಾಗಿ ಪ್ರಾರಂಭವಾಗುತ್ತದೆ. ಹಾಗೆ ನೋಡಿದರೆ ಧಾರವಾಡ ಸಾಹಿತ್ಯ ಸಂಭ್ರಮದ 2016 ರ ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡುವ ಪ್ರಯತ್ನವೂ ಗಮ್ಯಸ್ಥಳ ಛಾಪು ಮೂಡಿಸುವ ಹಂತದ ಒಂದು ಕಾರ್ಯವೇ ಎನ್ನುತ್ತಾರೆ ಪ್ರಮೋದ್‌. ಡೆಸ್ಟಿನೇಶನ್‌ ಬ್ರಾಂಡಿಂಗ್‌ ಯೋಜನೆ ವಿಷಯ ಸಂಗ್ರಹಣೆಯ ಹಂತದಲ್ಲಿದೆ, ಇದು ವಿಷಯ ಸಂಗ್ರಹಣೆಗೆ ಸೀಮಿತವಾಗದೆ ಇನ್ನೂ ಬೇರೆ ವಿಧಾನದಲ್ಲೂ ಜನರನ್ನು ತಲುಪಲಿದೆ. ಇದು ಒಂದು ದೊಡ್ಡ ಯೋಜನೆ ಮತ್ತು ತಾವು ಈಗಿನ್ನೂ ಸಣ್ಣ ಹೆಜ್ಜೆ ಇಡುತ್ತಿದ್ದೇವೆ ಎನ್ನುತ್ತಾರೆ ಧಾರವಾಡ ಕಚೇರಿಯಲ್ಲಿ ಕಾರ್ಯಾಚರಣೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರಾಗಿರುವ ವಿಜಯಕುಮಾರ್‌ ಸತ್ತೂರ ಅವರು. ಅವರೊಂದಿಗೆ ಡಿಜಿಟೈಸೇಶನ್‌ ಟೀಮ್‌ನಲ್ಲಿ ಗಾಯತ್ರಿ ಶಿರಹಟ್ಟಿ ಮತ್ತು ಅಶ್ವಿನಿ ಎಸ್‌ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಧಾರವಾಡ ಜಿಲ್ಲೆಯ ಕುರಿತು ವಿಷಯ ಸಂಗ್ರಹಣೆ ಹಾಗೂ ಗಣಕೀಕೃತ ಮಾದರಿಯಲ್ಲಿ ಪರಿವರ್ತಿಸುವ ವಿವಿಡ್ಲಿಪಿಯ ಕಾರ್ಯಾಲಯ ಧಾರವಾಡದಲ್ಲಿ ಪ್ರಾರಂಭವಾಗಿದೆ. ಧಾರವಾಡದ ಲೇಖಕರ ಬರಹಗಳನ್ನು ಸಂಗ್ರಹಿಸುತ್ತಿದ್ದಾರೆ. ಕಚೇರಿ ತಲುಪಿದ ಮಾಹಿತಿಯನ್ನು ಪರಿಶೀಲಿಸಿ, ತಿದ್ದಿ, ಸಂಪಾದಿಸಿ ಅಪ್‌ಲೋಡ್‌ ಮಾಡುವ ಕೆಲಸ ಅವರಿಗೆ. ಇದಕ್ಕೆ ಲಂಡನ್‌ನಿಂದ ಪ್ರಮೋದ್‌ ಅವರ ಒಪ್ಪಿಗೆ ದೊರೆತ ನಂತರ ಜನತೆಗೆ ಇದು ಲಭ್ಯವಾಗುತ್ತದೆ. ಡಿಜಿಟಲೀಕರಣ ಕಾರ್ಯ ಭರದಿಂದ ಸಾಗಿದೆ. ಜನರು ವಿವಿಧ ಪುಸ್ತಕಗಳ ಬೇಡಿಕೆ ಇಡುತ್ತಿದ್ದು ಲೇಖಕರ ಜತೆ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡುತ್ತಾರೆ ಸಹ ವ್ಯವಸ್ಥಾಪಕ ಅಶೋಕ್‌ ಜೋಶಿ. ಇದರ ಮೊದಲ ಹಂತದ ಕಾರ್ಯಕ್ಕೆ ಧಾರವಾಡ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಇದನ್ನು ಮುನ್ನಡೆಸಲು ಧಾರವಾಡದ ವಿವಿಡ್ಲಿಪಿ ತಂಡ ಕಾರ್ಯನಿರತವಾಗಿದೆ, ಇವರ ಕೊಡುಗೆ ಕಡಿಮೆ ಸಮಯದಲ್ಲಿ ಉತ್ತಮ ಕಾರ್ಯ ಮಾಡಲು ಸಹಾಯವಾಗಿದೆ. ಇದರ ಮುಂಚೂಣಿಯಲ್ಲಿ ಮನೋಹರ ಗ್ರಂಥಮಾಲಾದ ‘ಸಮೀರ ಜೋಷಿ’ ಮತ್ತು ಸಂಗೀತ ನಾಟಕ ಅಕಾಡೆಮಿಯಲ್ಲಿ ಕಾರ್ಯ ಮಾಡಿದ ‘ಜಯಪ್ರಕಾಶ್ ಬೆಂಗೇರಿ’ ಯವರು ಇದ್ದಾರೆ. ಇದಕ್ಕೆ ಬೆಂಬಲ ನೀಡುತ್ತಿರುವವರು – ಅಕ್ಷರ ಕೆ. ವಿ, ವಿವೇಕ್ ಶಾನಭಾಗ್, ಅರಳುಮಲ್ಲಿಗೆ ಪಾರ್ಥಸಾರಥಿ, ಶ್ರೀನಿವಾಸ್, ಅನಂತ್ ಚಿನಿವಾರ, ಕೃಷ್ಣ ಕೆ ಕುಲಕರ್ಣಿ ಮತ್ತು ಅನಂತ್ ಕೊಪ್ಪರ. ಅಲ್ಲದೆ ಇನ್ನೂ ತುಂಬಾ ಜನ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ – ಇವರಲ್ಲಿ ಕೆಲವರು ವಿವಿಡ್ಲಿಪಿ ಅಂಕಣದ (ಬ್ಲಾಗ್) ಲೇಖಕರು. ಈ ಬೃಹತ್ ಕಾರ್ಯಕ್ಕೆ ಇನ್ನೂ ಜನರು ಸೇರಿಕೊಳ್ಳಬೇಕು ಎನ್ನುವ ಸತ್ಯಪ್ರಮೋದ್‌, ಯಾರಾದರೂ ಇಚ್ಛೆ ಉಳ್ಳವರು ಇದ್ದರೆ ಸೇರಬಹುದು ಎಂದು ಆಹ್ವಾನ ನೀಡುತ್ತಾರೆ. ಉಪಶೀರ್ಷಿಕೆಗಳ ಮೂಲಕ ಕನ್ನಡ ಬಾರದ ರಂಗಾಸಕ್ತರಿಗೂ ನಮ್ಮ ರಂಗಭೂಮಿಯನ್ನು ತಲುಪಿಸುವ ಉದ್ದೇಶವಿದೆ. ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ರಂಗಭೂಮಿಯ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಸಬ್ ಟೈಟಲ್ ಸಹಿತ ವಿವಿಧ ರಂಗ ನಾಟಕಗಳನ್ನು ತೋರಿಸುವ ಯೋಜನೆ ಅದು. 4-5 ತಿಂಗಳಲ್ಲಿ ಇದೆಲ್ಲವೂ ಪ್ರಾರಂಭವಾಗುವುದು ಎನ್ನುತ್ತಾರೆ ಸತ್ಯಪ್ರಮೋದ್‌. ಎಚ್‌.ಸಿ. ಶ್ರೀನಿವಾಸ್‌ ಅಲ್ಲದೆ ಅಕ್ಷರ ಕೆ ವಿ, ವಿವೇಕ್ ಶಾನಭಾಗ್, ಜಯಪ್ರಕಾಶ್ ಬೆಂಗೇರಿ, ಅರಳುಮಲ್ಲಿಗೆ ಪಾರ್ಥಸಾರಥಿ, ಅನಂತ್ ಚಿನಿವಾರ ಮುಂತಾದ ಸಲಹೆಗಾರರು ಈ ಯೋಜನೆಯ ಬೆನ್ನೆಲುಬು. ಒಟ್ಟಿನಲ್ಲಿ ತಾಳೆಗರಿಯಿಂದ ಹಿಡಿದು ಇತ್ತೀಚಿನ ಕೃತಿಗಳವರೆಗೂ ಇಲ್ಲಿ ತಾವು ಇದೆ. ಹೊಸ ಪ್ರಯೋಗಗಳ ತಯಾರಿ ನಡೆದಿದೆ. ಮಾಹಿತಿಗೆ [email protected]; www.vividlipi.com ಸಂಪರ್ಕಿಸಿ.

Leave a Reply