ಕನ್ನಡ ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದು ಹೇಗೆ?

Kannada ebooks ( ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದರ ಬಗ್ಗೆ ಮಾಹಿತಿ):

ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ – ಇ ಪುಸ್ತಕಗಳ ಖರೀದಿ/ ಜನಪ್ರಿಯತೆ/ ಲಭ್ಯತೆ ಹೆಚ್ಚಾಗಿದೆ. ಮುಂಚಿನಿಂದ ಹಾರ್ಡ್ ಕಾಪಿ ಪುಸ್ತಕಗಳು, ಪತ್ರಿಕೆಗಳು ನಮಗೆ ಪರಿಚಿತವಾದರೂ, ಪ್ರಿಯವಾದರೂ ಅವನ್ನು ಕೊಳ್ಳಲು ಅಂಗಡಿಗಳಿಗೆ ಹೋಗಿ ವಿಚಾರಿಸಿ ಕೊಳ್ಳಬೇಕು. ಈಗಿನ ಕಾಲದಲ್ಲಿ ಈ ಚಟುವಟಿಕೆಗೆ ಪ್ರತ್ಯೇಕ ಸಮಯ/ ಅವಕಾಶದ ಅಭಾವ ಇತ್ಯಾದಿ ಹಲವು ನಿರ್ಬಂಧಗಳು ನಮಗೆ ಕಾಡುತ್ತವೆ. ಅದರಲ್ಲೂ ಎಲ್ಲ ಲೇಖಕರ /ಎಲ್ಲ ವಿಷಯದ ಕನ್ನಡ ಪುಸ್ತಕಗಳ ಲಭ್ಯತೆ ಎಲ್ಲಾ ಅಂಗಡಿಗಳಲ್ಲೂ ಇಲ್ಲ ಅಥವಾ ಎಲ್ಲಾ ನಗರ/ ಊರು/ ಹಳ್ಳಿಗಳಲ್ಲೂ ಇಲ್ಲ.
ಇನ್ನು ನಮ್ಮ ಪುಸ್ತಕ ಗಳನ್ನು ಕಳೆದುಹೋಗದಂತೆ/ ಹಾಳಾಗದಂತೆ/ ಜೋಪಾನವಾಗಿ ಮರೆಯದೇ ತೆಗೆದುಕೊಂಡು ಹೋಗುವುದು/ ಕಾಪಾಡಿಕೊಳ್ಳುವುದು ಒಂದು ಪ್ರತ್ಯೇಕ ಸಮಸ್ಯೆ. (ನಮ್ಮಿಂದ ಎರವಲು ಪಡೆದವರು ವಾಪಸ್ ಕೊಡದಿದ್ದರೆ ಇತ್ಯಾದಿ!)..
ಒಮ್ಮೆ ಕೊಂಡ ಪುಸ್ತಕ ಸದಾ ನಮ್ಮ ಜೇಬಿನಲ್ಲಿ ಹಾಳಾಗದ ಸ್ಥಿತಿಯಲ್ಲಿ ಇರಬಹುದಾದರೆ..?
ಹೀಗಾಗಿ ಇಂತಾ ಸೌಕರ್ಯಕ್ಕಾಗಿ ಈಗಿನ ಕಂಪ್ಯೂಟರ್/ ಟ್ಯಾಬ್ಲೆಟ್/ ಮೊಬೈಲ್ ಪರಿಸರದಲ್ಲಿ ಪುಸ್ತಕಗಳನ್ನು ಪಡೆದು ಸೇವ್ ಮಾಡಿಕೊಂಡರೆ ಮುಗಿಯಿತು, ಎಲ್ಲಿಗೆ ಹೋದರೂ ಪುಸ್ತಕ ನಮ್ಮ ಜತೆಯೆ ಇದ್ದಂತಾಯಿತು! ….ಕಳೆಯುವ/ಕಾಲ ಕ್ರಮೇಣ ಪುಟಗಳು ಮುದುರಿ ವಯಸ್ಸಾಗಿ ಹಾಳಾಗುವ ಭಯವಿಲ್ಲ..
ಆದರೆ ಇದಕ್ಕೆ ಹಿನ್ನೆಲೆಯಾಗಿ ಮೊದಮೊದಲು ಕನ್ನಡ ಅಕ್ಷರಗಳು ಮೂಡುವ ಬಗ್ಗೆ ಸಾಕಷ್ಟು ಗೊಂದಲವಿತ್ತು. ಇತ್ತೀಚಿನ ದಿನಗಳಲ್ಲಿ ಸರಿಸುಮಾರು ಎಲ್ಲಾ ಆ್ಯಂಡ್ರಾಯ್ಡ್ ಮೊಬೈಲ್/ ವಿಂಡೋಸ್ ಮೊಬೈಲ್/ ಪಿ ಸಿ/ ಲ್ಯಾಪ್ ಟಾಪ್ ಸಾಧನಗಳಲ್ಲಿಯೂ ಯಾವ ತೊಂದರೆಯಿಲ್ಲದೇ ಕನ್ನಡ ಓದಬಹುದಾಗಿದೆ, ಬರೆಯಬಹುದಾಗಿದೆ, ಪ್ರಕಟಿಸಬಹುದಾಗಿದೆ.

೧. ಕನ್ನಡ ಬರೆಯುವ ಬಗ್ಗೆ:

ಮೊತ್ತ ಮೊದಲು ನಾವು ಕನ್ನಡ ಯೂನಿಕೋಡ್ ಕನ್ನಡ ಲಿಪಿಯ ಹಿನ್ನೆಲೆ ಬಗ್ಗೆ ಸ್ವಲ್ಪ ತಿಳಿದಿರಬೇಕು.:
ಇಂಗ್ಲೀಷ್ ಕೀ ಬೋರ್ಡ್/ ಕೀಲಿಮಣೆ ಉಪಯೋಗಿಸಿ ಕನ್ನಡವನ್ನು ಟೈಪಿಸುವ ತಂತ್ರವಿದು. ನೀವು ಹೀಗೇ ಆಂಗ್ಲ ಅಕ್ಷರಗಳಲ್ಲೇ ಟೈಪ್ ಮಾಡುತ್ತಾ ಹೋದಾಗ ಅವು ಮಾನಿಟರ್ ನಲ್ಲಿ ಕನ್ನಡದಲ್ಲಿ ಮೂಡುತ್ತಾ ಹೋಗಲು ಕೆಲವು ಉಪ ತಂತ್ರಾಂಶ / ಸಾಫ಼್ಟ್ ವೇರ್ ಬೇಕಾಗುತ್ತದೆ. Google input tools/ pada/ baraha IME, baraha 9 (free) ಹೀಗೆ ಹಲವು ಸಾಧನಗಳು ವಿಂಡೋಸ್ ಗೂ, justkannada ಮುಂತಾದ ಆ್ಯಪ್ ಗಳು andriod ಮೊಬೈಲ್ ಫೊನುಗಳಿಗೂ ಲಭ್ಯವಿದೆ. ಮುಂಚೆ ASCII ಎಂಬ ಪದ್ಧತಿಯ ಪ್ರಕಾರ ನುಡಿ/ ಬರಹ – ಮುಂತಾದ ಮಾರ್ಗಗಳಿಂದ ಮಾತ್ರವೇ ಟೈಪಿಸಬೆಕಾಗಿತ್ತು. ಅವು ಈಗ ಕೇವಲ ಪುಸ್ತಕ ಪ್ರಿಂಟರ್ಸ್ ಗೆ ಮಾತ್ರವೇ ಬೇಕಾಗುತ್ತದೆ. ಮಿಕ್ಕವರೆಲ್ಲಾ ಸಾಮಾನ್ಯವಾಗಿ ಫ಼ೇಸ್ ಬುಕ್, ವಾಟ್ಸ್ ಆಪ್ ಮುಂತಾದ ಸಾಮಾಜಿಕ ತಾಣಗಳಲ್ಲಿ UNICODE ಮುಖಾಂತರವೇ ಬರೆಯುತ್ತೇವೆ..ಇದು ಹೆಚ್ಚು ಜನಪ್ರಿಯ ಮತ್ತು ಪರಿಚಿತವೂ ಹೌದು..ಅಕಸ್ಮಾತ್ ನೀವು ನುಡಿ/ ಬರಹ ದಲ್ಲಿ ಬರೆದರೂ ಅವನ್ನು ಸುಲಭವಾಗಿ ಯೂನಿಕೋಡಿಗೆ ಕನ್ವರ್ಟ್ ಮಾಡಿಕೊಳ್ಳುವ ಕೆಲವು ಆನ್ಲೈನ್ ಸಾಧನಗಳಿವೆ= baraha convert ಮತ್ತು http://aravindavk.in/ascii2unicode/ ಇತ್ಯಾದಿ. (ನನಗೆ ‘ನುಡಿ’ ಬರೆಯಲು ಬರುವುದಿಲ್ಲ, ಕಲಿಯಬೇಕಾಗಲೇ ಇಲ್ಲ, ಯೂನಿಕೋಡ್ ನಲ್ಲಿಯೇ ಹತ್ತು ಹಲವಾರು ಕತೆ ಕಾದಂಬರಿ ಹಾಗೆಯೇ ಪ್ರಕಟಿಸಿದ್ದೇನೆ, ಕೇಳಿದವರಿಗೆ ‘ನುಡಿ’ ಗೆ ಬದಲಿಸಿ ಕೊಟ್ಟಿದ್ದೇನೆ.)
ಆ್ಯಪಲ್ ( ಐ ಫೋನ್, ಐ ಪ್ಯಾಡ್)/ ಲಿನಕ್ಸ್/ ಮ್ಯಾಕ್ ಪದ್ಧತಿಯಲ್ಲಿ ಕನ್ನಡ ಸರಿಯಾಗಿ ಮೂಡಿ ಬರುತ್ತಿಲ್ಲ, ಸರಿಯಾಗಿ ಬರೆದರೂ ತಪ್ಪಾಗಿ ಪ್ರದರ್ಶಿಸುತ್ತವೆ ಎಂಬ ಕೆಲವು ದೂರಿದೆ..ಅದು ಸದ್ಯಕ್ಕೆ ಚರ್ಚೆಗೆ ಬೇಡ. ಯಾಕೆಂದರೆ ಅದು ಇಲ್ಲಿ ಅಷ್ಟು ಜನಪ್ರಿಯವೂ ಅಲ್ಲ.
ಹೀಗೆ ಕನ್ನಡದಲ್ಲಿ ವಿಂಡೋಸ್/ ಆಂಡ್ರಾಯಿಡ್ ನಲ್ಲಿ ಬರೆದ ಪಠ್ಯವನ್ನು RTF/ WORD Doc/ DOCX ಫ಼ೈಲ್ ಆಗಿ ಸೇವ್ ಮಾಡಿಕೊಂಡರೆ ಪ್ರಕಟಿಸಲು ಸುಲಭ. ನೀವು ಕನ್ನಡವನ್ನು ಕೈಯಲ್ಲಿ ಹಾಳೆಯ ಮೇಲೆ ಬರೆದರೆ ಮತ್ತೆ ಸ್ಕ್ಯಾನ್ ಮಾಡಿ PDF ಮಾಡಿ ತೊಂದರೆ ಪಡಬೇಕಾದೀತು. ಅವು ನೋಡಲೂ ಚೆನ್ನಾಗಿ ಕಾಣುವುದಿಲ್ಲ, ಫೈಲ್ ಗಾತ್ರವೂ ಹೆಚ್ಚಿರುತ್ತದೆ.

೨. ಇನ್ನು ಕನ್ನಡವನ್ನು ಪ್ರಕಟಿಸುವ ಬಗ್ಗೆ:

ಆನ್ಲೈನಿನಲ್ಲಿ ಕನ್ನಡ ಇ ಪುಸ್ತಕ ಪ್ರಕಾಶನ ಬಹಳ ಸುಲಭ ಮತ್ತು USER FRIENDLY ಆಗಿದೆ.
ಇವುಗಳಲ್ಲಿ ನನಗೆ ತಿಳಿದಂತೆ Smashwords.com, kobo.com, lulu.com ಅತ್ಯಂತ ಸುಲಭ ಮಾರ್ಗವನ್ನು ಆನ್ಲೈನ್ನಲ್ಲಿ ಎಲ್ಲರಿಗೂ ಲಾಗ್ ಇನ್ ಮಾಡಿದ ಕೂಡಲೇ ಉಚಿತವಾಗಿ ನೀಡುತ್ತಿವೆ. ಯಾವುದೇ ಫೀಸ್ ಇಲ್ಲ. ಇಲ್ಲಿ ಓದುಗರು ಪುಸ್ತಕವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್/ ಪೌಂಡ್ ಇತ್ಯಾದಿ ಕರೆನ್ಸಿಯಲ್ಲಿ ಬೆಲೆ ನಮೂದಿಸಿರುವುದರಿಂದ ಸುಲಭವಾಗಿ ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಬಹುದು. (ನಾವು ನಮ್ಮ ಭಾರತೀಯ ಕಾರ್ಡ್/ ಅಕೌಂಟ್ ಬಳಸಿದರೂ ತೊಂದರೆಯಿಲ್ಲ. ಕರೆನ್ಸಿ ಅದಾಗಿಯೇ ಮಾರ್ಪಾಡಾಗಿ ರೂಪಾಯಿಯಲ್ಲಿ ಸಿಗುತ್ತದೆ)
ಮಿಕ್ಕ ಕೆಲವು ಭಾರತೀಯ ಸೈಟುಗಳು ಲೇಖಕರ ಜತೆ ಒಪ್ಪಂದ-agreement ಮಾಡಿಕೊಳ್ಳಬಯಸುತ್ತವೆ. ಉದಾ. dailuhunt.in, pustaka.co.in, vividlipi.com ಮುಂತಾದ ಭಾರತೀಯ ವೆಬ್ ತಾಣಗಳು. ಹಾಗೆ ಲೇಖಕರು ಒಪ್ಪಂದ ಮಾಡಿಕೊಂಡರೂ ತೊಂದರೆಯಿಲ್ಲ. ಆಯಾ ವೆಬ್ ಸೈಟಿನಲ್ಲಿ ಸಂಪರ್ಕ ಇ ಮೈಲಿಗೆ ಒಮ್ಮೆ ನಾವು ಬರೆದರೆ ಸಾಕು. ಮಿಕ್ಕ ಕೆಲಸ ಸುಲಭ. ಇಲ್ಲಿ ಓದುಗರೂ ನಿಮ್ಮ ಪುಸ್ತಕಗಳನ್ನು ಭಾರತೀಯ ರೂ. ಗಳಲ್ಲೆ ಕೊಳ್ಳಬಹುದು.
ಮುಕ್ಕಾಲುಪಾಲು ಆನ್ ಲೈನ್ ಪುಸ್ತಕಗಳು ಈಗ EPUB ಎಂಬ ಫೈಲ್ ಬಗೆಯಲ್ಲಿ ಪ್ರಕಟವಾಗುತ್ತದೆ. ಅದು ಕನ್ನಡ ಲಿಪಿಯನ್ನು ಯಾವ ಒತ್ತಕ್ಷರದ ಸಮಸ್ಯೆಯೂ ಇಲ್ಲದಂತೆ ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಉದಾಹರಣೆಗೆ ಕೆಳಗೆ ಒಂದು ಚಿತ್ರ ನೀಡಿದ್ದೇನೆ. ನಮ್ಮ ಮೂಲ word doc ಅನ್ನು EPUB ಆಗಿ ಬದಲಿಸಲು ಆಯಾ ಪುಸ್ತಕ ವೆಬ್ ಸೈಟುಗಳೇ ಸಹಾಯ ಮಾಡುತ್ತವೆ.
ನಾವು ಅವರ ( smashwords. lulu, kobo websites) “ಪಬ್ಲಿಶ್ ಯುವರ್ ಬುಕ್” ಎಂಬ ಕೊಂಡಿಗೆ ಹೊದರೆ ಸಾಕು. ಅವರೇ ಹೆಸರು, ಶೀರ್ಷಿಕೆ , ಅದರ ಕವರ್, ಮತ್ತು ಫೈಲನ್ನು ಆನ್ಲೈನ್ ಅರ್ಜಿ ಮೂಲಕ ಕೇಳುತ್ತಾರೆ. ನಮ್ಮಿಚೆಯಂತಾ ಕವರ್/ ಮುಖಪುಟವನ್ನು ಅವರ ಬಳಿಯೇ ಆರಿಸಿಕೊಳ್ಳಬಹುದು, ಇಲ್ಲವೆ ನೀವೆ ನಿಮ್ಮ ಚಿತ್ರವನ್ನು ಅಪ್ ಲೋಡ್ ಮಾಡಬಹುದು.
ಅವರು ನಿಮ್ಮ ಕತೆ/ ಲೇಖನದ ವರ್ಡ್ ಡಾಕ್ಯುಮೆಂಟಿನಲ್ಲಿ ಕೆಲವು ನಿಯಮಗಳನ್ನು ಪಾಲಿಸಲು ಕೇಳುತ್ತಾರೆ:

೧. ಅದರಲ್ಲಿ TABLE OF CONTENTS ಇರಲೇಬೇಕು. ಇದನ್ನು ನಾವು WORD ನಲ್ಲಿ ಮೆನು ನಲ್ಲಿ REFERENCES> TABLE OF CONTENTS ಗೆ ಹೋಗಿ ನಿಮ್ಮ ಪುಸ್ತಕದ ಅಧ್ಯಾಯಗಳ ನಂಬರ್/ ಹೆಸರು ಸೂಚಿಸಬೇಕು ( ಪರಿವಿಡಿ ಎನ್ನುತ್ತೇವಲ್ಲ ಅದು). ಇವೆಲ್ಲಾ ಬಹಳ ಸುಲಭವೂ ಹೌದು. ಮಾಡಿ ನೋಡಿ. ಆಗ ನಿಮ್ಮ ಓದುಗರು ಅಧ್ಯಾಯದಿಂದ ಅಧ್ಯಾಯಕ್ಕೆ ಹಾರಲು ಸಾಧ್ಯ!
೨. ISBN: = International Standard Book Number.-ಎಂಬ ಮಾರಾಟ ನಿಯಮದ ಅಂಕೆಯನ್ನು ಉಚಿತವಾಗಿ ಪಡೆದು ನಿಮ್ಮ ಪುಸ್ತಕಕ್ಕೆ ಸೂಚಿಸಲೇಬೇಕು ಕಡ್ದಾಯವಾಗಿ. ಇದು ಕೂಡಾ ಅವರೇ ನಿಮಗೆ ಉಚಿತ ನಂಬರ್ ಬೇಕು ಎಂದರೆ ಅರ್ಜಿಯಲ್ಲೇ ಕೊಡುತ್ತಾರೆ. ಯಾವ ತೊಂದರೆಯೂ ಇಲ್ಲ.
೩.ಪುಸ್ತಕದ ಎರಡನೇ/ ಮೂರನೇ ಪುಟದಲ್ಲಿ ನಿಮ್ಮ ಕಾಪಿ ರೈಟ್ ಮತ್ತು Disclaimer ಇರಲೇಬೇಕು. ಒಂದು smashwords ಮಾದರಿ ಪುಟವನ್ನು ನಾನೇ ಕೆಳಗೆ ನೀಡಿದ್ದೇನೆ. ಅದರಲ್ಲೆ ನಿಮ್ಮ ಪುಸ್ತಕ/ ಹೆಸರು ಬರೆದು ತಾವು ಎಲ್ಲಾ ಸೈಟುಗಳಲ್ಲೂ ಉಪಯೋಗಿಸಬಹುದು.
೪. ಮುಖಪುಟ/ ಕವರ್ ಚಿತ್ರ:
ನಾನು ಹೇಳಿದ ಮೂರು ವಿದೇಶಿ ವೆಬ್ಸೈಟುಗಳೂ, ಭಾರತೀಯ ಸೈಟುಗಳೂ ಕೆಲವು ನಿಯಮವನ್ನು ಉಪಯೋಗಿಸುತ್ತಾರೆ. ನಿಮ್ಮ ಕವರ್ ಚಿತ್ರ Rectangle ಇದ್ದು ೧೪೦೦ ಪಿಕ್ಸೆಲ್ ಅಗಲ ಮತ್ತು ಅದಕ್ಕಿಂತಾ ಹೆಚ್ಚು ಆಳ ( ೧೮೦೦) ಇರಬೇಕೆನ್ನುತ್ತಾರೆ. ಇದನ್ನು ನೀವೇ MS Paint ಇತ್ಯಾದಿಯಲ್ಲಿ JPEG/PNG ಆಗಿ ತಯಾರಿಸಬಹುದು ಇಲ್ಲವೇ ಅವರ ಲೈಬ್ರರಿಯಲ್ಲಿರುವ ಕವರ್ ಅನ್ನೇ ಬಳಸಬಹುದು. ಆಂಗ್ಲದಲ್ಲಿ ನಿಮ್ಮ ಕತೆಯ ಹೆಸರು ನಿಮ್ಮ ಹೆಸರನ್ನೂ ಕೆಲವರು ಬಯಸುತ್ತಾರೆ. ಕನ್ನಡದಲ್ಲಿದ್ದರೂ ಮತ್ತೆ ಇಂಗ್ಲೀಶಿನಲ್ಲಿ ಬರೆಯಿರಿ.
೫. ಮೂಲ ಕತೆ ಮತ್ತು ಕವರ್ ಅಪ್ ಲೋಡ್ ಮಾಡಿದ ಮೇಲೆ ಪುಸ್ತಕದ ಬೆಲೆ ಪುಟಕ್ಕೆ ಹೋಗಿ ನಿಮಗೆ ಬೇಕಾದ ಬೆಲೆ ಸೂಚಿಸಬಹುದು .ಡಾಲರ್ ನಲ್ಲಿ ( 0.99/1.99/2.99 ಇತ್ಯಾದಿ) ಬೆಲೆ ಬಳಸುವುದು ವಾಡಿಕೆ. ಉಚಿತವಿದ್ದಲ್ಲಿ ೦ – ಸೊನ್ನೆ ಎಂದು ನಮೂದಿಸಬಹುದು. ಭಾರತೀಯ ಸೈಟಿನಲ್ಲಿ ರುಪಾಯಿಯಲ್ಲೇ ಸೂಚಿಸಬಹುದು.
೬. ಚೆಕ್ ಪ್ರಿವ್ಯೂ / ಫ಼ೈನಲ್: ಈ ಸಂಧರ್ಭದಲ್ಲಿ ಅವರು ನಿಮಗೆ ಒಮ್ಮೆ ಅವರೇ ಸಾಫ಼್ಟ್ವೇರಿನಲ್ಲಿ ‘ಚೆಕ್ ಮಾಡಿ ಪ್ರಿವ್ಯು ಮಾಡಿ ಒಪ್ಪಿ’ ಎಂದು ಸೂಚಿಸುತ್ತಾರೆ. ನೀವು ಆಗ ನಿಮ್ಮ ಪುಸ್ತಕವನ್ನು ಡೌನ್ ಲೋಡ್ ಮಾ���ಿ ನಿಮ್ಮ ಪ್ರಕಾರ ಎಲ್ಲಾ ಸರಿಯಿದೆಯೆ ಎಂದು ಚೆಕ್ ಮಾಡಿ ಓಕೇ ಮಾಡಬೇಕು.
೭, ನಂತರ ಅವರು ಫೈನಲ್ ಚೆಕ್ ಮಾಡಲು ಸ್ವೀಕರಿಸುತ್ತಾರೆ.
smashwoirds ತರಹ ಸೈಟಿನಲ್ಲಿ ಬಹಳ ಎಚ್ಚರಿಕೆಯಿಂದ ನಿಮ್ಮ ಪುಸ್ತಕವನ್ನು ಪರೀಕ್ಷಿಸಿ ಅವರ ಅಂತರರಾಷ್ಟ್ರೀಯ ಗುಣಮಟ್ಟ ನಿಯಮದ ಪ್ರಕಾರ ಹೇಳಿದಂತೆ ಮಾಡಿದ್ದೇವೋ ಇಲ್ಲವೊ ಎಂದು ಪರೀಕ್ಷಿಸುತ್ತಾರೆ. ಅವರ ಪ್ರತಿಕ್ರಿಯೆಯಲ್ಲಿ ತಪ್ಪು/ ದೋಷಗಳೇನಾದರು ಇದ್ದರೆ ನೀವು ಒಂದೆರಡು ದಿನದ ನಂತರ ನಿಮ್ಮ ಖಾತೆ ಪುಟಕ್ಕೆ ಹೋಗಿ ಎದುರು ನೋಡಬೇಕು. ಅವನ್ನು ಪಟ್ಟಿ ಮಾಡಿ ಸರಿಪಡಿಸಲು ಸೂಚಿಸುತ್ತಾರೆ. ಮುಕ್ಕಲುವಾಸಿ ಕವರ್ ಚಿತ್ರದ ಉದ್ದಳತೆ, text formatting error, copyright/ disclaimer missing, no english caption on cover ಇತ್ಯಾದಿ ತಪ್ಪುಗಳು ಬರುವುದು ಹೆಚ್ಚು. ನೀವು ನಿಮ್ಮ ಕರಡು ಪ್ರತಿಯನ್ನು ಆ ಪ್ರಕಾರ ತಿದ್ದಿ ಮತ್ತೆ ಅಪ್ ಲೋಡ್ ಮಾಡಿ ಕಾಯಬೇಕು.
೮. ಎಲ್ಲಾ ಸರಿಯಾಗಿದ್ದಲ್ಲಿ ನಿಮ್ಮ ಪುಸ್ತಕ ಓಕೆ, ಪಬ್ಲಿಶ್ ಮಾಡಿದ್ದೇವೆ, ನೋಡಿ ಎಂದು ಅಲ್ಲೇ ತಿಳಿಸುತ್ತಾರೆ, ನಿಮ್ಮ ಇ ಮೈಲಿಗೂ ಖಚಿತಪಡಿಸಿ ಬರೆದು ಕಳಿಸುತ್ತಾರೆ.
ಅಲ್ಲಿಗೆ ನಿಮ್ಮ ಪುಸ್ತಕ ಪ್ರಕಟವಾಗಿ ಅವರ ಆನ್ ಲೈನ್ ಮಳಿಗೆಯಲ್ಲಿ ಸಿಗುತ್ತದೆ. ಅದರ ಲಿಂಕ್ ಕೊಟ್ಟು ನೀವು ನಿಮ್ಮ ಮಿತ್ರರಿಗೆ ಹೇಳಿ ಪ್ರಚಾರ ಮಾಡಬಹುದು. (ಇದುವರೆಗೂ ಅದು ಬೇರೆ ಯಾರಿಗೂ ಕಾಣಿಸುವುದಿಲ್ಲ, ನೀವು ಲೇಖಕ ಮಾತ್ರ ಅದನ್ನು ನೋಡಿರುತ್ತೀರಿ!)
ಒಂದು ಸೈಟಿನಲ್ಲಿ ಪ್ರಕಟ ಮಾಡಿದರೆ ಅವರೇ ವಿಶ್ವಾದ್ಯಂತ ಎಲ್ಲಾ ಜನಪ್ರಿಯ ಆನ್ ಲೈನ್ ಪುಸ್ತಕದಂಗಡಿಗಳಿಗೂ ಹಂಚುತ್ತಾರೆ, ನಿಮ್ಮನ್ನು ಮತ್ತೆ ಕೇಳುವುದಿಲ್ಲ. ಆದರೆ ಕನ್ನಡಕ್ಕೆ amazon, barnes&Noble ನವರ ತಡೆ ಇದೆ. ( ಇನ್ನೂ ಅವರಲ್ಲಿ ಕನ್ನಡ ಭಾಷೆ ಇಲ್ಲ)
೯. PDF ಪುಸ್ತಕಗಳ ಬಗ್ಗೆ:
ಹಲವು ವೆಬ್ ಸೈಟ್ ಗಳು ಕನ್ನಡ PDF ಅನ್ನು ಸರಿಯಾಗಿ ಮೂಲ ವರ್ಡ್ ಫೈಲಿಂದ ಬದಲಿಸುವುದಿಲ್ಲ.. ಕನ್ನಡ ಲಿಪಿಯನ್ನು ತಪ್ಪು ತಪ್ಪಾಗಿ ಕಾಣುವಂತೆ ಮಾಡುತ್ತಾರೆ. ನೀವೇ PDF ಮಾಡಿಕೊಟ್ಟರೆ ಕೆಲವರು ಮಾತ್ರ ಒಪ್ಪುತ್ತಾರೆ, ಹಲವರು ಒಪ್ಪಲ್ಲ. ಅದನ್ನು ಅವರವರ ಸೈಟುಗಳಲ್ಲಿ ಬರೆದಿರುತ್ತಾರೆ. ಹಾಗಾಗಿ ನಿಮ್ಮ ಇ ಪುಸ್ತಕವನ್ನು EPUB ಆಗಿ ಖರೀದಿ ಮಾಡಿ Calibre, Chrome Readium. Firefox EPUB reader ಮೂಲಕ ಓದಿಕೊಳ್ಳಬಹುದು. ಇಲ್ಲವೇ ಅದನ್ನು ನೀವೇ CALIBRE > File convert ಗೆ ಹೋಗಿ ಉಚಿತವಾಗಿ PDF ಗೆ ಬದಲಿಸಿಕೊಳ್ಳಬಹುದು. ಇನ್ನು ಕೆಲವು ವೆಬ್ ಸೈಟುಗಳಲ್ಲಿ text./ html ಫೈಲ್ ಕೂಡಾ ಕೊಡುತ್ತಾರೆ. ( ಕ್ಯಾಲಿಬರ್ ಬೇಕಿದ್ದರೆ: https://calibre-ebook.com/download ).ಅದನ್ನು ನೀವೇ PDF ಆಗಿ ಮಾಡಿಕೊಳ್ಳಬಹುದು. ಆದರೆ smashwords. kobo -ಕಡೆಯಲ್ಲಿ “PDF ಬೇಕು” ಎಂಬ ಆಯ್ಕೆಯನ್ನು ತೆಗೆದು ಹಾಕಿ. ಇಲ್ಲದಿದ್ದರೆ ಹಾಗೇ ತಪ್ಪು PDF ಕೊಂಡವರು ನಿಮ್ಮನು ಭಾಧಿಸುತ್ತಾರೆ!

INSTAMOJO.com ಎಂಬಸೈಟಿನಲ್ಲಿ ನೀವು ಈಗ PDF Kannada ಪುಸ್ತಕಗಳನ್ನು ಪ್ರಕಟಿಸಲು ಬಹುದು, ಕೊಳ್ಳಲೂ ಬಹುದು. ಆದರೆ, PDF ಪ್ರತಿಗಲನ್ನು ಯಾರು ಬೇಕಾದಋ ನಕಲು ಮಾಡಿ. ಹಂಚಿಕೊಂಡು ಪೈರೆಸಿ ಮಾದಬಹುದು!!
ಭಾರತೀಯ ಸೈಟ್(dailyhunt, pustaka) ಗಳಲ್ಲಿಯು PDF ಆಯ್ಕೆ ಇದ್ದಂತೆ ಕಾಣದು. ಇದ್ದರೂ ಅದನ್ನು ನೀವು ಚೆಕ್ ಮಾಡಿ ಓದಲು ಸರಿಯಿದ್ದರೆ ಮಾತ್ರ ಮಾರಾಟಕ್ಕಿಡಿ.
ಆದ್ದರಿಂದ EPUB is the BEST for Kannada.
ಎಚ್ಚರಿಕೆ:
೧.ಅಮೆಜ಼ಾನ್ ಕಿಂಡಲ್ ನವರು ಕನ್ನಡ MOBI/ azw3 ಫೈಲ್ಸ್ ಅನ್ನು ಸಾಮಾನ್ಯವಾಗಿ ಹಾಳು ಮಾಡುತ್ತಾರೆ. ಅವರು ಅರ್ಜಿಯಲ್ಲಿ ಮೊದಲಿಗೆ ಕನ್ನಡ accept ಮಾಡುವುದಿಲ್ಲ, ನೀವು ಬಲವಂತವಾಗಿ ಕನ್ನಡ ಪುಸ್ತಕ ಅಲ್ಲಿ ಹಾಕಿದರೆ, ಲಿಪಿ ಕೆಟ್ಟು ಹೋದಾಗ ನೀವು ಓದುಗರಿಂದ ಬೈಸಿಕೊಳ್ಳಬೇಕಾಗುತ್ತದೆ!..ಹಾಗಾಗಿ ಈಗ ನೀವು ಸದ್ಯಕ್ಕೆ ಅಮೆಜ಼ಾನ್ “ಕಿಂಡಲ್” ಪುಸ್ತಕವನ್ನು ಕನ್ನಡದಲ್ಲಿ ಮಾಡಬೇಡಿ ( Hindi, Tamil, Marathi, Telugu, Malayalam, Gujarati, Bengali ಒಪ್ಪುತ್ತಾರೆ, ಸರಿಯಾಗಿ ಮಾಡಿಕೊಡುತ್ತಾರಂತೆ!> ಮಿತ್ರರೊಬ್ಬರು ಹೇಳಿದ್ದು). ಅಮೆಜ಼ಾನ್ ನವರೇ ಕನ್ನಡ ಇದೆಯೆಂದು ಹೇಳಲಿ, ಆಗ ನೋಡೋಣ.
೨. ಆಪಲ್ ಐಫೋನ್. ಐ ಪ್ಯಾಡ್/ ಮ್ಯಾಕ್ ಲ್ಯಾಪ್ಟಾಪ್ ನಲ್ಲಿ ಕನ್ನಡ EPUB ಕೂಡಾ ಸರಿಯಾಗಿ ಬರುತ್ತಿಲ್ಲ. ಕನ್ನಡದ PDF ಮಾತ್ರ ಸಿಕ್ಕರೆ ಓದಬಹುದು ಎಂದು ಹಲವು ಮಿತ್ರರು ಹೇಳಿದ್ದಾರೆ, ನನಗೆ ತಿಳಿಯದು. Blackberry mobile ಬಗ್ಗೆಯೂ ನನಗೆ ಮಾಹಿತಿಯಿಲ್ಲ. ಇದ್ದವರು ಉತ್ತರಿಸಬಹುದು.
ಇದಕ್ಕಿಂತಾ ಹೆಚ್ಚು ಮಾಹಿತಿ ಅಲ್ಲೇ ವೆಬ್ ತಾಣಗಳಲ್ಲಿ ಸಿಗುತ್ತದೆ, ನಿಧಾನವಾಗಿ, ತಾಳ್ಮೆಯಿಂದ ಓದಿ ಮತ್ತೆ ಮತ್ತೆ ಪ್ರಯತ್ನಿಸಿದರೆ ಕನ್ನಡ – ಇ- ಪುಸ್ತಕ ಪ್ರಕಾಶನ ಅಂತಾ ಕಷ್ಟವೇನಿಲ್ಲ ( ಪ್ರಕಾಶಕರನ್ನು ಹಿಡಿದು ಕನ್ನಡ ಪುಸ್ತಕ ಒಂದಾದರೂ ಪ್ರಿಂಟ್ ಮಾಡಲು ನಾನು ಒಂದು ವರ್ಷದಿಂದ ಪಡುತ್ತಿರುವ ಬವಣೆಗೆ ಹೋಲಿಸಿದರೆ ಇದು ಸುಲಭವೇ!!!)

see epub published

disclaimer pic

Leave a Reply