ಮೋಸ ಹೋಗದಿರಿ ಜೋಕೆ !

ಮೋಸ ಹೋಗದಿರಿ! ಜೋಕೆ
ಹೊಂಚು ಹಾಕಿ ಸಂಚು ಮಾಡಿ ವಂಚಿಸುವವರು ಇದ್ದಾರೆ

ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ “ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್” ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ಅಬ್ಬಾ! ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವು, ಇದು ನಿಜವೇ ಎಂದು ಕಂಪ್ಯೂಟರ್ ಪರದೆ ನೋಡಿದೆ! ಒಂದೊಂದು ಸಾರಿ ಬಂದರೂ ಬಂದಿತೆ ಎಂಬ ಆಸೆ ! ಕೆಲಸ ಮಾಡಿದ ಅಥವಾ ದುಡಿದ ದುಡ್ಡೆ ಉಳಿಯಲ್ಲ, ಇನ್ನು ಇಂಥಹ ದುಡ್ಡು ನಮ್ಮ ಕೈ ಹತ್ತುತ್ತಾ, ಅಥವಾ ಅಂಥಹ ಮೇಲ್ ನಿಂದ ಮೋಸವೇನಾದರೂ ಆಗುವ ಸಂಭವಗಳಿವೆಯಾ! ಪರೀಕ್ಷಿಸಿ ನೋಡೋಣ ಅಂತ ಅವರಿಗೆ ಮೇಲ್ ಕಳಿಸಿದೆ.
ನಿಮ್ಮ ಕಡೆಯಿಂದ ನನಗೆ ಮೇಲ್ ಬಂದಿದೆ, ನನ್ನ ಹಣ ನಾ ಹೇಗೆ ಪಡೆಯಲಿ, ಬೇಗ ನನ್ನ ಅಕೌಂಟ್ ಗೆ ಜಮಾ ಮಾಡಿ ಬಿಡಿ ಅಂದೆ. ತಕ್ಷಣ ಅವರ ಮೇಲ್ ಕೂಡ ಬಂದಿತು. ನಿಮ್ಮ ಹಣವನ್ನು ಕೋರಿಯರ್ ಮೂಲಕ ಕಳಿಸುತ್ತೇವೆ, ನಿಮ್ಮ ಅಡ್ರೆಸ್ಸು ಕೊಡಿ ಅಂತ ಬರೆದಿದ್ದರು.

ಆಗ ನಾನು ಮೊದಲು ನಿಮ್ಮ ರೂಲ್ಸ್ ಗಳ ಬಗ್ಗೆ ತಿಳಿಸಿ ಎಂದು ಉತ್ತರಿಸಿದೆ. ಆಗ ಬಂತು ನೋಡಿ ಮೇಲ್ ನಾನು ಕೇವಲ ೪೨ಸಾವಿರ ರೂ ಗಳನ್ನು ತುಂಬಿದರೆ ಆ ಕೋರಿಯರ್ ಪಡೆದುಕೊಳ್ಳ ಬಹುದಂತೆ, ಅತಿ ಬೇಗ ಬೇಕೆಂದರೆ ೫೩ ಸಾವಿರ ತುಂಬಿದರೆ ಒಂದು ವಾರದಲ್ಲಿ ಕಳಿಸುತ್ತಾರಂತೆ ಅಂತ ಇತ್ತು. ಆಗ ನಾನು ಇಲ್ಲ ನನ್ನ ಪೇಪಾಲ್ ಅಕೌಂಟ್ ಗೆ ಜಮಾ ಮಾಡಿ ಎಂದು ಮೇಲ್ ಕಳುಹಿಸಿದೆ.

ಮತ್ತೆ ಅವರು ಇಲ್ಲ ನಮ್ಮ ರೂಲ್ಸ್ ಪ್ರಕಾರ ಕೋರಿಯರ್ ಮೂಲಕವೆ ಪಡೆದುಕೊಳ್ಳಬೇಕು ಅಂದರು. ನನ್ನ ಹಣ ನಾನು ಹೇಗೆ ಬೇಕೊ ಹಾಗೆ ಪಡೆದುಕೊಳ್ಳೊ ಅವಕಾಶವಿಲ್ಲವೇ ಎಂದೆ. ಸರಿಯಾಗಿ ವಿಚಾರಿಸಿದಾಗ, ಆ ಮೇಲ್ ಅಡ್ರೆಸ್ಸ್ ನಲ್ಲಿರುವ ಕಂಪನಿಯೇ ಇಲ್ಲ, ಮೈಕ್ರೊಸಾಫ್ಟ್ ನಂತಹ ಕಂಪನಿಯ ಹೆಸರನ್ನು ಬಳಸಿಕೊಂಡು ವಂಚಿಸುವ ಜಾಲವೆಂದು ತಿಳಿಯಿತು. ಈಗ ನಾನು ಗ್ರಾಹಕರ ವೇದಿಕೆಗೆ ಹೋಗುತ್ತೇನೆ ಎಂದು ಹಾಗೇ ಒಂದು ಮೇಲ್ ಹಾಕಿದ್ದೇನೆ, ಹಲವು ದಿನಗಳಾದರೂ ಉತ್ತರ ಬಂದಿಲ್ಲ.
ಆದರೂ…. ಕೆಲವು ಕ್ಷಣವಾದರೂ ನನ್ನನ್ನು ಮಿಲಿಯನಿಯರ್ ಮಾಡಿದ ಆ ಪುಣ್ಯಾತ್ಮರಿಗೆ ಧನ್ಯವಾದಗಳು. ಕನಸನ್ನು ಮಾರುವವರಲ್ಲಿ ಇವರೊಬ್ಬರು ಎಂದರೆ ಅದನ್ನು ನಂಬಿ ಹಣ ಕಳೆದುಕೊಂಡವರು ನನ್ನನ್ನು ಬೈತಾರೆ, ಆದರೆ ಆ ಮೇಲ್ ಗಳನ್ನು ನಾನು ಡಿಲೀಟ್ ಮಾಡಿಲ್ಲ, ಆಗಾಗ ನೋಡಿ ಸವಿ ಸವಿ ಕನಸು ಆಗಲಿಲ್ಲ ನನಸು ಎಂದು ಹಾಡುತ್ತಿರುತ್ತೇನೆ.

ಆದರೆ ನೀವೆಲ್ಲ ಜೋಕೆ! ಹಣ ಗೆದ್ದಿದ್ದಿರಿ ಅಂತ ಮೇಲ್ ಅಥವಾ ಮೆಸೇಜು ಬಂದರೆ ಅಮಿಷಕ್ಕೊಳಗಾಗಿ ಹಣ ಕಳೆದುಕೊಳ್ಳಬೇಡಿ.

ಇಂತಹ ಕಂಪೆನಿಗಳಿಂದ ಮೋಸ ಹೋದವರು ತುಂಬಾ ಜನರಿದ್ದಾರೆ. ಇದರ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಿ ಅಂತ ನಮ್ಮ ಬ್ಲಾಗಿಗರಿಗೆ ಮತ್ತು ಓದುಗರಿಗೆ ಈ ಮೂಲಕ ನನ್ನ ವಿನಂತಿ.

– ರಘೋತ್ತಮ್ ಕೊಪ್ಪರ್

Leave a Reply