ವಿಶಿಷ್ಟ ಕೌಶಲದ ಕೌದಿ

ವಿಶಿಷ್ಟ ಕೌಶಲದ ಕೌದಿ
ಕೌದಿ; ಬೇರೆ ಬೇರೆ ಬಟ್ಟೆಯ ಚೂರು ಚೂರುಗಳನ್ನೇ ಕೂಡಿಸಿ ಹೊಲಿದು ಮಾಡಿದ ದಪ್ಪನಾದ ಹೊದಿಕೆ ಅಥವಾ ಹಚ್ಚಡ. ಕೌದಿ ಹಾಸಿದರೆ ಹಾಸಿಗೆ, ಹೊದ್ದರೆ ಹಚ್ಚಡ. ಬಣ್ಣ ಬಣ್ಣದ ಬಟ್ಟೆಗಳನ್ನು ಒಂದಕ್ಕೊಂದು ಸೇರಿಸಿ ಸೂಜಿ- ದಾರದಿಂದ ಹೊಲೆದು ಸಿದ್ಧಪಡಿಸುವ ಹಚ್ಚಡ ಹೊದ್ದು ಮಲಗಿದರೆ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬೆಚ್ಚನೆಯ ಭಾವದ ಅನುಭವ ಕೊಡುತ್ತದೆ. ಕಾರಣ ಮನೆಯ ಎಲ್ಲರ ಬಟ್ಟೆಗಳು ಅದರಲ್ಲಿ ಮಿಳಿತಗೊಂಡಿರುತ್ತವೆ. ಕೌದಿ ಹೊಲೆಯುವುದೂ ಒಂದು ಅಪರೂಪದ ಕಲೆ. ವಿಶಿಷ್ಟ ಕೌಶಲಗಳಲ್ಲಿ ಒಂದು. ಸೂಜಿ ಹಿಡಿದು ತಲೆ ಬಗ್ಗಿಸಿ ಕೌದಿ ಹೊಲೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೊಂದು ವಿಶೇಷವಾದ ತಾಳ್ಮೆಯೇ ಬೇಕು. ಅದೊಂದು ಬಗೆಯ ಧ್ಯಾನಾವಸ್ಥೆ.
ಆಧುನಿಕ ಬೆಳೆದಂತೆ ಮಾನವ ಬಳಕೆಯ ವಸ್ತುಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ಬಣ್ಣ ಬಣ್ಣದ ವುಲೆನ್, ತಹರೇವಾರಿ ಲಿನೆನ್, ಪಾಲಿಯೆಸ್ಟರ್ ಹಾಗೂ ಸಿಂಥೆಟಿಕ್ ಅಥವಾ ಸಂಯೋಜಿತ ಪಾಲಿಯೆಸ್ಟರ್ ಗಳ ನಾನಾ ವಿನ್ಯಾಸದ ಹೊದಿಕೆಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ಬದಲಾದ ಜೀವನಕ್ಕೆ ಮನಸೋತು ಎಲ್ಲರೂ ಅವುಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಮೂರ್ನಾಲ್ಕು ದಶಕಗಳ ಹಿಂದೆ ಮಹತ್ವ ಹೊಂದಿದ್ದ ಕೌದಿಗಳ ಬಳಕೆ ಕಡಿಮೆಯಾಗುತ್ತಿದೆ.
ಹೊಸ್ಮನೆ ಮುತ್ತು

Leave a Reply