ಪ್ರೇಕ್ಷಕರ ಮನಗೆದ್ದ ಸುರಕ್ಷಾ ವಿಜಯ ಯಕ್ಷಗಾನ ಪ್ರಸಂಗ

ಪ್ರೇಕ್ಷಕರ ಮನಗೆದ್ದ ಸುರಕ್ಷಾ ವಿಜಯ ಯಕ್ಷಗಾನ ಪ್ರಸಂಗ
ಪಣಂಬೂರಿನ ಕೆಐಓಸಿಎಲ್ ಸಂಸ್ಥೆಯ ಬ್ಲಾಸ್ಟ್ ಫರ್ನೆಸ್ ಯೂನಿಟ್ ಸಭಾಂಗಣದಲ್ಲಿ ವಿಶ್ವಉಕ್ಕು ಸುರಕ್ಷತಾ ದಿನಾಚರಣೆ ಅಂಗವಾಗಿ, ಕಾರ್ಖಾನೆಗಳಲ್ಲಿ ಸುರಕ್ಷತೆ ಸಂದೇಶ ಸಾರುವ ‘ಸುರಕ್ಷಾ ವಿಜಯ’ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು. ಜಂಟಿ ಪ್ರಧಾನ ವ್ಯವಸ್ಥಾಪಕ ಟಿ. ಗಜಾನನ ಪೈ ಅವರ ಪ್ರೇರಣೆಯಿಂದ, ಸಂಸ್ಥೆಯ ಉದ್ಯೋಗಿ ಜಯಪ್ರಕಾಶ್ ಹೆಬ್ಬಾರ್ ರಚಿಸಿ ನಿರ್ದೇಶಿಸಿದ ಒಂದು ಗಂಟೆ ಕಾಲ ಪ್ರಸಂಗ ಹೀಗೆ ಸಾಗುತ್ತದೆ. ಸುರಕ್ಷಿತ ಮಹಾರಾಜ ಬಿಳಿ ಕುದುರೆಯನ್ನೇರಿ ತನ್ನ ಆಳ್ವಿಕೆಯಲ್ಲಿರುವ ‘ಅಶ್ವಪುರ’ ಕ್ಕೆ ಬರುತ್ತಾನೆ. ಅಲ್ಲಿ ಪ್ರಜೆಗಳು ತೃಪ್ತಿದಾಯಕವಾದ ಜೀವನ ನಡೆಸುತ್ತಿರುತ್ತಾರೆ. ಆತನ ಆಳ್ವಿಕೆ ಪ್ರದೇಶ ಎಲ್ಲ ವಿಧಗಳಿಂದಲೂ ಸುಭಿಕ್ಷವಾಗಿರುತ್ತದೆ. ಎತ್ತ ನೋಡಿದರೂ ಪ್ರಕೃತಿ ಸೊಬಗು, ನದಿ, ತೊರೆಗಳು, ಪ್ರಕೃತಿಯನ್ನು ರಕ್ಷಿಸಲು ನೆಟ್ಟು ಬೆಳೆಸಿದ ಲಕ್ಷಾಂತರ ಸಸಿಗಳು ಹಚ್ಚ ಹಸಿರಾಗಿ ಬೆಳೆದು ನಿಂತಿದ್ದು ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತಿದ್ದವು. ನೀರಿನ ಬವಣೆ ನೀಗಿಸಲು ಕಟ್ಟಿಸಿದ್ದ ಒಂದು ದೊಡ್ಡ ಡ್ಯಾಂ ನೀರಿನಿಂದ ತುಂಬಿ ತುಳುಕುತ್ತಿರುತ್ತದೆ. ಪಕ್ಷಿಗಳ ಕಲರವ, ನಾಟ್ಯ ವಾಡುವ ನವಿಲುಗಳು, ಎಲ್ಲೆಲ್ಲೂ ಕಾಣ ಸಿಗುವ ಜಿಂಕೆ, ಮೊಲಗಳು ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ಸುರಕ್ಷಿತ ಮಹಾರಾಜನ ರಾಜಧಾನಿಯಲ್ಲಿ ಒಂದು ಕಬ್ಬಿಣ ಅದಿರಿನ ಕಾರ್ಖಾನೆಯಿರುತ್ತದೆ. ಅಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದ್ದು ಕಾರ್ಮಿಕರು ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಸಲಕರಣೆಗಳನ್ನು ಚಾಚೂ ತಪ್ಪದೆ ಉಪಯೋಗಿಸುತ್ತಿರುತ್ತಾರೆ. ಸುರಕ್ಷಿತ ಮಹಾರಾಜನು ಸುರಕ್ಷಾ ದೇವಿ ನಿತ್ಯವೂ ಆರಾಧಿಸುತ್ತಿರುತ್ತಾನೆ. ತನ್ನ ರಾಜ್ಯ ಸುಭಿಕ್ಷವಾಗಿರುವುದನ್ನು ಸಹಿಸಲಾರದೆ, ಪ್ರಕೃತಿ ಹಾಗೂ ಮಾನವರ ಗುಣಧರ್ಮಗಳನ್ನು ನಾಶ ಮಾಡುವ ರಾಕ್ಷಸ ‘ನಾಶಾಸುರ’ ತನ್ನ ರಾಜ್ಯವನ್ನು ಪ್ರವೇಶಿಸಿ ಹಾಳು ಮಾಡಬಹುದೆಂದು ಆತನ ಒಳ ಮನಸ್ಸು ಹೇಳುತ್ತದೆ. ಕಲಿಯುಗದಲ್ಲಿ ನಾಶಾಸುರನದೇ ದರ್ಬಾರು. ಈ ಯುಗದಲ್ಲಿ ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಾನೆ. ಬಡವ ಬಡವನಾಗಿಯೇ ಇರುತ್ತಾನೆ. ಶ್ರೀಮಂತ ಬಡವನಿಗೆ ಸಹಾಯ ಮಾಡಲು ಹೋಗುವುದಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸಿ ಮಕ್ಕಳು ದಾರಿ ತಪ್ಪುತ್ತಾರೆ. ಮಾನವರು ಗುಣಧರ್ಮಗಳನ್ನು ಮರೆಯುತ್ತಾರೆ. ಹೀಗೆ ನಾಶಾಸುರ ಇತರರಲ್ಲಿ ಸೇರಿಕೊಂಡು ಅಟ್ಟಹಾಸ ಮೆರೆಯುತ್ತಾನೆ. ಪ್ರಸಂಗದಲ್ಲಿ ಬರುವ ಮತ್ತೊಂದು ಪಾತ್ರ ವಿಚಿತ್ರ ಗುಪ್ತ. ಈತ ನಾಶಾಸುರನ ಗುಪ್ತಚರ ವಿಭಾಗದ ಮುಖ್ಯಸ್ಥ. ದೇಶದ ಮೂಲೆ ಮೂಲೆಗಳನ್ನು ಸುತ್ತಿ ವರದಿಯನ್ನು ಒಪ್ಪಿಸುವುದು ಈತನ ಕೆಲಸ. ದೇಶವನ್ನೆಲ್ಲ ಸುತ್ತಾಡಿ ಬಂದ ಈತ ವಿವಿಧ ಪ್ರದೇಶಗಳಲ್ಲಿ ತನಗಾದ ಅನುಭವಗಳನ್ನು ನಾಶಾಸುರನಲ್ಲಿ ಹಂಚಿಕೊಳ್ಳುತ್ತಾ, ಕೊನೆಗೆ ಘಟ್ಟ ಪ್ರದೇಶದಲ್ಲಿ ಕುದುರೆಮುಖದಂತೆ ಗೋಚರಿಸುವ ‘ಅಶ್ವಪುರ’ ದ ಪ್ರಕೃತಿಯನ್ನು, ಮತ್ತು ಅಲ್ಲಿರುವ ಹೇರಳ ಕಬ್ಬಿಣ ನಿಕ್ಷೇಪಗಳನ್ನು, ಸ್ವೇಚ್ಛಾಚಾರದಿಂದ ಇರುವ ಪ್ರಾಣಿ, ಪಕ್ಷಿಗಳನ್ನು ವರ್ಣಿಸುತ್ತಾ, ಸುರಕ್ಷಿತ ರಾಜನ ಇದನ್ನು ಆಳುತ್ತಿದ್ದಾನೆ, ಇಲ್ಲಿಯ ಬಹಳಷ್ಟು ಕಾರ್ಮಿಕರು ಒಳ್ಳೆಯವರಾಗಿದ್ದಾರೆ ಕೆಲವರು ಮಾತ್ರ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮೊಬೈಲ್ ಉಪಯೋಗಿಸುವುದು ಧೂಮಪಾನ, ಮಧ್ಯಪಾನ, ತಂಬಾಕು ಸೇವನೆ, ಸಾಲ ಪಡೆದು ಹಿಂದಿರುಗಿಸದಿರುವುದು ಹೀಗೆ ಹತ್ತು ಹಲವು ವ್ಯಸನಗಳಿಗೆ ದಾಸರಾಗಿದ್ದು, ಕಾರ್ಮಿಕನ ಸುರಕ್ಷತೆಗಾಗಿ ನೀಡಲಾದ ಬೂಟ್‌, ಹೆಲ್ಮೆಟ್ ಮೊದಲಾದ ಸುರಕ್ಷತಾ ಉಪಕರಣಗಳನ್ನು ಧರಿಸದೆ, ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಅಸಡ್ಡೆ ತೋರುತ್ತಿರುತ್ತಾರೆ. ಇವರೆಲ್ಲರೂ ಸರಿಯಾದ ದಾರಿಯಲ್ಲಿ ಸಾಗಿದಲ್ಲಿ ಈ ಕಾರ್ಖಾನೆ ಉದ್ಧಾರವಾಗುತ್ತದೆ ಎಂದು ವರದಿ ಸಲ್ಲಿಸುತ್ತಾನೆ. ಕಾರ್ಮಿಕರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನು ಮೂಡಿಸಿ ಹಾಳು ಮಾಡಲು ನಾಶಾಸುರ ಕಾರ್ಯಪ್ರವೃತ್ತನಾಗುತ್ತಾನೆ. ನಾಶಾಸುರ ತನ್ನ ರಾಜ್ಯವನ್ನು ಪ್ರವೇಶಿಸಿರುವುದನ್ನು ಅರಿತ ಸುರಕ್ಷಿತ ಮಹಾರಾಜ, ಸುರಕ್ಷಾ ದೇವಿಯನ್ನು ಪಾರ್ಥಿಸಿದಾಗ, ದೇವಿ ಪ್ರತ್ಯಕ್ಷಳಾಗುತ್ತಾಳೆ. ಸುರಕ್ಷಿತ ಮಹಾರಾಜ ತನ್ನ ರಾಜ್ಯಕ್ಕೆ ನಾಶಾಸುರ ಪ್ರವೇಶಿಸಿರುವುದನ್ನು ತಿಳಿಸಿ ಕಾಪಾಡೆಂದು ದೇವಿಯಲ್ಲಿ ಪ್ರಾರ್ಥಿಸುತ್ತಾನೆ. ತನ್ನನ್ನು ನಂಬಿದವರನ್ನು ಎಂದೆಂದಿಗೂ ಕಾಪಾಡುತ್ತಲೇ ಇರುತ್ತೇನೆಂದು ಅಭಯ ನೀಡಿದ ಸುರಕ್ಷಾ ದೇವಿ ನಾಶಾಸುರನನ್ನು ಸಂಹರಿಸುವುದರೊಂದಿಗೆ ಪ್ರಸಂಗ ಸಮಾಪ್ತಿಯಾಗುತ್ತದೆ.
ಪ್ರೇಕ್ಷಕರ ಮನಗೆದ್ದ ಪಾತ್ರಧಾರಿಗಳು: ಜಯಪ್ರಕಾಶ ಹೆಬ್ಬಾರ್ (ನಾಶಾಸುರ),ದಿನೇಶ್ ಆಚಾರ್ ಕೊಕ್ಕಡ (ಸುರಕ್ಷಾ ದೇವಿ), ದಿನಕರ ಗೋಖಲೆ (ಸುರಕ್ಷಿತ ಮಹಾರಾಜ), ಪೆರುವೊಡಿ ಸುಬ್ರಹ್ಮಣ್ಯ ಭಟ್ ( ವಿಚಿತ್ರ ಗುಪ್ತ).
ಹಿಮ್ಮೇಳ: ಭವ್ಯಶ್ರೀ ಹರೀಶ್ ( ಭಾಗವತರು),ಸ್ಕಂದ ಕೊನ್ನಾರ್ (ಚೆಂಡೆ),ಮಾಸ್ಟರ್ ವರುಣ್ ಹೆಬ್ಬಾರ್(ಮದ್ದಳೆ), ಅಭಿಜಿತ್ ಸೋಮಯಾಜಿ (ಚಕ್ರತಾಳ),

15 ವರ್ಷಗಳಿಂದಲೂ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದೆ ಭವ್ಯಶ್ರೀ ಹರೀಶ್ ಯವರ ಭಾಗವತಿಕೆ ಪ್ರೇಕ್ಷಕರ ಪ್ರಶಂಸೆ ಗಳಿಸುವಲ್ಲಿ ಯಶಸ್ವಿಯಾಯಿತು. ತಂದೆ ಮಾರ್ಗದರ್ಶನದಲ್ಲೇ ಮುಂದುವರೆಯುತ್ತಿರುವ 8 ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ವರುಣ್ ಮದ್ದಳೆ ನುಡಿಸಿ ಸೈ ಎನಿಸಿಕೊಂಡ. ಈತ ವೇಷವನ್ನೂ ಹಾಕಬಲ್ಲ ಉದಯೋನ್ಮುಖ ಪ್ರತಿಭೆಯೆನ್ನುವುದು ಗಮನಾರ್ಹ. ಪ್ರಸಂಗವನ್ನು ರಚಿಸಿ, ನಿರ್ದೇಶಿಸಿ, ನಾಶಾಸುರನ ಪಾತ್ರದಲ್ಲಿ ಮಿಂಚಿದ ಜಯಪ್ರಕಾಶ್ ಹೆಬ್ಬಾರ್, ಉದ್ಯೋಗಿಯಾಗಿದ್ದುಕೊಂಡು 20 ವರ್ಷಗಳಿಂದ ಯಕ್ಷರಂಗದಲ್ಲಿ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ. ಸುರಕ್ಷಿತ ಮಹಾರಾಜ ಪಾತ್ರಧಾರಿ ಕಟೀಲು ಮೇಳದ ಹಿರಿಯ ಕಲಾವಿದ ದಿನಕರ ಗೋಖಲೆಯವರ ಅಭಿನಯ ಮನೋಜ್ಞವಾಗಿತ್ತು. ವಿಚಿತ್ರಗುಪ್ತ ಪೆರವೋಡಿ ಸುಬ್ರಹ್ಮಣ್ಯ ಭಟ್ ತನ್ನ ವಾಕ್ಚಾತುರ್ಯದಿಂದ ಇತರೆ ಪ್ರದೇಶಗಳ ಪದಗಳನ್ನು ಕನ್ನಡ ಭಾಷೆಗೆ ಸಮೀಕರಿಸುವುದರ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಸುರಕ್ಷಾದೇವಿಯ ಪಾತ್ರಧಾರಿ ದಿನೇಶ್ ಆಚಾರ್ ಕೊಕ್ಕಡ ರವರ ವೇಷ ದೇವಿಯ ಸಾಕ್ಷಾತ್ಕಾರವಾದಂತಿತ್ತು.
ಪ್ರಸಾಧನ-ಸಸಿಹಿತ್ಲು ವೆಂಕಟೇಶ್ ಹಾಗೂ ವೇಷಭೂಷಣ-ಲಲಿತ ಕಲಾ ಆರ್ಟ್ಸ್ ಮಂಗಳೂರು.

Courtesy : Prajavani.net

https://www.prajavani.net/artculture/art/yakshagaana-627554.html

Leave a Reply