ಬ್ಯಾಡಗಿಯ ಭಾವಶಿಲ್ಪಿ

‘ಪ್ರಯತ್ನ ಸಾಧನೆಯ ಮೊದಲ ಹೆಜ್ಜೆ. ಅದನ್ನು ಪ್ರಾರಂಭಿಸಿರುವೆ. ಬೇಕಾದಲ್ಲಿ ಅಲ್ಪವಿರಾಮ ಬಳಸು, ಪೂರ್ಣವಿರಾಮದಿಂದ ದೂರವಿರು. ‘ಸಂಕಲನ’ದಿಂದ ಸದಾ ಬೆಂಬಲವಿರುತ್ತದೆ…’ಈ ಹಸ್ತಾಕ್ಷರ ಬ್ಯಾಡಗಿಯ ಹರೀಶ ಮಾಳಪ್ಪನವರನ್ನು ‘ಶ್ರೇಷ್ಠ ಶಿಲ್ಪ ಕಲಾವಿದ’ನನ್ನಾಗಿ ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದೆ. ಹೌದು, ದಾವಣಗೆರೆ ಲಲಿತಕಲಾ ಮಹಾವಿದ್ಯಾಲ ಯದಲ್ಲಿ 2004–08ನೇ ಸಾಲಿನಲ್ಲಿ ಹರೀಶ್ ಬಿ.ವಿ.ಎ. ವಿದ್ಯಾರ್ಥಿಯಾಗಿದ್ದಾಗ, ಸಾರ್ವಜನಿಕರಿಗೆ ಪ್ರದರ್ಶಿಸಿದ 50 ಅಡಿ ಎತ್ತರದ ‘ಜೇಡರಬಲೆ’ ಕಲಾಕೃತಿಗೆ ಕಲಾಶಿಕ್ಷಕ ರವೀಂದ್ರ ಅರಳಗುಪ್ಪೆ ಅವರಿಂದ ಸಿಕ್ಕ ಮೆಚ್ಚುಗೆಯ ಮಾತುಗಳು ಇವು. ಯುವ ಕಲಾವಿದ ಹರೀಶ ಅವರು, ಹಾವೇರಿ ಜಿಲ್ಲೆ ಮೋಟೆಬೆನ್ನೂರಿನಲ್ಲಿ ನ.4,1985ರಂದು ಜನಿಸಿದರು. ತಂದೆ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ವಸಂತ ಮಾಳಪ್ಪನವರ ಮತ್ತು ತಾಯಿ ಕಸ್ತೂರಿ ಅವರೊಂದಿಗೆ ಪ್ರಸ್ತುತ ಬ್ಯಾಡಗಿ ಪಟ್ಟಣದಲ್ಲಿ ನೆಲೆಸಿದ್ದಾರೆ. ಫೇಲಾಗಿ ಕಲಾವಿದರಾದರು! ಹಿರಿಯ ಮಗನಾದ ಹರೀಶ ಡಾಕ್ಟರ್‌ ಆಗಲಿ ಎಂಬ ಆಸೆಯಿಂದ ಹೆತ್ತವರು ಪಿಯುಸಿಯಲ್ಲಿ ಸೈನ್ಸ್‌ (ಪಿ.ಸಿ.ಎಂ.ಬಿ) ಕೊಡಿಸಿದರು. ಆದರೆ, ಹರೀಶ್‌ ಮೂರು ವಿಷಯಗಳಲ್ಲಿ ಫೇಲ್‌ ಆದರು. ಪಾಸಾಗಿದ್ದು ಜೀವಶಾಸ್ತ್ರ ಮಾತ್ರ. ಇದಕ್ಕೆ ಹರೀಶ್‌ ಕೊಡುವ ತಮಾಷೆ ಉತ್ತರ ಅಂದ್ರೆ, ‘ಕೀಟ, ಪ್ರಾಣಿಗಳ ಡ್ರಾಯಿಂಗ್‌ ನೋಡಿ ಬಹುಶಃ ಪಾಸ್‌ ಮಾಡಿರಬೇಕು’ ಅಂತ. ಪಿಯುಸಿಯಲ್ಲಿ ಮಗ ಫೇಲ್‌ ಆಗಿದ್ದರಿಂದ ಸಹಜವಾಗಿಯೇ ಹೆತ್ತವರಿಗೆ ಬೇಸರವಾಯಿತು. ಮುಂದೇನು? ಎಂಬ ಪ್ರಶ್ನೆ ಕಾಡಿತು. ‘ಅಪ್ಪ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ಹಾಗಾಗಿ ಡ್ರಾಯಿಂಗ್‌ ಕೋರ್ಸ್‌ ಕೊಡಿಸಿ’ ಎಂದು ಹರೀಶ್ ತಂದೆಗೆ ಗಂಟುಬಿದ್ದರು. ಅದರಂತೆ, ಬಿವಿಎ ಕೋರ್ಸ್‌ಗೆ ಸೇರಿಸಲಾಯಿತು. ಶ್ರದ್ಧೆಯಿಂದ ವ್ಯಾಸಂಗ ಮಾಡಿದ ಹರೀಶ್‌, ಬಿವಿಎ ಕೋರ್ಸ್‌ ಪೂರ್ಣಗೊಳಿಸಿದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ವಿ.ಎ. ಕೋರ್ಸ್‌ನಲ್ಲಿ (ಶಿಲ್ಪಕಲೆ) ಚಿನ್ನದ ಪದಕ ಪಡೆದರು. ಜೇಡಿಮಣ್ಣಿನ ನಂಟು ಗಂಗಜ್ಜ ಬಡಿಗೇರ ಮಾಡುತ್ತಿದ್ದ ಮಣ್ಣಿನ ಗಣೇಶ ಮೂರ್ತಿಗಳು, ಬಾಲ್ಯದಲ್ಲಿದ್ದಾಗಲೇ ಹರೀಶ್ ಅವರ ಮನಸ್ಸನ್ನು ಸೂರೆಗೊಂಡಿದ್ದವು. ಅಜ್ಜನ ಬಳಿ ಆಟವಾಡುತ್ತಾ ಕೈಗೆ ಅಂಟಿಸಿಕೊಂಡ ಜೇಡಿಮಣ್ಣಿನ ನಂಟು ಇಂದಿಗೂ ಅವರ ಕೈಯಲ್ಲಿ ಜೀವಂತವಾಗಿದೆ. ‘ಮಣ್ಣು ಶಿಲ್ಪ’ ಮಾಡುವಲ್ಲಿ ಪರಿಣತರಾಗಿರುವ ಹರೀಶ್ ಅವರು ‘ಕ್ಯಾರೆಕ್ಟರ್‌ ವರ್ಕರ್‌’ ಎಂದೇ ಹೆಸರಾಗಿದ್ದಾರೆ. ಇಂಡೋನೇಷ್ಯಾ, ದೆಹಲಿ, ರಾಜಸ್ತಾನ, ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನ, ಕಾರ್ಯಾಗಾರ, ಮಣ್ಣಿನ ಭಾವಶಿಲ್ಪ ರಚನೆಯ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕ ಪ್ರದೇಶ ಜನಮಾನ್ಯ ದಿ.ವಿ.ಎಲ್‌. ಪಾಟೀಲ (ಅಬಾಜಿ) ಫೌಂಡೇಷನ್‌ ವತಿಯಿಂದ ‘ರಾಷ್ಟ್ರಪ್ರಶಸ್ತಿ’, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ಪುರಸ್ಕಾರ, ಬರೋಡದ ಮಹೇಂದ್ರ ಪಾಂಡೆ ಫೌಂಡೇಷನ್‌ ಟ್ರಸ್ಟ್‌ನಿಂದ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಏರ್ಪಡಿಸಿದ್ದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಸೇರಿದಂತೆ ಹಲವಾರು ಬಹುಮಾನ, ಸನ್ಮಾನಗಳು ಸಂದಿವೆ. ‘ತದ್ರೂಪ ಮಣ್ಣಿನ ಶಿಲ್ಪ’ ಬೆಂಗಳೂರಿನಿಂದ ಜೇಡಿಮಣ್ಣಿನ ಪುಡಿಯನ್ನು ತರಿಸಿ, ಅದಕ್ಕೆ ನೀರು ಬೆರಸಿ, ಮಣ್ಣನ್ನು ಹದ ಮಾಡಿಕೊಳ್ಳುತ್ತಾರೆ. ನಂತರ ‘ವೀಲ್‌ಸ್ಟ್ಯಾಂಡ್‌’ಗೆ ಜೇಡಿಮಣ್ಣನ್ನು ಮನುಷ್ಯನ ಆಕಾರ ಬರುವ ಹಾಗೆ ಮೆತ್ತುತ್ತಾ ಹೋಗುತ್ತಾರೆ. ಈ ಹಂತ ಪೂರೈಸಿದ ನಂತರ ಯಾವ ಶಿಲ್ಪ ಮಾಡಬೇಕೋ ಅದಕ್ಕೆ ತಕ್ಕ ಹಾಗೆ ರೂಪವನ್ನು ಕೊಡುತ್ತಾ ಹೋಗುತ್ತಾರೆ. ರೂಪವಷ್ಟೇ ಅಲ್ಲ, ಭಾವವನ್ನೂ ತುಂಬುತ್ತಾರೆ. ವಿಶೇಷವೆಂದರೆ, ಎದುರು ಕುಳಿತ ವ್ಯಕ್ತಿಯ ‘ತದ್ರೂಪ ಮಣ್ಣಿನ ಶಿಲ್ಪ’ವನ್ನು ಮುಕ್ಕಾಲು ಗಂಟೆಯಲ್ಲಿ ಮಾಡಿ ಎಲ್ಲರನ್ನೂ ಚಕಿತಗೊಳಿಸುತ್ತಾರೆ.‘ಮೊದಲಿಗೆ ಮಣ್ಣಿನ ಶಿಲ್ಪಗಳನ್ನು ಮಾಡಿಕೊಂಡು, ನಂತರ ಟೆರ‍್ರಾಕೋಟ, ಫೈಬರ್‌ಗ್ಲಾಸ್‌, ಕಂಚು, ಸಿಮೆಂಟ್‌, ಪಿಂಗಾಣಿ ಮಾಧ್ಯಮಗಳಲ್ಲಿ ಪ್ರತಿಮೆಗಳನ್ನು ರೂಪಿಸುತ್ತೇನೆ. ವ್ಯಕ್ತಿಶಿಲ್ಪ ರಚನೆಯಲ್ಲಿ ಔಟ್‌ಲೈನ್‌, ಮಾಂಸಖಂಡ, ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತವೆ. ಪುತ್ಥಳಿ ನೋಡಿದಾಗ ‘ಇದು ಯಾರು’ ಎಂಬುದು ಸುಲಭವಾಗಿ ಜನರಿಗೆ ಅರ್ಥವಾದಾಗ ಮಾತ್ರ ನಮ್ಮ ಕಲಾಕೃತಿಗಳಿಗೆ ಬೆಲೆ ಮತ್ತು ಸಾರ್ಥಕತೆ. ಕಲಾವಿದ ವೆಂಕಟಾಚಲಪತಿ, ಕಲಾ ತಪಸ್ವಿ ಟಿ.ಬಿ. ಸೊಲಬಕ್ಕನವರ ಮುಂತಾದವರಿಂದ ಸ್ಫೂರ್ತಿ ಪಡೆದಿದ್ದೇನೆ. ಒಂದು ಸಾವಿರ ರೂಪಾಯಿ ಮೌಲ್ಯದ ಶಾಲಾ ಮಕ್ಕಳ ಮಾಡೆಲ್‌ನಿಂದ ಹಿಡಿದು, ₹ 15 ಲಕ್ಷ ಮೌಲ್ಯದ ಕಂಚಿನ ಪ್ರತಿಮೆಗಳನ್ನು ಮಾಡಿದ್ದೇನೆ. 15 ವರ್ಷಗಳ ಕಲಾಯಾತ್ರೆಯಲ್ಲಿ 400ಕ್ಕೂ ಹೆಚ್ಚು ಪ್ರತಿಮೆಗಳಿಗೆ ಜೀವ ನೀಡಿದ್ದೇನೆ’ ಎಂದು ಹರೀಶ್ ಹೇಳಿದರು. ‘ಕಲಾವಿದನಾಗಿ ಪ್ರತಿಯೊಂದನ್ನೂ ಸ್ವೀಕರಿಸ ಬೇಕು, ತನ್ನತನ ಬಿಟ್ಟುಕೊಡಬಾರದು ಎಂಬ ಪಾಠವನ್ನು ಕಲಿತಿದ್ದೇನೆ. ಎದೆಯಲ್ಲಿ ನೂರಾರು ಕನಸುಗಳಿವೆ. ನಡೆಯುವ ಹಾದಿಯೂ ದೊಡ್ಡದಿದೆ’ ಎಂಬುದು ಹರೀಶ್‌ ಅವರ ಮನದಾಳದ ಮಾತು.(ಹರೀಶ ಅವರ ಸಂಪರ್ಕಕ್ಕೆ ಮೊ: 99640 05451) ಚಿತ್ರಗಳು: ನಾಗೇಶ ಬಾರ್ಕಿ

author – ಸಿದ್ದು ಆರ್‌.ಜಿ.ಹಳ್ಳಿ

courtsey:prajavani.net

https://www.prajavani.net/artculture/art/artist-in-byadagi-707729.html

Leave a Reply