ಈ-ಹೊತ್ತಿಗೆ – “ಮಳೆ ಮಾರುವ ಹುಡುಗ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ

ಈ-ಹೊತ್ತಿಗೆ
೨೧ ಆಗಷ್ಟ್ ೨೦೧೬
ಈ ತಿಂಗಳ ಚರ್ಚಿಸಿದ ಪುಸ್ತಕ – ಕರ್ಕಿ ಕೃಷ್ಣಮೂರ್ತಿ ಅವರ ‘ಮಳೆ ಮಾರುವ ಹುಡುಗ’ ಕಥಾ ಸಂಕಲನ

ಭಾಗವಹಿಸಿದವರು – ಸರಳಾ ಪ್ರಕಾಶ್, ಸವಿತಾ ಗುರುಪ್ರಸಾದ್ ಮತ್ತು ಜಯಲಕ್ಷ್ಮೀ ಪಾಟೀಲ್.
ಕರ್ಕಿ ಕೃಷ್ಣಮೂರ್ತಿಯವರು ಚರ್ಚೆಯ ನಂತರದ ಸಂವಾದಕ್ಕೆ ಆಗಮಿಸಿದರು.

ಪ್ರಮುಖಾಂಶಗಳು –

ಮಳೆ ಮಾರುವ ಹುಡುಗ ” ದಲ್ಲಿ ಬರುವ ಪ್ರತೀ ಕಥೆಯಲ್ಲಿಯೂ ತನ್ನ ಇರುವಿಕೆ ಹಾಗೂ ಏನನ್ನೂ ಕಳೆದುಕೊಂಡು ಹುಡುಕಾಟದಲ್ಲೇ ಮುಗಿಯುವುದು ಹೆಚ್ಚಾಗಿ ಕಂಡು ಬರುತ್ತದೆ. ತನ್ನನ್ನು ತಾನು ಗುರುತಿಸಿ ಕೊಳ್ಳುವ ಹುಡುಕಾಟವೇ ಎಲ್ಲಾ ಕಥೆಗಳ್ಲಲೂ ಕಾಣುವ ಅಂಶಗಳಾಗಿವೆ.
ವೃತ್ತಗಳು ಕಥೆಯಲ್ಲಿ ಶ್ರಾವಂತಿ ಬದುಕಿನ ಅಹಮಿಕೆಯನ್ನು ಚಿನ್ಮಯಿ ಕರಗಿಸಿದ ರೀತಿಯಂತೂ ಮನೋಜ್ಞವಾಗಿ ಚಿತ್ರಿತವಾಗಿದೆ . ಆಕೆಯ ಭ್ರಮೆಯನ್ನು ಕರಗಿಸಿದ ರೀತಿ ಬಹಳವೇ ಇಷ್ಟವಾಗುತ್ತದೆ ,ಹೊಸ ಬದುಕನ್ನು ಕಟ್ಟಿಕೊಳ್ಳಲು ಚಿನ್ಮಯಿ ಬದುಕನ್ನು ವಿವರಿಸಿದ ರೀತಿ ಬಹಳವೇ ಚೆನ್ನಾಗಿದೆ. ಹುಟ್ಟಿದೂರನ್ನು ಬಿಟ್ಟು ಯಾವುದೊ ಆಸೆಗೆ ದೂರದ ಅಲ್ಲಿಯೂ ಬದುಕನ್ನು ಕಟ್ಟಿಕೊಳ್ಳಲಾಗದೆ ತೊಳಲಾಟದಲ್ಲೇ ಮುಗಿಯುವ ಚಿತ್ರಣವನ್ನು ,ನಾನು ನಾನಲ್ಲ, ಪಾದರಕ್ಷೆಯ ಕಥೆ ವಾಚಿನ ಹುಡುಕಾಟದ ಕಥೆ ಇವುಗಳಲ್ಲಿ ಕಾಣಬಹುದಾಗಿದೆ .
ಅನಿಮಿತ್ತ ,ವೃತ್ತಗಳು,ಮಳೆ ಮಾರುವ ಹುಡುಗ,ಹಾಗೂ ಗಾರೆ ಬಹಳವೇ ಇಷ್ಟವಾದ ಕಥೆಗಳು.
— ಸವಿತಾ ಗುರುಪ್ರಸಾದ್
ಕರ್ಕಿ ಅವರ ಕಥೆಗಳನ್ನ ಓದುತ್ತಿದ್ದರೆ ಈ ಕಥೆಗಳಲ್ಲಿ ಒಂದು ಸಾಮಾನ್ಯ ಎಳೆ ಕಾಣಿಸುತ್ತದೆ. ಕೊನೆಯ ಮೂರು ಕಥೆಗಳನ್ನ ಬಿಟ್ಟು. ಮೂಲದಿಂದ ಶುರುವಾದ ಜೀವನ ಹೊರ ಜಗತ್ತನ್ನು ನೋಡಿ ಮತ್ತೇ ಮೂಲಕ್ಕೆ ತಿರುಗಿ ಬರುವ ಕ್ರಿಯೆ.
ಒಂದೊಂದು ಕಥೆಯಲ್ಲೂ ಇದನ್ನ ಬೇರೆ ಬೇರೆ ಸ್ತರದ ವ್ಯಕ್ತಿಗಳ ಅನುಭವಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಕಥೆಗಳ ಪ್ರಾಮಾಣಿಕ ದ್ವನಿ ಮೆಚ್ಚುಗೆ ಅಯಿತು. ನಿರೂಪಣೆ ಹೆಚ್ಚು ಆಕರ್ಷಕ ಅನಿಸದಿದ್ದರೂ ಸಶಕ್ತವಾಗಿ ಅಭಿವ್ಯಕ್ತವಾಗಿದೆ.
ಮಳೆ ಮಾರುವ ಹುಡುಗನ ಕಥೆ ವಿಭಿನ್ನವಾಗಿ ಮನ ಮುಟ್ಟಿತು. ಕರ್ಕಿ ಅವ್ರ ಮುಂದಿನ ಕಥೆಗಳನ್ನು ನಿರೀಕ್ಷೆ ಮಾಡುತ್ತಿರುವೆ.
– ಸರಳಾ ಪ್ರಕಾಶ್
ಕರ್ಕಿ ಕೃಷ್ಣಮೂರ್ತಿಯವರ ‘ಮಳೆ ಮಾರುವ ಹುಡುಗ’ ಸಂಕಲನದಲ್ಲಿನ ‘ಅನಿಮಿತ್ತ’, ‘ನಾನು ನಾನಲ್ಲ’, “ವೃತ್ತಗಳು’, ‘ಗಾರೆ’ ಮತ್ತು ‘ಮಳೆ ಮಾರುವ ಹುಡುಗ’ ಕತೆಗಳು ಅವುಗಳದೇ ಆದ ವಿಶಿಷ್ಠ ನಿರೂಪಣೆಗಳಿಂದಾಗಿ ಇಷ್ಟವಾದವು. ‘ವೃತ್ತಗಳು’ ಕತೆಯನ್ನು ಹೊರತುಪಡಿಸಿದರೆ ಉಳಿದೆಲ್ಲ ಕತೆಗಳು ಪುರುಷಲೋಕದ ಒಳತೋಟಿ, ಗೊಂದಲ, ಅಸಹಾಯಕತೆ ಮತ್ತು ಐಡೆಂಟಿಟಿಗೋಸ್ಕರ ಹೋರಾಡುವ, ಪರಿತಪಿಸುವುದನ್ನು ಪ್ರತಿಫಲಿಸುತ್ತವೆ. ಇಲ್ಲಿನ ಹೆಚ್ಚಿನ ಕತೆಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ಅಂಶವೆಂದರೆ, ಏನನ್ನಾದರೂ (ಹಣ, ಸ್ಥಾನಮಾನ) ಸಾಧಿಸುವ ಸಲುವಾಗಿ ಓದನ್ನು ಮೊಟಕುಗೊಳಿಸಿ ಶಹರಕ್ಕೆ ಓಡಿ ಬರುವ ಪಾತ್ರಗಳ ತೊಳಲಾಟ, ಬದುಕಿನ ನೆಲೆಗಾಗಿ ಹೋರಾಟ…
‘ಅನಿಮಿತ್ತ’ ಕತೆ ನನಗೆ ಇಷ್ಟವಾಗಿದ್ದು ಇರುವ ಮರಳುಗಾಡಿನ ಪರಿಸರ ಮತ್ತು ವ್ಯಕ್ತಿಯೊಬ್ಬನ ಏಕಾಂಗಿತನವನ್ನು ಚೆನ್ನಾಗಿ ಸಮೀಕರಿಸಿದ್ದರಿಂದಾಗಿ. ಉದ್ಯೋಗ ನಿಮಿತ್ತ ತನ್ನ ನೆಲ ಬಿಟ್ಟು ಹೊರಡುವ ಜೀವಗಳು ಮೊದಲಿಗೆ ಪಡುವ ಸಂಭ್ರಮ ಮತ್ತು ತನ್ನ ಪರಿಸರ ಮತ್ತು ಮಾತಿಗಾಗಿ ಹಂಬಲಿಸುವ ರೀತಿಯನ್ನು ತುಂಬಾ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ ಈ ಕತೆಯಲ್ಲಿ. ‘ನಾನು ನಾನಲ್ಲ’ ಹೆಸರಿನ ಸುತ್ತ ಆ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರಯತ್ನಗಳ ಹುಚ್ಚಿನ ಸುತ್ತ ಹೆಣೆದ ಕತೆ. ‘ವೃತ್ತಗಳು’ ತಮ್ಮ ನೆಲದಿಂದ ವಲಸೆ ಹೋಗಿ ಇನ್ನೊಂದು ದೊಡ್ಡ ಊರು, ದೇಶದಲ್ಲಿ ಬದುಕು ಕಟ್ಟಿಕೊಂಡ ವ್ಯಕ್ತಿಗಳಲ್ಲಿ ಹುಟ್ಟಿಕೊಳ್ಳುವ ಮೇಲರಿಮೆ ಮತ್ತೆ ಊರಿಗೆ ಬಂದಾಗ ಪ್ರಕಟಗೊಳ್ಳುವ ರೀತಿ, ಆಗುವ ಭ್ರಮ ನಿರಸನ, ಇರುವುದಕ್ಕೂ ತೋರ್ಪಡಿಸಿಕೊಳ್ಳುವುದಕ್ಕೂ ಇರುವ ಅಂತರ, ಆ ಮೂಲಕ ಎಲ್ಲರಿಗೂ ಅವರವರದೇ ಆದ ಸೀಮಿತ ವೃತ್ತಗಳಿರುತ್ತವೆ ಎನ್ನುವುದನ್ನು ತೋರಿಸಿದ ರೀತಿ ಇಷ್ಟಯಾಯ್ತು. ‘ಮಳೆ ಮಾರುವ ಹುಡುಗ’ ಕತೆ ನಿಜಕ್ಕೂ ಈ ಕಥಾ ಸಂಕಲನದ ಶೀರ್ಷಿಕೆಗೆ ಯೋಗ್ಯವಾದ ಕತೆ. ಆಧುನಿಕತೆ, ಲೆಕ್ಕಾಚಾರದ ಬದುಕು, ಲಾಭಕೋರತನ ಮತ್ತು ಮುಗ್ಧತೆ, ಸಹಜತೆ, ನಿಸ್ವಾರ್ಥಗಳನ್ನು ಮುಖಾಮುಖಿಯಾಗಿಸಿ ಲೆಕ್ಕಾಚಾರವೆಲ್ಲ ತಲೆ ಕೆಳಗಾಗುವ ರೀತಿಯನ್ನು ತುಂಬಾ ಚೆನ್ನಾಗಿ ಕರ್ಕಿಯವರು ನಿರೂಪಿಸಿದ್ದಾರೆ. ಒಂದು ಉತ್ತಮ ಪುಸ್ತಕವನ್ನು ‘ಈ ಹೊತ್ತಿಗೆ’ಗಾಗಿ ಆಯ್ದುಕೊಂಡ ಖುಷಿ ನೀಡಿತು ಈ ಸಂಕಲನ.
– ಜಯಲಕ್ಷ್ಮೀ ಪಾಟೀಲ್.

https://www.facebook.com/permalink.php?story_fbid=613587192154007&id=137132543132810&substory_index=0

Leave a Reply